ಬೆಂಗಳೂರು: ಪ್ರತಿಷ್ಠಿತ ವಾಣಿವಿಲಾಸ್ ಆಸ್ಪತ್ರೆಯಲ್ಲಿ (Vanivilas Hospital) ಜಿರಳೆ ಕಾಟ (Cockroach bite) ಹೆಚ್ಚಾಗಿದ್ದು, ಎರಡು ದಿನದ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದೆ ಎಂದು ಪೋಷಕರು ಆರೋಪಿಸಿದ್ದಾರೆ. ನಾಗರಬಾವಿ ನಿವಾಸಿ ಆಶಾರಾಣಿ ಅವರು ಕಳೆದೆರಡು ದಿನದ ಹಿಂದೆ ವಾಣಿವಿಲಾಸ್ ಆಸ್ಪತ್ರೆಗೆ ಹೆರಿಗೆ ನೋವಿನಿಂದ ದಾಖಲಾಗಿದ್ದರು.
ಕಳೆದ ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದರು. ತಾಯಿ-ಮಗು ಇಬ್ಬರು ಆರೋಗ್ಯವಾಗಿದ್ದರಿಂದ ವಾರ್ಡ್‌ಗೆ ಶಿಫ್ಟ್ ಮಾಡಲಾಗಿತ್ತು. ಆದರೆ ವಾರ್ಡ್ ಪೂರ್ತಿ ಎಲ್ಲೆಂದರಲ್ಲಿ ಜಿರಳೆಗಳೇ ತುಂಬಿ ಹೋಗಿದ್ದು, ಮಗುವನ್ನು ಕಚ್ಚಿ ಹಾಕಿವೆ. ಬೆಡ್ ಸ್ವಚ್ಛಗೊಳಿಸದ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಪೋಷಕರು ಕಿಡಿಕಾರಿದ್ದಾರೆ.
ಹೆರಿಗೆ ವಾರ್ಡ್ ಸೇರಿದಂತೆ ಬಾಣಂತಿ ವಾರ್ಡ್‌ನಲ್ಲೂ ಜಿರಳೆಗಳೇ ಇವೆ. ಎಳೆ ಕಂದಮ್ಮಗಳ ಸುತ್ತ ಜಿರಳೆಗಳು ಓಡಾಡುತ್ತಿವೆ. ಮೊನ್ನೆಯಿಂದಲೂ ಪುಟ್ಟ ಮಗುವಿಗೆ ಜಿರಳೆಗಳು ಕಚ್ಚುತ್ತಿದೆ. ಈ ಬಗ್ಗೆ ಆಸ್ಪತ್ರೆ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಹೇಳಿದರೂ ಕ್ಯಾರೇ ಎನ್ನದೆ ನಿರ್ಲಕ್ಷ್ಯವನ್ನು ತೋರಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಡವರ, ಮಧ್ಯಮ ವರ್ಗದವರ ಪಾಲಿಗೆ ಸಂಜೀವಿನಿ ಆಗಬೇಕಿದ್ದ ಸರ್ಕಾರಿ ಆಸ್ಪತ್ರೆಗಳೇ ಕಂಟಕವಾಗುತ್ತಿದೆ. ಹಿಂದೆಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಗುಣಮಟ್ಟದ ಯಂತ್ರೋಪಕರಣಗಳು, ಮೂಲಭೂತ ಸೌಕಾರ್ಯವಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದ್ದವು. ಕಾಲಕಾಲಕ್ಕೆ ಅವೆಲ್ಲವೂ ಮರೆಯಾದವು, ಆದರೆ ಸ್ವಚ್ಛತೆ ಮಾತ್ರ ಶೂನ್ಯವಾಗಿದೆ.
ಮಗುವಿಗೆ ಜಿರಳೆ ಕಚ್ಚಿಲ್ಲ
ಮಗುವಿಗೆ ಜಿರಳೆ ಕಚ್ಚಿಲ್ಲ. ಬದಲಿಗೆ ಪೋಷಕರು ಮಗುವಿಗೆ ಹಾಕಿರುವ ಸ್ವೇಟರ್‌ನಿಂದ ಇನ್ಫೆಕ್ಷನ್ ಆಗಿದೆ ಎಂದು ವಾಣಿ ವಿಲಾಸ್ ಆಸ್ಪತ್ರೆಯ ಮೆಡಿಕಲ್ ಸುಪರಿಟೆಂಡೆಂಟ್ ಸವಿತಾ ಮಾಹಿತಿ ನೀಡಿದ್ದಾರೆ. ನಾವು ನಮ್ಮ ವೈದ್ಯರ ಜತೆ ಮಾತನಾಡಿದ್ದೇವೆ ಅದು ಜಿರಳೆ ಕಚ್ಚಿರುವುದರಿಂದ ಆಗಿಲ್ಲ ಎಂದು ಹೇಳಿದ್ದಾರೆ. ವೈದ್ಯರು ಮಗುವಿನ ತಪಾಸಣೆ ಮಾಡಿದ್ದಾರೆ. ಸ್ವೇಟರ್ ಹಾಕಿರುವ ಕಾರಣಕ್ಕೆ ಮಗುವಿನ ಮೈ ಮೇಲೆ ಅಲರ್ಜಿ ಆಗಿದೆ. ಇದು ಮಕ್ಕಳಲ್ಲಿ ಸ್ವಾಭಾವಿಕ ಕಾಣಿಸಿಕೊಳ್ಳುತ್ತದೆ. ಮಕ್ಕಳ ಚರ್ಮ ಸಾಕಷ್ಟು ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಇಂತಹ ಅಲರ್ಜಿ ಆಗುವುದು ಮಾಮೂಲಿ ಎಂದು ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.