ಬೆಂಗಳೂರು: ವೀರ ಸಾವರ್ಕರ್ ಅವರು ಅಂದಿನ ಇಡೀ ಜನಾಂಗಕ್ಕೇ ಸ್ವಾತಂತ್ರ್ಯದ ಪ್ರೇರೇಪಣೆ ನೀಡಿದ ಮಹಾನ್ ವ್ಯಕ್ತಿಯಾಗಿದ್ದರು. ನಾವು ದಾಸ್ಯದಲ್ಲಿ ಏಕಿರಬೇಕು? ದಾಸ್ಯ ಶೃಂಖಲೆಯನ್ನು ಏಕೆ ಮುರಿಯಬೇಕು? ಆ ನೇತೃತ್ವವನ್ನು ಏಕೆ ತೆಗೆದುಕೊಳ್ಳಬೇಕು? ಎಂಬ ವಿಚಾರದಲ್ಲಿ ಅವರು ಇಂಗ್ಲೆಂಡ್‍ನಲ್ಲಿ ಬ್ಯಾರಿಸ್ಟರ್ ಪದವಿ ಪಡೆಯುತ್ತಿದ್ದ ಎಲ್ಲರನ್ನೂ ಪ್ರೇರೇಪಿಸಿದವರು ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಕೇಶವ ಪ್ರಸಾದ್ ಶನಿವಾರ ತಿಳಿಸಿದರು.
ರಾಜ್ಯ ಬಿಜೆಪಿ ಕಾರ್ಯಾಲಯ ʼಜಗನ್ನಾಥ ಭವನʼದಲ್ಲಿ ಏರ್ಪಡಿಸಿದ್ದ ವೀರ ಸಾವರ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬುದ್ಧಿವಂತ, ವಿದ್ಯಾವಂತ ವರ್ಗವನ್ನು ಸಾವರ್ಕರ್ ಅವರು ಸ್ವಾತಂತ್ರ್ಯದತ್ತ ಪ್ರೇರೇಪಿಸಿದರು. ಹಿಂದೂ ಮಹಾಸಭಾದ ಸಂಸ್ಥಾಪಕರಾಗಿ ಅದರ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಅವರು ಅಖಂಡ ಭಾರತವನ್ನು ಉಳಿಸಿಕೊಳ್ಳಲು ನಿರಂತರ ಪ್ರಯತ್ನ ಮಾಡಿದ್ದರು. ಭಾರತ ವಿಭಜನೆ ಆಗುವುದು ಖಚಿತಗೊಂಡಾಗ ಪಾಕಿಸ್ತಾನ ಮತ್ತು ಇವತ್ತಿನ ಬಾಂಗ್ಲಾ ದೇಶದಲ್ಲಿದ್ದ ಹಿಂದೂಗಳು ಸುರಕ್ಷಿತರಾಗಿ ಭಾರತಕ್ಕೆ ಬರಬೇಕೆಂಬ ವಿಚಾರದಲ್ಲಿ ಅವರು ದೊಡ್ಡ ಪಾತ್ರ ವಹಿಸಿದ್ದರು.
ಇದನ್ನೂ ಓದಿ | ವಿಜಯನಗರ ಸಾಮ್ರಾಜ್ಯ ಬಗ್ಗೆ ವೀರ ಸಾವರ್ಕರ್ ಹೀಗೆ ಬರೆದಿದ್ದರು!
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾಗಿದ್ದ ಗುರೂಜಿ ಅವರ ಜತೆ ಸಂಪರ್ಕ ಮಾಡಿ ಅಲ್ಲಿರುವ ಹಿಂದೂಗಳು ಭಾರತಕ್ಕೆ ಕ್ಷೇಮವಾಗಿ ಹಿಂದಿರುಗುವ ವಿಚಾರದಲ್ಲಿ ಗರಿಷ್ಠ ಪ್ರಯತ್ನ ಮಾಡಿದ್ದರು. ಹಿಂದೂಗಳಿಗೆ ಅನ್ಯಾಯ, ಅವರ ಮೇಲೆ ದೌರ್ಜನ್ಯ ನಡೆದಾಗ ಆಕ್ರೋಶಭರಿತರಾಗಿ ಪಾಕಿಸ್ತಾನದ ವಿಭಜನೆಯನ್ನೇ ರದ್ದುಪಡಿಸಲು ಒತ್ತಾಯಿಸಿದ್ದರು.
ಸಮಾಜದ ಪ್ರತಿಯೊಬ್ಬರೂ ರಾಷ್ಟ್ರಕ್ಕಾಗಿ ಕೆಲಸ ಮಾಡಬೇಕು ಎಂಬ ದೊಡ್ಡ ಚಿಂತನೆ ಅವರದಾಗಿತ್ತು. ತಾವು ಕರಿನೀರಿನ ಶಿಕ್ಷೆ ಅನುಭವಿಸುತ್ತ ಸೆಲ್ಯುಲರ್ ಜೈಲಿನ ಗೋಡೆಯ ಮೇಲೆ ಕವನಗಳನ್ನು ಬರೆಯುತ್ತ ಅವುಗಳನ್ನು ಸ್ಮರಣೆಯಲ್ಲಿಟ್ಟಿದ್ದರು. ವಾಪಸಾದ ಬಳಿಕ ಎಲ್ಲವನ್ನೂ ಅಚ್ಚುಹಾಕಿಸಿ ಸ್ವಾತಂತ್ರ್ಯ ಸೇನಾನಿಗಳಾಗಿ ಪ್ರೇರಣೆ ತುಂಬಿದ್ದರು ಎಂದು ತಿಳಿಸಿದರು.
ಮತಾಂತರಗೊಂಡವರನ್ನು ಹಿಂದೂ ಆಗಿ ಮರು ಮತಾಂತರ ಮಾಡಬೇಕೆಂಬ ವಿಚಾರದಲ್ಲಿ ವಿಶೇಷ ಕೆಲಸ ಮಾಡಿದವರು. ಅಸ್ಪಷ್ಯತೆ ನಿವಾರಣೆಗೂ ಅವರು ಶ್ರಮಿಸಿದ್ದರು. ಸಾವರ್ಕರ್ ಕೇವಲ ಒಂದು ವರ್ಗದ ನಾಯಕ ಎಂಬಂತೆ ಕಾಂಗ್ರೆಸಿಗರು ಬಿಂಬಿಸುತ್ತಿದ್ದಾರೆ. ಆದರೆ ಅವರು ರಾಷ್ಟ್ರ ನಾಯಕರು. ಸಾವರ್ಕರ್ ಅವರ ಜೀವನ, ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಕೇಶವ ಪ್ರಸಾದ್ ಮನವಿ ಮಾಡಿದರು.
ಇದನ್ನೂ ಓದಿ: Savarkar Birthday: ಸ್ವಾತಂತ್ರ್ಯವೀರ ಸಾವರ್ಕರ್ ಬಗ್ಗೆ ನಿಮಗೀ 13 ವಿಷಯಗಳು ಗೊತ್ತೆ?