ಬೆಂಗಳೂರು: ಯಾವುದೇ ವಸ್ತುವನ್ನು ಖರೀದಿಸಿದರೆ ಅಥವಾ ಸೇವೆ ಪಡೆದುಕೊಂಡರೆ ಅದಕ್ಕೆ ಆನ್‌ಲೈನ್ ಮೂಲಕ ರಿವ್ಯೂ ಕೊಡುವ ಪರಿಪಾಠವಿದೆ. ಉತ್ಪನ್ನದ ಗುಣಮಟ್ಟ ನಿರ್ಧರಿಸಲು ಇದು ನೆರವಾಗುತ್ತದೆ. ಬಹುತೇಕರು ಉತ್ಪನ್ನ ಖರೀದಿಗೆ ಮುನ್ನ ರಿವ್ಯೂ ಪರಿಶೀಲಿಸುವುದನ್ನು ರೂಢಿಸಿಕೊಂಡಿದ್ದಾರೆ. ಈ ಮಧ್ಯೆ ಬೆಂಗಳೂರಿನ ಆಟೋ ಚಾಲಕನೊಬ್ಬ (Auto-rickshaw driver) ವಿಭಿನ್ನವಾಗಿ ಉತ್ಪನ್ನ ರಿವ್ಯೂ ಮಾಡಿ ಗಮನ ಸೆಳೆದಿದ್ದಾನೆ. ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ (Viral News).
ಆಟೊ ಚಾಲಕ ಕಂಡುಕೊಂಡ ಮಾರ್ಗ
ಬೆಂಗಳೂರು ಎಂದರೇನೇ ಹಾಗೆ. ಇಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ವಿಶೇಷ ಸಂಗತಿ ಕಣ್ಣಿಗೆ ಬೀಳುತ್ತಿರುತ್ತದೆ. ಕೆಲವರು ಆರ್ಡರ್ ಮಾಡಿದ ಫಿಜ್ಜಾವನ್ನು ಟ್ರಾಫಿಕ್ ಮಧ್ಯೆ ಡೆಲಿವರಿ ಪಡೆಯುತ್ತಾರೆ. ಇನ್ನೊಬ್ಬ ಇದ್ದ ಉದ್ಯೋಗ ಬಿಟ್ಟು ಬೆಂಗಳೂರು ಸುತ್ತಾಡುವ ಉದ್ದೇಶದಿಂದ ಇಲ್ಲಿ ಚಾಲಕನಾಗಿ ಕೆಲಸ ಮಾಡುತ್ತಾನೆ. ಟ್ರಾಫಿಕ್ ಜಾಲಕ್ಕೆ ಸಿಲುಕಿದ್ದ ಯುವಕನೊಬ್ಬ ಮನೆ ತಲುಪಲು ಸುಮಾರು 18 ಕಿ.ಮೀ ನಡೆಯುತ್ತಾನೆ… ಹೀಗೆ ಈ ಎಲ್ಲ ವಿಚಾರಗಳು ಹಿಂದೆ ನೆಟ್ಟಿಗರ ಗಮನ ಸೆಳೆದಿದ್ದವು. ಇದೀಗ ಸದ್ದು ಮಾಡುವ ಸರದಿ ಈ ಆಟೋ ಚಾಲಕನದ್ದು. ಆತ ತನ್ನ ಆಟೋ ರಿಕ್ಷಾದ ಹಿಂಭಾಗದಲ್ಲಿ ಆಟೋದ ಗುಣಮಟ್ಟದ ಬಗ್ಗೆ ರಿವ್ಯೂ ಬರೆದಿದ್ದಾನೆ. ಅಸಮಾಧಾನದಿಂದಲೇ ತನ್ನ ಅಭಿಪ್ರಾಯವನ್ನು ಹೊರ ಹಾಕಿರುವುದು ನೆಟ್ಟಿಗರು ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.
What an innovative way to tell others not to buy a bad product! Just #NammaBengaluru things. pic.twitter.com/JaIVYIwEnb
— Ashish Krupakar (@followdcounsel) October 27, 2023
ಆಟೋದಲ್ಲಿ ಏನು ಬರೆಯಲಾಗಿದೆ?
ʼʼಕಚ್ಚಡ ಗಾಡಿ. ತಗೋಬೇಡಿʼʼ ಎಂದು ಆಟೋ ಹಿಂಭಾಗದ ಮೇಲ್ಭಾಗದಲ್ಲಿ ಬರೆಯಲಾಗಿದೆ. ಇನ್ನು ಕೆಳಗಡೆ ಇಂಗ್ಲಿಷ್‌ನಲ್ಲಿ ʼʼವರ್ಸ್ಟ್ ವೆಹಿಕಲ್; ಡೋಂಟ್ ಬೈʼʼ (Worst vehicle; Don’t buy) ಎಂದು ಬರೆಯಲಾಗಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಫೋಟೊವನ್ನು ಹಂಚಿಕೊಳ್ಳಲಾಗಿದ್ದು, “ಕೆಟ್ಟ ಉತ್ಪನ್ನವನ್ನು ಖರೀದಿಸಬೇಡಿ ಎಂದು ಇತರರಿಗೆ ಹೇಳಲು ಎಂತಹ ನವೀನ ಮಾರ್ಗ!ʼʼ ಎನ್ನುವ ಕ್ಯಾಪ್ಶನ್ ನೀಡಲಾಗಿದೆ. ಈಗಾಗಲೇ 45 ಸಾವಿರಕ್ಕೂ ಅಧಿಕ ಮಂದಿ ಈ ಪೋಸ್ಟ್ ಅನ್ನು ವೀಕ್ಷಿಸಿದ್ದಾರೆ. ಚಾಲಕನ ಈ ನಿಷ್ಠುರ ಹೇಳಿಕೆ ಅನೇಕರನ್ನು ಅಚ್ಚರಿಗೆ ದೂಡಿದೆ.
ನೆಟ್ಟಿಗರು ಏನಂದ್ರು?
ʼʼಉತ್ತಮ ಯೋಚನೆʼʼ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇದನ್ನು ಇನ್ನೊಬ್ಬರು ʼʼಸಮಾಜ ಸೇವೆʼʼ ಎಂದು ಕರೆದಿದ್ದಾರೆ. ʼʼಆತನ ಕಾಳಜಿಗೆ ಧನ್ಯವಾದ ಹೇಳಿʼʼ ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ. ಹಲವರು ನಗುವ ಎಮೋಜಿಗಳನ್ನು ಬಳಸಿದ್ದಾರೆ. ಒಟ್ಟಿನಲ್ಲಿ ಆಟೋ ಚಾಲಕ ಈ ದಿಟ್ಟ ನಡೆ ಹಲವರ ಗಮನ ಸೆಳೆದಿದೆ. ಆಧುನಿಕ ತಂತ್ರಜ್ಞಾನದಲ್ಲಿ ಬಳಸ್ಪಡುವ ತಂತ್ರವನ್ನು ತನ್ನದೇ ಮಾರ್ಗದಲ್ಲಿ ಸರಳವಾಗಿ ಬಳಸಿದ್ದಾನೆ.
ಇದನ್ನೂ ಓದಿ: Traffic Jam: ಟ್ರಾಫಿಕ್ ಜಾಮ್‌ನಲ್ಲೇ ಫುಡ್ ಡೆಲಿವರಿ ಮಾಡಿದ ಡೊಮಿನೋಸ್ ಸಿಬ್ಬಂದಿಗೆ ಸಿಕ್ತು ಶಬ್ಬಾಶ್‌ಗಿರಿ
ಆಟೋ ಚಾಲಕರು ಕೆಲವೊಮ್ಮೆ ತಮ್ಮ ತಮಾಷೆಯ ಪ್ರವೃತ್ತಿಯಿಂದಲೂ ಗಮನ ಸೆಳೆಯುತ್ತಾರೆ. ಅವರ ಆಟೋದಲ್ಲಿ ಬಳಸಲಾಗುವ ಕೆಲವೊಂದು ವಾಕ್ಯಗಳು ಇದಕ್ಕೆ ಸಾಕ್ಷಿ. ಇತ್ತೀಚೆಗೆ ಆಟೋವೊಂದರಲ್ಲಿ “ಪ್ರೀತಿಯು ಉದ್ಯಾನವನದಲ್ಲಿನ ನಡಿಗೆಯಂತೆ” ಎಂದು ಬರೆಯಲಾಗಿತ್ತು. ಅದರ ಕೆಳಗಡೆ ಕೆಂಪು ಅಕ್ಷರಗಳಲ್ಲಿ ‘ಜುರಾಸಿಕ್ ಪಾರ್ಕ್’ ಎಂಬ ಪದಗುಚ್ಛವನ್ನು ಸೇರಿಸಿ ಓದುಗರ ಮೊಗದಲ್ಲಿ ನಗು ಅರಳುವಂತೆ ಮಾಡಲಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ