Site icon Vistara News

Viral Post: ಜ್ಯೂಸ್‌ ಕುಡಿಯಿರಿ, ಯುಟ್ಯೂಬ್‌ ಚಾನಲ್‌ ಸಬ್‌ಸ್ಕ್ರೈಬ್‌ ಮಾಡಿ ರಿಯಾಯಿತಿ ಪಡೆಯಿರಿ!

Viral Post

ಅಂತರ್ಜಾಲ ಇಂದು ಎಲ್ಲರ ಕೈಗೂ ಎಟಕುತ್ತಿದೆ. ಜನಸಾಮಾನ್ಯರು ಇಂದು ಅಂತರ್ಜಾಲದ ಎಲ್ಲ ಉಪಯೋಗಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇಂತಹ ಕೆಲವು ವಿಚಾರಗಳು ಸಾಕ್ಷಿಯಾಗುತ್ತವೆ. ಆನ್‌ಲೈನ್‌ ಮೂಲಕ ಹಣ ಪಾವತಿಸುವುದರಿಂದ ಹಿಡಿದು ಯುಟ್ಯೂಬ್‌ ಚಾನಲ್‌ವರೆಗೆ ಇಂದು ಜನಸಾಮಾನ್ಯರು ಅಂತರ್ಜಾಲದಲ್ಲಿ ಸಹಜವಾಗಿ ವ್ಯವಹರಿಸುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಬೆಳ್ಳಂದೂರಿನ ಜ್ಯೂಸ್‌ ಮಾರುವ ವ್ಯಕ್ತಿಯೊಬ್ಬರು ತಮ್ಮ ಯುಟ್ಯೂಬ್‌ ಚಾನಲ್‌ನ ಜಾಹಿರಾತನ್ನೂ ತನ್ನದೇ ಜ್ಯೂಸ್‌ ಸ್ಟಾಲ್‌ ಮೇಲೆ ಹಾಕುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ.

ಇತ್ತೀಚೆಗೆ ಕೇಶವ್‌ ಲೋಹಿಯಾ ಎಂಬವರು ಬೆಳ್ಳಂದೂರಿನ ರಸ್ತೆ ಬದಿಯೊಂದರಲ್ಲಿ ದೊರೆಯುವ ಸಾಮಾನ್ಯ ಜ್ಯೂಸ್‌ ಮಾರುವ ವ್ಯಕ್ತಿಯೊಬ್ಬನ ಬಳಿ ಜ್ಯೂಸ್‌ ಕುಡಿದು ಪೇಟಿಎಮ್‌ ಮೂಲಕ ಹಣ ಪಾವತಿಸಲೆಂದು ಅಲ್ಲೇ ಕ್ಯುಆರ್‌ ಕೋಡ್‌ ಬಳಿ ಮೊಬೈಲ್‌ ಹಿಡಿದಾಗ, ಈ ಜ್ಯೂಸ್‌ ಮಾರಾಟಗಾರ ತನ್ನ ಯುಟ್ಯೂಬ್‌ ಚಾನಲ್‌ ಸಬ್‌ಸ್ಕ್ರೈಬ್‌ ಮಾಡಿ ಎಂದು ಅದಕ್ಕೂ ಕ್ಯುಆರ್‌ ಕೋಡ್‌ ಅಲ್ಲಿ ಲಗತ್ತಿಸಿ ಇಟ್ಟಿದ್ದು ಅವರ ಕಣ್ಣಿಗೆ ಬಿದ್ದಿದೆ. ಕ್ಯುಆರ್‌ ಕೋಡ್‌ ಮೂಲಕ ಆತನ ಯುಟ್ಯೂಬ್‌ ಚಾನಲ್‌ಗೆ ಹೋಗಿ ನೋಡಿದರೆ ಅಲ್ಲಿ ಎರಡು ಸಾವಿರಕ್ಕೂ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಕಂಡಿದ್ದು, ಅದರಲ್ಲಿ, ತನ್ನ ಹಲವಾರು ಅಡುಗೆ, ಆಹಾರ ಸಂಬಂಧಿಸಿದ ವಿಡಿಯೋಗಳನ್ನು ಆತ ಅಪ್‌ಲೋಡ್‌ ಮಾಡಿದ್ದರು.

ತನ್ನ ಚಾನಲ್‌ಗೆ ಭೇಟಿ ಕೊಡಿ ಎಂದು ತನ್ನ ಬಾರ್‌ಕೋಡ್‌ ತನ್ನ ಜ್ಯೂಸ್‌ ಗಾಡಿಯಲ್ಲಿ ಹಾಕುವ ಮೂಲಕ ತನ್ನ ಚಾನಲ್‌ ಪ್ರೊಮೋಟ್‌ ಮಾಡುತ್ತಿರುವ ಜ್ಯೂಸ್‌ ಗಾಡಿಯಾತ! ಇದು ಬೆಂಗಳೂರಿನ ಬೆಳ್ಳಂದೂರಿನಲ್ಲಿ. ಇದು ಬೆಂಗಳೂರಿನ ಮಹಿಮೆ! ಎಂದು ಆತ ತನ್ನ ಟ್ವಿಟರ್‌ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಈ ಪೋಸ್ಟ್‌ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದ್ದು ವೈರಲ್‌ ಆಗಿದೆ. ಒಂದು ಪುಟಾಣಿ ಜ್ಯೂಸ್‌ ಅಂಗಡಿಯಾತನ ಮಾರ್ಕೆಟಿಂಗ್‌ ತಂತ್ರ ನೋಡಿ! ಇದು ಸಿಲಿಕಾನ್ ವ್ಯಾಲಿ ಆಫ್‌ ಇಂಡಿಯಾ!‌ ಅಷ್ಟೇ ಅಲ್ಲ, ಈತನ ಚಾನಲ್‌ ಸಬ್‌ಸ್ಕ್ರೈಬ್‌ ಮಾಡಿದರೆ ಈತನ ಜ್ಯೂಸ್‌ ಅಂಗಡಿಯಲ್ಲಿ ಶೇಕಡಾ ೧೦ ರಿಯಾಯಿತಿಯನ್ನೂ ಈತ ನೀಡುತ್ತಾನಂತೆ! ೪೦ ರೂಪಾಯಿಗಳ ಜ್ಯೂಸ್‌ ಕುಡಿದು ಈತನ ಚಾನಲ್‌ ಸಬ್‌ಸ್ಕ್ರೈಬ್‌ ಮಾಡಿ ಶೇ.೧೦ ರಿಯಾಯಿತಿ ಪಡೆದು ಹೋಗಬಹುದು! ಎಂಥಾ ಆಫರ್!‌ ಎಂಥಾ ಐಡಿಯಾ!

ಇದಕ್ಕೆ ಹಲವು ಮಂದಿ ವಾವ್‌ ಎಂದು ಕಾಮೆಂಟ್‌ ಮಾಡಿದ್ದು, ಕ್ರಿಯೇಟರ್‌ ಎಕಾನಮಿಗೆ ಇದು ನಿಜವಾದ ಉದಾಹರಣೆ. ಈಗ ಎಲ್ಲರೂ ಕಂಟೆಂಟ್‌ ಕ್ರಿಯೇಟರ್‌ಗಳೇ. ಯುಟ್ಯೂಬ್‌ ವಿಡಿಯೋ ಅಥವಾ ವ್ಲಾಗ್‌ ಮಾಡದಿದ್ದರೆ ನೀವು ನಿಜವಾಗಿಯೂ ಮನುಷ್ಯರೇ ಅಲ್ಲವೇ ಎಂದು ಕೇಳುವಂಥ ಪರಿಸ್ಥಿತಿ ಈಗಿದೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಒಳ್ಳೆಯ ಜ್ಯೂಸ್‌ ಅಂಗಡಿ, ಚಿಕ್ಕವಾದರೂ ಚೊಕ್ಕವಾಗಿ, ಸ್ವಚ್ಛವಾಗಿ ಇಟ್ಟುಕೊಂಡಿರುವ ಈ ಪುಟಾಣಿ ಅಂಗಡಿಯಾತನಿಗೆ ನಿಜವಾಗಿ ತನ್ನ ವಸ್ತುವನ್ನು ಜನರಿಗೆ ಹೇಗೆ ತಲುಪಿಸಬೇಕೆಂದು ಗೊತ್ತಿದೆ. ಸ್ಮಾರ್ಟ್‌ ನಡೆ ಎಂದು ಇನ್ನೊಬ್ಬರು ಅಂಗಡಿಯಾತನ ಜಾಣತನಕ್ಕೆ ತಲೆದೂಗಿದ್ದಾರೆ.

ನನ್ನೂರಿನ ಬೀದಿಬದಿಯ ವ್ಯಾಪಾರಸ್ಥರೂ ಇಂದು ಮಾನ್ಯತೆ ಪಡೆಯುತ್ತಿರುವ ಬಗ್ಗೆ ಖುಷಿಯಿದೆ. ಈ ಭೂಮಿ ಮೇಲೆ ಈಗ ನಾನು ಎಲ್ಲೇ ಇರಲಿ, ನಾನು ಮಾತ್ರ ಬೆಂಗಳೂರು ಹುಡುಗಿಯೇ ಆಗಿರುವೆ ಎಂದು ತನ್ನೂರಿನ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ.

Exit mobile version