ಮಕ್ಕಳಿಗೆ ಬೇಸಿಗೆ ರಜೆ ಶುರುವಾಯಿತೆಂದರೆ ಹೆತ್ತವರಿಗೆ ತಲೆನೋವು ಶುರುವಾಗುತ್ತದೆ. ಮಕ್ಕಳು ತಮ್ಮ ರಜೆಯನ್ನು ಸರಿಯಾಗಿ ಬಳಸುವಂತೆ ಹೇಗೆ ಮಾಡುವುದು ಎಂಬುದು ಹೆತ್ತವರು ಮುಗಿಯದ ಪ್ರಶ್ನೆ. ಮಕ್ಕಳಿಗೋ, ರಜೆಯನ್ನು ಮಜವಾಗಿ ಕಳೆಯುವುದು ಹೇಗೆ ಎಂಬ ಚಿಂತೆ. ಹೆತ್ತವರಿಬ್ಬರೂ ಕೆಲಸಕ್ಕೆ ಹೋಗುವ ಮಂದಿಯಾದರಂತೂ ಕತೆ ಮುಗಿದಂತೆಯೇ. ಅದಕ್ಕಾಗಿಯೇ ಇಂದು ಸಾಕಷ್ಟು ಬೇಸಿಗೆ ಶಿಬಿರಗಳೂ ನಡೆಯುತ್ತವೆ. ಇಂಥ ಸಂದರ್ಭ ಈಗಷ್ಟೇ ಸಿಕ್ಕಿದ ರಜೆಯಲ್ಲಿ ಮನೆಯಲ್ಲಿ ಬೋರ್ ಆಗುತ್ತಿದೆಯೆಂದು ಮಕ್ಕಳು ಜೊತೆಗೂಡಿ, ಬೆಂಗಳೂರಿನ ತಮ್ಮ ಮನೆಯ ಹೊರಗಡೆ ಬಿಸಿಲಲ್ಲಿ ಕೂತು ನಿಂಬೆಹಣ್ಣಿನ ಜ್ಯೂಸ್ ಮಾಡಿ ಮಾಡುವ ದೃಶ್ಯವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಯುಷಿ ಖುಚ್ರೂ ಎಂಬಾಕೆ ತನ್ನ ಟ್ವಿಟರ್ ಖಾತೆಯಲ್ಲಿ ತಾನು ಕಂಡ ಮಕ್ಕಳ ಈ ಫೋಟೋಗಳನ್ನು ಹಂಚಿಕೊಂಡಿದ್ದು, ಈ ದಿನದಲ್ಲಿ ತಾನು ಕಂಡ ಹೈಲೈಟ್ ಅಂದರೆ ಈ ಮಕ್ಕಳು. ʻಇಂದಿರಾನಗರದ ರೆಸಿಡೆನ್ಶಿಯಲ್ ಏರಿಯಾ ಒಂದರಲ್ಲಿ ಬೋರಾದ ಮಕ್ಕಳು ತಮ್ಮ ಮನೆಯ ಗೇಟ್ ಮುಂದೆ ಲೆಮೇಡ್ ಮಾರುತ್ತಿದ್ದಾರೆ. ಮಾರಾಟದ ತಂತ್ರಗಳನ್ನು ಅರಿಯಲು ಅತ್ಯುತ್ತಮ ವಿಧಾನವಿದು ಹಾಗೂ ಸರಿಯಾದ ವಯಸ್ಸೂ ಕೂಡಾʼ ಎಂದವರು ತಮ್ಮ ಪೋಸ್ಟ್‌ನಲ್ಲಿ ವಿವರಣೆ ಬರೆದು ಫೋಟೋ ಪೋಸ್ಟ್ ಮಾಡಿದ್ದಾರೆ.
ಇಂದಿರಾನಗರದ ಮನೆಯೊಂದರ ಗೇಟ್ ಬಳಿ ಮಕ್ಕಳು ಕುಳಿತಿರುವ ಈ ಮಕ್ಕಳು, ತಮ್ಮ ಓದುವ ಟೇಬಲ್ ಅನ್ನು ನಿಂಬೆಹಣ್ಣಿನ ಜ್ಯೂಸ್ ಅಂಗಡಿಯ ಡಿಸ್‌ಪ್ಲೇ ಟೇಬಲ್ ಆಗಿ ಬದಲಾಯಿಸಿದ್ದಾರೆ. ಮಕ್ಕಳು ಮೂರ್ನಾಲ್ಕು ಬಗೆಯ ಲೆಮನೇಡ್‌ಗಳನ್ನು ತಾವೇ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ತಮ್ಮದೇ ಕೈಬರಹದಲ್ಲಿ ʻವೈಟ್ ಶುಗರ್ ಲೆಮನೇಡ್ʼ, ಬ್ರೌನ್ ಶುಗರ್ ಲೆಮನೇಡ್ʼ, ಪ್ಲೈನ್ ಲೆಮನೇಡ್ ಹಾಗೂ ಸಾಲ್ಟೆಡ್ ಲೆಮನೇಡ್ ಎಂಬ ನಾಲ್ಕು ಬಗೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಖರೀದಿಸಿದ ಮಂದಿಗೆ ಐದು ರೂಪಾಯಿ ಡಿಸ್ಕೌಂಟ್ ಕೂಡಾ ಸಿಗಲಿದೆ ಎಂದು ತಮ್ಮ ಈ ಬೋರ್ಡ್‌ನಲ್ಲಿ ಬರೆದಿರುವ ಮಕ್ಕಳು, ಐಸ್ ಹಾಕಬೇಕೆಂದರೆ ಐದು ರೂಪಾಯಿ ಹೆಚ್ಚುವರಿ ಕೊಡಬೇಕಾಗುತ್ತದೆ ಎಂದೂ ಬರೆದಿದ್ದಾರೆ. ಪಕ್ಕದಲ್ಲೇ ಹಣದ ಡಬ್ಬಿಯನ್ನೂ ಇಟ್ಟುಕೊಂಡಿದ್ದಾರೆ.
ಈ ಪೋಸ್ಟ್‌ಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆಗಳು ಬಂದಿದ್ದು, ಹಲವರು ಮಕ್ಕಳ ಈ ನಡೆಗೆ ಮನಸೋತಿದ್ದಾರೆ. ಅನೇಕರು ತಮಾಷೆಯಾಗಿ ಕಾಮೆಂಟ್ ಮಾಡಿದ್ದು, ಇದನ್ನು ನೋಡುವುದೇ ಕಣ್ಣಿಗೆ ಹಬ್ಬ. ಮಕ್ಕಳು ಲೆಮನೇಡ್‌ಗೆ ದರ ನಿಗದಿಪಡಿಸಿ ಡಿಸ್ಕೌಂಟ್ ಕೂಡಾ ಬರೆದಿದ್ದು ಮಕ್ಕಳು ಎಷ್ಟು ವೃತ್ತಿಪರವಾಗಿ ಯೋಚಿಸಿದ್ದಾರೆ ಎಂಬುದು ಅರ್ಥವಾಗುತ್ತದೆ. ಈ ಮಕ್ಕಳಿಂದಾಗಿ ನನ್ನ ಸೇಲ್ಸ್‌ಮ್ಯಾನ್ ಕೆಲಸ ಹೋದರೆ ಎಂಬ ನಡುಕ ಶುರುವಾಗಿದೆ ಎಂದು ಕಾಲೆಳೆದಿದ್ದಾರೆ.
ಇನ್ನೊಬ್ಬರು ತಮಗೆ ಇಂಥದ್ದೇ ಅನುಭವ ವಾರದ ಹಿಂದೆ ಬಿಟಿಎಂ ಲೇಔಟ್‌ನಲ್ಲೂ ಆಗಿದ್ದು, ಮೂರ್ನಾಲ್ಕು ಮಕ್ಕಳು ತಾವು ಬಿಡಿಸಿದ ಚಿತ್ರಗಳನ್ನು ಮಾರಾಟ ಮಾಡುತ್ತಿದ್ದರು. ಕೆಲವನ್ನು ನಾನು ಖರೀದಿಸಿದೆ ಎಂದಿದ್ದಾರೆ.
ಇದನ್ನೂ ಓದಿ: Viral Post: ಕಳೆದು ಕೊಂಡ ಕಣ್ಣನ್ನೇ ಹೆಡ್‌ಲ್ಯಾಂಪಾಗಿಸಿ ಬೆಳಕು ಪಡೆದವನೀತ!