ಬೆಂಗಳೂರು: ನಾಡಿನ ಜನಪ್ರಿಯ ಮತ್ತು ಜನಪರ ಮಾಧ್ಯಮ ಸಂಸ್ಥೆಯಾದ ವಿಸ್ತಾರ ನ್ಯೂಸ್ (Vistara News) ಆಯೋಜಿಸಿರುವ “ವಿಸ್ತಾರ ಕನ್ನಡ ಸಂಭ್ರಮ” (Vistara Kannada Sambhrama) ಕಾರ್ಯಕ್ರಮದಲ್ಲಿ ವಿಸ್ತಾರ ಪ್ರಕಾಶನದ ನಾಲ್ಕು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಹಿರಿಯ ಕವಿ ಬಿ.ಆರ್. ಲಕ್ಷ್ಮಣ ರಾವ್, ಜನಪ್ರಿಯ ನಟರಾದ ರಮೇಶ್ ಅರವಿಂದ್, ಬೃಂದಾ ಆಚಾರ್ಯ ಹಾಗೂ ಸಿದ್ದಲಿಂಗೇಶ್ವರ ಬಕ್ ಡಿಪೊ ಮತ್ತು ಪ್ರಕಾಶನದ ಮಾಲೀಕರಾದ ಬಸವರಾಜ ಕೊನೇಕ ಅವರು “ಕುಣಿಯೇ ಜೀವ”, “ನಮ್ಮದೇ ಕಥೆಗಳು”, “ರಾಜಮಾರ್ಗ ಅಂಕಣ” ಹಾಗೂ ಅಮ್ಮ ಹೇಳುವ ಚಂದದ ಕಥೆಗಳನ್ನು ಲೋಕಾರ್ಪಣೆ ಗೊಳಿಸಿದರು.
“ಕುಣಿಯೇ ಜೀವ” ಕೃತಿಯಲ್ಲಿ ಕಥೆಗಳ ಗುಚ್ಛವೇ ಇದ್ದು, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನದ ಸಹಯೋಗದಲ್ಲಿ ನಡೆಸಿದ್ದ ವಿಸ್ತಾರ ನ್ಯೂಸ್ ನಡೆಸಿದ್ದ ಯುಗಾದಿ ಕಥಾಸ್ಪರ್ಧೆ 2023ರ ಬಹುಮಾನಿತ ಕಥೆಗಳ ಸಂಕಲನ ಇದಾಗಿದೆ. “ನಮ್ಮದೇ ಕಥೆಗಳು” ಪುಸ್ತಕವನ್ನು ಹಿರಿ ಪತ್ರಕರ್ತ ಕೃಷ್ಣ ಭಟ್ ಅಳದಂಗಡಿ ಅವರು ಬರೆದಿದ್ದಾರೆ. “ರಾಜಮಾರ್ಗ”ವು ಪ್ರೇರಣಾದಾಯಕ ಕಥೆಗಳನ್ನು ಹೊಂದಿದ್ದು, ವಿಸ್ತಾರ ನ್ಯೂಸ್ ಅಂಕಣವಾಗಿದೆ. ಇದನ್ನು ಮೋಟಿವೇಶನಲ್ ಸ್ಪೀಕರ್ ರಾಜೇಂದ್ರ ಭಟ್ ಕೆ. ಅವರು ಬರೆದಿದ್ದಾರೆ. “ಅಮ್ಮ ಹೇಳುವ ಚಂದದ ಕಥೆಗಳು” ಪುಸ್ತಕವನ್ನು ಕತೆಗಾರ್ತಿ, ಲೇಖಕಿ ಅಲಕಾ ಕಟ್ಟೆಮನೆ ಅವರು ರಚಿಸಿದ್ದಾರೆ.
ವ್ಯವಸ್ಥಾಪಕ ನಿರ್ದೇಶಕರಾಗಿರುವ ಎಚ್. ವಿ. ಧರ್ಮೇಶ್, ನಿರ್ದೇಶಕರಾಗಿರುವ ಶ್ರೀನಿವಾಸ ಹೆಬ್ಬಾರ್, ವಿಸ್ತಾರ ನ್ಯೂಸ್‌ನ ಸಿಇಒ ಹಾಗೂ ಪ್ರಧಾನ ಸಂಪಾದಕರಾಗಿರುವ ಹರಿಪ್ರಕಾಶ್ ಕೋಣೆಮನೆ, ಕಾರ್ಯನಿರ್ವಾಹಕ ನಿರ್ದೇಶಕ ಮತ್ತು – ಸ್ಪೆಷಲ್ ಆಪರೇಷನ್ಸ್ ಸಂಪಾದಕರಾಗಿರುವ ಕಿರಣ್ ಕುಮಾರ್ ಡಿ.ಕೆ. ಸೇರಿದಂತೆ ಹಲವು ಗಣ್ಯರು, ಕಲಾಸಕ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.
ಪುಸ್ತಕ – ಲೇಖಕರ ಪರಿಚಯ ಇಂತಿದೆ
1.ರಾಜ ಮಾರ್ಗ: ಲೇಖಕರು- ರಾಜೇಂದ್ರ ಭಟ್ ಕೆ.
VISTARA NEWS ಜಾಲತಾಣ ಆರಂಭವಾದ ದಿನದಿಂದ ಒಂದು ದಿನವೂ ಬಿಡದೆ ಪ್ರಕಟವಾಗಿದ್ದು ರಾಜ ಮಾರ್ಗ ಅಂಕಣ. ಅದನ್ನು ಒಂದು ತಪಸ್ಸಿನಂತೆ ಪ್ರತಿದಿನವೂ ಬರೆಯುತ್ತಿರುವವರು ರಾಜೇಂದ್ರ ಭಟ್ ಕೆ. ಅವರು. ಒಂದು ದಿನವೂ ಲೇಖನ ಮಿಸ್ ಆಗಿಲ್ಲ. ಈಗಾಗಲೇ ಸುಮಾರು 500ಕ್ಕೂ ಅಧಿಕ ಲೇಖನಗಳನ್ನು ಅವರು ವಿಸ್ತಾರಕ್ಕಾಗಿ ಬರೆದಿದ್ದಾರೆ. ಅದರಲ್ಲಿ ಆಯ್ದ 40 ಲೇಖನಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಇದನ್ನೊಂದು ಸರಣಿ ಮಾಡುವುದಾದರೆ ಈಗಲೇ 12 ಪುಸ್ತಕಗಳನ್ನು ಮಾಡಬಹುದು. ಮುಂದಿನ ದಿನಗಳಲ್ಲಿ ವಿಸ್ತಾರ ನ್ಯೂಸ್ ಸರಣಿ ಕೃತಿಗಳನ್ನು ಹೊರತರಲಿದೆ. ಹೈಸ್ಕೂಲ್‌ನಲ್ಲಿ ಗಣಿತ ಶಿಕ್ಷಕರಾಗಿರುವ ರಾಜೇಂದ್ರ ಭಟ್ ಅವರು MOTIVATIONAL SPEAKER ಆಗಿ ರಾಜ್ಯಾದ್ಯಂತ ಪರಿಚಿತರು. ಜೇಸೀ ಸಂಸ್ಥೆಯ ಅಂತಾರಾಷ್ಟ್ರೀಯ ಟ್ರೇನರ್. ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮಾತ್ರವಲ್ಲ, ಐಎಎಸ್ ಅಧಿಕಾರಿಗಳಿಗೂ ಮ್ಯಾನೇಜ್‌ಮೆಂಟ್ ಪಾಠ ಮಾಡುತ್ತಿರುವವರು ಇವರು. ಅವರು ಒಬ್ಬ ಬೆಸ್ಟ್ ಕಾರ್ಯಕ್ರಮ ನಿರೂಪಕ, TV ANCHOR.
ಈ ಪುಸ್ತಕ ಎಷ್ಟೊಂದು ಪವರ್‌ಫುಲ್ ಎಂದರೆ ಇದರಲ್ಲಿರುವ ಪ್ರತಿಯೊಂದು ಲೇಖನವೂ ನಮ್ಮಲ್ಲಿ ಸ್ಫೂರ್ತಿಯ ಚಿಲುಮೆಯನ್ನು ಚಿಮ್ಮಿಸುತ್ತದೆ. ದಿಕ್ಕು ತೋಚದೆ ಕುಳಿತವರಿಗೆ ಇದೊಂದು ಮಂತ್ರದಂಡ. ಸುಮ್ಮನೆ ಓದಿದರೆ ಸಾಕು ಬದುಕಿನಲ್ಲಿ ಏನಾದರೂ ಒಂದು ಸಾಧನೆ ಮಾಡಲೇಬೇಕು ಎಂದು ಪ್ರೇರೇಪಿಸುತ್ತದೆ. ದ ಬೆಸ್ಟ್ ಬುಕ್ ಫಾರ್ ಎಲ್ಲರಿಗೂ!
ಇದರಲ್ಲಿರುವ ಒಂದೇ ಒಂದು ಕತೆಯ ಜಿಸ್ಟ್ ಹೇಳ್ತೇನೆ ಕೇಳಿ…. ಗಂಡನ ಮನೆಯಿಂದ ಆಕೆಯನ್ನು ಹೊರದಬ್ಬಲಾಗಿತ್ತು. ಆಗಷ್ಟೇ ಹುಟ್ಟಿದ ಎಳೆ ಹಸುಳೆಯನ್ನು ಎದೆಗವಚಿಕೊಂಡು ಆಕೆ ಸಾಯುವುದಕ್ಕಾಗಿ ರೈಲು ನಿಲ್ದಾಣಕ್ಕೆ ಬಂದಿದ್ದರು. ಇನ್ನೇನು ರೈಲಿನ ಮುಂದೆ ಹಾರಬೇಕು ಎನ್ನುವಾಗ ದೂರದಲ್ಲೊಂದು ಮಗುವಿನ ಅಳು ಕೇಳಿಸಿತು. ಪಕ್ಕಕ್ಕೆ ಸರಿದು ಸೆರಗ ತುದಿಯಲ್ಲಿದ್ದ ರೊಟ್ಟಿಯನ್ನು ನೀರಲ್ಲಿ ಅದ್ದಿ ಆ ಮಗುವಿನ ಬಾಯಿಗಿಟ್ಟರು. ಮಗು ಸಣ್ಣಗೆ ನಕ್ಕಿತು. ಆ ಹೆಣ್ಮಗಳು ಸಾಯುವ ನಿರ್ಧಾರವನ್ನೇ ಅ ನಗು ಬದಲಿಸಿತು. ತನ್ನ ಮಗುವಿನ ಜತೆಗೆ ಆ ಅನಾಥ ಮಗುವನ್ನು ಎತ್ತಿಕೊಂಡು ಕಾಲೆಳೆದ ಕಡೆ ನಡೆದರು. ಇವತ್ತು ಆಕೆ 1400 ಅನಾಥ ಮಕ್ಕಳಿಗೆ ತಾಯಿ. ಹೆಸರು ಸಿಂಧೂತಾಯಿ ಸಪ್ಕಲ್! ಇಂಥಹುದೇ ಕಥೆಗಳ ಗುಚ್ಛವೇ ರಾಜ ಮಾರ್ಗ.
2. ನಮ್ಮದೇ ಕಥೆಗಳು: ಲೇಖಕರು- ಕೃಷ್ಣ ಭಟ್ ಅಳದಂಗಡಿ
ವಿಸ್ತಾರ ನ್ಯೂಸ್ ಜಾಲತಾಣದಲ್ಲಿ ಪ್ರಕಟವಾದ ಸ್ಫೂರ್ತಿ ಕಥೆಗಳ ಸಂಕಲನ ಇದು. ಈ ಪುಸ್ತಕದಲ್ಲಿರುವ ಕಥೆಗಳೆಲ್ಲವೂ ಬದುಕಿಗೆ ಸ್ಫೂರ್ತಿ ತುಂಬುತ್ತವೆ. ಈ ಪುಸ್ತಕದಲ್ಲಿರುವ ಕಥೆಗಳನ್ನು ಇವತ್ತೇ ಓದಿ ಮುಗಿಸಬೇಕು ಎಂದೇನಿಲ್ಲ. ಯಾವತ್ತು ಬೇಕಾದರೂ ಓದಬಹುದು. ಖುಷಿಯಾದಾಗ ಓದಬಹುದು, ಏನೋ ಖಾಲಿ ಖಾಲಿ ಅನಿಸಿದಾಗ ಓದಬಹುದು, ತುಂಬ ಬೇಸರವಾದಾಗಲೂ ಓದಬಹುದು. ಈ ಪುಸ್ತಕದಲ್ಲಿರುವ ಅದೇ ಕಥೆ ಓದಬೇಕು, ಇದೇ ಕಥೆ ಓದಬೇಕು ಅಂತಾನೂ ಇಲ್ಲ. ಸುಮ್ಮನೆ ಕಣ್ಮುಚ್ಚಿ ಒಂದು ಪುಟ ತೆರೆದು ಒಂದು ಕಥೆ ಓದಿದರೂ ಸಾಕು, ಖುಷಿಯಲ್ಲಿದ್ದ ಮನಸು ಇನ್ನಷ್ಟು ಪ್ರಫುಲ್ಲಿತವಾಗುತ್ತದೆ. ನೋವು, ಸಂಕಟಗಳು ಕಾಡುತ್ತಿದ್ದರೆ ಗಾಢವಾದ ನಿಟ್ಟುಸಿರಿನೊಂದಿಗೆ ದೊಡ್ಡ ನಿರಾಳತೆ ನಿಮ್ಮದಾಗುತ್ತದೆ. ಕೆಲವೊಮ್ಮೆ ಗಂಟಲು ಗದ್ಗದಗೊಂಡು ಕಣ್ಣಲ್ಲೊಂದು ಸಣ್ಣ ಹನಿ ಮೂಡಬಹುದು.
ಈ ಪುಸ್ತಕದ ಯಾವುದೋ ಒಂದು ಕಥೆ ಓದಿದಾಗ ನಿಮಗೆ ನಿಮ್ಮ ಅಮ್ಮ ನೆನಪಾಗಬಹುದು, ಅಪ್ಪನ ಕಷ್ಟದ ಅರಿವಾಗಬಹುದು, ಹೆಂಡತಿಯ ಮನಸು ಅರ್ಥವಾಗಬಹುದು, ಗಂಡನ ಒತ್ತಡ ಗೊತ್ತಾಗಬಹುದು. ನಮ್ಮ ಮಕ್ಕಳಿಗೆ ನಿಜವಾಗಿಯೂ ಬೇಕಾಗಿರುವುದೇನು ಎನ್ನುವುದು ನಿಮಗೆ ತಿಳಿಯಬಹುದು.
3. ಅಮ್ಮ ಹೇಳುವ ಚಂದದ ಕಥೆಗಳು
ವಿಸ್ತಾರ ನ್ಯೂಸ್ ಜಾಲತಾಣದಲ್ಲಿ ಕತೆಗಾರ್ತಿ, ಲೇಖಕಿ ಅಲಕಾ ಕಟ್ಟೆಮನೆ ಬರೆಯುವ ಮಕ್ಕಳ ಕಥೆಗಳ ಸಂಕಲನವೇ ʼಅಮ್ಮ ಹೇಳುವ ಚಂದದ ಕಥೆಗಳು.ʼ ನಿಮ್ಮ ಮಕ್ಕಳಿಗೆ ಕೈತುತ್ತು ತಿನ್ನಿಸುತ್ತಾ ಹೇಳಬಲ್ಲ, ತಟ್ಟಿ ಮಲಗಿಸುತ್ತಾ ಹೇಳಬಲ್ಲ ಮುದ್ದಾದ ಕಥೆಗಳು ಇಲ್ಲಿವೆ. ವಿವಿಧ ದೇಶಗಳ, ಭಾರತದ ವಿವಿಧ ರಾಜ್ಯಗಳ, ಕರ್ನಾಟಕದ ವಿವಿಧ ಜಿಲ್ಲೆಗಳ ಜಾನಪದ ಕತೆಗಳು ಇಲ್ಲಿ ಮಕ್ಕಳ ಕಥೆಗಳಾಗಿ ಮರುಹುಟ್ಟು ಪಡೆದಿವೆ. ಪಂಚತಂತ್ರ, ಅರೇಬಿಯನ್ ನೈಟ್ಸ್, ಕಿನ್ನರ ಕಥೆಗಳು- ಇವೆಲ್ಲದರಿಂದಲೂ ಪ್ರೇರಣೆ ಪಡೆದ ಈ ಕಥೆಗಳು ಮಕ್ಕಳ ಜೊತೆಗೆ ದೊಡ್ಡವರ ಮನಸ್ಸನ್ನೂ ರಂಜಿಸುವಂತೆ ಇವೆ. ಹೊಸ ಬಗೆಯ ಮಕ್ಕಳ ಕಥೆಗಳಿಗಾಗಿ ನೀವು ಹುಡುಕಾಡುತ್ತಿದ್ದರೆ ಇದು ನಿಮಗೆ ಸೂಕ್ತ ಆಯ್ಕೆ. ಈ ಪುಸ್ತಕದ ಇನ್ನೊಂದು ವಿಶೇಷ ಅಂದರೆ, ಇದರಲ್ಲಿ ಕತೆಯ ಜೊತೆಗೆ ಕ್ಯೂಆರ್ ಕೋಡ್‌ಗಳನ್ನೂ ಕೊಡಲಾಗಿದೆ. ಅವುಗಳನ್ನು ಮೊಬೈಲ್‌ನಲ್ಲಿ ಸ್ಕ್ಯಾನ್ ಮಾಡಿದರೆ ಅದು ನಿಮ್ಮನ್ನು ನೇರವಾಗಿ ವಿಸ್ತಾರ ನ್ಯೂಸ್ ಜಾಲತಾಣಕ್ಕೆ ಕರೆದೊಯುತ್ತದೆ; ಕತೆಗಳನ್ನು ನೀವು ʼಅಮ್ಮನ ಮಂಜುಳವಾದ ಧ್ವನಿಯಲ್ಲೇʼ ಆಲಿಸಬಹುದು!
4. ಕುಣಿಯೇ ಜೀವ
ಕನ್ನಡ ಸಾಹಿತ್ಯದಲ್ಲಿ ಸಣ್ಣ ಕಥಾಸ್ಪರ್ಧೆ ನಡೆಸಿದ ಮೊದಲ ಚಾನೆಲ್, ಹಾಗೂ ಅತಿ ದೊಡ್ಡ ಮೊತ್ತದ ಬಹುಮಾನ ಇಟ್ಟ ಕಥಾಸ್ಪರ್ಧೆ ಎಂಬ ಹೆಗ್ಗಳಿಕೆಗಳೊಂದಿಗೆ ‘ವಿಸ್ತಾರ ನ್ಯೂಸ್ ಯುಗಾದಿ ಕಥಾಸ್ಪರ್ಧೆ- 2023’ ನಡೆದಿತ್ತು.
ಇದನ್ನೂ ಓದಿ: Karnataka Live News : ʼವಿಸ್ತಾರ ಕನ್ನಡ ಸಂಭ್ರಮʼ ಹಬ್ಬಕ್ಕೆ ಅದ್ಧೂರಿ ಪ್ರಾರಂಭ
ಅದರಲ್ಲಿ ಅಂತಿಮ ಸುತ್ತನ್ನು ತಲುಪಿದ 23 ಕಥೆಗಳ ಸಂಕಲನ ಇದು. ಈ ಕಾಲದ ಕನ್ನಡದ ಪ್ರತಿಭಾವಂತ ಸಣ್ಣಕಥೆಗಾರರ ಹಾಗೂ ಇಡೀ ನಾಡಿನ ವಿವಿಧ ಕತೆಯ ಪ್ರಾತಿನಿಧಿಕ ಕಥೆಗಳ ಗುಚ್ಛವಾಗಿದೆ ಎಂದು ತೀರ್ಪುಗಾರರು ಹೇಳಿದ್ದು ನಮಗೆ ಹೆಮ್ಮೆ. ನೀವು ನಂಬಲಿಕ್ಕಿಲ್ಲ, ಸಾವಿರಕ್ಕೂ ಅಧಿಕ ಕತೆಗಳು ಈ ಸ್ಪರ್ಧೆಗೆ ಬಂದಿದ್ದವು. ಕನ್ನಡ ನಾಡಿನ ಪ್ರಾತಿನಿಧಿಕ ಕಥೆಗಳಾಗಿ ಇವು ಗಮನ ಸೆಳೆದಿವೆ. ಈ ಕೃತಿಯನ್ನು ಪ್ರಕಟಿಸಲು ಬೆನ್ನೆಲುಬಾಗಿ ನಿಂತವರು ಕಲಬುರಗಿಯ ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನದ ಶ್ರೀ ಬಸವರಾಜ ಕೊನೇಕ ಅವರು.