ಬೆಂಗಳೂರು: ನಾಡಿನ ಸಂಸ್ಕೃತಿ, ನಡೆ-ನುಡಿಯನ್ನು ನಾಡಿನ ಪ್ರತಿ ಮನೆಗೆ ತಲುಪಿಸಿದ ಖುಷಿ ನಮಗಿದೆ. ಕೊಳದಲ್ಲಿ ಸಾವಿರಾರು ಕಮಲ ಅರಳುತ್ತವೆ. ಆದರೆ, ಯಾವ ಕಮಲ ಗಜೇಂದ್ರನ ಸೊಂಡಿನಿಂದ ದೇವರ ಪಾದಕ್ಕೆ ಸಲ್ಲುತ್ತದೋ ಅದು ಪಾವನವಾಗುತ್ತದೆ. ವಿಸ್ತಾರ ನ್ಯೂಸ್ ಪ್ರಜ್ಞಾವಂತ ನಾಗರಿಕರನ್ನು ಮುಟ್ಟುವಲ್ಲಿ ಹಾಗೂ ಅವರಿಂದ ಬೆನ್ನು ತಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ವಿಸ್ತಾರ ನ್ಯೂಸ್ ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಹೇಳಿದರು. ವಿಸ್ತಾರ ನ್ಯೂಸ್ (Vistara News) ಆಯೋಜಿಸಿರುವ “ವಿಸ್ತಾರ ಕನ್ನಡ ಸಂಭ್ರಮ” ಕಾರ್ಯಕ್ರಮದಲ್ಲಿ (Vistara Kannada Sambhrama) ವಿಸ್ತಾರ ಪ್ರಕಾಶನದ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕನ್ನಡದ ಸುದ್ದಿ ಮಾಧ್ಯಮದ ಕೊಳದಲ್ಲಿ ಹತ್ತು ಹಲವು ಕಮಲಗಳು ಇವೆ. ಆದರೆ, ಅತ್ಯಂತ ಕಡಿಮೆ ಅವಧಿಯಲ್ಲಿ ಜವಾಬ್ದಾರಿಯುತ ಹಾಗೂ ಮಾರ್ಗದರ್ಶಿಯಾದಂತಹ ಸುದ್ದಿ ಮಾಧ್ಯಮ ಇದ್ದರೆ ಅದು ವಿಸ್ತಾರ ಎಂದು ನಾಡಿನಾದ್ಯಂತ ಪ್ರಜ್ಞಾವಂತ ನಾಗರಿಕರು ಪ್ರಶಂಸೆಯನ್ನು ಪಡೆದುಕೊಂಡಿದೆ ಎಂದು ಹರಿಪ್ರಕಾಶ್ ಕೋಣೆಮನೆ ತಿಳಿಸಿದರು.
ಇದನ್ನೂ ಓದಿ: Karnataka Live News : ʼವಿಸ್ತಾರ ಕನ್ನಡ ಸಂಭ್ರಮʼ ಹಬ್ಬಕ್ಕೆ ಅದ್ಧೂರಿ ಪ್ರಾರಂಭ
ಮೈಸೂರು ರಾಜ್ಯವು “ಕರ್ನಾಟಕ” ಎಂದು ನಾಮಕರಣ ಆಗಿ 50 ವರ್ಷವಾಗುತ್ತಿದೆ. ಇದೇ ಸಂದರ್ಭದಲ್ಲಿ ವಿಸ್ತಾರ ನ್ಯೂಸ್ ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ. ಇದೇ ವೇದಿಕೆಯಲ್ಲಿ ವಿಸ್ತಾರ ನ್ಯೂಸ್ ಆರಂಭವಾಗಿತ್ತು. ಆ ಸಂಭ್ರಮ, ಸಂತಸ ಈಗ ನೂರು ಪಟ್ಟು ಹೆಚ್ಚಾಗಿದೆ ಎಂದು ಹರಿಪ್ರಕಾಶ್ ಕೋಣೆಮನೆ ತಿಳಿಸಿದರು.
ಒಂದು ವರ್ಷದ ಇತಿಹಾಸವನ್ನು ತಿರುಗಿ ನೋಡಿದರೆ ಅಚ್ಚರಿಯಾಗುತ್ತದೆ. ಆಗ ಎಲ್ಲರೂ ಹುಬ್ಬೇರಿಸಿದ್ದರು. ಈಗಿನ ಪೈಪೋಟಿಯ ಜಗತ್ತಿನಲ್ಲಿ ನವ ಮಾಧ್ಯಮವನ್ನು ಕಟ್ಟಿ ಬೆಳೆಸುವುದು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದರು. ಇಂದು ಅವರನ್ನು ಮತ್ತೆ ನಿಬ್ಬೆರಗಾಗುವಂತೆ ಮಾಡಿದ್ದೇವೆ. ಕೇವಲ ಒಂದು ವರ್ಷದ ಅವಧಿಯಲ್ಲಿ ಕರ್ನಾಟಕದ ಒಳಗೆ ಹಾಗೂ ಹೊರಗೆ ಇರುವವರನ್ನು ನಾವು ತಲುಪಿದ್ದೇವೆ. ಕರ್ನಾಟಕದ ಜನರು ನಮ್ಮನ್ನು ಬರಮಾಡಿಕೊಂಡಿದ್ದಾರೆ ಎಂದು ಹರಿಪ್ರಕಾಶ್ ಕೋಣೆಮನೆ ಹೇಳಿದರು.
ಮುದ್ರಣ ಮಾಧ್ಯಮ ಅವಸಾನದ ಅಂಚಿಗೆ ಸಾಗುತ್ತಿದೆ ಎಂದು ಕೆಲವರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದು ಸರಿಯೊ ತಪ್ಪೋ ಎಂಬುದು ಚರ್ಚೆಯ ವಿಷಯವಾಗಿ ಬಿಡೋಣ. ಹಾಗೇ ಟಿವಿ ಮಾಧ್ಯಮ ಸಹ ಇದೇ ರೀತಿಯಲ್ಲಿಯೇ ಮುಂದುವರಿದರೆ ಇದಕ್ಕೆ ಭವಿಷ್ಯ ಇದೆಯಾ ಎಂದು ಸಹ ಹಲವರು ಅಭಿಪ್ರಾಯಪಟ್ಟಿದ್ದಾರೆ. ಆ ನಿಟ್ಟಿನಲ್ಲಿ ನಾವು ವಿಸ್ತಾರ ನ್ಯೂಸ್ ಮೂಲಕ ನವ ಆಯಾಮಗಳನ್ನು, ಹೊಸ ಹೊಸ ಹೆಜ್ಜೆಗಳನ್ನು ಇಡುತ್ತಿದ್ದೇವೆ. ಒಂದು ಸೆಟ್‌ಲೈಟ್ ಚಾನೆಲ್ ಜತೆಗೆ ವೆಬ್‌ಪೋರ್ಟ್ ಅನ್ನು ಸಹ ಪ್ರಾರಂಭ ಮಾಡಿದ್ದೇವೆ. ನಮ್ಮ ಒಂದು ವಿಸ್ತಾರ ವೆಬ್‌ಸೈಟ್ ಅನ್ನು ನೋಡಿದರೆ ಹತ್ತು ದಿನ ಪತ್ರಿಕೆಗಳನ್ನು ಓದಿದ್ದಕ್ಕಿಂತಲೂ ಹೆಚ್ಚಿನ ವಿಷಯದ ಹೂರಣವನ್ನು ಓದುಗರ ಮನೆ ಹಾಗೂ ಮನಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹರಿಪ್ರಕಾಶ್ ಕೋಣೆಮನೆ ಹೇಳಿದರು.
ಇಂದು ಎಲ್ಲರ ಕೈಯಲ್ಲಿ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಇದೆ. ಜತೆಗೆ ಇಂಟರ್ನೆಟ್ ಕೂಡಾ ಲಭ್ಯವಿದೆ. ಇಂಟರ್ನೆಟ್ ಆಧಾರಿತ 10 ಯುಟ್ಯೂಬ್ ಚಾನೆಲ್ ಅನ್ನು ನಾವು ಪ್ರಾರಂಭ ಮಾಡಿದ್ದೇವೆ. ಈ ಹತ್ತೂ ಚಾನೆಲ್‌ಗಳು ಲಕ್ಷ ಲಕ್ಷ ಚಂದಾದಾರರನ್ನು ನಾವು ಹೊಂದಿದ್ದೇವೆ. ಈ ಬಗ್ಗೆ ನನಗೆ ಅತ್ಯಂತ ಹೆಮ್ಮೆ ಮತ್ತು ಸಂತೋಷ ಆಗುತ್ತಿದೆ. ಗಾಂಭೀರ್ಯದ ಮೂಲಕ, ಗುಣಮಟ್ಟದ ಮೂಲಕ ಜನರ ನಿರೀಕ್ಷೆಯನ್ನು ತಲುಪಲು ಯಶಸ್ವಿ ಹೆಜ್ಜೆಯನ್ನು ಇಟ್ಟಿದ್ದೇವೆ ಎಂದು ಹರಿಪ್ರಕಾಶ್ ಕೋಣೆಮನೆ ತಿಳಿಸಿದರು.
ಇಡೀ ಜಗತ್ತಿನ ಮಾಹಿತಿ ನಿಮ್ಮ ಬೆರಳ ತುದಿಯಲ್ಲಿ ವಿಸ್ತಾರ ನ್ಯೂಸ್ ನೀಡುತ್ತಾ ಬಂದಿದೆ. ನಮ್ಮ APP ಅನ್ನು ಈಗಲೇ ಡೌನ್ಲೋಡ್ ಮಾಡಿಕೊಳ್ಳಿ ಎಂದು ಹರಿಪ್ರಕಾಶ್ ಕೋಣೆಮನೆ ತಿಳಿಸಿದರು.
ನಾನು ಮುದ್ರಣ ಮಾಧ್ಯಮದಿಂದ ಬಂದವನು. ನನ್ನ 23 ವರ್ಷಗಳ ಪತ್ರಿಕೋದ್ಯಮದ ಪಯಣದಲ್ಲಿ 15 ವರ್ಷಗಳ ಕಾಲ ಮುದ್ರಣ ಮಾಧ್ಯಮದಲ್ಲಿಯೇ ಕಳೆದಿದ್ದೇನೆ. ಮುದ್ರಣ ಮಾಧ್ಯಮಕ್ಕೂ ಭವಿಷ್ಯವನ್ನು ರೂಪಿಸಬೇಕಾಗಿದೆ. ಹಾಗೆಯೇ ಓದುವ ಮನಸ್ಸುಗಳಿಗೆ ಉತ್ತಮ ಪುಸ್ತಕಗಳನ್ನು ಕೊಡಬೇಕು ಎಂಬುದು ನಮ್ಮ ಆಶಯವಾಗಿದೆ. ಹಾಗಾಗಿ ವಿಸ್ತಾರ ಪ್ರಕಾಶನವನ್ನು ನಾವು ಆರಂಭ ಮಾಡಿದ್ದೇವೆ. ಮೂರು ಪುಸ್ತಕಗಳನ್ನು ಲೋಕಾರ್ಪಣೆ ಮಾಡುವ ಮೂಲಕ ನಾವು ವಿಸ್ತಾರ ಪ್ರಕಾಶನವನ್ನು ಅರ್ಪಣೆ ಮಾಡುತ್ತಿದ್ದೇವೆ ಎಂದು ಹರಿಪ್ರಕಾಶ್ ಕೋಣೆಮನೆ ಹೇಳಿದರು.
ವಿಸ್ತಾರ ನ್ಯೂಸ್‌ಗೆ ಹ್ಯಾಪಿ ಬರ್ತ್‌ಡೇ: ಲಕ್ಷ್ಮಣ ರಾವ್
ವರ್ಷದ ಸಂಭ್ರಮದಲ್ಲಿರುವ ವಿಸ್ತಾರ ನ್ಯೂಸ್‌ಗೆ ಹ್ಯಾಪಿ ಬರ್ತ್ ಡೇ. ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ನನಗೆ ಸಂತಸ ತಂದಿದೆ. ವಿಸ್ತಾರ ಬೇರೆಲ್ಲ ಸುದ್ದಿ ವಾಹಿನಿಗಿಂತ ಭಿನ್ನ ಅನ್ನೋದನ್ನು ತೋರಿಸುತ್ತಾ ಬಂದಿದೆ. ಇದು ಬರೀ ಸುದ್ದಿ ವಾಹಿನಿಯಲ್ಲ, ನಾಡಿನ ಸಂಸ್ಕೃತಿಯ ವಾಹಿನಿಯಾಗಿದೆ. ಹರಿಪ್ರಕಾಶ್ ಕೋಣೆಮನೆಯವರ ಟಾರ್ಗೆಟ್ ಈಗಿನ ಜನರೇಶನ್ ಆಗಿದೆ. ಅವರು ಕಿರಿಯರ ಮೂಲಕ ಕನ್ನಡವನ್ನು ಬೆಳೆಸಲು ಹೊರಟಿದ್ದಾರೆ. ವಿಸ್ತಾರ ನ್ಯೂಸ್ 50 ವರ್ಷ, ನೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಲಿ ಎಂದು ಕವಿ ಲಕ್ಷ್ಮಣ ರಾವ್ ಹೇಳಿದರು.
ಇಂದು ನಮ್ಮ ಪ್ರಕಾಶನದಿಂದ 50% ರಿಯಾಯಿತಿ: ಬಸವರಾಜ್ ಕೊನೇಕಾ
ಸಿದ್ದಲಿಂಗೇಶ್ವರ ಬುಕ್ ಡಿಪೊ ಮತ್ತು ಪ್ರಕಾಶನದ ಮಾಲೀಕ ಬಸವರಾಜ್ ಕೊನೇಕಾ ಮಾತನಾಡಿ, ಯುಗಾದಿ ಕಥಾ ಸ್ಪರ್ಧೆಗೆ ತುಂಬಾ ಸಂತಸದಿಂದ ಒಪ್ಪಿಗೆ ಕೊಟ್ಟಿದ್ದೆ. ಆ ಕಥೆಗಳನ್ನು ಪುಸ್ತಕ ರೂಪದಲ್ಲಿ ತರಲು ಒಪ್ಪಿಕೊಂಡರು. ಇಡೀ ಕರ್ನಾಟಕ ಕನ್ನಡ ಸಂಭ್ರಮ ಮಾಡುವ ಹೊತ್ತಲ್ಲೇ ವಿಸ್ತಾರ ಸಂಭ್ರಮ ಆಚರಿಸುತ್ತಿದೆ. ಇವತ್ತು ನಮ್ಮ ಪ್ರಕಾಶನದಿಂದ 50% ರಿಯಾಯಿತಿ ಕೊಟ್ಟಿದ್ದೇವೆ. ಈ ಸಮಾರಂಭಕ್ಕೆ ನನ್ನನ್ನು ಕರೆದು ಗೌರವಿಸಿದ್ದಕ್ಕೆ ನನ್ನ ಧನ್ಯವಾದಗಳು ಎಂದು ಹೇಳಿದರು.
ಇದನ್ನೂ ಓದಿ: Vistara Kannada Sambhrama : ವಿಸ್ತಾರ ಪ್ರಕಾಶನದ ನಾಲ್ಕು ಪುಸ್ತಕಗಳ ಲೋಕಾರ್ಪಣೆ; ಏನಿದರ ವಿಶೇಷತೆ?
ನಟಿ ಬೃಂದಾ ಆಚಾರ್ಯ ಮಾತನಾಡಿ, ವಿಶಾಲ ಇತಿಹಾಸವಿರುವ ಕನ್ನಡವನ್ನು ಈ ರೀತಿ ಸಂಭ್ರಮಿಸುತ್ತಿದ್ದೇವೆ. ಮುಂಬೈನಿಂದ ಬಂದ ನನ್ನನ್ನು ಕನ್ನಡಿಗರು ಒಪ್ಪಿಕೊಂಡಿದ್ದಾರೆ. ಕನ್ನಡ ನಾಡು, ನುಡಿ ನಮ್ಮ ಜತೆ ಇರಲಿ. ವಿಸ್ತಾರ ನೂರಾರು ವರ್ಷಗಳನ್ನು ಪೂರೈಸಲಿ ಎಂದು ಹೇಳಿದರು.