Site icon Vistara News

Vivekananda Jayanti | ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ವಿಸ್ತಾರ ನ್ಯೂಸ್‌ ಅಭಿಯಾನ ಶ್ಲಾಘನೀಯ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌

vivekananda-jayanti Education minister BC Nagesh speech

ಬೆಂಗಳೂರು: ವಿಭಿನ್ನ ಪರಿಸ್ಥಿತಿಯ ಕಾರಣಕ್ಕೆ ಸಮಾಜದಲ್ಲಿ ಇಂದು ಮೌಲ್ಯಗಳು ಕುಸಿಯುತ್ತಿವೆ ಎಂಬ ಆತಂಕವಿದೆ ಎಂದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌, ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ವಿಸ್ತಾರ ನ್ಯೂಸ್‌ ಅಭಿಯಾನ ಅತ್ಯುತ್ತಮವಾದದ್ದು ಎಂದು ಶ್ಲಾಘಿಸಿದರು.

ವಿವೇಕಾನಂದ ಜಯಂತಿ (Vivekananda Jayanti) ಪ್ರಯುಕ್ತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ವಿಸ್ತಾರ ಮೀಡಿಯಾ ಪ್ರೈವೇಟ್‌ ಲಿಮಿಟ್‌ ವತಿಯಿಂದ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ʼವಿವೇಕ ವಂದನೆʼ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಬೇಕು ಎಂದು ನಮ್ಮ ಸರ್ಕಾರ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ‌ ಅವರ ಆಶಯ. ನಮ್ಮ ದೇಶದ ಮೌಲ್ಯಗಳು, ಸಂಸ್ಕೃತಿಯನ್ನು ಹಾಳು ಮಾಡುವ ಉದ್ದೇಶದಿಂದ ಅನೇಕ ಆಕ್ರಮಣಗಳು ನಡೆದವು. ಆದರೆ ಅದೆಲ್ಲವನ್ನೂ ಎದುರಿಸಿ ಈ ದೇಶ ಬದುಕಿದ್ದು ಇಲ್ಲಿನ ಮೌಲ್ಯ ಹಾಗೂ ಸಂಸ್ಕೃತಿಯಿಂದಲೇ. ಆದರೆ ವಿವಿಧ ಪರಿಸ್ಥಿತಿಯಲ್ಲಿ ಇಂದು ಮೌಲ್ಯದ ಕುಸಿತ ಆಗುತ್ತಿದೆ ಎಂಬ ಆತಂಕ‌ ಇದೆ.
ಆದರೆ ಹಾಗೆ ಆಗುವುದಿಲ್ಲ ಎಂಬ ನಂಬಿಕೆಯೂ ಇದೆ. ತನಗಿಂತ ಸಮಾಜ, ಜನ ಮುಖ್ಯ ಎಂದು‌ ಬದುಕುವ ಅನೇಕ ಜನರು ಈ ದೇಶದಲ್ಲಿದ್ದಾರೆ. ಪ್ರತಿ ಹೋಬಳಿ ಮಟ್ಟದಲ್ಲಿ ವಿವೇಕಾನಂದರ ಸಂದೇಶವನ್ನು ಒಯ್ಯುವ ವಿಸ್ತಾರ ನ್ಯೂಸ್‌ ಅಭಿಯಾನ ಖಂಡಿತ ಸಫಲವಾಗುತ್ತದೆ ಎಂದು ಆಶಿಸಿದರು.

ಈ ನೆಲದಲ್ಲಿ ನರನೂ ನಾರಾಯಣ ಆಗಬಹುದು ಎನ್ನುವುದನ್ನು ನಾವು ನಂಬಿದ್ದೇವೆ. ಅದನ್ನು ವಿವೇಕಾನಂದರು ತೋರಿಸಿಕೊಟ್ಟರು. ಶಿಕ್ಷಣ ಇಲಾಖೆಯು ಅನೇಕ ಕಾರ್ಯಗಳನ್ನು ಮಾಡುತ್ತಿದೆ. ಈಗಾಗಲೆ 44ಶಾಲೆಗಳನ್ನು ದತ್ತು ಪಡೆದಿರುವುದಾಗಿ ಹರಿಪ್ರಕಾಶ್ ಕೋಣೆಮನೆಯವರು ಹೇಳಿದರು. ಬಡ ಮಕ್ಕಳ ಶಿಕ್ಷಣಕ್ಕೆ ಅಭಿಯಾನ ರೂಪಿಸಿರುವ ವಿಸ್ತಾರ ಸಂಸ್ಥೆ ಹಾಗೂ ಹರಿಪ್ರಕಾಶ್ ಕೋಣೆಮನೆಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಘನ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು ಸ್ವಾಮಿ ವೀರೇಶಾನಂದ ಸರಸ್ವತೀ, ಸಿಎಂ ಬಸವರಾಜ ಬೊಮ್ಮಾಯಿ, ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ, ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ವಿಸ್ತಾರ ಮೀಡಿಯಾ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ, ಚೇರ್ಮನ್‌ ಮತ್ತು ಎಮ್‌ಡಿ ಎಚ್‌.ವಿ. ಧರ್ಮೇಶ್‌, ಶಾಸಕ ಸಿದ್ದು ಸವದಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್, ಸಮಗ್ರ ಶಿಕ್ಷಣದ ರಾಜ್ಯ ಯೋಜನಾ ನಿರ್ದೇಶಕಿ ಬಿ.ಬಿ. ಕಾವೇರಿ, ಖ್ಯಾತ ನಟಿ ಪ್ರಣಿತಾ ಸುಭಾಷ್‌, ವಿವೇಕಯುಗ ಫೌಂಡೇಷನ್‌ ಅಧ್ಯಕ್ಷ ಡಾ. ಡಿ.ಎಂ. ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

ಖ್ಯಾತ ಗಾಯಕ ಕಿಕ್ಕೇರಿ ಕೃಷ್ಣ ಮೂರ್ತಿ ಹಾಗೂ ಭವಾನಿ ಹೆಗಡೆ ಅವರ ಗಾಯನ ಕಾರ್ಯಕ್ರಮವಿತ್ತು.

ಸಹಯೋಗ:
ಕಾರ್ಯಕ್ರಮಕ್ಕೆ ಪರಿಶ್ರಮ ನೀಟ್‌ ಅಕಾಡೆಮಿ, ಕೆಎಂಎಫ್‌ ನಂದಿನಿ, ಎಎಂಸಿ ಎಜುಕೇಷನ್‌, ವಿವೇಕಯುಗ ಫೌಂಡೇಷನ್‌, ಕ್ಯಾಮ್ಸ್‌ ಕರ್ನಾಟಕ, ರಾಷ್ಟ್ರೀಯ ಸೇವಾ ಯೋಜನೆ ಸಹಕಾರ ಒದಗಿಸಿದ್ದವು.

ಇದನ್ನೂ ಓದಿ | Vivekananda Jayanti 2023 | ವಿವೇಕ ವಂದನೆ ಕಾರ್ಯಕ್ರಮದಲ್ಲಿ ವಿವೇಕ ಶಪಥ ಬೋಧನೆ; ಏನಿದೆ ಶಪಥದಲ್ಲಿ?

Exit mobile version