ಬೆಂಗಳೂರು: ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಜಿಲ್ಲೆ, ತಾಲೂಕು ಹಾಗೂ ಹೋಬಳಿ ಮಟ್ಟಕ್ಕೆ ಕೊಂಡೊಯ್ಯುವ ಸಲುವಾಗಿ ಮುಂದಿನ ವರ್ಷ ವಿವೇಕ ವಂದನೆ ಅಭಿಯಾನ ಆಯೋಜಿಸುತ್ತೇವೆ ಎಂದು ವಿಸ್ತಾರ ನ್ಯೂಸ್ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ಘೋಷಿಸಿದರು.
ವಿವೇಕಾನಂದ ಜಯಂತಿ (Vivekananda Jayanti) ಪ್ರಯುಕ್ತ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟ್ ವತಿಯಿಂದ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ʼವಿವೇಕ ವಂದನೆʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಈ ವಿಷಯ ಪ್ರಕಟಿಸಿದರು.
ವಿಸ್ತಾರ ನ್ಯೂಸ್ ವೆಬ್‌ಸೈಟ್ ಮತ್ತು ವಿಸ್ತಾರ ನ್ಯೂಸ್ ಚಾನೆಲ್ ಈಗಾಗಲೆ ರಾಜ್ಯಾದ್ಯಂತ ವಿನೂತನ ಸುದ್ದಿ-ಮಾಹಿತಿ, ಕಾರ್ಯಕ್ರಮಗಳ ಮೂಲಕ ಜನರ ಮೆಚ್ಚುಗೆ ಸೆಳೆದಿವೆ ಎಂದು ಅವರು ಹೇಳಿದರು.
ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ನೇತೃತ್ವದ ರಾಜ್ಯ ಸರ್ಕಾರವೂ ಮೌಲ್ಯ ಶಿಕ್ಷಣ ವರ್ಧನೆಯತ್ತ ಮಹತ್ವದ ಹೆಜ್ಜೆಯನ್ನು ಇರಿಸಿದೆ. ಶೀಘ್ರದಲ್ಲೇ ಮೌಲ್ಯ ಶಿಕ್ಷಣ ಕಾರ್ಯಕ್ರಮಕ್ಕೆ ಸರ್ಕಾರ ಚಾಲನೆ ನೀಡಲಿದೆ. ಇಂತಹ ಮಹತ್ವದ ನಿರ್ಧಾರ ಕೈಗೊಂಡ ಸರ್ಕಾರವನ್ನು ಅಭಿನಂದಿಸುತ್ತೇವೆ ಎಂದರು.
ನುಡಿದಂತೆ ನಡೆದವರು ವಿವೇಕಾನಂದರು. ಅವರ ಆಚರಣೆ, ಮೌಲ್ಯಗಳ ಮೂಲಕ ವಿವೇಕಾನಂದರು ನಮ್ಮ ಜತೆಗೆ ಇದ್ದಾರೆ. ಅಸ್ಪೃಶ್ಯತೆ ಆಚರಣೆ, ಧಾರ್ಮಿಕ ಶ್ರದ್ಧೆ ಕಡಿಮೆ ಆಗುವುದು ಭಾರತದ ಪ್ರತಿಷ್ಠೆಗೆ ಕುಂದು ತರುವಂಥದ್ದು. ಇದೆಲ್ಲವನ್ನೂ ತೊಡೆದು ಭಾರತವನ್ನು ಅಭಿವೃದ್ಧಿಯ ದಿಕ್ಕಿನತ್ತ ಮುನ್ನಡೆಸಲು ಸ್ವಾಮಿ ವಿವೇಕಾನಂದರ ಆದರ್ಶಗಳು ನಮಗೆ ಮಾರ್ಗದರ್ಶಕವಾಗಿವೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ವಿಸ್ತಾರ ನ್ಯೂಸ್ ಅಭಿಯಾನಕ್ಕೆ ಅನೇಕ ಗಣ್ಯರು ಕೈಜೋಡಿಸಿದ್ದು, ಇಲ್ಲಿಯವರೆಗೆ 44 ಶಾಲೆಗಳನ್ನು ದತ್ತು ಪಡೆಯಲಾಗಿದೆ. ಸ್ವಾಮಿ ವಿವೇಕಾನಂದರ ಸಂದೇಶವನ್ನು ರಾಜ್ಯದ ಪ್ರತಿ ಜಿಲ್ಲೆ, ತಾಲೂಕು ಹಾಗೂ ಹೋಬಳಿ ಹಂತಕ್ಕೆ ಕೊಂಡೊಯ್ಯಲಾಗುತ್ತದೆ. ೨೦೨೪ ಜನವರಿ 1ರಿಂದ ಆರಂಭಿಸಿ ನಿರಂತರ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ. ಜನವರಿ 12ರಂದು ಬೆಂಗಳೂರಿನಲ್ಲಿ 1 ಲಕ್ಷ ಜನರು ಸೇರುವ ಬೃಹತ್ ಕಾರ್ಯಕ್ರಮವನ್ನು ನಡೆಲಸಾಗುತ್ತದೆ ಎಂದು ಘೋಷಣೆ ಮಾಡಿದರು.
ಹಲವು ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದ ಸರಸ್ವತೀ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ವಿಸ್ತಾರ ಮೀಡಿಯಾ ಚೇರ್ಮನ್ ಮತ್ತು ಎಮ್‌ಡಿ ಎಚ್.ವಿ. ಧರ್ಮೇಶ್, ಶಾಸಕ ಸಿದ್ದು ಸವದಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಸಮಗ್ರ ಶಿಕ್ಷಣದ ರಾಜ್ಯ ಯೋಜನಾ ನಿರ್ದೇಶಕಿ ಬಿ.ಬಿ. ಕಾವೇರಿ, ಖ್ಯಾತ ನಟಿ ಪ್ರಣಿತಾ ಸುಭಾಷ್, ವಿವೇಕ ಯುಗ ಫೌಂಡೇಷನ್ ಅಧ್ಯಕ್ಷ ಡಾ. ಡಿ.ಎಂ. ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
ಖ್ಯಾತ ಗಾಯಕ ಕಿಕ್ಕೇರಿ ಕೃಷ್ಣ ಮೂರ್ತಿ ತಂಡ ಹಾಗೂ ಭವಾನಿ ಹೆಗಡೆ ಅವರ ಗಾಯನ ಕಾರ್ಯಕ್ರಮವಿತ್ತು.
ಸಹಯೋಗ ಯಾರದು?
ಕಾರ್ಯಕ್ರಮಕ್ಕೆ ಪರಿಶ್ರಮ ನೀಟ್ ಅಕಾಡೆಮಿ, ಕೆಎಂಎಫ್ ನಂದಿನಿ, ಎಎಂಸಿ ಎಜುಕೇಷನ್, ವಿವೇಕ ಯುಗ ಫೌಂಡೇಷನ್, ಕ್ಯಾಮ್ಸ್ ಕರ್ನಾಟಕ, ರಾಷ್ಟ್ರೀಯ ಸೇವಾ ಯೋಜನೆ ಸಹಕಾರ ಒದಗಿಸಿದ್ದವು.
ಇದನ್ನೂ ಓದಿ | Vivekananda Jayanti 2023 | ವಿವೇಕ ವಂದನೆ ಕಾರ್ಯಕ್ರಮದಲ್ಲಿ ವಿವೇಕ ಶಪಥ ಬೋಧನೆ; ಏನಿದೆ ಶಪಥದಲ್ಲಿ?