Site icon Vistara News

Vivekananda Jayanti | ನಿಮ್ಮ ಮೇಲೆ ನಂಬಿಕೆಯಿದ್ದರೆ ಮಾತ್ರವೇ ಬದಲಾವಣೆ ಸಾಧ್ಯ: ವಿದ್ಯಾರ್ಥಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಕರೆ

vivekananda-jayanti-no-change-in-society-will-take-place-without-believing-in-you

ಬೆಂಗಳೂರು: ನಿಮ್ಮ ಮೇಲೆ ನಿಮಗೆ ನಂಬಿಕೆ, ಆತ್ಮವಿಶ್ವಾಸ ಇದ್ದರೆ ಮಾತ್ರವೇ ಸಮಾಜದಲ್ಲಿ ಯಾವುದಾದರೂ ಬದಲಾವಣೆ ತರಲು ಹಾಗೂ ಸಾಧನೆ ಮಾಡಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ, ಸಿಎಂ ಬಸವರಾಜ ಬೊಮ್ಮಾಯಿ ಕರೆ ನೀಡಿದರು. ವಿವೇಕಾನಂದ ಜಯಂತಿ (Vivekananda Jayanti) ಪ್ರಯುಕ್ತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ವಿಸ್ತಾರ ಮೀಡಿಯಾ ಪ್ರೈವೇಟ್‌ ಲಿಮಿಟ್‌ ವತಿಯಿಂದ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ʼವಿವೇಕ ವಂದನೆʼ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಾಮಿ ವಿವೇಕಾನಂದರು ವ್ಯಕ್ತಿಯಲ್ಲ, ಅವರೊಬ್ಬ ಶಕ್ತಿಯುತ ಸಂಸ್ಥೆ. ಒಬ್ಬ ವ್ಯಕ್ತಿ ತನ್ನ ವಿಚಾರದಲ್ಲಿ ಸದೃಢ ನಂಬಿಕೆ ಇಟ್ಟು ಅದನ್ನು ಪ್ರತಿಪಾದಿಸುವ ಆತ್ಮವಿಶ್ವಾಸ ಇದ್ದರೆ ಜಗತ್ತಿನಲ್ಲಿ ಬದಲಾವಣೆ ತರಬಹುದು ಎನ್ನುವುದಕ್ಕೆ ಸಂತರಲ್ಲಿ‌ ಶ್ರೇಷ್ಠ, ಮಾನವರಲ್ಲಿ ಶ್ರೇಷ್ಠ ವಿವೇಕಾನಂದರೇ ಸಾಕ್ಷಿ. ವಿವೇಕ ಎಂದರೆ ಜ್ಞಾನ, ಆತ್ಮ ಜಾಗೃತಿ, ಸಖವನ್ನೂ ಬಲ್ಲವನು ಎಂಬ ಕಾರಣಕ್ಕೆ ಈ ಹೆಸರನ್ನು ಅವರ ಗುರುಗಳು ನೀಡಿದರು.

ಜ್ಞಾನ, ವಿವೇಕ ಇರುವವರು ಸದಾ ಅನಂದವಾಗಿರುತ್ತಾರೆ. ಜ್ಞಾನ ಕೇವಲ ಶಾಲಾ ಕಾಲೇಜುಗಳಲ್ಲಿ, ಸಿಗುವುದಿಲ್ಲ. ಅಲ್ಲಿ ಎಲ್ಲವನ್ನೂ ಹೇಳಿಕೊಡುತ್ತಾರೆ. ಅದು ಸಾಕಾರವಾಗಬೇಕಾದರೆ ಬದುಕಿನಲ್ಲಿ ಅನುಭವಕ್ಕೆ ಬರಬೇಕು.‌ ಜ್ಞಾನ ಹಾಗೂ ಧ್ಯಾನವನ್ನು ಪ್ರತಿಪಾಸದಿಸುವವರು ಮನುಷ್ಯನಿಂದ ಮಾನವರಾಗುತ್ತಾರೆ, ಮಾನವರಿಂದ ದೇವ ಮಾನವರಾಗುತ್ತಾರೆ. ವಿವೇಕಾನಂದರ ಬಳಿ‌ ಧ್ಯಾನ ಹಾಗೂ ಜ್ಞಾನ ಎರಡೂ ಇತ್ತು.

ನಾನು ಸಾಕಷ್ಟು ಕಲಿತಿದ್ದೇನೆ, ಮುಕ್ತಿಯ ಮಾರ್ಗ ನನಗೆ ತಿಳಿದಿದೆ ಎಂದು ಸ್ವಾಮಿ ವಿವೇಕಾನಂದರು ಗುರುಗಳಲ್ಲಿ ಒಮ್ಮೆ ಹೇಳಿದರಂತೆ. ನಿನಗೆ ಮುಕ್ತಿ ಪಡೆಯಲು ಮಾತ್ರ ಅಲ್ಲ, ಜಗತ್ತಿಗೆಲ್ಲ ಮುಕ್ತಿ ಮಾರ್ಗವನ್ನು ತೋರಿಸಬೇಕು ಎಂದು ರಾಮಕೃಷ್ಣ ಪರಮಹಂಸರು ಹೇಳಿದರು. ಅದನ್ನು ಶಿರಸಾವಹಿಸಿ ಪಾಲನೆ ಮಾಡಲು ಮುಂದಾದ ವಿವೇಕಾನಂದರು ಮನುಕುಲಕ್ಕೇ ಆತ್ವವಿಶ್ವಾಸ ಮೂಡಿಸುವ ಪರಿವರ್ತನೆ ಮಾಡಿದರು.

ಶಾಲಾ, ಕಾಲೇಜು ಮಕ್ಕಳು ಸ್ವಾಮೀಜಿ ಅವರ ಬಗ್ಗೆ ಓದಬೇಕು. ಅವರ ಬಾಲ್ಯವನ್ನು ಓದಬೇಕು. ಅವರು ಹೇಳಿದ್ದೇನು ಎನ್ನುವುದನ್ನು ತಿಳಿದುಕೊಂಡರೆ ನಿಮ್ಮ ಜೀವನದಲ್ಲಿ ಬಹುದೊಡ್ಡ ಬದಲಾವಣೆ ಬರುತ್ತದೆ. ನಿಮ್ಮ ಮೇಲೆ ಆತ್ಮವಿಶ್ವಾಸ ಬಂದರೆ ಮಾತ್ರವೇ ಏನಾದರೂ ಸಾಧನೆ ಮಾಡಲು ಸಾಧ್ಯ. ವಿವೇಕಾನಂದರ ಮಾತುಗಳು ಕೇವಲ ಮೆದುಳಿನಿಂದ ಬಂದಿಲ್ಲ, ಆತ್ಮದಿಂದ ಬಂದಿವೆ.

ನಮ್ಮ ದೇಶದ ಸಂಸ್ಕೃತಿ,‌ ಕುಟುಂಬ ವ್ಯವಸ್ಥೆ, ವ್ಯಕ್ತಿಗತ ವಿಕಾಸದ ಪ್ರತೀಕವಾಗಿ ವಿವೇಕಾನಂದರಿದ್ದಾರೆ. ಆ ಶಕ್ತಿಯಲ್ಲಿ ದೇಶಭಕ್ತಿಯೂ ಅಡಗಿದೆ. ವಿವೇಕರ ದೇಶಭಕ್ತಿಯನ್ನು ಎಲ್ಲರೂ ತುಂಬಿಕೊಳ್ಳಬೇಕು.‌ ಮೈಸೂರು ಮಹಾರಾಜರ ನೆರವಿನೊಂದಿಗೆ ವಿವೇಕಾನಂದರು ಷಿಕಾಗೊಗೆ ತೆರಳಲು ಸಾಧ್ಯವಾಯಿತು. ನಮ್ಮ ನೆಲದಲ್ಲೂ ವಿವೇಕಾನಂದರು ನಡೆದಾಡಿದ್ದಾರೆ, ನಾವೆಲ್ಲರೂ ಪುಣ್ಯವಂತರು. ಇದನ್ನು ನಾವು ಹೆಮ್ಮೆಯಿಂದ ಹೇಳಿಕೊಳ್ಳಬೇಕು.
ಷಿಕಾಗೊದಲ್ಲಿ ವಿವೇಕಾನಂದರು ಭಾಷಣ ಮಾಡಿದ ಸ್ಥಳಕ್ಕೆ ಹೋಗಿಬಂದಿದ್ದೇನೆ. ಬಹಳ ಪ್ರೇರಣೆ ನೀಡುವ ಸ್ಥಳ ಅದು.
ವಿವೇಕಾನಂದರು ನಮಗೆಲ್ಲ ಪ್ರೇರಣೆ. ಅವರು ಭಾರತದ ಆತ್ಮವನ್ನು ಪ್ರತಿನಿಧಿಸಿದರು.

ನಾವು ವಿಭಿನ್ನ ಸಂಸ್ಕೃತಿ, ಹಿನ್ನೆಲೆಯನ್ನು ಹೊಂದಿದ್ದೇವೆ. ನಮ್ಮ ಗುರುತನ್ನು ಎಂದಿಗೂ ಮರೆಯಬಾರದು. ಈ ಭಾರತ ಶ್ರೇಷ್ಠವಾಗಿದೆ, ಶ್ರೇಷ್ಠವಾಗಿರಲಿದೆ. ಇನ್ನೂ ಶ್ರೇಷ್ಠವಾಗಿ ಮಾಡುತ್ತೇವೆ. ಭಾರತೀಯರು ಎಂದು ಹೇಳಿಕೊಳ್ಳಲು ನಮಗೆಲ್ಲ ಹೆಮ್ಮೆ ಇರಬೇಕು. ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಸಾಧಕ ಬದುಕುತ್ತಾನೆ. ಇದು ಸ್ವಾಮಿ ವಿವೇಕಾನಂದರ ಸಂದೇಶ. ‌ನೀವೆಲ್ಲ ಮಕ್ಕಳು ಭವಿಷ್ಯದ ಭಾರತ. ಈಗಿನ ಭಾರತಕ್ಕಿಂತ ಶ್ರೇಷ್ಠ ಭಾರತವನ್ನು ಕಟ್ಟುತ್ತೀರಿ ಎಂಬ ನಂಬಿಕೆ ಇದೆ ಎಂದರು.

ವಿಸ್ತಾರ ನ್ಯೂಸ್‌ಗೆ ಶ್ಲಾಘನೆ
ವಿಸ್ತಾರ ವಾಹಿನಿಯ ಅಭಿಯಾನಗಳನ್ನು ಶ್ಲಾಘಿಸಿದ ಬಸವರಾಜ ಬೊಮ್ಮಾಯಿ, ವಿಸ್ತಾರ ಹತ್ತು ಹಲವು ಜನಪರ ಅಭಿಯಾನಗಳನ್ನು ಮಾಡುತ್ತಿದ್ದಾರೆ. ವಿವೇಕದ ವಿಸ್ತರಣೆಯನ್ನು ಮಾಡಿದ್ದಾರೆ. ಅವರಿಗೆ ಅಭಿನಂದನೆಗಳು. ಅನೇಕ ವರ್ಷಗಳಿಂದ ಪತ್ರಿಕೋದ್ಯಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹರಿಪ್ರಕಾಶ ಕೋಣೆಮನೆಯವರು ತಮ್ಮಂತೆಯೇ ವಿಸ್ತಾರ ಸಂಸ್ಥೆಗೂ ಚಾರಿತ್ರ್ಯವನ್ನು ತುಂಬಲಿ ಎಂದು ಹಾರೈಸೂತ್ತೇನೆ ಎಂದು ಹೇಳಿದರು.

ಹೊಸ ಶಿಕ್ಷಣ ನೀತಿ ರೂಪಿಸಿದ್ದೇವೆ. ಜ್ಞಾನದಿಂದ ಮೌಲ್ಯ ಪಡೆದುಕೊಳ್ಳಬೇಕು.‌ ಈ ದೇಶದಲ್ಲಿ ಅನೇಕ ಭಾಷಣಕಾರರಿದ್ದಾರೆ, ಈಗ ಬೇಕಾಗಿರುವುದು ಆಚರಣೆ. ಚಾರಿತ್ರ್ಯ, ವ್ಯಕ್ತಿತ್ವ ವಿಕಸನ, ಉದ್ಯೋಗ ನೀಡುವ ಶಿಕ್ಷಣ ನೀಡುವ ಕಾರ್ಯವನ್ನು ಈ ನೀತಿಯ ಮೂಲಕ ಮಾಡಲಿದ್ದೇವೆ.

ಕೆಲವರಿಗೆ ಬದಲಾವಣೆ ಬೇಕಿಲ್ಲ
ಐದು ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ನೀಡುವ ಸ್ವಾಮಿ‌ ವಿವೇಕಾನಂದ ಯೋಜ‌ನೆ ರೂಪಿಸಿದ್ದೇವೆ. ರಾಜ್ಯ ಸರ್ಕಾರದಿಂದ ಹೊಸದಾಗಿ ಎಂಟು ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಿದ್ದೇವೆ. ಅವುಗಳಿಗೆ ವಿವೇಕ ಕೊಠಡಿ ಎಂದು ಹೆಸರಿಟ್ಟಿದ್ದೇವೆ. ಆದರೆ ಸಮಾಜದ ಒಂದು ವರ್ಗ ಇದನ್ನು ವಿರೋಧಿಸುತ್ತಿದೆ. ಸಮಾಜದಲ್ಲಿ ಬದಲಾವಣೆಯನ್ನು ಅವು ಬಯಸುತ್ತಿಲ್ಲ. ನಮ್ಮ ನೈತಿಕ ಮೌಲ್ಯಗಳನ್ನು ಉಳಿಸುವ ಬದಲಾವಣೆಯನ್ನು‌ ಬಯಸುತ್ತಿಲ್ಲ ಈ ಬದಲಾವಣೆಯ ಮುಂದಾಳತ್ವವನ್ನು ಯುವಕರು ಹೊಂದಬೇಕು ಎಂದರು.

ಘನ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು ಸ್ವಾಮಿ ವೀರೇಶಾನಂದ ಸರಸ್ವತೀ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌, ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ, ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ವಿಸ್ತಾರ ಮೀಡಿಯಾ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ, ಚೇರ್ಮನ್‌ ಮತ್ತು ಎಮ್‌ಡಿ ಎಚ್‌.ವಿ. ಧರ್ಮೇಶ್‌, ಶಾಸಕ ಸಿದ್ದು ಸವದಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್, ಸಮಗ್ರ ಶಿಕ್ಷಣದ ರಾಜ್ಯ ಯೋಜನಾ ನಿರ್ದೇಶಕಿ ಬಿ.ಬಿ. ಕಾವೇರಿ, ಖ್ಯಾತ ನಟಿ ಪ್ರಣಿತಾ ಸುಭಾಷ್‌, ವಿವೇಕಯುಗ ಫೌಂಡೇಷನ್‌ ಅಧ್ಯಕ್ಷ ಡಾ. ಡಿ.ಎಂ. ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

ಖ್ಯಾತ ಗಾಯಕ ಕಿಕ್ಕೇರಿ ಕೃಷ್ಣ ಮೂರ್ತಿ ಹಾಗೂ ಭವಾನಿ ಹೆಗಡೆ ಅವರ ಗಾಯನ ಕಾರ್ಯಕ್ರಮವಿತ್ತು.

ಸಹಯೋಗ:
ಕಾರ್ಯಕ್ರಮಕ್ಕೆ ಪರಿಶ್ರಮ ನೀಟ್‌ ಅಕಾಡೆಮಿ, ಕೆಎಂಎಫ್‌ ನಂದಿನಿ, ಎಎಂಸಿ ಎಜುಕೇಷನ್‌, ವಿವೇಕಯುಗ ಫೌಂಡೇಷನ್‌, ಕ್ಯಾಮ್ಸ್‌ ಕರ್ನಾಟಕ, ರಾಷ್ಟ್ರೀಯ ಸೇವಾ ಯೋಜನೆ ಸಹಕಾರ ಒದಗಿಸಿದ್ದವು.

ಇದನ್ನೂ ಓದಿ | Vivekananda Jayanti 2023 | ವಿಸ್ತಾರ ನ್ಯೂಸ್‌ ನಿಂದ ಇಂದು ವಿವೇಕ ವಂದನೆ ಕಾರ್ಯಕ್ರಮ; ಸಿಎಂ ಸೇರಿದಂತೆ ಹಲವು ಗಣ್ಯರು ಭಾಗಿ

Exit mobile version