Site icon Vistara News

Voter Data | ʼಅಶ್ವತ್ಥನಾರಾಯಣ್‌ ಬಹಳ ಒಳ್ಳೆಯ ಕೆಲಸ ಮಾಡ್ತಿದಾರೆʼ: ಡಿ.ಕೆ. ಶಿವಕುಮಾರ್‌ ಹೇಳಿಕೆ

Voter Data congress complaint

ಬೆಂಗಳೂರು: ಮತದಾರರ ಗೌಪ್ಯ ಮಾಹಿತಿಯನ್ನು (Voter Data) ಅಕ್ರಮವಾಗಿ ಖಾಸಗಿ ಸಂಸ್ಥೆ ಮೂಲಕ ಸಂಗ್ರಹಿಸಲಾಗುತ್ತಿದೆ ಎಂಬ ಕುರಿತು ನಗರ ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ ಅವರಿಗೆ ಕಾಂಗ್ರೆಸ್‌ ದೂರು ನೀಡಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್‌ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್‌, ರಾಮಲಿಂಗಾರೆಡ್ಡಿ, ಕಾಂಗ್ರೆಸ್‌ ಉಪನಾಯಕ ಯು.ಟಿ. ಖಾದರ್‌, ಶಿವಾಜಿ ನಗರ ಶಾಸಕ ರಿಜ್ವಾಣ್‌ ಅಹ್ಮದ್‌ ನಿಯೋಗ ದೂರು ನೀಡಿತು.

ನಂತರ ಮಾತನಾಡಿದ ಡಿ.ಕೆ. ಶಿವಕುಮಾರ್‌, ಐಎಎಸ್‌, ಐಪಿಎಸ್‌ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳ ಕರ್ತವ್ಯವನ್ನು ಖಾಸಗಿಯವರಿಗೆ ನೀಡಲಾಗಿದೆ. ಇದು ಮತದಾರರ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ. ಬಿಎಲ್‌ಒಗಳು ಇಂಥವರನ್ನು ನೇಮಿಸಿಕೊಳ್ಳುವ ಅಧಿಕಾರ ಪಡೆದು ಬಿಜೆಪಿ ಕಾರ್ಯಕರ್ತರನ್ನು ನೇಮಿಸಿಕೊಳ್ಳಲಾಗಿದೆ.

ಜನರಿಗೆ ಇವಿಎಂ ಕುರಿತು ಜಾಗೃತಿಯನ್ನು ಉಚಿತವಾಗಿ ತರಬೇತಿ ನೀಡುತ್ತೇವೆ ಎಂದು ಸಾವಿರಾರು ಕಾರ್ಯಕರ್ತರನ್ನು ನೇಮಿಸಿಕೊಂಡಿದ್ದಾರೆ. ವೋಟರ್‌ ಲಿಸ್ಟ್‌ನಲ್ಲಿ ಎಸ್‌ಸಿಎಸ್‌ಟಿ, ಒಬಿಸಿ ಮತದಾರರನ್ನು ಕಿತ್ತೊಗೆಯುವುದು ಇದರ ಹಿಂದಿನ ಹುನ್ನಾರ. ಕಾಂಗ್ರೆಸ್‌, ಜೆಡಿಎಸ್‌ಗೆ ಮತ ಹಾಕುವವರ ಹೆಸರನ್ನು ತೆಗೆದುಹಾಕುವುದು ಇವರ ಕೆಲಸ.

ಚುನಾವಣಾ ಆಯೋಗವೇ ಒಂದು ಅಪ್ಲಿಕೇಷನ್‌ ಹೊಂದಿದೆ. ಆದರೆ ಅನೇಕರಿಗೆ ಅದರ ಮಾಹಿತಿಯೇ ಇಲ್ಲ. ಇಂಥ ಘೋರ ಭ್ರಷ್ಟಾಚಾರ ಮಾಡಲು ಹೊರಟಿದ್ದಾರೆ. ಇದನ್ನೆಲ್ಲ ಹೊರತಂದ ಮಾಧ್ಯಮಗಳನ್ನು ಅಭಿನಂದಿಸುತ್ತೇವೆ. ನಮ್ಮ ಬಳಿಯಿರುವ ಮಾಹಿತಿಗಳ ಆಧಾರದಲ್ಲಿ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದೇವೆ ಎಂದರು.

ಅಶ್ವತ್ಥನಾರಾಯಣ ಅವರು ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾದರೆ ದಾಖಲಿಸಲಿ, ಎದುರಿಸುತ್ತೇನೆ ಎಂದರು. ತಾವು ಒಳ್ಳೆಯ ಕೆಲಸ ಮಾಡುತ್ತಿರುವುದಕ್ಕೆ ಕಾಂಗ್ರೆಸ್‌ನವರು ಟಾರ್ಗೆಟ್‌ ಮಾಡುತ್ತಿದ್ದಾರೆ ಎಂಬ ಅಶ್ವತ್ಥನಾರಾಯಣ ಅವರ ಮಾತಿನ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ಅಶ್ವತ್ಥ್‌ನಾರಾಯಣ್‌ ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಒಂದೇ ಅಡ್ರೆಸ್‌ನಲ್ಲಿ ಅವರ ಎಲ್ಲ ಕಂಪನಿಗಳೂ ಇವೆ ಎಂದು ವ್ಯಂಗ್ಯವಾಗಿ ಹೇಳಿದರು.

ಸಿಎಂ, ಸಚಿವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸುತ್ತೇವೆ. ಬೆಂಗಳೂರಿನ ಎಲ್ಲ 28 ವಿಧಾನಸಭೆ ಕ್ಷೇತ್ರಗಳಲ್ಲೂ ಚುನಾವಣಾಧಿಕಾರಿಗೆ ದೂರು ದಾಖಲಿಸುತ್ತೇವೆ. ನವದೆಹಲಿಯಲ್ಲಿರುವ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡುತ್ತೇವೆ ಎಂದು ಶಿವಕುಮಾರ್‌ ತಿಳಿಸಿದರು.

ಕಾನೂನು ರೀತಿ ಪರಿಶೀಲನೆ ನಡೆಸುತ್ತೇವೆ ಎಂದು ಆಯುಕ್ತರು ಹೇಳಿದ್ದಾರೆ ಎಂದ ಡಿ.ಕೆ. ಶಿವಕುಮಾರ್‌, ಸಿಎಂ, ಮಂತ್ರಿಗಳನ್ನು, ಶಾಸಕರನ್ನು, ಅಧಿಕಾರಿಗಳನ್ನು ಬಂಧನ ಮಾಡಬಾರದು ಎಂದು ಕಾನೂನು ಇದೆಯ? ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ಇದನ್ನೂ ಓದಿ | Voter data | ಎಲ್ಲಾ ಮಾಡ್ತಿರೋದು ಮಂತ್ರಿಗಳಿಗೆ ಸೇರಿದ ಬೇನಾಮಿ ಹೆಸರಿನ ಸಂಸ್ಥೆ ಎಂದ ಎಚ್‌.ಡಿ ಕುಮಾರಸ್ವಾಮಿ

Exit mobile version