ರಾಮನಗರ: ಮತದಾರರ ಪಟ್ಟಿ ಅಕ್ರಮ ಪ್ರಕರಣದ (Voter Data) ಹಿನ್ನೆಲೆಯಲ್ಲೆ ರಾಜ್ಯ ಸರ್ಕಾರವನ್ನು ಟೀಕಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸಚಿವ ಡಾ. ಅಶ್ವತ್ಥನಾರಾಯಣ ಗರಂ ಆಗಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ, ಕಾಂಗ್ರೆಸ್‌ನವರು ಅಲ್ಲ. ಇವರೇ ತನಿಖೆ ಮಾಡುತ್ತಿರುವ ರೀತಿ ಬಿಲ್ಡಪ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಇವರು ಸಂಪೂರ್ಣ ದಿವಾಳಿಯಾಗಿದ್ದಾರೆ. ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಇಲ್ಲ. ಪೊಲೀಸರು ಮುಕ್ತವಾಗಿ ತನಿಖೆ ಮಾಡುತ್ತಿದ್ದಾರೆ. ಡಿಕೆಶಿ ಜೈಲಿಗೆ ಹೋಗಿದ್ದರು, ಅದಕ್ಕೆ ನಾನು ಹೊಣೆಯೇ? ಈಗ ಮತ್ತೆ ಜೈಲಿಗೆ ಹೋಗುತ್ತಾರೆ, ಅದಕ್ಕೆ ನಾನು ಹೊಣೆನಾ? ಕೆಟ್ಟ ಕೆಲಸ ಮಾಡಿದವರು, ಭ್ರಷ್ಟಾಚಾರ ಮಾಡಿದ ಶಿವಕುಮಾರ್‌ನಂತಹ ವ್ಯಕ್ತಿಗಳು ಮತ್ತೆ ಜೈಲಿಗೆ ಹೋಗುತ್ತಾರೆ. ನಮ್ಮ ಪ್ಲ್ಯಾನ್ ಏನೂ ಇಲ್ಲ, ಈ ವ್ಯಕ್ತಿಗಳು ಮೈತುಂಬ ಕಾಯಿಲೆ ಇಟ್ಟುಕೊಂಡು ಎಲ್ಲೆಲ್ಲೋ ತೋರಿಸಲು ಹೋಗುತ್ತಾರೆ. ಆದರೆ, ಇವರೇ ರೋಗ ಅಂಟಿಸುವವರು, ರೋಗಗ್ರಸ್ತ ಭ್ರಷ್ಟಾಚಾರಿಗಳು ಎಂದರು.
ನಾನು ಜನರ ನಾಯಕ, ಇವರ ರೀತಿಯಲ್ಲಿ ಬೇರೆ ಹಿನ್ನೆಲೆಯಿಂದ ಬಂದಿಲ್ಲ. ಕೊತ್ವಾಲನ ಹಿನ್ನೆಲೆ ಇಲ್ಲ. ಟೀ, ಕಾಫಿ ಕೊಡುತ್ತಿದ್ದ ಹಿನ್ನೆಲೆ ಇಲ್ಲ. ಕಾಡು, ಬೆಟ್ಟ, ನಾಡು ನುಂಗಿದ ಜೇಬು ಕಳ್ಳರು ಇವರು. ಡಿಕೆಶಿ ಹೇಳುವುದು ಪಿಚಾಚಿ ಬಾಯಲ್ಲಿ ಭಗವದ್ಗೀತೆ ಕೇಳಿದ ಹಾಗೆ ಇದೆ. ಮತದಾರರ ಪಟ್ಟಿ ಅಕ್ರಮ ಪ್ರಕರಣದ ಬಗ್ಗೆ ಚುನಾವಣಾ ಆಯೋಗದಿಂದ ಸೂಕ್ತ ಕ್ರಮವಾಗುತ್ತದೆ. ಏನಾದರೂ ತಪ್ಪಾಗಿದ್ದರೆ ಶಿಕ್ಷೆಯಾಗಲಿ. ಈಗ ಪೊಲೀಸರರಿಂದ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಪೊಲೀಸ್ ಇಲಾಖೆಯಲ್ಲಿ ಅರ್ಜಿ ಹಾಕದವರಿಗೆ ಸಿದ್ದರಾಮಯ್ಯ ಕೆಲಸ ಕೊಟ್ಟಿದ್ದಾರೆ. ಸಿದ್ದರಾಮಯ್ಯ, ಶಿವಕುಮಾರ್ ಅಂತಹವರು ಶಾಶ್ವತವಾಗಿ ಜೈಲಲ್ಲಿ ಇರಬೇಕು. ಇವರಿಗೆ ಏನಾದರೂ 5 ರೂಪಾಯಿ ಮಾನಮರ್ಯಾದೆ, ಯೋಗ್ಯತೆ ಇದೆಯಾ? ಭ್ರಷ್ಟಾಚಾರದಿಂದ ಅಧಿಕಾರ ದುರ್ಬಳಕೆ ಮಾಡಿಕೊಂಡವರರಿಗೆ ನಾನು ಸಿಂಹಸ್ವಪ್ನವಾಗಿದ್ದೇನೆ. ಹೀಗಾಗಿ ಇವರಿಗೆ ಆತಂಕ, ನಡುಕ ಇದೆ ಎಂದು ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನಲ್ಲಿ ತಂತ್ರಜ್ಞಾನ ಸಮಾವೇಶ ನಡೆಯಿತು. ಇವರು ಒಂದೊಳ್ಳೆ ಮಾತನಾಡಲಿಲ್ಲ. ಈಗ ಮತದಾರರ ಹೆಸರು ಕೈಬಿಟ್ಟಿದ್ದಾರೆ ಎನ್ನುತ್ತಿದ್ದಾರೆ. ನೆಲೆಯಿಲ್ಲದ, ಕಾರ್ಯಕರ್ತರಿಲ್ಲದ ಪಕ್ಷ ಕಾಂಗ್ರೆಸ್, ಕೆಂಪೇಗೌಡರ ಪ್ರತಿಮೆ ವಿಚಾರವಾಗಿ ಒಂದೊಳ್ಳೆ ಮಾತನಾಡಲಿಲ್ಲ. ಜನರ ದಿಕ್ಕು ತಪ್ಪಿಸಬೇಕು ಎಂದು ಸುಖಾಸುಮ್ಮನೆ ಟೀಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ | Voter Data | ʼಅಶ್ವತ್ಥನಾರಾಯಣ್ ಬಹಳ ಒಳ್ಳೆಯ ಕೆಲಸ ಮಾಡ್ತಿದಾರೆʼ: ಡಿ.ಕೆ. ಶಿವಕುಮಾರ್ ಹೇಳಿಕೆ