ಬೆಂಗಳೂರು: ಸಮಾಜ ಸೇವೆಯ ಸೋಗಿನಲ್ಲಿ ಚಿಲುಮೆ ಸಂಸ್ಥೆಯು ಮತದಾರರ ಡೇಟಾವನ್ನು ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. (Voter data) ಸಾರ್ವಜನಿಕರ ಡೇಟಾ ಮಾರಿ ಸಂಸ್ಥೆ ಕೋಟ್ಯಂತರ ರೂಪಾಯಿಗಳನ್ನು ಅಕ್ರಮವಾಗಿ ಗಳಿಸಿದೆಯೇ ಎಂಬ ಅನುಮಾನ ಉಂಟಾಗಿದೆ.
ಬಿಬಿಎಂಪಿ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಎನ್‌ಜಿಒ ಚಿಲುಮೆ ಬಗ್ಗೆ ಆಘಾತಕಾರಿ ಅಂಶಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಚಿಲುಮೆ ಅಕ್ರಮ ಮಾಡಿರುವುದು ಬೆಳಕಿಗೆ ಬಂದಿದೆ. ಮತದಾರರ ಡೇಟಾ ಸಂಗ್ರಹಿಸಿ, ರಾಜಕೀಯ ಪಕ್ಷಗಳಿಗೆ ಮಾರಾಟ ಮಾಡಿರುವ ಬಗ್ಗೆ ಶಂಕಿಸಲಾಗಿದೆ. ಮತದಾರರ ಡೇಟಾವನ್ನು ಕೋಟ್ಯಂತರ ರೂ.ಗೆ ಮಾರಾಟ ಮಾಡಿರುವ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ. ಮುಂಬರುವ ಚುನಾವಣೆಗಳಲ್ಲೂ ಡೇಟಾ ಸಂಗ್ರಹಿಸಿ ರಾಜಕೀಯ ಪಕ್ಷಗಳಿಗೆ ಕೋಟ್ಯಂತರ ರೂ.ಗೆ ಮಾರಾಟ ಮಾಡುವ ಸನ್ನಾಹದಲ್ಲಿತ್ತು.
ಹೀಗಾಗಿಯೇ ಕೆಲ ರಾಜಕೀಯ ಮುಖಂಡರು ಸಂಸ್ಥೆಗೆ ಕೊಡುಗೆ ರೂಪದಲ್ಲಿ ಹಣ ಕೊಟ್ಟಿದ್ದಾರೆ ಎಂಬ ಸಂಗತಿ ಬಿಬಿಎಂಪಿ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.