Site icon Vistara News

ವಿವಿ ಪುರಂ ಜಾತ್ರೋತ್ಸವ ಆರಂಭ | ಧರ್ಮ ದಂಗಲ್‌ಗೆ ಅವಕಾಶವಿಲ್ಲ, ಹಿಂದೂ ಕಾರ್ಯಕರ್ತರ ಬಂಧನ

vv puram

ಬೆಂಗಳೂರು: ವಿವಿ ಪುರಂ ಸಜ್ಜನರಾವ್‌ ವೃತ್ತದಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಬೆಳ್ಳಿ ರಥೋತ್ಸವ ಇಂದು ನಡೆಯಲಿದೆ. ಜಾತ್ರೆಯಲ್ಲಿ ಧರ್ಮ ದಂಗಲ್‌ಗೆ ಮುಂದಾಗಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಸಿ ಮುಟ್ಟಿಸಿದ್ದಾರೆ.

ಇಂದು ಷಷ್ಠಿಯ ಹಿನ್ನೆಲೆಯಲ್ಲಿ ಸಜ್ಜನ್‌ರಾವ್ ವೃತ್ತದಲ್ಲಿನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಜಾತ್ರೋತ್ಸವ ನಿಯೋಜನೆಯಾಗಿದೆ. ಮುಂಜಾನೆಯಿಂದಲೇ ದೇವಾಲಯದ‌ ಮುಂದೆ ಸಾವಿರಾರು ಭಕ್ತರು ದರ್ಶನ ಹಾಗೂ ಅರ್ಚನೆಗಾಗಿ ಸಾಲುಗಟ್ಟಿ ನಿಂತಿದ್ದಾರೆ. ಸುಬ್ರಹ್ಮಣ್ಯ ಸ್ವಾಮಿಗೆ ಅರ್ಚಕರು ವಿಶೇಷ ಅಭಿಷೇಕ, ಪೂಜೆ ನಡೆಸುತ್ತಿದ್ದಾರೆ. ದೇವಾಲಯದ ಮುಂದೆ ದೊಡ್ಡ ಸ್ಕ್ರೀನ್‌ ಅಳವಡಿಸಿ ಹೊರಗೂ ದರ್ಶನದ ಅವಕಾಶ ಕಲ್ಪಿಸಲಾಗಿದೆ.

ಹಿಂದು ದೇವಾಲಯದ ಕಾರ್ಯಕ್ರಮಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಬೇಡ ಎಂದು ಆಗ್ರಹಿಸಿ ಹಿಂದೂ ಸಂಘಟನೆಗಳು ಅಭಿಯಾನ ಶುರು ಮಾಡಿದ್ದ ಹಿನ್ನೆಲೆಯಲ್ಲಿ ದೇವಾಲಯದ ಸುತ್ತುಲೂ ಬಿಗಿ ಪೊಲೀಸ್‌ ಬಂದೋಬಸ್ತ್ ಒದಗಿಸಲಾಗಿದೆ. ಯಾವುದೇ ಅಹಿತಕರ ಘಟನೆ ಆಗದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. 620ಕ್ಕೂ ಹೆಚ್ಚು ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.‌

ಇದನ್ನೂ ಓದಿ | ಧರ್ಮ ದಂಗಲ್‌ | ಬಿಜೆಪಿ ಶಾಸಕರ ವಿರುದ್ಧವೇ ತಿರುಗಿ ಬಿದ್ದ ಹಿಂದೂ ಸಂಘಟನೆಗಳು

ಹಿಂದೂ ಹೋರಾಟಗಾರರು ವಶಕ್ಕೆ

ಸುಬ್ರಹ್ಮಣ್ಯ ಬೆಳ್ಳಿ ತೇರಿನಲ್ಲಿ ವ್ಯಾಪಾರದ ವಿವಾದಕ್ಕೆ ಮುಂದಾಗಿದ್ದ ಹಿಂದೂ ಸಂಘಟನೆಗಳಿಗೆ ಪೋಲಿಸರು ಮಧ್ಯರಾತ್ರಿ ಶಾಕ್ ನೀಡಿದ್ದಾರೆ. ತಡರಾತ್ರಿ 1 ಗಂಟೆಗೆ ಹಿಂದೂ ಹೋರಾಟಗಾರರನ್ನು ಬಂಧಿಸಲಾಗಿದೆ. ಹಿಂದೂಯೇತರ ವ್ಯಕ್ತಿಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದ ಭಜರಂಗದಳ ಮುಖಂಡ ತೇಜಸ್ ಗೌಡರನ್ನು ಕನಕಪುರ ವ್ಯಾಪ್ತಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ʻಜಾತ್ರೆಯಲ್ಲಿ ವ್ಯಾಪಾರಕ್ಕೆ ಯಾರ ಅನುಮತಿಯೂ‌ ಬೇಕಿಲ್ಲ, ವ್ಯಾಪಾರಕ್ಕೆ ಧರ್ಮವೂ ಇಲ್ಲʼ ಎಂದು ಸ್ಥಳೀಯ ಶಾಸಕ ಉದಯ ಗರುಡಾಚಾರ್‌ ಈ ಮೊದಲೇ ಹೇಳಿ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣರಾಗಿದ್ದರು. ಇದೀಗ ʼಬಿಜೆಪಿ ಸರ್ಕಾರ ತಡರಾತ್ರಿ ಹಿಂದೂ ಕಾರ್ಯಕರ್ತರನ್ನು ಬಂಧಿಸುವಷ್ಟು ನೀಚ ಕೆಲಸಕ್ಕೆ ಕೈ ಹಾಕಬಾರದಿತ್ತುʼ ಎಂದು ಕೆಲವು ಮುಖಂಡರು ಕಿಡಿ ಕಾರಿದ್ದಾರೆ.

ಇದನ್ನೂ ಓದಿ | ಸಿಲಿಕಾನ್‌ ಸಿಟಿಗೂ ಕಾಲಿಟ್ಟ ಧರ್ಮ ದಂಗಲ್‌ | ಅನ್ಯಧರ್ಮೀಯರ ವ್ಯಾಪಾರಕ್ಕೆ ಬ್ರೇಕ್‌ ಹಾಕಲು ಹಿಂದೂ ಸಂಘಟನೆ ಒತ್ತಾಯ

Exit mobile version