ಬೆಂಗಳೂರು: ರಾಜ್ಯದಲ್ಲಿ ಭೀಕರ ಬರ ಕಾಡುತ್ತಿದೆ. ಇದರಿಂದ ಎಲ್ಲಿ ನೋಡಿದರೂ ನೀರಿನ ಸಮಸ್ಯೆ (Water crisis) ಅತಿಯಾಗಿದೆ. ಇದು ಬೆಂಗಳೂರನ್ನು ಬಹುವಾಗಿ ಕಾಡುತ್ತಿದೆ. ಸರಿಯಾಗಿ ಮಳೆಯಾಗದೇ ಇರುವುದರಿಂದ ಮಹಾನಗರಕ್ಕೆ ಸಮರ್ಪಕವಾಗಿ ನೀರು ಪೂರೈಕೆ ಮಾಡಲಾಗುತ್ತಿಲ್ಲ. ಹೀಗಾಗಿ ದೊಡ್ಡ ದೊಡ್ಡ ಫ್ಲ್ಯಾಟ್‌ಗಳಲ್ಲಿ ಈಗ ನೀರಿನ ತೀವ್ರ ಅಭಾವ ಎದುರಾಗಿದೆ. ಅಲ್ಲಿ ಪ್ರತಿ ಮನೆಗೂ ನೀರಿಗೆ ಮಿತಿಯನ್ನು ಹೇರಲಾಗುತ್ತಿದೆ. ಹೀಗಾಗಿ ನೀರನ್ನು ಕೆಲವು ಫ್ಲ್ಯಾಟ್‌ಗಳ ನಿವಾಸಿಗಳು ಬೆಳಗಿನ ಶೌಚಕ್ಕೆ ಪಕ್ಕದ ಮಾಲ್‌ಗಳಿಗೆ ನುಗ್ಗುತ್ತಿದ್ದಾರೆ.
ಬೆಂಗಳೂರಿನಲ್ಲಿ ಆಗಿರುವ ನೀರಿನ ಬಿಕ್ಕಟ್ಟು ಈಗ ಐಷಾರಾಮಿ ಫ್ಲ್ಯಾಟ್‌ಗಳ ನಿವಾಸಿಗಳನ್ನು ಕಂಗೆಡಿಸಿವೆ. ಈಗ ಕನಕಪುರ ರಸ್ತೆಯಲ್ಲಿರುವ ದೊಡ್ಡ ಕಂಪನಿಯ ಫ್ಲ್ಯಾಟ್‌ವೊಂದರಲ್ಲಿ ನೀರಿಗೆ ಭಾರಿ ಸಮಸ್ಯೆ ಎದುರಾಗಿದೆ. ಇಲ್ಲಿನ ನೀರನ್ನು ಮಿತವಾಗಿ ಬಳಸಲು ಸೂಚನೆ ನೀಡಲಾಗಿದೆ. ಅಲ್ಲದೆ, ಇಲ್ಲಿ ಸರಿಯಾಗಿ ನೀರು ಬಂದು ಒಂದು ತಿಂಗಳಾಗುತ್ತಾ ಬಂದಿದೆ. ಹೀಗಾಗಿ ಈ ಫ್ಲ್ಯಾಟ್‌ಗಳ ನಿವಾಸಿಗಳು ಈಗ ಉಪಾಹಾರ ಇಲ್ಲವೇ ಊಟ ಮಾಡಲು ಸ್ಟೀಲ್ ಅಥವಾ ಪ್ಲಾಸ್ಟಿಕ್ ಪ್ಲೇಟ್‌ಗಳನ್ನು ಬಳಕೆ ಮಾಡುತ್ತಿಲ್ಲ. ಬದಲಾಗಿ ಎಸೆಯುವಂತಹ ಪ್ಲೇಟ್‌ಗಳನ್ನು, ಪೇಪರ್ ಲೋಟಗಳನ್ನು ಬಳಕೆ ಮಾಡುತ್ತಿದ್ದಾರೆ. ಇನ್ನು ಅನೇಕರು ಹತ್ತಿರದ ಫೋರಂ ಮಾಲ್‌ನಲ್ಲಿರುವ ವಾಶ್‌ರೂಂಗಳನ್ನು ಬಳಕೆ ಮಾಡಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ ಎನ್ನಲಾಗುತ್ತಿದೆ.
ಇಲ್ಲಿ ಸರಿಸುಮಾರು ಒಂದು ತಿಂಗಳಿಂದ ಸರಿಯಾಗಿ ನೀರು ಸಿಗುತ್ತಿಲ್ಲ ಎನ್ನಲಾಗಿದೆ. ಈ ಮೊದಲು ದಿನದ 24 ಗಂಟೆಯೂ ನೀರು ಸಿಗುತ್ತಿದ್ದ ಫ್ಲ್ಯಾಟ್‌ನಲ್ಲಿ ಆಗೊಮ್ಮೆ, ಈಗೊಮ್ಮೆ ಎಂಬಂತೆ ನೀರು ಬರುತ್ತಿದೆ. ಅದು ಗೊತ್ತಾಗಿ ಹಿಡಿದಿಟ್ಟುಕೊಳ್ಳುಷ್ಟರಲ್ಲಿ ಖಾಲಿಯಾಗಿಬಿಡುತ್ತದೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಬೇರೆಡೆ ಸ್ಥಳಾಂತರ
ಈ ದುಸ್ಥಿತಿಯನ್ನು ಕಂಡ ಮತ್ತೆ ಕೆಲವರು ತಮ್ಮ ಫ್ಲ್ಯಾಟ್‌ಗೆ ಬೀಗ ಹಾಕಿ ಬೇರೆ ಕಡೆಗೆ ಹೋಗಿದ್ದಾರೆ. ತಾತ್ಕಾಲಿಕವಾಗಿ ವಸತಿ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ವರ್ಕ್ ಫ್ರಂ ಹೋಂ ವ್ಯವಸ್ಥೆ ಇರುವವರು ತಮ್ಮ ಊರುಗಳಿಗೋ, ಇಲ್ಲವೇ ಬೇರೆ ಹೋಂ ಸ್ಟೇಗಳಿಗೋ ಹೋಗುತ್ತಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಕೆಲವು ಶಾಲೆ, ಕೋಚಿಂಗ್ ಸೆಂಟರ್‌ಗೆ ಬೀಗ!
ಬೆಂಗಳೂರಿನ ಕೆಲವು ಶಾಲೆಗಳು (Bangalore Schools) ಹಾಗೂ ಕೋಚಿಂಗ್ ಸೆಂಟರ್‌ಗಳನ್ನು (Coaching Centres) ಸ್ಥಗಿತಗೊಳಿಸಿ, ಆನ್‌ಲೈನ್ ಕ್ಲಾಸ್‌ಗೆ (Online Class) ಮೊರೆಹೋಗಲಾಗಿದೆ ಎಂದು ವರದಿಯಾಗಿದೆ.
ಈಗ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಗಾಢವಾಗಿದ್ದು, ಕೆಲವು ಕಡೆ ಟ್ಯಾಂಕರ್‌ಗಳ ಮೂಲಕ ನೀರಿನ ಸರಬರಾಜನ್ನು ಮಾಡಲಾಗುತ್ತಿದೆ. ಇದಕ್ಕೆ ದುಬಾರಿ ಹಣ ತೆರಬೇಕಿದೆ. ಇನ್ನು ಕೆಲವು ಕಡೆ ದುಡ್ಡು ಕೊಡುತ್ತೇವೆ ಎಂದರೂ ನೀರು ಸಿಗದ ಪರಿಸ್ಥಿತಿ ಇದೆ. ಹೆಚ್ಚಿದ ಬೇಡಿಕೆ ಹಿನ್ನೆಲೆಯಲ್ಲಿ ಅಗತ್ಯ ಇರುವ ಕಡೆ ಪೂರೈಕೆ ಮಾಡಲೂ ಸಾಧ್ಯವಾಗದಷ್ಟು ಸಮಸ್ಯೆ ಆಗುತ್ತಿದೆ. ಈ ಮಧ್ಯೆ ಬನ್ನೇರುಘಟ್ಟದ ಶಾಲೆಯೊಂದರಲ್ಲಿ ಈಗ ನೀರಿನ ಅಭಾವ ತಲೆದೋರಿದ್ದರಿಂದ ಶಾಲೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂಬ ಸಂದೇಶವನ್ನು ರವಾನೆ ಮಾಡಲಾಗಿದೆ. ಅಲ್ಲದೆ, ಮಕ್ಕಳಿಗೆ ಆನ್‌ಲೈನ್ ಮೂಲಕ ತರಗತಿಗಳನ್ನು ನಡೆಸಲಾಗುವುದು ಎಂದು ಸ್ಪಷ್ಟನೆ ನೀಡಿದೆ. ಇದು ತಾತ್ಕಾಲಿಕ ಕ್ರಮವಾಗಿದ್ದು, ನೀರಿನ ಸಮಸ್ಯೆ ತಲೆದೋರುತ್ತಿದ್ದಂತೆ ಯಥಾಸ್ಥಿತಿಗೆ ಮರಳಲಾಗುವುದು ಎಂದು ಪೋಷಕರಿಗೆ ತಿಳಿಸಿದೆ.
ವಿಜಯನಗರದಲ್ಲಿರುವ ಕೋಚಿಂಗ್ ಸೆಂಟರ್‌ವೊಂದರಲ್ಲಿಯೂ ನೀರಿನ ತೀವ್ರ ಅಭಾವವಾಗಿದ್ದರಿಂದ ವಿದ್ಯಾರ್ಥಿಗಳಿಗೆ ಒಂದು ವಾರದವರೆಗೆ ತರಗತಿಗಳಿಗೆ ಬಾರದಂತೆ ಮೆಸೇಜ್ ಮಾಡಲಾಗಿದೆ. ನೀರಿನ ಸಮಸ್ಯೆ ತಲೆದೋರುವವರೆಗೆ ಆನ್‌ಲೈನ್ ಮುಖಾಂತರ ಕ್ಲಾಸ್ ಮಾಡುವ ಭರವಸೆ ನೀಡಲಾಗಿದೆ.
ಈ ನಡುವೆ ಸಂಸದ ತೇಜಸ್ವಿ ಸೂರ್ಯ ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಬೆಂಗಳೂರು ಜಲಮಂಡಳಿಯು ಕೆಲವೊಂದು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ. ಅವರಿಂದ ಪರಿಣಾಮಕಾರಿಯಾಗಿ ಸಮಸ್ಯೆಗೆ ಮುಕ್ತಿಯನ್ನು ಕಂಡುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ತೇಜಸ್ವಿ ಸೂರ್ಯ ಸಲಹೆಗಳೇನು?
- ಕೈಗಾರಿಕೆಗಳು ಮತ್ತು ನಿರ್ಮಾಣ ಕ್ಷೇತ್ರದಂತಹ ಬೃಹತ್ ಬಳಕೆದಾರರಿಗೆ ಸಂಸ್ಕರಿಸಿದ ನೀರನ್ನು ಒದಗಿಸಬೇಕು.
- ಕುಡಿಯುವ ನೀರಿನ ತೀವ್ರ ಬೇಡಿಕೆ ಇರುವ ಸ್ಥಳಗಳಿಗೆ ಮರುಹಂಚಿಕೆ ಮಾಡಬೇಕು.
- ಲಭ್ಯವಿರುವ ಸುಮಾರು 1,300 ಎಂಎಲ್ಡಿ ಸಂಸ್ಕರಿಸಿದ ನೀರನ್ನು ಜಲಾನಯನ ಪ್ರದೇಶಗಳಲ್ಲಿ ಮರುಪೂರಣ ಮಾಡಲು ಕೆರೆಗಳಿಗೆ ಹಾಯಿಸಬೇಕು
- ಹೊಸ ಕೊಳವೆಬಾವಿಗಳನ್ನು ಕೊರೆಯಬಹುದಾದ ಸ್ಥಳಗಳ ಬಗ್ಗೆ ಭೂವಿಜ್ಞಾನಿಗಳನ್ನು ಸಂಪರ್ಕಿಸಬೇಕು.
- ಅಸ್ತಿತ್ವದಲ್ಲಿರುವ ಗುತ್ತಿಗೆ ನೀರಿನ ಟ್ಯಾಂಕರ್ ಸರಬರಾಜಿಗೆ ಅಡ್ಡಿಪಡಿಸುವ ಬದಲು, ಇತರ ನೀರಿನ ಟ್ಯಾಂಕರ್ಗಳನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ನೀರು ವಿತರಣೆಯನ್ನು ಮಾಡಬೇಕು.
- ಕಾವೇರಿ ಹಂತ-5 ಅನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಅದರ ಮೂಲಕ ಉದ್ದೇಶಿತ ಪ್ರದೇಶಗಳಲ್ಲಿ ನೀರಿನ ಲಭ್ಯತೆಯನ್ನು ಪರಿಹರಿಸಬೇಕು.
ಇದನ್ನೂ ಓದಿ: Water Crisis: ಬೆಂಗಳೂರಲ್ಲಿ ಈ 6 ಕೆಲಸಕ್ಕೆ ನೀರು ಬಳಸಿದ್ರೆ 5000 ರೂ. ದಂಡ! ನೀವೂ ದೂರು ಕೊಡಿ
ಈ ವಿಚಾರಗಳ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಈ ವಿಧಾನಗಳನ್ನು ಅನುಸರಿಸಿ ಕ್ರಮ ಕೈಗೊಳ್ಳಿ ಎಂದು ಹೇಳಿದ್ದರು.