Site icon Vistara News

Water Crisis in Bengaluru: ನೀರು ದುರ್ಬಳಕೆ ಮಾಡಿದ್ರೆ ಹುಷಾರ್!‌ ಸೆಕ್ಯುರಿಟಿ ಫೋರ್ಸ್‌ನಿಂದ 5000 ರೂ. ದಂಡ

Water Crisis in Bengaluru Security personnel deployed to prevent misuse of water Rs 5000 fine

ಬೆಂಗಳೂರು: ಕರ್ನಾಟಕವು ಭೀಕರ ಬರಗಾಲಕ್ಕೆ (Drought in Karnataka) ತುತ್ತಾಗಿದೆ. ಎಲ್ಲಿ ನೋಡಿದರೂ ನೀರಿಗೆ ಹಾಹಾಕಾರ (Water Crisis) ಎಂಬಂತಹ ಪರಿಸ್ಥಿತಿ ತಲೆದೋರಿದೆ. ನೀರಿಗೆ ತತ್ವಾರ ಎದುರಾಗಿದೆ. ಬೆಂಗಳೂರಿನಲ್ಲಿ ಸಹ ನೀರಿಗೆ ಸಂಕಷ್ಟ ಕಾಲ ಶುರುವಾಗಿದೆ. ಈಗಾಗಲೇ ಕಾವೇರಿ ಕೊಳ್ಳದಲ್ಲಿ (Cauvery Basin) ನೀರಿಲ್ಲ. ಈ ಬೇಸಿಗೆ (Summer season) ಮುಗಿಯುವವರೆಗೆ ನೀರು ಪೂರೈಕೆ ಹೇಗೆ ಎಂಬ ಚಿಂತೆಯಲ್ಲಿ ರಾಜ್ಯ ಸರ್ಕಾರ ಇದೆ. ಈ ಮಧ್ಯೆ ಕಷ್ಟಪಟ್ಟು ನೀರು ಪೂರೈಕೆ ಮಾಡುತ್ತಿದೆ. ಆದರೆ, ನೀರಿನ ಮಿತ ಬಳಕೆಯಾಗಲೀ, ವ್ಯರ್ಥವನ್ನು ನಿಲ್ಲಿಸುವುದಾಗಲೀ ಆಗುತ್ತಿಲ್ಲ. ಹೀಗಾಗಿ ಕೆಲವು ಕಡೆ ಕಠಿಣ ನಿರ್ಧಾರಕ್ಕೆ ಮುಂದಾಗಲಾಗಿದೆ. ನೀರಿನ ದುರ್ಬಳಕೆ ತಡೆಗಾಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದ್ದು, ತಪ್ಪು ಕಂಡುಬಂದಲ್ಲಿ 5 ಸಾವಿರ ರೂಪಾಯಿವರೆಗೆ ದಂಡ ವಿಧಿಸುವ ಎಚ್ಚರಿಕೆಯನ್ನು ನೀಡಲಾಗಿದೆ.

ಬೆಂಗಳೂರಿನ ಹೌಸಿಂಗ್ ಸೊಸೈಟಿಯೊಂದರಲ್ಲಿ (Housing Society) ಇಂತಹ ಕಠಿಣ ನಿಲುವನ್ನು ತಳೆಯಲಾಗಿದೆ. ಈ ಮೂಲಕ ನೀರಿನ ಬಗ್ಗೆ ಜಾಗೃತಿ ಮೂಡಿಸುವುದಲ್ಲದೆ, ಮಿತ ಬಳಕೆ, ಪೋಲಾಗುವುದನ್ನು ತಡೆಯಲು ಮುಂದಾಗಿದೆ.

ಅಪಾರ್ಟ್‌ಮೆಂಟ್‌ಗಳಲ್ಲಿ ಹೆಚ್ಚಿದ ನೀರಿನ ಸಮಸ್ಯೆ

ಬೆಂಗಳೂರಿನ ಅಪಾರ್ಟ್​ಮೆಂಟ್​ಗಳಲ್ಲಿ ನೀರಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ, ಇಲ್ಲಿ ಮನೆಗಳು ಹಾಗೂ ವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ನೀರಿನ ಬಳಕೆ ಸಹ ಹೆಚ್ಚಳವಾಗುತ್ತದೆ. ಇದರಿಂದ ತೀವ್ರ ಸಮಸ್ಯೆಯಾಗುತ್ತಿದೆ. ಈ ಕಾರಣಕ್ಕಾಗಿಯೇ ವೈಟ್‌ಫೀಲ್ಡ್, ಯಲಹಂಕ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ನೀರಿನ ಬಳಕೆ ಬಗ್ಗೆ ಕಠಿಣ ನಿಲುವನ್ನು ತಳೆಯಲಾಗಿದೆ. ಈಗಾಗಲೇ ವೈಟ್‌ಫೀಲ್ಡ್‌ನಲ್ಲಿರುವ ಪಾಮ್ ಮೆಡೋಸ್ ಹೌಸಿಂಗ್ ಸೊಸೈಟಿಯು ನಿವಾಸಿಗಳಿಗೆ ನೋಟಿಸ್‌ವೊಂದನ್ನು ಕಳುಹಿಸಿದೆ. ಕಳೆದ ನಾಲ್ಕು ದಿನಗಳಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ನೀರು ಸರಬರಾಜಾಗುತ್ತಿಲ್ಲ. ಹೀಗಾಗಿ ನೀರಿನ ಮಿತ ಬಳಕೆಯ ಅವಶ್ಯಕತೆ ಇದೆ ಎಂದು ಹೇಳಿದೆ. ಈಗ ಬೋರ್‌ವೆಲ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಶೀಘ್ರದಲ್ಲೇ ಬೋರ್‌ವೆಲ್‌ ಮೂಲದ ನೀರಿನ ಲಭ್ಯತೆಯೂ ಕುಸಿಯುವುದರಿಂದ ನೀರಿನ ದುರ್ಬಳಕೆಯಾಗದಂತೆ ಕ್ರಮ ವಹಿಸಿ ಎಂದು ಹೇಳಿದೆ.

ನೀರಿನ ಬಳಕೆಯಲ್ಲಿ ಶೇ. 20ರಷ್ಟು ಕಡಿತಗೊಳಿಸಲು ಸೂಚನೆ

ಈಗ ನೀರಿನ ಸಂಬಂಧ ತರ್ತು ಪರಿಸ್ಥಿತಿ ಎದುರಾಗಿದೆ. ಇದನ್ನು ಮೆಟ್ಟಿ ನಿಲ್ಲಬೇಕೆಂದರೆ ನೀರಿನ ಮಿತ ಬಳಕೆ ಅವಶ್ಯಕವಾಗಿದೆ. ಹೀಗಾಗಿ ಅಪಾರ್ಟ್ಮೆಂಟ್‌ ನಿವಾಸಿಗಳು ತಮ್ಮ ನೀರಿನ ಬಳಕೆಯಲ್ಲಿ ಶೇಕಡಾ 20 ರಷ್ಟನ್ನು ಕಡಿತಗೊಳಿಸಬೇಕು. ಇದನ್ನು ಉಲ್ಲಂಘಿಸಿದಲ್ಲಿ ದಂಡ ವಿಧಿಸಲಾಗುವುದು ಎಂದು ಸೊಸೈಟಿ ನೀಡಿದ ಎಚ್ಚರಿಕೆಯಲ್ಲಿ ಉಲ್ಲೇಖಿಸಲಾಗಿದೆ. ಇದರ ಜತೆಗೆ ನೀರಿನ ದುರ್ಬಳಕೆ ತಡೆಗೆ ಸಿಬ್ಬಂದಿಯನ್ನು ನೇಮಕ ಮಾಡುತ್ತಿದ್ದು, ಅವರು ಕಣ್ಗಾವಲಿಡಲಿದ್ದಾರೆ ಎಂದು ಎಚ್ಚರಿಕೆಯನ್ನು ನೀಡಿದೆ.

ಇದನ್ನೂ ಓದಿ: Water Crisis : ನಿಮ್ಮ ಏರಿಯಾದಲ್ಲಿ ಕುಡಿಯುವ ನೀರಿನ ಸಮಸ್ಯೆನಾ?; ಈ ಹೆಲ್ಪ್‌ಲೈನ್‌ ನಂಬರ್‌ಗೆ ಕಾಲ್‌ ಮಾಡಿ

ಕನಕಪುರದಲ್ಲೂ ನೀರಿಗೆ ಹಾಹಾಕಾರ

ಕನಕಪುರದ ಪ್ರೆಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್ಮೆಂಟ್‌ ಸಹ ನೀರಿನ ತೀವ್ರ ಅಭಾವವನ್ನು ಎದುರಿಸುತ್ತಿದೆ. ಇಲ್ಲಿ ಬರೋಬ್ಬರಿ 2,500 ಫ್ಲ್ಯಾಟ್​ಗಳಿವೆ. ಮನೆಗೆ ಕನಿಷ್ಠ ನಾಲ್ವರಂತೆ ಲೆಕ್ಕ ಹಾಕಿದರೂ 10 ಸಾವಿರ ನಿವಾಸಿಗಳು ಇಲ್ಲಾಗುತ್ತಾರೆ. ಪ್ರತಿಯೊಬ್ಬರ ನೀರಿನ ಬಳಕೆಯನ್ನು ಊಹಿಸಿಕೊಂಡರೆ ತೀರಾ ಹೆಚ್ಚಾಗುತ್ತದೆ. ಹೀಗಾಗಿ ಇಲ್ಲಿನ ನಿವಾಸಿಗಳಿಗೆ ನೀರಿನ ಮಿತ ಬಳಕೆ ಬಗ್ಗೆ ನೋಟಿಸ್‌ ನೀಡಲಾಗಿದೆ. ಹಾಲಿ ಓವರ್‌ಹೆಡ್‌ ಟ್ಯಾಂಕ್‌ಗಳಲ್ಲಿ ಮಾತ್ರ ನೀರು ಸಂಗ್ರಹವಾಗಿದೆ. ಆದರೆ, ಇದು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಅಪಾರ್ಟ್ಮೆಂಟ್ ಆಡಳಿತ ಮಂಡಳಿ ಹೇಳಿಬಿಟ್ಟಿದೆ.

Exit mobile version