ಬೆಂಗಳೂರು: ರಾಜ್ಯದ ಬೇಸಿಗೆ ಕಾಲ ಪ್ರಾರಂಭದಲ್ಲಿಯೇ ನೀರಿಗೆ ಹಾಹಾಕಾರ (water crisis) ಶುರುವಾಗಿದೆ. ಹಳ್ಳಿ ಹಳ್ಳಿಗಳಲ್ಲಿ ನೀರಿಗೆ ತತ್ವಾರ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆ ಇರುವ ಕಡೆಗೆ ಪೈಪ್‌ಲೈನ್ ಮೂಲಕ ನೀರು ಸರಬರಾಜು (Water supply through pipeline) ನಿರ್ಧಾರಕ್ಕೆ ಬರಲಾಗಿದೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಮಾರ್ಚ್, ಏಪ್ರಿಲ್‌ನಲ್ಲಿ ಮೇವು ಹಾಗೂ ನೀರಿನ ಕೊರತೆ (Water scarcity) ಇನ್ನಷ್ಟು ಜಾಸ್ತಿಯಾಗಲಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು, ಸಿಇಒಗಳು ಹಾಗೂ ಎಸಿಗಳ ಜತೆ ಸಭೆ ಮಾಡಿದ್ದೇನೆ. ಖಾಸಗಿ ಬೋರ್‌ವೆಲ್ (Borewell water) ಮೂಲಕ ನೀರು ಕೊಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಮೇವು ಮತ್ತು ನೀರಿನ ಸಮಸ್ಯೆ ಇನ್ನಷ್ಟು ಜಾಸ್ತಿ ಆಗಲಿರುವ ಹಿನ್ನೆಲೆಯಲ್ಲಿ ಈಗಾಗಲೇ ಟೆಂಡರ್ ಮಾಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಟೆಂಡರ್ ಆಗಿದೆ. ತಾಲೂಕು ಮತ್ತು ಪಂಚಾಯಿತಿ ವ್ಯಾಪ್ತಿಯಲ್ಲಿ ಟೆಂಡರ್ ಮಾಡಲು ಸೂಚಿಸಲಾಗಿದೆ. ಪೈಪ್‌ಲೈನ್ ಮೂಲಕ ನೀರು ಕೊಟ್ಟರೆ ಜನರಿಗೆ ಸಮಾಧಾನವಾಗಲಿದೆ. ಬಿಂದಿಗೆಯಲ್ಲಿ ನೀರು ಕೊಟ್ಟರೆ ಯಾವುದಕ್ಕೂ ಸಾಲುವುದಿಲ್ಲ. ಇರುವ ಖಾಸಗಿ ಬೋರ್‌ವೆಲ್ ಮೂಲಕ ನೀರು ಒದಗಿಸುವಂತೆ ಸೂಚಿಸಿದ್ದೇವೆ. ಈಗಾಗಲೇ 116 ಹಳ್ಳಿಯಲ್ಲಿ 175 ಟ್ರಿಪ್ ನೀರು ಕೊಡುತ್ತಿದ್ದೇವೆ. 382 ಹಳ್ಳಿಗಳಲ್ಲಿ ಬಾಡಿಗೆ ಬೋರ್‌ವೆಲ್ ಮೂಲಕ ನೀರು ಕೊಡುತ್ತಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.
ನಗರ ಪ್ರದೇಶಗಳ 52 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಇದೆ. 1272 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಆಗಬಾರದು. 7200 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಆಗಬಹುದು. ಹೀಗಾಗಿ ಈಗಾಗಲೇ 7080 ಖಾಸಗಿ ಬೋರ್‌ವೆಲ್‌ಗಳನ್ನು ನೋಡಿದ್ದೇವೆ. ಮೇವು ಖರೀದಿಗೆ ಟೆಂಡರ್ ಆಗಿದೆ. ಜಿಲ್ಲೆಗೆ ಒಂದು ಗೋಶಾಲೆ ತೆರೆಯಲು ನಿರ್ಧಾರ ಮಾಡಲಾಗಿದೆ. ಹೋಬಳಿ ಮಟ್ಟದಲ್ಲಿ ಗೋಶಾಲೆ ಇಲ್ಲವೇ ಮೇವಿನ ಬ್ಯಾಂಕ್ ತೆರೆಯಲು ಸೂಚಿಸಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಹಿಂದಿನ ನೀರಿನ ಬಿಲ್ ಕೊಡುತ್ತೇವೆ
ನವೆಂಬರ್ ಬಳಿಕ ಖಾಸಗಿ ಬೋರ್‌ವೆಲ್ ಮೂಲಕ ನೀರು ಪೂರೈಕೆ ಮಾಡಿದ್ದರೆ ನಾವು ಅದರ ಹಣವನ್ನು ನೀಡುತ್ತೇವೆ. ಅದಕ್ಕಿಂತ ಹಳೆಯ ಬಿಲ್‌ಗೆ ಪಾವತಿ ಮಾಡುವುದಿಲ್ಲ. ಇದನ್ನು ಜಿಲ್ಲಾಧಿಕಾರಿಗಳು ನಿರ್ವಹಣೆ ಮಾಡಲಿದ್ದಾರೆ. ಇನ್ನು ಹತ್ತು ದಿನಗಳ ಒಳಗೆ ನವೆಂಬರ್ ಬಳಿಕ ಪಡೆದ ಬೋರ್ವೆಲ್ ನೀರು ಪೂರೈಕೆಗೆ ಹಣ ಕೊಡಲು ಸೂಚಿಸಿದ್ದೇನೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಬೆಂಗಳೂರಲ್ಲೂ ನೀರಿನ ಸಮಸ್ಯೆ
ಬೆಂಗಳೂರು ನೀರಿನ ಸಮಸ್ಯೆ ಬಗ್ಗೆ ಚರ್ಚೆ ಆಗುತ್ತಿದೆ. ಕಂದಾಯ ಇಲಾಖೆಯಿಂದ ನೀರು ಕೊಡುತ್ತೇವೆ. ಬಿಬಿಎಂಪಿ ಜತೆ ಸೇರಿ ನೀರು ಪೂರೈಕೆಗೆ ಕ್ರಮವಹಿಸಲಾಗುತ್ತಿದೆ. ಟ್ಯಾಂಕರ್ ನೀರಿಗೆ ದುಬಾರಿ ಹಣ ಪಡೆಯುತ್ತಿರುವ ವಿಚಾರ ನಮ್ಮ ಗಮನಕ್ಕೆ ಬಂದಿದ್ದು, ಇದನ್ನು ತಡೆಯಲು ಬಿಬಿಎಂಪಿ ಮುಂದಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.
ಶೀಘ್ರ ಸರ್ವೆಯರ್‌ಗಳ ನೇಮಕ
ನಾವು ಸರ್ವೆಗೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ. ಸರ್ಕಾರಿ ಭೂಮಿ ಮಂಜೂರಾಗಿರುತ್ತದೆ. ಆದರೆ, ಅವರಿಗೆ ಪೋಡಿ ಆಗಿರುವುದಿಲ್ಲ. ಇದರ ಬಗ್ಗೆ ಹೆಚ್ಚಿನ ಗಮನ ನೀಡುತ್ತೇವೆ. 991 ಪರವಾನಗಿ ಪಡೆದಿರುವ ಸರ್ವೆಯರ್‌ಗಳನ್ನು ಎಲ್ಲ ಜಿಲ್ಲೆಗೆ ಒದಗಿಸುತ್ತೇವೆ. 364 ಮಂದಿಯನ್ನು ಸರ್ಕಾರದಿಂದ ನೇಮಕ ಮಾಡಿಕೊಳ್ಳಲಾಗುತ್ತದೆ. ಕೆಪಿಎಸ್‌ಸಿಯಿಂದ ನೇಮಕ ಪ್ರಕ್ರಿಯೆ ನಡೆಸಲಾಗುತ್ತದೆ. ಈ ಸಂಬಂಧ ಶೀಘ್ರವೇ ನೋಟಿಫಿಕೇಶನ್ ಹೊರಬೀಳಲಿದೆ. 27 ಸರ್ವೆ ಅಸಿಸ್ಟೆಂಟ್ ಡೈರೆಕ್ಟರ್‌ಗಳ ನೇಮಕ ನಡೆಯಲಿದೆ. ಪ್ರತಿಯೊಂದು ತಾಲೂಕಿಗೆ ಆಧುನಿಕ ಉಪಕರಣವನ್ನು ನೀಡಲಾಗುತ್ತದೆ. 18 ಕೋಟಿ ರೂ. ವೆಚ್ಚದಲ್ಲಿ ರೋವರ್ಸ್ ಖರೀದಿ ಮಾಡಲಾಗುತ್ತದೆ. ಎರಡು ತಿಂಗಳಲ್ಲಿ ಆರ್‌ಟಿಸಿ ಆಕಾರಬಂದ್ ನಿಗದಿ ಪಡಿಸಲು ಸೂಚನೆ ನೀಡಿದ್ದೇನೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಇದನ್ನೂ ಓದಿ: Arecanut Price: ಅಡಿಕೆ ಧಾರಣೆಯಲ್ಲಿ ದಿಢೀರ್ ಕುಸಿತ; ಬೆಲೆ ಇಳಿಕೆಗೆ ಅಕ್ರಮ ಸಾಗಣೆ ಕಾರಣವೇ?
ತಹಸೀಲ್ದಾರ್ ಕೋರ್ಟ್‌ನಲಿ ಶೀಘ್ರ ಇತ್ಯರ್ಥ
ತಹಸೀಲ್ದಾರ್ ಕೋರ್ಟ್‌ನಲ್ಲಿ ಕೇಸ್ ಇತ್ಯರ್ಥಕ್ಕೆ 212 ದಿನ ತೆಗೆದುಕೊಳ್ಳುತ್ತಿತ್ತು. ಸರ್ಕಾರದ ಗೈಡ್‌ಲೈನ್‌ನಲ್ಲಿರೋದು 62 ದಿನವಾಗಿದೆ. ಈಗ 92 ದಿನದಲ್ಲೇ ಕ್ಲಿಯರ್ ಮಾಡುತ್ತಿದ್ದೇವೆ. 70 ದಿನದಲ್ಲಿ ಕೇಸ್ ಇತ್ಯರ್ಥಕ್ಕೆ ಮುಂದಾಗಿದ್ದೇವೆ. 2215 ಕೇಸ್‌ಗಳು ವರ್ಷವಾದರೂ ಇತ್ಯರ್ಥವಾಗದೇ ಇದ್ದವು. ಈಗ ಒಂದು ವರ್ಷದಲ್ಲಿ ಎಲ್ಲ ಕೇಸ್ ಕ್ಲಿಯರ್ ಮಾಡಿದ್ದೇವೆ. ಎಸಿ ಕೋರ್ಟ್‌ನಲ್ಲಿ 5 ವರ್ಷಕ್ಕಿಂತ ಹಿಂದಿನ ಕೇಸ್‌ಗಳು ಬಾಕಿ ಇವೆ. 32787 ಕೇಸ್‌ಗಳು ಪೆಂಡಿಂಗ್ ಇದ್ದವು. ಈಗ ಕೇವಲ 7000 ಕೇಸ್‌ಗಳು ಮಾತ್ರ ಪೆಂಡಿಂಗ್ ಇವೆ. 20, 25 ಸಾವಿರ ಕೇಸ್‌ಗಳನ್ನು ಕ್ಲಿಯರ್ ಮಾಡಿದ್ದೇವೆ ಎಂದು ಕೃಷ್ಣ ಬೈರೇಗೌಡ ಹೇಳಿದರು.