ಬೆಂಗಳೂರು: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜಲಕ್ಷಾಮದ (Water Crisis) ಲಾಭ ಪಡೆದು ನಾಗರಿಕರನ್ನು ಹಿಂಡುತ್ತಿರುವ ವಾಟರ್ ಟ್ಯಾಂಕರ್ ಮಾಫಿಯಾಕ್ಕೆ (Water Tanker Mafia) ಸರ್ಕಾರ ಕೊನೆಗೂ ಬ್ರೇಕ್ ಹಾಕಿದೆ. ಜಿಲ್ಲಾಡಳಿತ ಕೊನೆಗೂ ಟ್ಯಾಂಕರ್ ನೀರಿಗೆ ದರ ಫಿಕ್ಸ್ (Water rate fix) ಮಾಡಿ ಆದೇಶ ಹೊರಡಿಸಿದೆ. ಕಳೆದ ಎರಡು ವಾರದ ಅವಧಿಯಲ್ಲಿ ಮೂರು ನಾಲ್ಕು ಬಾರಿ ಟ್ಯಾಂಕರ್ ಮಾಲೀಕರ ಜೊತೆ ಸಭೆ ನಡೆಸಿದ ಜಿಲ್ಲಾಡಳಿತ ಇದೀಗ (Bangalore District Administration) ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ದರ ನಿಗದಿ ಮಾಡಿ ಆದೇಶ ಹೊರಡಿಸಿದೆ.
ಜಿಲ್ಲಾಡಳಿತ ನಿಗದಿ ಮಾಡಿದ ಹೊಸ ದರ ಹೀಗಿದೆ.
6 ಸಾವಿರ ಲೀಟರ್‌ನ ಟ್ಯಾಂಕರ್
5 ಕಿಲೋ ಮೀಟರ್ ಒಳಗೆ 600 ರೂ.
5ರಿಂದ 10 ಕಿ.ಮೀ.ವರೆಗೆ 750 ರೂ.
8 ಸಾವಿರ ಲೀಟರ್ ಟ್ಯಾಂಕರ್
5 ಕಿ.ಮೀಟರ್ ಒಳಗೆ ₹ 700 ದರ ನಿಗದಿ
5ರಿಂದ 10 ಕಿ.ಮೀ.ವರೆಗೆ 850 ರೂ. ನಿಗದಿ
12 ಸಾವಿರ ಲೀಟರ್ ಟ್ಯಾಂಕರ್
5 ಕಿ.ಮೀಟರ್ ಒಳಗೆ ₹ 1000 ದರ ನಿಗದಿ
5ರಿಂದ 10 ಕಿ.ಮೀ.ವರೆಗೆ 1250 ರೂ. ನಿಗದಿ
ತಿಂಗಳ ಬಾಡಿಗೆ ಒಪ್ಪಿಕೊಳ್ಳುವವರಿಗೆ 5 ಕಿ.ಮೀಟರ್ ಗೆ 510 ರೂ ಮತ್ತು 10 ಕಿಲೋ ಮೀಟರ್ ದೂರ ಹೋದರೆ 650 ರೂ. ದರ ಫಿಕ್ಸ್ ಮಾಡಲಾಗಿದೆ.
ಇದನ್ನೂ ಓದಿ: Save Water: ಸ್ನಾನಕ್ಕೆ ಅರ್ಧ ಬಕೆಟ್ ನೀರು ಬಳಸಿ; ಇದು ಬೆಂಗಳೂರಿನ ಅಪಾರ್ಟ್‌ಮೆಂಟ್ ಫರ್ಮಾನು!
ವಿಪರೀತ ಹಣ ವಸೂಲಿ ಆರೋಪ
ಬೆಂಗಳೂರಿನಲ್ಲಿ ಕಾವೇರಿ ನೀರಿನ ಪೂರೈಕೆಯೂ ಕಡಿಮೆಯಾಗುತ್ತಿದೆ. ಹಣ ಕೊಟ್ಟು ನೀರು ತರುವ ಶುದ್ಧ ನೀರಿನ ಘಟಕದಲ್ಲೂ ಈಗ ನೀರಿಗೆ ರೇಷನ್ ಶುರುವಾಗಿದೆ. ಬೋರ್‌ವೆಲ್‌ಗಳು ಬತ್ತಿ ಹೋಗುತ್ತಿವೆ. ಹೀಗಾಗಿ ಜನರಿಗೆ ನೀರಿನ ತೀವ್ರ ಅಗತ್ಯ ಇರುವುದನ್ನು ಮನಗಂಡಿರುವ ಜಲ ಮಾಫಿಯಾಗಳು ಒಮ್ಮೆಗೇ ದರವನ್ನು ಹೆಚ್ಚಿಸಿ ಕುಳಿತಿದ್ದವು. ಈ ನಡುವೆ ಜಿಲ್ಲಾಡಳಿತ ಹಲವು ಸುತ್ತಿನ ಚರ್ಚೆ ನಡೆಸಿದರೂ ಫಲ ನೀಡಿರಲಿಲ್ಲ.
ನಮಗೇ ಸರಿಯಾಗಿ ನೀರು ಸಿಗುತ್ತಿಲ್ಲ. ಎಲ್ಲೆಲ್ಲಿಂದಲೋ ನೀರು ತರಬೇಕಾಗಿದೆ. ನಾವು ಕೂಡಾ ದುಬಾರಿ ದರ ಕೊಡಬೇಕಾಗಿದೆ. ಹೀಗಾಗಿ ಭಾರಿ ಸಮಸ್ಯೆ ಎದುರಿಸುತ್ತಿದ್ದೇವೆ ಎಂಬ ವಾದವನ್ನು ಟ್ಯಾಂಕರ್ ಮಾಲೀಕರು ನೀಡುತ್ತಿದ್ದರು.