ಬೆಂಗಳೂರು: ಬಿರು ಬೇಸಿಗೆಗೆ ತತ್ತರಿಸಿರುವ ಮಂದಿಗೆ ನೀರಿನ ಕೊರತೆಯ (Water Crisis) ಶಾಕ್ ಎದುರಾಗಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ನೀರಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ. ಆದರೆ ಇದರ ನಡುವೆ ಬೆಂಗಳೂರಲ್ಲಿ ಕುಡಿಯುವ ನೀರಿಗೆ ಯಾವುದೇ ಕೊರತೆ ಇಲ್ಲ ಎಂದು ಬಿಡಬ್ಲೂಎಸ್‌ಎಸ್‌ಬಿ ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್ ತಿಳಿಸಿದ್ದಾರೆ.
ಶನಿವಾರ ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು, ಬರಗಾಲದ ಸಂದರ್ಭದಲ್ಲಿ ಹಲವು ವದಂತಿಗಳು ಹರಿದಾಡುತ್ತಿದ್ದು, ನೀರಿನ ವಿಚಾರಕ್ಕೆ ಜನರಲ್ಲಿ ಆತಂಕ ಹೆಚ್ಚಾಗಿದೆ. ಆದರೆ ಜಲಮಂಡಳಿ ವತಿಯಿಂದ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಮಾಡುತ್ತಿದ್ದೇವೆ ಎಂದರು.
1972-2012ರ ವರೆಗೆ ಕಾವೇರಿಯ ವಿವಿಧ ಹಂತದ ಯೋಜನೆ ಜಾರಿ ಮಾಡಿದ್ದೇವೆ. ಸುಮಾರು 1.54 ಟಿಎಂಸಿ ನೀರು ಪ್ರತಿ ತಿಂಗಳು ನೀರಿನ ಅವಶ್ಯಕತೆ ಇದೆ. ಜುಲೈವರೆಗೆ ಇಡೀ ಕರ್ನಾಟಕ ಜನರಿಗೆ ಕುಡಿಯುವ ನೀರು 17 ಟಿಎಂಸಿ ಬೇಕಿದೆ. ಬೆಂಗಳೂರು ನಗರಕ್ಕೆ ಮೊದಲಿನಂತೆ ಕಾವೇರಿ ನೀರು ಪೂರೈಕೆ ಮಾಡಲಾಗುತ್ತಿದೆ. ಜತೆಗೆ ಕುಡಿಯುವ ನೀರಿನ ಅವಶ್ಯಕತೆಗಿಂತ ಎರಡು ಪಟ್ಟು ನೀರು ಕೆಆರ್‌ಎಸ್ (KRS) ಡ್ಯಾಂನಲ್ಲಿದೆ. ನಾವು 1,470 ಎಂಎಲ್‌ಡಿ (MLD) ನೀರನ್ನು ಪಂಪ್ ಮಾಡಲಾಗುತ್ತಿದೆ. 2,100 ಎಂಎಲ್‌ಡಿ ನೀರು ನಗರ ವಾಸಿಗಳಿಗೆ ಬೇಕಿದೆ. 1,450 ನೀರನ್ನು ಪ್ರತಿ ನಿತ್ಯ ಪಂಪ್ ಮಾಡಲಾಗುತ್ತಿದೆ. ಹೆಚ್ಚುವರಿ 110 ಹಳ್ಳಿಗಳಿಗೆ ನೀರು ಕೊಡುವ ಕಾರ್ಯ ಸಹ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: Water crisis : ತೊಳೆಯೋಕೆ, ಕುಡಿಯೋಕೆ ನೀರಿಲ್ಲ.. ಬಂಧುಗಳೇ ಜಾತ್ರೆಗೆ ಬರಬೇಡಿ!
ಅಪಾರ್ಟ್‌ಮೆಂಟ್ ನಿವಾಸಿಗಳಿಗಷ್ಟೇ ಸಂಕಷ್ಟ!
ಬೆಂಗಳೂರು ನಗರ ಹಾಗೂ ಹೊರವಲಯದ ಅಪಾರ್ಟ್‌ಮೆಂಟ್ ನಿವಾಸಿಗಳಿಗಷ್ಟೇ ನೀರಿನ ಸಮಸ್ಯೆ ಗಾಢವಾಗಿದೆ. ಕೆಲವು ಕಡೆ ಟ್ಯಾಂಕರ್‌ಗಳ ಮೂಲಕ ನೀರಿನ ಸರಬರಾಜನ್ನು ಮಾಡಲಾಗುತ್ತಿದೆ. ಇದಕ್ಕೆ ದುಬಾರಿ ಹಣ ತೆರಲಾಗುತ್ತಿದೆ. ಇನ್ನು ಕೆಲವು ಕಡೆ ದುಡ್ಡು ಕೊಡುತ್ತೇವೆ ಎಂದರೂ ನೀರು ಸಿಗದ ಪರಿಸ್ಥಿತಿಯೂ ಇದೆ. ನೀರಿಗೆ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಅಗತ್ಯ ಇರುವ ಕಡೆ ಪೂರೈಕೆ ಮಾಡಲೂ ಸಾಧ್ಯವಾಗದಷ್ಟು ಸಮಸ್ಯೆ ಆಗುತ್ತಿದೆ.
ಅಂದಹಾಗೇ ಈ ನೀರಿನ ಹಾಹಾಕಾರ ಅಪಾರ್ಟ್‌ಮೆಂಟ್‌ಗಳಲ್ಲಿ ಇದೆ ಎಂದು ರಾಮ್ ಪ್ರಸಾದ್ ಮನೋಹರ್ ತಿಳಿಸಿದ್ದಾರೆ. ಬೆಂಗಳೂರು ಸುತ್ತಮುತ್ತ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿತ ಕಂಡಿದೆ. ಈ ಮೊದಲು ಅಪಾರ್ಟ್‌ಮೆಂಟ್ ನಿವಾಸಿಗಳು ಬೋರ್‌ವೆಲ್ ನೀರನ್ನು ಅವಲಂಬನೆ ಮಾಡಿದರು. ಈಗ ಬೋರ್ ವೆಲ್ ನೀರು ಬಾರದೇ ಇರುವುದರಿಂದ ಬೇಸಿಗೆಯಲ್ಲಿ ಮಾತ್ರ ಜಲಮಂಡಳಿ ಮೇಲೆ ಅವಲಂಬಿತರಾಗಿದ್ದಾರೆ. ಹೀಗಾಗಿ ಅಲ್ಲೆಲ್ಲ ನೀರಿನ ಸಮಸ್ಯೆ ಎದುರಾಗಿದೆ. ಇನ್ನೂ ಅಪಾರ್ಟ್‌ಮೆಂಟ್ ನಿವಾಸಿಗಳು ಸಂಪುಗಳಿಗೆ ನೀರು ತುಂಬಿ ಎಂದು ಕೇಳುತ್ತಿದ್ದಾರೆ, ಆದರೆ ಅದು ಕಷ್ಟ ಸಾಧ್ಯ. ಕುಡಿಯುವ ಉದ್ದೇಶ ಬಿಟ್ಟು ಬೇರೆ ಉದ್ದೇಶದ ಕಾರ್ಯಕ್ಕೆ ಸಂಸ್ಕರಿತ ನೀರು ಕೊಡಲು ಸಿದ್ಧ ಇದ್ದೇವೆ.
ರಿಯಾಯಿತಿ ದರಲ್ಲಿ ಸಂಸ್ಕರಿಸಿದ ನೀರು ಲಭ್ಯ
ಬೆಂಗಳೂರು ಪೂರ್ವದಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದೆ. ಹೀಗಾಗಿ ಅಲ್ಲಿ ಬೆಳ್ಳಂದೂರು ಹಾಗೂ ವರ್ತೂರು ಕೆರೆ ಸುಧಾರಣೆ ಆಗಬೇಕಿದೆ. ಪ್ರತಿ ನಿತ್ಯಕ್ಕೆ 1300 ಎಂಎಲ್‌ಡಿ ಸಂಸ್ಕರಿತ ನೀರು ಇದ್ದು, ಅದನ್ನು ಸದ್ಭಳಕೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಮಾ.11ರ ಸೋಮವಾರದಿಂದ ಎಲ್ಲೆಲ್ಲಿ ಆಸಕ್ತಿ ಇದೆಯೋ ಅಲ್ಲಿಗೆ ಸಂಸ್ಕರಿಸಿದ ನೀರು ಕೊಡುತ್ತೇವೆ. ಅದು ಕೂಡ ರಿಯಾಯಿತಿ ದರದಲ್ಲಿ ಕೊಡಲು ವ್ಯವಸ್ಥೆ ಮಾಡುತ್ತೇವೆ ಎಂದು ರಾಮ್ ಪ್ರಸಾದ್ ಮನೋಹರ್ ತಿಳಿಸಿದ್ದಾರೆ. ಮೇ ತಿಂಗಳಲ್ಲಿ ಕಾವೇರಿ ಐದನೇ ಹಂತದ ಲೋಕಾರ್ಪಣೆ ಮಾಡಲಿದ್ದೇವೆ. ಕಾವೇರಿ ಐದನೇ ಹಂತದ ಮೂಲಕ 775 MLD ನೀರು ಕೊಡುವ ಕೊಡಲಿದ್ದೇವೆ ಎಂದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ