ಬೆಂಗಳೂರು: ಜೀವಜಲವು ಯಾರ್ಯಾರಿಗೆ ಹೇಗೆಲ್ಲ ತೊಂದರೆಯನ್ನುಂಟು ಮಾಡುತ್ತಿದೆ ಅಂದರೆ ಲಕ್ಷಾಂತರ ರೂ. ಸಂಬಳ ಪಡೆಯುವ ಸಾಫ್ಟ್‌ವೇರ್ ಉದ್ಯೋಗಿಯ ಗೋಳು ಹೇಳತೀರದು.. ಸಿಲಿಕಾನ್ ಸಿಟಿ ಬೆಂಗಳೂರನಲ್ಲಿ ಕುಡಿಯಲು ನೀರಿಲ್ಲ (Water Crisis) ಎಂಬ ಕಾರಣಕ್ಕೆ ವರನಿಗೆ (IT employee) ವಧುವೇ ಸಿಗುತ್ತಿಲ್ಲವಂತೆ..
ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಮದುವೆ ಆಗಲು ಹೆಣ್ಣು ಕೊಡುತ್ತಿಲ್ಲ ಎಂದು ಸಾಫ್ಟ್‌ವೇರ್ ಕುವರ ಕಂಗಲಾಗಿದ್ದಾನೆ. ಐಟಿ ಉದ್ಯೋಗಿ ಆದರೂ ಕರಿಮಣಿ ಮಾಲೀಕನಾಗದ ನನ್ನ ಸ್ನೇಹಿತನ ಸಮಸ್ಯೆಯನ್ನು ಬಗೆಹರಿಸಿ ಪ್ಲೀಸ್ ಎಂದು ಸೋಶಿಯಲ್ ಮೀಡಿಯಾದಲ್ಲಿ ನರೇಂದ್ರ ಎಂಬ ಯುವಕನೊರ್ವ ಮನವಿ ಮಾಡಿದ್ದಾನೆ.
ಟ್ವಿಟರ್‌ನ (ಎಕ್ಸ್) ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಟ್ಯಾಗ್ ಮಾಡಿದ್ದಾರೆ. ನೀರಿನ ಸಮಸ್ಯೆ ಮುಕ್ತಗೊಳಿಸಿ ಎಂದು ಮನವಿ ಮಾಡಿದ್ದಾರೆ. ಸ್ನೇಹಿತನಿಗೆ ಸಿಗದ ಶಾದಿ ಭಾಗ್ಯದ ನೋವನ್ನು ನರೇಂದ್ರ ಹೊರ ಹಾಕಿದ್ದಾರೆ. ಜಲ ಕಂಟಕ ಎದುರಿಸುತ್ತಿರುವ ಕಾರಣಕ್ಕೆ ಹೆಣ್ಣು ಮಕ್ಕಳು ಬೆಂಗಳೂರಿನ ಉದ್ಯೋಗಿ ಬೇಡ ಎನ್ನುತ್ತಿದ್ದರಂತೆ.
ಇದನ್ನೂ ಓದಿ: Water Crisis: ಕುಡಿಯುವ ನೀರಿನ ದಂಧೆಗೆ ಬ್ರೇಕ್; ಮುಂದಿನ ತಿಂಗಳೇ ಕಾವೇರಿ 5ನೇ ಹಂತ ಪೂರ್ಣವೆಂದ ಡಿಕೆಶಿ
ಟ್ವೀಟ್‌ನಲ್ಲಿ ಏನಿದೆ?
ರಾಹುಲ್ ಗಾಂಧಿಯವರೇ ದಯವಿಟ್ಟು ಗಮನಿಸಿ, ಆದ್ಯತೆಯ ಮೇರೆಗೆ ಬೆಂಗಳೂರಿನ ನೀರಿನ ಸಮಸ್ಯೆ ಬಗೆಹರಿಸಿ. ಸಿಲಿಕಾನ್ ಸಿಟಿಯಲ್ಲಿ ಐಟಿ ಉದ್ಯಮದಲ್ಲಿ ಸ್ನೇಹಿತನೊಬ್ಬ ಕೆಲಸ ಮಾಡುತ್ತಿದ್ದಾನೆ. ನನ್ನ ಗೆಳೆಯ ಮದುವೆಯಾಗಲು ಸಿದ್ಧವಿದ್ದು, ವಧುವಿನ ಹುಡುಕಾಟದಲ್ಲಿದ್ದಾನೆ. ಎಷ್ಟೇ ಹುಡುಕಿದರೂ ವಧು ಸಿಗುತ್ತಿಲ್ಲ. ನೀರಿನ ಸಮಸ್ಯೆಯಿಂದಾಗಿ ಯಾವುದೇ ಹುಡುಗಿಯರು ಬೆಂಗಳೂರು ಉದ್ಯೋಗಿಯೊಂದಿಗೆ ಮದುವೆಯಾಗಲು ಸಿದ್ಧರಿಲ್ಲ. ಹೀಗಾಗಿ ಈ ಸಮಸ್ಯೆಯನ್ನು ಬಗೆಹರಿಸಿ ಎಂದು ಎಕ್ಸ್ ಮೂಲಕ ತಿಳಿಸಿದ್ದಾರೆ.
ಇತ್ತ ಸೋಶಿಯಲ್ ಮೀಡಿಯಾದಲ್ಲಿ ಇದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರೂ ತರಹೇವಾರಿ ಕಾಮೆಂಟ್‌ಗಳನ್ನು ಹಾಕಿದ್ದಾರೆ. ಕೆಲವರು ನಿನ್ನ ಸ್ನೇಹಿತನಿಗೆ ಜೂನ್‌ವರೆಗೆ ಕಾಯಲು ಹೇಳಪ್ಪಾ, ನೀರಿನ ಸಮಸ್ಯೆ ಕಡಿಮೆ ಆಗುತ್ತೆ ಎಂದು ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ