Site icon Vistara News

Water Price Hike: ಎಷ್ಟೇ ವಿರೋಧ ಬಂದರೂ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಖಚಿತ; ಡಿ.ಕೆ.ಶಿವಕುಮಾರ್

Water Price hike

ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ 12-13 ವರ್ಷಗಳಿಂದ ನೀರಿನ ದರ ಹೆಚ್ಚಳ ಮಾಡಿಲ್ಲ. ಆದರೂ ಬಿಡಬ್ಲ್ಯೂ ಎಸ್‌ಎಸ್‌ಬಿ ಕಷ್ಟಪಟ್ಟು ನಿರ್ವಹಣೆ ಮಾಡುತ್ತಿದೆ. ಯಾರೇ ಆಕ್ಷೇಪ ವ್ಯಕ್ತಪಡಿಸಿದರೂ ನೀರಿನ ದರ ಏರಿಕೆ (Water Price Hike) ಅನಿವಾರ್ಯ. ಅದನ್ನು ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ವಿಧಾನಸೌಧದ ಆವರಣದಲ್ಲಿ ಗುರುವಾರ ನಡೆದ “ಬಾಗಿಲಿಗೆ ಬರಲಿದೆ ಕಾವೇರಿ ಸಂಪರ್ಕ, 110 ಹಳ್ಳಿಗಳಿಗೆ ಕಾವೇರಿ ನೀರಿನ ಸಂಪರ್ಕ” ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇದನ್ನೂ ಓದಿ: CLP Meeting: ಮುಡಾ ಹಗರಣ; ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಪರ ನಿಂತ ಶಾಸಕರು

ರಾಜಧಾನಿಯ 1.40 ಕೋಟಿ ಜನಸಂಖ್ಯೆಗೆ ನೀರನ್ನು ಒದಗಿಸಲೇ ಬೇಕು. ಇದಕ್ಕಾಗಿ ಸಾಲ ಮಾಡಿ, ಸಂಪರ್ಕ ಜಾಲವನ್ನು ಹೆಚ್ಚಿಸದ ಹೊರತು ನೀರು ಕೊಡಲು ಕಷ್ಟವಾಗುತ್ತದೆ. ದರ ಹೆಚ್ಚಳ ಮಾಡದಿದ್ದರೇ ನೀರು ಸರಬರಾಜು ಕಂಪನಿ ಉಳಿಯುವುದಿಲ್ಲ, ನೌಕರರು ಬದುಕಲು ಆಗುವುದಿಲ್ಲ. ಸಂಸ್ಥೆಗೆ ವಿದ್ಯುತ್ ಬಿಲ್ ಕಟ್ಟಲು ಆಗುತ್ತಿಲ್ಲ. ಎಲ್ಲರಿಗೂ ನೀರಿನ ದರ ಹೆಚ್ಚಳ ಮಾಡುವುದಿಲ್ಲ. ಎಷ್ಟು ಏರಿಕೆ ಮಾಡಬೇಕು ಎಂದು ಇನ್ನೂ ನಿರ್ಧರಿಸಿಲ್ಲ. ಚರ್ಚೆ ಮಾಡಲಿ. ಧರಣಿ ಮಾಡಲಿ ನಾನು ಇದಕ್ಕೆ ಬದ್ಧವಾಗಿದ್ದೇನೆ ಎಂದು ಹೇಳಿದರು.

ಇಲಾಖೆಗೆ ಪ್ರತ್ಯೇಕ ವಿದ್ಯುತ್ ತಯಾರಿಕಾ ಕಂಪನಿ

14 ವರ್ಷಗಳಲ್ಲಿ ಸಾಕಷ್ಟು ಬಾರಿ ವಿದ್ಯುತ್ ಬಿಲ್ ಹೆಚ್ಚಳವಾಗಿದೆ. ಇದಕ್ಕಾಗಿ ಇಲಾಖೆಯದ್ದೇ ಪ್ರತ್ಯೇಕ ಕಂಪನಿ ಸ್ಥಾಪಿಸಿ ನೀವೇ ಸೋಲಾರ್ ಸೇರಿದಂತೆ ಇತರೇ ಮೂಲಗಳಿಂದ ವಿದ್ಯುತ್ ತಯಾರಿಸಿದರೆ ಹಣ ಉಳಿತಾಯವಾಗುತ್ತದೆ. ಬೆಂಗಳೂರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಜಂಟಿಯಾಗಿ ಈ ಕಾರ್ಯಕ್ರಮ ರೂಪಿಸಬಹುದು. ದೂರಾಲೋಚನೆ ಇಟ್ಟುಕೊಂಡು ಈಗಾಗಲೇ ಕಂಪನಿ ಸಿದ್ಧಪಡಿಸಲಾಗಿದೆ. ಪಾವಗಡದಲ್ಲಿ ಸೋಲಾರ್ ಪಾರ್ಕ್ ಮಾಡಿದ ಕಾರಣಕ್ಕೆ ಮೂರುವರೆ ರೂಪಾಯಿಗೆ ವಿದ್ಯುತ್ ಸಿಗುತ್ತಿದೆ. ಆಗ ಹಲವರು ತಲೆಕೆಟ್ಟಿದೆಯಾ ಎಂದು ಆಡಿಕೊಂಡರು. ಇದರಿಂದ ಸರಬರಾಜು ಮಾಡುವ ಖರ್ಚು ಉಳಿತಾಯವಾಗಿದೆ ಎಂದು ಹೇಳಿದರು.

ನಾನಿರುವ ತನಕ ಖಾಸಗೀಕರಣ ಆಗುವುದಿಲ್ಲ

ಬಿಡಬ್ಲ್ಯೂ ಎಸ್‌ಎಸ್‌ಬಿ ನನ್ನ ಬಳಿಯೇ ಇರುವ ಕಾರಣ ಅನೇಕರು ನೂತನ ಯೋಜನೆ ಕುರಿತು ಚರ್ಚೆ ನಡೆಸಲು ಬಂದರು. ಈ ಹಿಂದೆ ಇಂಧನ ಇಲಾಖೆಯಲ್ಲಿ ಇದ್ದಾಗಲು ಇದೇ ಪ್ರಸ್ತಾವನೆ ಬಂದಿತ್ತು. ಮುಂಬೈ ಸೇರಿದಂತೆ ಇತರೆಡೆ ಅದಾನಿ ಹಾಗೂ ಇತರೆ ಕಂಪೆನಿಗಳು ವಿದ್ಯುತ್ ಸರಬರಾಜು ಮಾಡುತ್ತಿವೆ. ನಾನು ಇರುವ ತನಕ ಇದೆಲ್ಲವೂ ಸಾಧ್ಯವಿಲ್ಲ. ಈ ವಿಚಾರ ಇಲ್ಲಿಗೆ ಬಿಟ್ಟುಬಿಡಿ, ಇದರ ಸುದ್ದಿಗೆ ಬರಬೇಡಿ ಎಂದು ವಾಪಸ್ ಕಳುಹಿಸಿದೆ ಎಂದರು.

ಜಲ ಹಾಗೂ ಇಂಧನ ಇವೆರಡೂ ಬಹಳ ಮುಖ್ಯವಾದವುಗಳು. ಈ ಹಿಂದೆ ನಾನು ಇಂಧನ ಸಚಿವನಾಗಿದ್ದೆ. ಈಗ ನೀರಾವರಿ ಸಚಿವನಾಗಿದ್ದೇನೆ. ಜೆ.ಎಚ್. ಪಟೇಲ್ ಅವರ ಕಾಲದಲ್ಲಿ ನೀರು ಸರಬರಾಜನ್ನು ಖಾಸಗಿಯವರಿಗೆ ನೀಡಬೇಕು ಎನ್ನುವ ಪ್ರಸ್ತಾವನೆ ಬಂದಿತ್ತು. ನಂತರ ಎಸ್.ಎಂ ಕೃಷ್ಣ ಅವರ ಸರ್ಕಾರದಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗಲೂ ಈ ಬಗ್ಗೆ ದೊಡ್ಡ ಚರ್ಚೆಯಾಯಿತು ಎಂದರು.

ಇದನ್ನೂ ಓದಿ: Kannada New Movie: ವಿನೋದ್ ಪ್ರಭಾಕರ್ ಅಭಿನಯದ ʼಬಲರಾಮನ ದಿನಗಳುʼ ಚಿತ್ರ ತಂಡದಿಂದ ಬಿಗ್ ಅನೌನ್ಸ್‌ಮೆಂಟ್!

ಸದನದಲ್ಲಿ ನಾಣಯ್ಯನವರು ವ್ಯಾಪಕವಾಗಿ ಚರ್ಚೆ ಮಾಡಿದರು. ಆಗ ಎಸ್.ಎಂ. ಕೃಷ್ಣ ಅವರು ನನ್ನನ್ನು ಹೊರದೇಶಕ್ಕೆ ಕಳುಹಿಸಿ ನೀರು ಸರಬರಾಜನ್ನು ಖಾಸಗಿಕರಣದ ಬಗ್ಗೆ ಅಧ್ಯಯನ ಮಾಡುವಂತೆ ತಿಳಿಸಿದ್ದರು. ನಾನು ಫ್ರ್ಯಾನ್ಸ್ ಹಾಗೂ ಇತರ ದೇಶಗಳಿಗೆ ಹೋಗಿದ್ದೆ. ಅಲ್ಲಿ ಒಂದು ಪದ್ಧತಿಯಲ್ಲಿ ಮಾಡುತ್ತಿದ್ದಾರೆ. ನಮ್ಮಲ್ಲಿರುವ ಬಿಡಬ್ಲ್ಯೂ ಎಸ್‌ಎಸ್‌ಬಿ ಎಂಜಿನಿಯರ್‌ಗಳು ಹೊರದೇಶದಲ್ಲಿರುವ ಎಂಜಿನಿಯರ್‌ಗಳಿಗಿಂತ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಎಸ್.ಎಂ.ಕೃಷ್ಣ ಅವರಿಗೆ ಹೇಳಿದೆ. ಅಲ್ಲಿಂದ ಬಂದವರು ನಮ್ಮವರ ಬಳಿಯೇ ಕೆಲಸ ಮಾಡಿಸುತ್ತಾರೆ. ನೀರಿನ ಪೈಪ್ ಲೈನ್ ಬದಲಾಯಿಸಿ ಹೊಸ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿ ಶೇ 30 ರಷ್ಟು ಹೆಚ್ಚು ವೆಚ್ಚ ಕೇಳುತ್ತಾರೆ. ಆ ವ್ಯವಸ್ಥೆ ನಮ್ಮ ರಾಜ್ಯಕ್ಕೆ ಅನುಕೂಲಕರವಾಗಿಲ್ಲ. ದೆಹಲಿ, ಮುಂಬೈಗೆ ಸೂಕ್ತವಾಗಿದೆ ಎಂದು ವರದಿ ನೀಡಿದೆ. ಖಾಸಗೀಕರಣದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾದ ಕಾರಣಕ್ಕೆ ಪ್ರಸ್ತಾವನೆ ಕೈ ಬಿಡಲಾಯಿತು ಎಂದು ತಿಳಿಸಿದರು.

ಮೇಕೆದಾಟು, ನ್ಯಾಯಾಲಯದಲ್ಲಿ ನ್ಯಾಯ ಸಿಗುವ ನಂಬಿಕೆ ಇದೆ

ನಾನು ಅಧಿಕಾರವಹಿಸಿಕೊಂಡ ತಕ್ಷಣ 6 ಎಂಎಲ್‌ಡಿ ನೀರು ಸರಬರಾಜನ್ನು ಹೆಚ್ಚಳ ಮಾಡಲಾಗಿದೆ. ತಮಿಳುನಾಡಿಗೆ ನಿಗದಿತ ನೀರಿಗಿಂತ 100 ಟಿಎಂಸಿ ಹೆಚ್ಚುವರಿ ಕಾವೇರಿ ನೀರನ್ನು ಹರಿಸಲಾಗಿದೆ. ನಮ್ಮಲ್ಲಿ ಹೆಚ್ಚುವರಿ ನೀರನ್ನು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ನಮ್ಮಲ್ಲಿ ಮತ್ತೊಂದು ಅಣೆಕಟ್ಟು ಇದ್ದಿದ್ದರೆ ಅವರಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಮೇಕೆದಾಟು ಯೋಜನೆ ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗುತ್ತದೆ ಎಂದು ನಂಬಿದ್ದೇನೆ ಎಂದರು.

ಕೆಆರ್‌ಎಸ್‌ಯಿಂದಲೇ ನೇರವಾಗಿ ನಗರಕ್ಕೆ ನಿಗದಿಯಾದ ನೀರನ್ನು ತರಬಹುದು ಎಂದು ಒಂದಷ್ಟು ಜನ ವರದಿ ಕೊಟ್ಟಿದ್ದಾರೆ. ಶರಾವತಿಯಿಂದ ನೀರು ತರಬೇಕು ಎನ್ನುವ ಆಲೋಚನೆಯಿದೆ. ಅಲ್ಲಿನ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಎತ್ತಿನಹೊಳೆ ಯೋಜನೆ ರಾಜಕಾರಣದಿಂದ ಅಲ್ಲಲ್ಲಿ ಬೇರೆ, ಬೇರೆ ಕಡೆ ತಿರುವು ಪಡೆದುಕೊಂಡಿದೆ. ಇದನ್ನೂ ಸಹ ಒಂದು ಹಂತಕ್ಕೆ ತಲುಪಿಸಿದ್ದೇನೆ. ಕಾವೇರಿ 5 ನೇ ಹಂತದ ಕಾಮಗಾರಿಗೆ ನಿಂತಿದ್ದು ಮತ್ತೆ ಚಾಲನೆ ಮಾಡಲಾಗುವುದು ಎಂದು ತಿಳಿಸಿದರು.

ಕಾಲುವೆಗಳಲ್ಲಿ ನೀರನ್ನು ಕೊನೆಯ ಹಂತಕ್ಕೆ ತಲುಪಿಸಬೇಕು ಎಂದು ಕಾಲುವೆಗಳ ಅಕ್ಕ ಪಕ್ಕ ಅರ್ಧ ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಬೋರ್‌ವೆಲ್‌ಗಳನ್ನು ಹಾಕುವಂತಿಲ್ಲ ಹಾಗೂ ಪಂಪ್ ಮೂಲಕ ನೀರನ್ನು ಎತ್ತುವಂತಿಲ್ಲ ಎನ್ನುವ ಕಾನೂನು ತರಲಾಗಿದೆ ಎಂದು ಹೇಳಿದರು.

ನಾನು ಸೇರಿದಂತೆ ಹಿರಿಯ ಅಧಿಕಾರಿಗಳು ಇಲಾಖೆಗೆ ಇಂದು ಬರುತ್ತೇವೆ ನಾಳೆ ಹೋಗುತ್ತೇವೆ. ಆದರೆ ಇಲಾಖೆಯ ಎಂಜಿನಿಯರ್‌ಗಳು, ನೌಕರರು ಸಂಸ್ಥೆಗೆ ಯಾವ ರೀತಿಯ ಶಾಶ್ವತ ಪರಿಹಾರ ಬೇಕು ಎನ್ನುವ ಬಗ್ಗೆ ವರದಿ ತಯಾರಿಸಿ ನನಗೆ ನೀಡಿ. ನೀವುಗಳು ಇಲ್ಲದಿದ್ದರೆ ಬೆಂಗಳೂರಿಗೆ ಹೊಸ ರೂಪ ಬರಲು ಸಾಧ್ಯವಿಲ್ಲ. ಈ ಇಲಾಖೆಯವರು ಹಗಲು ರಾತ್ರಿ ಒತ್ತಡದಲ್ಲಿಯೇ ಕೆಲಸ ಮಾಡಬೇಕಾದ ಪರಿಸ್ಥಿತಿಯಿದೆ ಎಂದರು.

ಅಂತರ್ಜಲ ಹೆಚ್ಚಳ ಮಾಡಲು ಕೆರೆ ಅಭಿವೃದ್ದಿ ಸಮಿತಿ ಜತೆ ಕೆಲಸ ಮಾಡಬೇಕಿದೆ. ಕಳೆದ ವರ್ಷದ ಬರಗಾಲದ ಸಮಯದಲ್ಲಿ ಬೆಂಗಳೂರಿನಲ್ಲಿ 7 ಸಾವಿರ ಬೋರ್‌ವೆಲ್‌ಗಳು ಬತ್ತಿ ಹೋಗಿದ್ದರು ಕೂಡ ಹೆಚ್ಚು ಶ್ರಮ ಹಾಕಿ ಕೆಲಸ ಮಾಡಿ ಸರ್ಕಾರಕ್ಕೆ ಕೆಟ್ಟ ಹೆಸರು ಬರದಂತೆ ನೋಡಿಕೊಂಡ ನೌಕರರಿಗೆ ಅಭಾರಿಯಾಗಿದ್ದೇನೆ. ನೀರುಗಂಟಿಯಿಂದ ಹಿಡಿದು ಪ್ರತಿಯೊಬ್ಬ ನೌಕರನಿಗೂ ಮನಪೂರ್ವಕ ಅಭಿನಂದನೆಗಳು ಎಂದು ಹೇಳಿದರು.

ರಾಜ್ಯಪಾಲರ ಮೇಲೆ ಬಿಜೆಪಿ, ದಳದವರೇ ಕಲ್ಲು ಎಸೆಯಬಹುದು

ರಾಜ್ಯಪಾಲರು ಬುಲೆಟ್ ಪ್ರೂಫ್ ಕಾರಿನಲ್ಲಿ ಓಡಾಡಲು ಕಾಂಗ್ರೆಸ್ ಕಾರಣ ಎನ್ನುವ ಬಗ್ಗೆ ಕೇಳಿದಾಗ “ಬಿಜೆಪಿ, ದಳದ ಕಿಡಿಗೇಡಿಗಳು ಕಲ್ಲು ಹೊಡಯಬಹುದು ಎನ್ನುವ ಕಾರಣಕ್ಕೆ ಪೊಲೀಸ್ ಅವರು ರಕ್ಷಣೆಗಾಗಿ ಈ ಕ್ರಮ ತೆಗೆದುಕೊಂಡಿದ್ದಾರೆ. ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕಾನೂನು ಸುವ್ಯವಸ್ಥೆ ಹಾಳು ಮಾಡಲು ಬಿಜೆಪಿ, ದಳ ಪ್ರಯತ್ನಿಸುತ್ತಿದೆ ಎನ್ನುವ ಮಾಹಿತಿ ನಮಗಿದೆ. ನಮಗೆ ರಾಜ್ಯಪಾಲರ ಮೇಲೆ ಗೌರವವಿದೆ. ಆದ ಕಾರಣ ಅವರಿಗೆ ರಕ್ಷಣೆ ನೀಡಲಾಗಿದೆ ಎಂದರು.

ಇದನ್ನೂ ಓದಿ: Kannada New Movie: ಕವೀಶ್ ಶೆಟ್ಟಿ, ಮೇಘಾ ಶೆಟ್ಟಿ ಅಭಿನಯದ ʼಆಪರೇಷನ್ ಲಂಡನ್ ಕೆಫೆʼ ಚಿತ್ರದ ಟೀಸರ್ ರಿಲೀಸ್‌

ಕಾಂಗ್ರೆಸ್ ರಾಜ್ಯಪಾಲರಿಗೆ ಅವಮಾನಿಸಿದ್ದನ್ನು ವಿರೋಧಿಸಿ ಬಿಜೆಪಿಯವರ ಪ್ರತಿಭಟನೆ ಬಗ್ಗೆ ಕೇಳಿದಾಗ “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನನ್ನನ್ನು, ನಿಮ್ಮನ್ನು ಯಾರನ್ನು ಬೇಕಾದರೂ ಟೀಕೆ ಮಾಡಬಹುದು. ಯಾರಿಗೆ ಯಾವ ಗೌರವ ಕೊಡಬೇಕೋ ಅದನ್ನು ಖಂಡಿತ ಕೊಡಲೇಬೇಕು. ಘನವೆತ್ತ ರಾಜ್ಯಪಾಲರಿಗೆ ನಾವು ಖಂಡಿತಾ ಗೌರವ ನೀಡುತ್ತೇವೆ ಎಂದು ಹೇಳಿದರು.

Exit mobile version