ಬೆಂಗಳೂರು: ಬೆಂಗಳೂರಿನಲ್ಲಿ ಜಲಕ್ಷಾಮ (Water Scarcity) ಎಷ್ಟೊಂದು ತೀವ್ರವಾಗಿದೆ ಎಂದರೆ ಸ್ವತಃ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರ ಮನೆಯಲ್ಲೂ ನೀರಿಲ್ಲವಂತೆ. ಕೆಲವು ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ಕಾವೇರಿಗೆ ಟ್ಯಾಂಕರ್‌ನಲ್ಲಿ (Tanker Water to Cauvery) ನೀರು ತಂದಿದ್ದು ಸುದ್ದಿಯಾಗಿತ್ತು. ಈಗ ಡಿಸಿಎಂ ಮನೆಗೂ ಜಲ ತತ್ವಾರ.
ಸ್ವತಃ ಡಿ.ಕೆ. ಶಿವಕುಮಾರ್ ಅವರೇ ಈ ವಿಚಾರವನ್ನು ತಿಳಿಸಿದರು. ಶನಿವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಮ್ಮ ಮನೆಯಲ್ಲೂ ಬೋರ್ ವೆಲ್ ನಲ್ಲಿ ನೀರು ಇಲ್ಲ. ಬೇರೆ ಕಡೆಯಿಂದ ನೀರು ತರಿಸುವ ಪ್ರಯತ್ನ ಮಾಡ್ತಾ ಇದ್ದೀವಿ. ಕಾರು ತೊಳೆಯಲು, ದನ ಕರು ತೊಳೆಯಲು ನೀರು ಬಳಸಬೇಡಿ ಅಂತ ಹೇಳಿದ್ದೇವೆ. ಆರ್‌ಓ ವಾಟರ್ ಎಲ್ಲೆಲ್ಲಿ ಕೆಟ್ಟೋಗಿತ್ತೋ ಅದನ್ನ ಸರಿ ಮಾಡ್ತಾ ಇದ್ದೀವಿ ಎಂದು ಹೇಳಿದರು. ರಾಜ್ಯದಲ್ಲಿ ನೀರಿನ ಹಾಹಾಕಾರ ಪರಿಸ್ಥಿತಿಯ ಬಗ್ಗೆ ಮತ್ತು ಸರ್ಕಾರ ಅದನ್ನು ಹೇಗೆ ನಿಭಾಯಿಸುತ್ತಿದೆ ಎಂಬ ಬಗ್ಗೆ ವಿವರಣೆ ನೀಡಿದರು.
ಟ್ಯಾಂಕರ್ ಮಾಫಿಯಾಕ್ಕೆ ಕಡಿವಾಣ ಹಾಕಿದ್ದೇ ನಾವು
ರಾಜ್ಯ ಸರ್ಕಾರ ನೀರಿನ ಸಮಸ್ಯೆ, ಜಲಕ್ಷಾಮವನ್ನು ನಿಭಾಯಿಸಲು ವಿಫಲವಾಗಿದೆ ಎಂಬ ವಿಪಕ್ಷಗಳ ವಾದವನ್ನು ಅವರು ಅಲ್ಲಗಳೆದರು. ವಿಪಕ್ಷದವರಿಗೆ ಟೀಕೆ ಮಾಡೋದು ಬಿಟ್ಟರೆ ಬೇರೆನೂ ಇಲ್ಲ. ಸಲಹೆ ಕೊಟ್ಟರೆ ನಾವು ಸ್ವೀಕಾರ ಮಾಡ್ತೀವಿ ಎಂದರು.
ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ನೀರಿನ ಸಮಸ್ಯೆಯಾದಾಗ ಚರಿತ್ರೆಯಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಾಟರ್ ಟ್ಯಾಂಕರ್‌ಗಳ ಮಾಫಿಯಾಕ್ಕೆ ಕಡಿವಾಣ ಹಾಕಿದವರು ನಾವಾಗಿದ್ದೇವೆ. ಅವರಿಗೆ ಒಂದು ದರ ಫಿಕ್ಸ್ ಕುರಿತು ಅಧಿಕಾರಿಗಳು ಚರ್ಚೆ ಮಾಡಿದ್ದಾರೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಕಾವೇರಿ ನೀರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಸರಿಯಾಗಿಯೇ ಬರುತ್ತಿದೆ. ಆದರೆ, ಹಾಹಾಕಾರ ಇಲ್ಲ ಎಂದು ನಾವು ಹೇಳುತ್ತಿಲ್ಲ ಎಂದರು.
ಇದನ್ನೂ ಓದಿ : Water Crisis : ಬೆಂಗಳೂರಿಗರೇ ಭಯ ಬೇಡ; ಕುಡಿಯುವ ನೀರಿನ ಕೊರತೆ ಇಲ್ಲ, ಆದರೆ ..
ಬೆಂಗಳೂರು ಗ್ರಾಮಾಂತರಕ್ಕೆ ಮಾತ್ರ ಯಾಕೆ ನೋಡಲ್ ಆಫೀಸರ್?
ಬೆಂಗಳೂರು ಗ್ರಾಮಾಂತರಕ್ಕೆ ಮಾತ್ರ ನೋಡಲ್ ಆಫೀಸರ್ ನೇಮಕ ಮಾಡಿರುವ ಬಗ್ಗೆ ಕೇಳಿದಾಗ, ಬೆಂಗಳೂರು ನಗರಕ್ಕೂ ಹಾಕಿದ್ದೇವೆ. ಬೆಂಗಳೂರು ಗ್ರಾಮಾಂತರ ಪೂರ್ತಿ ಬೋರ್ ವೆಲ್ ಗಳು ಇವೆ. ನಗರದಲ್ಲಿ ಕಾವೇರಿ ವಾಟರ್ ಬರುತ್ತದೆ. ಹಾಗಾಗಿ ಅಲ್ಲಿಗೆ ನೋಡಲ್ ಆಫೀಸರ್ ಗಳನ್ನು ಹಾಕಿದ್ದೇವೆ ಅಷ್ಟೆ. ಇನ್ನು ಬಿಜೆಪಿಯವರು ಪ್ರತಿಭಟನೆ ಮಾಡ್ತಾರೆ, ಮಾಡಲಿ ಬಿಡಿ. ಅವರನ್ಯಾರು ತಡೆಯಲ್ಲ ಎಂದರು.
ಕುಮಾರ ಸ್ವಾಮಿಗೆ ರಾಜಕೀಯ ಸಿದ್ಧಾಂತವೇ ಇಲ್ಲ
ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ರಾಜಕೀಯ ಸಿದ್ಧಾಂತವೇ ಇಲ್ಲ. ಬಿಜೆಪಿಯವರೇ ಕುಮಾರಸ್ವಾಮಿ ಅವರನ್ನು ಅಧಿಕಾರದಿಂದ ಇಳಿಸಿದರೂ ಈಗ ಅವರೇ ಅವರ ಜತೆ ಸೇರಿಕೊಂಡಿದ್ದಾರೆ. . ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಿ.ಪಿ.ಯೋಗೇಶ್ವರ್ ಅವರೇ ಕುಮಾರಸ್ವಾಮಿ ಸರ್ಕಾರ ಪತನಕ್ಕೆ ಕಾರಣ. ಈಗ ಮತ್ತೆ ಅವರ ಜೊತೆಗೆ ಇವರು ಸೇರಿದ್ದಾರೆ. ಇಂಥ ರಾಜಕಾರಣ ನೋಡಿ ಬೇಜಾರಾಗುತ್ತಿದೆ ಕುಮಾರಸ್ವಾಮಿ ಇದನ್ನು ಹೇಗೆ ಜೀರ್ಣ ಮಾಡ್ತಾ ಇದ್ದಾರೋ ಗೊತ್ತಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಮೈಸೂರು ಬಿಜೆಪಿ ಅಭ್ಯರ್ಥಿಯಾಗಿ ಪ್ರತಾಪ್ ಸಿಂಹ ಬದಲು ಬೇರೆಯವರನ್ನ ನೇಮಕ ಮಾಡುತ್ತಾರಂತೆ ಎಂಬ ಸುದ್ದಿ ಯ ಬಗ್ಗೆ ಪ್ರತಿಕ್ರಿಯಿಸಿದ ಅವರು ಬಿಜೆಪಿಯವರು ಯಾರನ್ನು ಬೇಕಾದರೂ ನಿಲ್ಲಿಸಲಿ, ಯಾರ ಹೆಸರು ಶಿಫಾರಸ್ಸು ಮಾಡಿದರೂ ನಾವು ಸಿದ್ದಾಂತದ ಮೇಲೆ ಕೆಲಸ ಮಾಡುತ್ತೇವೆ. ಅವರ ನಿರ್ಧಾರಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲ್ಲ. ನಮ್ಮದು ಸಿದ್ದಾಂತ ಪಾರ್ಟಿಯಾಗಿದೆ. ಜನರಿಗೆ ಹತ್ತಿರವಾದ ಕ್ಯಾಂಡಿಡೇಟ್ ಹಾಕಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.