Site icon Vistara News

Water Scarcity : ಬೆಂಗಳೂರಿನ ನೀರಿನ ಘಟಕಗಳಲ್ಲಿ ಒಬ್ಬರಿಗೆ ಒಂದೇ ಕ್ಯಾನ್‌ ನೀರು!

Water Scarcity Bangalore

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜಲಕ್ಷಾಮ (Water Scarcity) ತೀವ್ರಗೊಂಡಿದೆ. ಜಲಮಂಡಳಿ (Water supply board) ನೀರಿನ ಕೊರತೆಯಿಂದಾಗಿ ದಿನದ ಕೆಲವೇ ಹೊತ್ತು ಮಾತ್ರ ನೀರು ಬಿಡುಗಡೆ ಮಾಡುತ್ತಿದೆ. ಇದರಿಂದ ಜನರಿಗೆ ನೀರು ಸಿಗದೆ ಸಮಸ್ಯೆಯಾಗಿದೆ. ಇದರ ನಡುವೆಯೇ ನಗರದಲ್ಲಿರುವ ಕೆಲವು ಶುದ್ಧ ನೀರಿನ ಘಟಕಗಳಲ್ಲಿ (Pure water Units) ಕೂಡಾ ಒಬ್ಬರಿಗೆ ಒಂದೇ ಕ್ಯಾನ್‌ ನೀರು (Only one can of water for one) ಎಂಬ ನಿಯಮ ಜಾರಿ ಮಾಡಲಾಗಿದ್ದು, ಸಮಸ್ಯೆಯ ತೀವ್ರತೆಯನ್ನು ತೋರಿಸುತ್ತಿದೆ.

ಶುದ್ಧ ನೀರಿನ ಘಟಕಗಳಲ್ಲಿ ಈ ಹಿಂದೆ ಐದು ರೂ. ಕೊಟ್ಟು ಒಂದು ಕ್ಯಾನ್‌ ನೀರು ಪಡೆಯಬಹುದಾಗಿತ್ತು. ಕೆಲವರು ಒಮ್ಮೆಗೇ ಎರಡು ಮೂರು ಕ್ಯಾನ್‌ ನೀರು ಒಯ್ಯುತ್ತಿದ್ದರು. ಆದರೆ, ಈಗ ಕಾವೇರಿ ನೀರಿನ ಕೊರತೆ ಉಂಟಾಗಿರುವುದರಿಂದ ಜನರು ಶುದ್ಧ ನೀರಿನ ಘಟಕಗಳಿಗೆ ಮುಗಿಬಿದ್ದಿದ್ದಾರೆ. ಹೀಗಾಗಿ ಅಲ್ಲಿ ನೀರಿನ ಕೊರತೆ ಉಂಟಾಗಿದೆ. ಇದಕ್ಕಾಗಿ ಒಬ್ಬರಿಗೆ ಒಂದೇ ಕ್ಯಾನ್ ನೀರು ಎಂಬ ನಿಯಮವನ್ನು ಕೆಲವು ಕಡೆ ಜಾರಿ ಮಾಡಲಾಗಿದೆ. ಆರ್ ಆರ್ ನಗರ ಭಾಗದಲ್ಲಿ ಘಟಕಗಳ ಮುಂದೆ ಬೋರ್ಡ್ ಅಳವಡಿಸಿದ್ದು ಕಂಡುಬಂದಿದೆ.

ದಿನದಲ್ಲಿ ಕೆಲವೇ ಗಂಟೆ ಮಾತ್ರ ಓಪನ್‌

ಈ ನಡುವೆ ನೀರಿನ ಕೊರತೆ ಮತ್ತು ಬೇಡಿಕೆಯ ಹೆಚ್ಚಳದಿಂದಾಗಿ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನೀರು ಬೇಗನೆ ಮುಗಿದು ಹೋಗುತ್ತಿದೆ. ನೀರು ಬಂದು ಒಂದೆರಡು ಗಂಟೆಗಳಲ್ಲಿ ಖಾಲಿಯಾಗುತ್ತಿದೆ. ಹೀಗಾಗಿ ನೀರು ತುಂಬಿಸಿಕೊಳ್ಳಲು ದೊಡ್ಡ ಕ್ಯೂ ಕಾಣಿಸಿಕೊಳ್ಳುತ್ತಿವೆ. ಕೆಲವರಂತೂ ಗಂಟೆಗಟ್ಟಲೆ ಕಾದು ಕಾದು ಸುಸ್ತಾಗುತ್ತಿದ್ದಾರೆ.

ಹೆಚ್ ಎಸ್ ಆರ್ ಲೇಔಟ್ ನ ವೆಂಕಟಾಪುರದಲ್ಲಿ ನೀರಿಗಾಗಿ ಬೃಹತ್ ಕ್ಯೂ. ಕಾಣಿಸಿಕೊಂಡಿದೆ. ನೀರು ತುಂಬಿದ ಕೆಲವೇ ಗಂಟೆಗಳಲ್ಲಿ ಅದು ಮುಗಿಯುತ್ತಿದೆ. ತಮಗೆ ಸಿಗುತ್ತದೋ ಇಲ್ಲವೋ ಎನ್ನುವ ಆತಂಕದಿಂದಲೇ ಜನರು ಕ್ಯೂ ನಿಲ್ಲುತ್ತಿದ್ದಾರೆ. ರಾಜಾಜಿ ನಗರ ಭಾಗದಲ್ಲಿ ಕೂಡಾ ಶುದ್ಧ ಕುಡಿಯುವ ನೀರಿನ ಘಟಕದ ಎದುರು ನೂರಾರು ಜನರ ಸಾಲು ಕಾಣಿಸಿಕೊಂಡಿದೆ.

ಇದನ್ನೂ ಓದಿ : Water supply : ಬೆಂಗಳೂರಲ್ಲಿ ಇಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

ಖಾಸಗಿ ವಾಟರ್ ಟ್ಯಾಂಕರ್ ಗಳಿಗೆ ದರ ನಿಗದಿ ಮುಂದಕ್ಕೆ

ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗಿರುವ ಹಿನ್ನೆಲೆಯಲ್ಲಿ ಟ್ಯಾಂಕರ್‌ ಮಾಫಿಯಾ ತನ್ನ ಕರಾಳ ಮುಖವನ್ನು ತೋರಿಸಲು ಆರಂಭಿಸಿದೆ. ಒಂದು ಟ್ಯಾಂಕರ್‌ ನೀರಿಗೆ 2000 ರೂ. ದರ ವಿಧಿಸುತ್ತಿರುವ ಆರೋಪವೂ ಎದುರಾಗಿದೆ.

ಹೀಗಾಗಿ ಟ್ಯಾಂಕರ್‌ ಮಾಫಿಯಾಕ್ಕೆ ಕಡಿವಾಣ ಹಾಕಲು ಜಲಮಂಡಳಿ ಮುಂದಾಗಿದೆ. ಇದರ ಭಾಗವಾಗಿ ಜಲಮಂಡಳಿ, ಬಿಬಿಎಂಪಿ ಮತ್ತು ಟ್ಯಾಂಕರ್ ಮಾಲೀಕರ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ.

ಪ್ರತಿ ಟ್ಯಾಂಕರ್ ಗೆ 600-700 ರೂಪಾಯಿ ನಿಗದಿಗೆ ಬಿಬಿಎಂಪಿ ಪಟ್ಟು ಹಿಡಿದಿದೆ. ಆದರೆ, ಟ್ಯಾಂಕರ್ ಮಾಲೀಕರು ಇದಕ್ಕೆ ಒಪ್ಪಿಲ್ಲ. ಗುರುವಾರ ಈ ಬಗ್ಗೆ ನಡೆದ ಸಭೆಯಲ್ಲಿ ಒಮ್ಮತ ಮೂಡದೆ ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ಮುಂದೂಡಲಾಗಿದೆ.

ಒಂದು ಟ್ಯಾಂಕರ್ ನೀರಿಗೆ 1200 ರೂ. ನಿಗದಿ ಮಾಡುವಂತೆ ಟ್ಯಾಂಕರ್ ಅಸೋಸಿಯೇಷನ್ ಒತ್ತಾಯ ಮಾಡಿದೆ. = ನಮಗೂ ನೀರು ಸಿಗುತ್ತಿಲ್ಲ, 700 ರೂಪಾಯಿಗೆ ಟ್ಯಾಂಕರ್ ನೀರು ನೀಡಲು ಸಾಧ್ಯವಿಲ್ಲ ಎಂದು ಟ್ಯಾಂಕರ್ ಮಾಲೀಕರು ಹೇಳುತ್ತಿದ್ದಾರೆ. ಹಾಗಿದ್ದರೆ ನೀವೇ ನೀರು ಕೊಡಿ, ನಾವು ನೀರು ಸರಬರಾಜು ಮಾಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.

Exit mobile version