ಬೆಂಗಳೂರು: ನಗರದ ಮುಖ್ಯ ರಸ್ತೆಗಳಲ್ಲಿ ಬೈಕ್ ವ್ಹೀಲಿಂಗ್ಗೆ ತಡೆ ಹಾಕಲು ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಫಲಕಾರಿಯಾಗುತ್ತಿಲ್ಲ. ಪುಂಡರ ಅಟ್ಟಹಾಸ ಇನ್ನಷ್ಟು ಹೆಚ್ಚಿದೆ. ಹುಡುಗಿಯನ್ನು ಹಿಂದೆ ಕೂರಿಸಿಕೊಂಡು, ಡ್ಯಾಗರ್ ಝಳಪಿಸುತ್ತಾ ವ್ಹೀಲಿಂಗ್ ಮಾಡುತ್ತಿರುವುದು ಕೂಡ ಕಂಡುಬಂದಿದೆ.
ಈ ಕುರಿತ ವಿಡಿಯೋಗಳು ಲಭ್ಯವಾಗಿವೆ. ಈ ಬಾರಿ ಯುವಕರ ಹುಚ್ಚಾಟಕ್ಕೆ ಹುಡುಗಿಯೂ ಸಾಥ್ ನೀಡಿದ್ದಾಳೆ. ಹುಡುಗಿಯನ್ನು ಹಿಂದೆ ಕೂರಿಸಿಕೊಂಡು ವ್ಹೀಲಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸೈಯ್ಯದ್ ಎಂಬಾತ ಆಪ್ಲೋಡ್ ಮಾಡಿದ್ದಾನೆ.
ಇದಲ್ಲದೆ ಕೈಯಲ್ಲಿ ಡ್ಯಾಗರ್ ಹಿಡಿದು ಅದನ್ನು ಝಳಪಿಸುತ್ತಾ ವ್ಹೀಲಿಂಗ್ ಮಾಡಿದ್ದನ್ನೂ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾರೆ. ರಸ್ತೆಯಲ್ಲಿ ಹಾಕಿರುವ ಬ್ಯಾರಿಕೇಡ್ಗಳನ್ನು ಒದ್ದು ಪುಂಡಾಟ ಮೆರೆದಿದ್ದಾರೆ. ಸೈಯ್ಯದ್ ಕಿಂಗ್ ಎಂದು ಸಾಮಾಜಿಕ ಜಾಲತಾಣದ ಆಕೌಂಟ್ನಲ್ಲಿ ಈ ವಿಡಿಯೋಗಳು ಆಪ್ಲೋಡ್ ಆಗುತ್ತಿದ್ದು, ಇದು ಹೊಸದೊಂದು ರೌಡಿ ಗ್ಯಾಂಗ್ ರೂಪುಗೊಳ್ಳುತ್ತಿರುವುದರ ಮುನ್ನುಡಿ ಇರಬಹುದೇ ಎಂಬ ಸಂಶಯವೂ ವ್ಯಕ್ತವಾಗಿದೆ.
ಈ ಪುಂಡರಿಗೆ ಟ್ರಾಫಿಕ್ ನಿಯಮಗಳು, ಕಾನೂನಿನ ಭಯವಿಲ್ಲ. ಹೆಲ್ಮೆಟ್ ಕೂಡ ಧರಿಸುವುದಿಲ್ಲ. ಜಕ್ಕೂರು ರಸ್ತೆ, ತುಮಕೂರು ರಸ್ತೆ, ನಗರದ ಹೊರವಲಯದ ರಸ್ತೆಗಳು, ಬಿಇಎಲ್ ರಸ್ತೆಗಳು ವ್ಹೀಲಿಂಗ್ ಮಾಡುವವರಿಗೆ ಹಾಟ್ಸ್ಪಾಟ್ಗಳಾಗಿವೆ. ಸಾಮಾನ್ಯವಾಗಿ ರಾತ್ರಿ ವೇಳೆ, ಕೆಲವೊಮ್ಮೆ ಹಗಲಿನಲ್ಲೂ ಯಾವುದೇ ರಸ್ತೆಯಲ್ಲಿ ಇವರ ಪುಂಡಾಟ ಕಾಣಬಹುದಾಗಿದೆ. ವ್ಹೀಲಿಂಗ್ ಜತೆ ಮಾರಕಾಸ್ತ್ರಗಳನ್ನು ಕೂಡ ಪ್ರದರ್ಶಿಸುತ್ತಿರುವುದು ಕಂಡರೆ, ಇದು ಸದ್ಯದಲ್ಲಿಯೇ ಬಲು ದೊಡ್ಡ ಕಾನೂನು ಸುವ್ಯವಸ್ಥೆ ಸಮಸ್ಯೆಯಾಗಲಿದೆ ಎಂಬುದು ನಿಶ್ಚಿತ. ರಾತ್ರಿ ವೇಳೆ ಸಂಚರಿಸುವ ಇತರ ಪ್ರಯಾಣಿಕರಿಗೂ ಇದರಿಂದ ಗಂಭೀರ ಅಪಾಯವಿದೆ. ಹೀಗಾಗಿ ಹೆಚ್ಚಿನ ಕಠಿಣ ಕ್ರಮಗಳನ್ನು ಪೊಲೀಸರಿಂದ ಜನ ನಿರೀಕ್ಷಿಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮೀತಿ ಮೀರಿದ ಬೈಕ್ ವ್ಹೀಲಿಂಗ್: ಪುಂಡರ ಹಾವಳಿಗೆ ಸಾರ್ವಜನಿಕರ ಆಕ್ರೋಶ