ಮಾರುತಿ ಪಾವಗಡ ಬೆಂಗಳೂರು
ಸಾರ್ವತ್ರಿಕ ಚುನಾವಣೆ ಗಮನದಲ್ಲಿಟ್ಟುಕೊಂಡು ಹಳೇ ಮೈಸೂರು ಭಾಗದಲ್ಲಿ ನೆಲೆ ಗಟ್ಟಿಗೊಳಿಸಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದ ಭಾರತೀಯ ಜನತಾ ಪಕ್ಷಕ್ಕೆ ದಕ್ಷಿಣ ಪದವೀಧರರು ಮರ್ಮಾಘಾತ ನೀಡಿದ್ದಾರೆ. ಬಿಜೆಪಿ ಸೋಲಿಗೆ ಬಿಜೆಪಿಯೇ ಕಾರಣ ಎಂಬ ಚರ್ಚೆ ಶುರುವಾಗಿದೆ.
ಗೃಹ ಸಚಿವ ಅಮಿತ್ ಷಾ ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹಳೇ ಮೈಸೂರು ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಸೂಚನೆ ನೀಡಿದ್ದರು. ಅದರ ಬೆನ್ನಲ್ಲೇ ಆರ್‌ಎಸ್‌ಎಸ್ ಹಾಗೂ ಬಿಜೆಪಿ ವಲಯದಲ್ಲಿ ʼತಂತ್ರಗಾರಿಕೆʼಯ ಯಜ್ಞವೇ ನಡೆದಿದೆ. ಆದರೆ ಸಂಘ ಪರಿವಾರ ಮತ್ತು ಪಕ್ಷ ನಿಷ್ಠೆಯಲ್ಲಿ ಪ್ರಶ್ನಾರ್ಹ ಅಭ್ಯರ್ಥಿ ಎನಿಸಿದ್ದ ಮೈ.ವಿ.ರವಿಶಂಕರ್ ಸೋಲು ಬಿಜೆಪಿ ಪಾಲಿಗೆ ಆಶ್ಚರ್ಯ ಉಂಟು ಮಾಡಿದೆ.
ಇದನ್ನೂ ಓದಿ | ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ 0-2, ಬಿಜೆಪಿ 2-2, ಜೆಡಿಎಸ್ 1-0
ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಸಮರ್ಥವಾಗಿ ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳಲಾಗಿತ್ತು. ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಪಕ್ಷದೊಳಗಿನ ಅತಿರಥ ಮಹಾರಥರೆಲ್ಲ ಬಂದು ಪ್ರಚಾರ ಮಾಡಿ ಹೋಗಿದ್ದರು. ಬಿಜೆಪಿಯೊಳಗಿನ ತಳಮಟ್ಟದ ಕಾರ್ಯಕರ್ತರು ಅತ್ಯಂತ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದರು. ಆದರೆ ಸಮಸ್ಯೆಯಾಗಿದ್ದು ಜನಪ್ರತಿನಿಧಿಗಳು ಹಾಗೂ ಮುಖಂಡರಿಂದ.
ತೋರಿಕೆಯ ಪ್ರೀತಿ: ಬಿಜೆಪಿಯ ಹಾಲಿ ಶಾಸಕರು, ಸಂಸದರು ವಿಧಾನ ಪರಿಷತ್ ಸದಸ್ಯರು, ಪರಾಜಿತ ಅಭ್ಯರ್ಥಿಗಳು ʼತೋರಿಕೆʼಗೆ ಕಾಣಿಸಿಕೊಂಡರೇ ಹೊರತು ತಮ್ಮ ಪಡೆ ಕಟ್ಟಿಕೊಂಡು ಹಠ ಹಿಡಿದು ವೋಟು ಹಾಕಿಸುವಷ್ಟು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಕೆ.ಆರ್.ಕ್ಷೇತ್ರದಲ್ಲಿ ಎಸ್.ಎ.ರಾಮದಾಸ್, ಚಾಮರಾಜದಲ್ಲಿ ಎಲ್.ನಾಗೇಂದ್ರ, ನಂಜನಗೂಡಲ್ಲಿ ಹರ್ಷವರ್ಧನ್, ಗುಂಡ್ಲುಪೇಟೆಯಲ್ಲಿ ನಿರಂಜನ್, ಕೊಳ್ಳೇಗಾಲದಲ್ಲಿ ಎನ್.ಮಹೇಶ್, ಹಾಸನದಲ್ಲಿ ಪ್ರೀತಂಗೌಡ, ಕೆ.ಆರ್.ಪೇಟೆಯಲ್ಲಿ ನಾರಾಯಣಗೌಡ ಬಿಜೆಪಿ ಶಾಸಕರಾಗಿದ್ದಾರೆ.
ಚಾಮರಾಜನಗರದಲ್ಲಿ ವಿ. ಶ್ರೀನಿವಾಸಪ್ರಸಾದ್, ಮೈಸೂರಲ್ಲಿ ಪ್ರತಾಪ್ ಸಿಂಹ, ಮಂಡ್ಯದಲ್ಲಿ ಸುಮಲತಾ(ನಿಖಿಲ್ ಕುಮಾರಸ್ವಾಮಿ ಸೋಲಿಸಲು ಬಿಜೆಪಿ ಅಭ್ಯರ್ಥಿ ಹಾಕದೆ ಬೆಂಬಲ ಕೊಟ್ಟಿತ್ತು) ಸಂಸದರಾಗಿದ್ದಾರೆ. ಅಡಗೂರು ಎಚ್.ವಿಶ್ವನಾಥ್ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಪರಾಜಿತ ಅಭ್ಯರ್ಥಿಗಳಿದ್ದಾರೆ. ಈ ಪೈಕಿ ಯಾರು ಎಷ್ಟರ ಮಟ್ಟಿಗೆ ಪದವೀಧರರನ್ನು ಮನವೊಲಿಸಿದರು ಎಂಬುದು ರಾಜಕೀಯ ವಲಯದಲ್ಲಿ ಈಗ ಗುಟ್ಟಾಗಿ ಉಳಿದಿಲ್ಲ.
ಬ್ರಾಹ್ಮಣ- ಲಿಂಗಾಯತ ಒಳಜಗಳ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ವಿಧಾನ ಪರಿಷತ್ತಿಗೆ ಆಯ್ಕೆಯಾಗಬೇಕಿತ್ತು. ಆದರೆ ಹೈಕಮಾಂಡ್ ಅವಕಾಶ ನೀಡಲಿಲ್ಲ. ಇದರ ಹಿಂದೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕೈವಾಡವಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆ ವಿದ್ಯಮಾನ ದಕ್ಷಿಣ ಪದವೀಧರರ ಚುನಾವಣೆಯಲ್ಲಿ ಸ್ವಲ್ಪಮಟ್ಟಿಗೆ ʼರಿಫ್ಲೆಕ್ಟ್ʼ ಆಗಿದೆ. ಯಾರೂ ಪಕ್ಷದಲ್ಲೇ ಇದ್ದುಕೊಂಡು ʼಒಳೇಟುʼನೀಡುವ ಧೈರ್ಯ ತೋರಿಲ್ಲ. ಆದರೆ ಬ್ರಾಹ್ಮಣ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಲಿಂಗಾಯತ ಸಮುದಾಯ ಹೈಕಮಾಂಡ್‌ಗೆ ಸಂದೇಶ ರವಾನಿಸುವ ಪ್ರಯತ್ನ ಮಾಡಿರುವುದು ಪ್ರಥಮ ಹಾಗೂ ದ್ವಿತೀಯ ಪ್ರಾಶಸ್ತ್ಯ ಮತಗಳ ಹಂಚಿಕೆಯ ಮಾದರಿಯಲ್ಲಿ ಸ್ಪಷ್ಟವಾಗಿ ಕಾಣಿಸಿದೆ.
ಗೊಂದಲ ನಿವಾರಿಸಿದ ಮರಿತಿಬ್ಬೇಗೌಡ
ಗೆಲ್ಲುವ ಅಭ್ಯರ್ಥಿ ಯಾರು ಎಂಬುದರ ಬಗ್ಗೆ ರಾಜಕೀಯದ ʼವಿಶೇಷ ಆಸಕ್ತಿʼಯುಳ್ಳ ಮತದಾರರಿಗೆ ಗೊಂದಲವಿತ್ತು. ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕಾರ್ಯಕರ್ತರಲ್ಲೂ ಗೊಂದಲಗಳಿದ್ದವು. ಯಾರನ್ನು ಸೋಲಿಸಬೇಕಾದರೆ ಯಾರನ್ನು ಬೆಂಬಲಿಸಬೇಕು ಎನ್ನುವ ಪ್ರಶ್ನೆಗೆ ದಿಕ್ಸೂಚಿಯಾದವರು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ.
ಮೈಸೂರು, ಚಾಮರಾಜನಗರ, ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕಾಂಗ್ರೆಸ್- ಜೆಡಿಎಸ್ ಸಮಾನ ಶಕ್ತಿ ಹೊಂದಿವೆ. ಬಿಜೆಪಿ ಸರ್ಕಾರದ ʼಶಕ್ತಿʼಯ ಬಲದ ಮೇಲೆ ಚುನಾವಣಾ ರಣತಂತ್ರ ರೂಪಿಸಿತ್ತು. ಪಕ್ಷೇತರ ಅಭ್ಯರ್ಥಿ ಪ್ರಸನ್ನ ಎನ್. ಗೌಡ ಕೂಡ ಮತದಾರರಿಗೆ ಪರ್ಯಾಯ ಆಯ್ಕೆಯಾಗಿದ್ದರು. ಮರಿತಿಬ್ಬೇಗೌಡರು ಜೆಡಿಎಸ್‌ನಲ್ಲಿ ಇದ್ದುಕೊಂಡೇ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡರಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದರು. ಶಿಕ್ಷಕರ ವಲಯದಲ್ಲಿ ಬಿಗಿ ಹಿಡಿತ ಹೊಂದಿರುವ ಮರಿತಿಬ್ಬೇಗೌಡ, ಮತಗಳ ಇಡುಗಂಟನ್ನು ಮಧು ಮಾದೇಗೌಡರಿಗೆ ಒಪ್ಪಿಸಿದರು. ಜೆಡಿಎಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದ ಕೀಲಾರ ಜಯರಾಂ ಕೂಡ ದನಿಗೂಡಿಸಿದರು. ಇದರಿಂದಾಗಿ ಮಂಡ್ಯ ಮತ್ತು ಮರಿತಿಬ್ಬೇಗೌಡರ ಪ್ರಭಾವ ವಲಯದಲ್ಲಿ ಸಂಚಲನ ಶುರುವಾಯಿತು. ಮತದಾರರು ಗೆಲ್ಲುವು ಕುದುರೆ ಮಾದೇಗೌಡ ಎಂಬ ತೀರ್ಮಾನಕ್ಕೆ ಬಂದರು ಎಂಬುದು ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚರ್ಚೆ.
ಬಿಜೆಪಿ ಸ್ವಯಂಕೃತ ಅಪರಾಧ:
- ಸರ್ಕಾರ, ಸಂಪನ್ಮೂಲವಿದ್ದರೂ ಕೊನೆ ಕ್ಷಣದಲ್ಲಿ ಅತಿಯಾದ ಆತ್ಮವಿಶ್ವಾಸ.
- ಮೈಸೂರಿನಲ್ಲಿ ರಾಜೇಂದ್ರ ಭವನದಲ್ಲಿ ಖುದ್ದು ಮುಖ್ಯಮಂತ್ರಿ ಕರೆದರೂ ವೇದಿಕೆ ಏರದ ಗೋ.ಮಧುಸೂದನ್.
- ವಸತಿ ಸಚಿವ ವಿ.ಸೋಮಣ್ಣ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಒಳಜಗಳ ಗೊತ್ತಿದ್ದರೂ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಒಂದೇ ವೇದಿಕೆಯಲ್ಲಿ ಕೂರಿಸಿದ್ದು.
- ಪ್ರಚಾರ ಸಾಮಗ್ರಿಗಳಲ್ಲಿ ಕಣ್ಮರೆಯಾದ ಬಿ.ಎಸ್.ಯಡಿಯೂರಪ್ಪ ಫೋಟೋ
- ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ವಕೀಲ ವೃತ್ತಿ ಬಗ್ಗೆ ಸಂಸದ ಪ್ರತಾಪ್ ಸಿಂಹ ನೀಡಿದ ಹೇಳಿಕೆ.
- ಶಿಕ್ಷಕರು, ಇಂಜಿನಿಯರ್ಗಳು, ವೈದ್ಯರು, ಸರ್ಕಾರಿ ನೌಕರರ ನಿರ್ವಹಣೆಗೆ ಪ್ರತ್ಯೇಕ ತಂಡ. ಡಿಗ್ರಿ ಮುಗಿಸಿ ಹಳ್ಳಿಯಲ್ಲಿ ವ್ಯವಹಾಸ ಅಥವಾ ಸಣ್ಣಪುಟ್ಟ ವಹಿವಾಟು ನಡೆಸುವವರ ನಿರ್ಲಕ್ಷ್ಯ
ಅಭ್ಯರ್ಥಿಯ ಮತ ಎಂದ ಸಂಸದ
ಮೈ.ವಿ.ರವಿಶಂಕರ್ ನಾಲ್ಕು ದಶಕಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ. ಅವರ ಸೋಲು ನನಗೆ ನೋವುಂಟು ಮಾಡಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಚುನಾವಣೆ ಅಂದ ಮೇಲೆ ವ್ಯತ್ಯಾಸ ಆಗುವುದು ಸಹಜ. ಇದು ಕಾಂಗ್ರೆಸ್ ಗೆಲುವಲ್ಲ. ಮಧು ಜಿ.ಮಾದೇಗೌಡ ಅವರ ವೈಯುಕ್ತಿಕ ಗೆಲುವು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ೨೦೧೬ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ರವೀಂದ್ರ ಗಳಿಸಿದ್ದು ಕೇವಲ ೬,೦೦೦ ಮತ ಮಾತ್ರ. ಆದ್ದರಿಂದ ಸಿದ್ದರಾಮಯ್ಯ ಜಂಬ, ಸೊಕ್ಕಿನ ಮಾತು ಬಿಡಬೇಕು ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಇದನ್ನೂ ಓದಿ| ರಾಜ್ಯಸಭೆಯಲ್ಲಿ ಬಂದ ಮಾನ ಪರಿಷತ್‌ನಲ್ಲಿ ಹೋಯಿತು: ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ದೌಡು