ಬೆಂಗಳೂರು: ಬಿಜೆಪಿ ಎಸ್‌ಸಿ ಮೋರ್ಚಾದ ಮಾಜಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ವೆಂಕಟೇಶ್ ಮೌರ್ಯ ವಿರುದ್ಧ ಇಬ್ಬರು ಮಹಿಳೆಯರು ಗಂಭೀರ ಆರೋಪ ಮಾಡಿದ್ದು, ಅಶ್ಲೀಲ ಮೆಸೇಜ್ ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಮೌರ್ಯ ವಿರುದ್ಧ ಬೆಂಗಳೂರಿನ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹಾಗೆಯೇ, ಪೊಲೀಸ್ ಠಾಣೆ ಎದುರು ವಾಗ್ವಾದ ನಡೆದಿದೆ.
ಬೋವಿ ಸಮಾಜದ ನಾಯಕಿ ತುಳಸಿ ರಮೇಶ್ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆ ದೀಪಾ ಶ್ರೀನಿವಾಸ್ ಎಂಬುವರು ವೆಂಕಟೇಶ್ ಮೌರ್ಯ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಅಶ್ಲೀಲ ಮೆಸೇಜ್ ಕಳುಹಿಸಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಇನ್ನು ವೆಂಕಟೇಶ್ ಮೌರ್ಯ ಅವರೂ ಮಹಿಳೆಯರ ವಿರುದ್ಧ ಪ್ರತಿದೂರು ನೀಡಿದ್ದಾರೆ. “ಚಿತ್ರದುರ್ಗದ ಸ್ವಾಮೀಜಿಯೊಬ್ಬರ ಬಗ್ಗೆ ಪೋಸ್ಟ್ ಮಾಡಿರುವ ಕಾರಣ ಮಹಿಳೆಯರಿಂದ ಹಲ್ಲೆಗೆ ಯತ್ನಿಸಲಾಗಿದೆ. ಸ್ವಾಮೀಜಿ ಕಡೆಯವರಿಂದ ಹಲ್ಲೆಗೆ ಯತ್ನ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸ್ ಠಾಣೆ ಎದುರು ವಾಗ್ವಾದ
ಸದಾಶಿವ ನಗರ ಪೊಲೀಸ್ ಠಾಣೆ ಎದುರು ವೆಂಕಟೇಶ್ ಮೌರ್ಯ ಪರ ವಕೀಲ ಹಾಗೂ ಮಹಿಳೆಯರ ಮಧ್ಯೆ ವಾಗ್ವಾದ ನಡೆದಿದೆ. ಠಾಣೆಯ ಎದುರೇ ವಕೀಲರನ್ನು ತರಾಟೆಗೆ ತೆಗೆದುಕೊಂಡ ಮಹಿಳೆಯರು, “ಹೆಣ್ಣುಮಕ್ಕಳಿಗೆ ಅಶ್ಲೀಲ ಸಂದೇಶ ಕಳುಹಿಸಿದವನಿಗೆ ನೀವು ಸಪೋರ್ಟ್ ಮಾಡುತ್ತೀರಾ? ನಿಮ್ಮ ಮನೆಯ ಹೆಣ್ಣುಮಕ್ಕಳಿಗೂ ಹೀಗೆಯೇ ಆದರೆ ಸುಮ್ಮನಿರುತ್ತೀರಾ” ಎಂದು ಪ್ರಶ್ನಿಸಿದ್ದಾರೆ. ಸದ್ಯ, ಪೊಲೀಸರು ಪರಿಸ್ಥಿತಿ ತಹಬಂದಿಗೆ ತರಲು ಯತ್ನಿಸುತ್ತಿದ್ದಾರೆ.
ಇದನ್ನೂ ಓದಿ | Missing Case | ಲೇಡಿ ಪಿಎಸ್‌ಐ ಕಿರುಕುಳ ಆರೋಪ; ಡೆತ್‌ನೋಟ್ ಬರೆದಿಟ್ಟವ ನಾಪತ್ತೆ