ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಜೂನ್ 21ರಂದು ನಡೆಯಲಿರುವ ಕಾರ್ಯಕ್ರಮದ ಅಂಗವಾಗಿ ಮಲ್ಲೇಶ್ವರ ಶ್ರೀಕೃಷ್ಣ ವೆಲ್ನೆಸ್ ಯೋಗ ಮತ್ತು ಸಾಂಸ್ಕೃತಿಕ ಕೇಂದ್ರವು ನಡೆಸುವ ತಾಲೀಮಿಗೆ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸೋಮವಾರ ಚಾಲನೆ ನೀಡಿದರು.
ಈ ಕೇಂದ್ರವು ಮಂಗಳವಾರದಿಂದ ಒಂದು ಸಾವಿರ ಮಕ್ಕಳಿಗೆ ಮುಂದಿನ ಒಂದು ವಾರ ಕಾಲ ತರಬೇತಿ ನೀಡಲಿದೆ. ಬಳಿಕ, ಯೋಗ ದಿನದಂದು ಮಲ್ಲೇಶ್ವರ ಆಟದ ಮೈದಾನದಲ್ಲಿ ಮುಖ್ಯ ಪ್ರದರ್ಶನ ನಡೆಯಲಿದೆ.
ಈ ಬಾರಿಯ ಯೋಗ ದಿನದ ಪ್ರಧಾನ ಕಾರ್ಯಕ್ರಮವು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಾಂಸ್ಕೃತಿಕ ನಗರವಾದ ಮೈಸೂರಿನಲ್ಲಿ ನಡೆಯಲಿದೆ. ಅಲ್ಲಿನ ಅರಮನೆಯಲ್ಲಿ ನಡೆಯಲಿರುವ ಯೋಗ ಪ್ರದರ್ಶನದಲ್ಲಿ ಹತ್ತಾರು ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅಶ್ವತ್ಥನಾರಾಯಣ, ಮೋದಿಯವರಿಂದಾಗಿ ಯೋಗಕ್ಕೆ ಜಾಗತಿಕ ಮನ್ನಣೆ ಸಿಕ್ಕಿ, ಅದರ ಪುನರುಜ್ಜೀವನ ಸಾಧ್ಯವಾಗಿದೆ. ಎಂಟನೇ ವರ್ಷದ ಯೋಗ ದಿನವು ʼಮಾನವೀಯತೆಗಾಗಿ ಯೋಗʼ ಎನ್ನುವ ಧ್ಯೇಯದೊಂದಿಗೆ ನಡೆಯಲಿದೆ. ಆಧುನಿಕ ಬದುಕಿನ ಒತ್ತಡಗಳನ್ನು ನಿವಾರಿಸಿಕೊಂಡು, ಮನೋವಿಕಾರಗಳ ಮೇಲೆ ನಿಯಂತ್ರಣ ಸಾಧಿಸಿ, ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಲು ಯೋಗವು ಮೂಲಾಧಾರವಾಗಿದೆ. ಆರೋಗ್ಯಕ್ಕೆ ಸಹಕಾರ ನೀಡುವ ಜತೆಗೆ ಯೋಗವು ಚಿತ್ತಶಾಂತಿ ಮತ್ತು ದೈವ ಸಾಕ್ಷಾತ್ಕಾರಕ್ಕೂ ದಾರಿ ತೋರಿಸುತ್ತದೆ ಎಂದು ಅವರು ಬಣ್ಣಿಸಿದರು.
ಯೋಗವು ಜಗತ್ತಿಗೆ ಪ್ರಾಚೀನ ಭಾರತದ ಕೊಡುಗೆಯಾಗಿದೆ. ಪತಂಜಲಿಗಳಿಂದ ಆರಂಭವಾದ ಯೋಗ ಪರಂಪರೆಗೆ ಕರ್ನಾಟಕದ ಮೈಸೂರಿನ ಕೊಡುಗೆಯೂ ಮೌಲಿಕವಾಗಿದೆ. ಮುಮ್ಮಡಿ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇದಕ್ಕೆ ನೀಡಿದ ಪ್ರೋತ್ಸಾಹ ಅಪಾರವಾದುದು. ಈಗ ಬೆಂಗಳೂರಿನಲ್ಲೂ ಯೋಗದ ಅಲೆ ಎದ್ದಿದ್ದು, ಜನರಿಗೆ ಇದರ ಮಹತ್ವ ಅರ್ಥವಾಗುತ್ತಿದೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಟಿ ಮತ್ತು ಯೋಗಾಭ್ಯಾಸಿ ಸಂಗೀತಾ ಬಿಜಲಾನಿ, ಸಂಸ್ಥೆಯ ಸಂಸ್ಥಾಪಕಿ ಮಿಮಿ ಪಾರ್ಥಸಾರಥಿ, ಬಿಜೆಪಿ ಮಲ್ಲೇಶ್ವರ ಮಂಡಲದ ಅಧ್ಯಕ್ಷೆ ಕಾವೇರಿ ಕೇದಾರನಾಥ್ ಪಾಲ್ಗೊಂಡಿದ್ದರು.
ಇದನ್ನೂ ಓದಿ: ಅರಮನೆ ಅಂಗಳದಲ್ಲಿ ಯೋಗ ದಿನ ಪೂರ್ವಾಭ್ಯಾಸ; ಭರ್ಜರಿ ಸಿದ್ಧತೆ