Site icon Vistara News

Bengaluru Chennai Expressway : ಬರೀ 2 ಗಂಟೆಯಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಹೋಗ್ಬೇಕಾ? ಹೀಗೆ ಬನ್ನಿ!

Bengaluru Chennai Expressway

ಬೆಂಗಳೂರು: ಯಾವುದೂ ಈಗ ಕನಸಲ್ಲ. ಇಂದು ಕನಸಿನಂತೆ ಕಂಡದ್ದು ನಾಳೆ ನನಸಾಗಿ ಬಿಡುತ್ತದೆ. ಈಗ ಒಂದು ಕಲ್ಪನೆ ಮಾಡಿಕೊಳ್ಳಿ. ನೀವು ಮೂಲತಃ ಬೆಂಗಳೂರಿನವರು. ಚೆನ್ನೈಯಲ್ಲಿರುವ ಕಂಪನಿಗೆ ವರ್ಗಾವಣೆ ಆಗಿದೆ (Bangalore to Chennai). ಹಾಗಂತ ನೀವು ಅಲ್ಲೊಂದು ಮನೆ ಮಾಡಿ ವಾಸ ಮಾಡಬೇಕಾಗಿಲ್ಲ. ಬೆಂಗಳೂರಿನಿಂದ ನಿತ್ಯ ಪ್ರಯಾಣ ಮಾಡಿ ಚೆನ್ನೈಯಲ್ಲಿ ಕೆಲಸ ಮಾಡಬಹುದು. ಬೆಳಗ್ಗೆ 7 ಗಂಟೆಗೆ ಬೆಂಗಳೂರಿನಿಂದ ಹೊರಟರೆ 9 ಗಂಟೆಗೆ ಚೆನ್ನೈ. 9.30ಕ್ಕೆ ಕಚೇರಿ ತಲುಪಿ ಕೆಲಸ ಶುರು ಮಾಡಿ 5.30ಕ್ಕೆ ಲಾಗ್‌ ಔಟ್‌ ಆದರೆ ಎಂಟು ಗಂಟೆಗೆ ಬೆಂಗಳೂರು ತಲುಪಿರುತ್ತೀರಿ!

ಇದು ಹೇಗೆ ಸಾಧ್ಯ? ಅತಿ ವೇಗದಲ್ಲಿ ಸಂಚರಿಸುವ ವಂದೇ ಮಾತರಂ ರೈಲಿನಲ್ಲಿ (Vande Mataram Train) ಹೋದರೂ ಬೆಂಗಳೂರಿನಿಂದ ಚೆನ್ನೈಗೆ ನಾಲ್ಕೂವರೆ ಗಂಟೆ ಬೇಕು. ಹಾಗಿರುವಾಗ ಬೆಂಗಳೂರಿನಿಂದ ಚೆನ್ನೈಗೆ ಹೋಗಲು ಎರಡೇ ಗಂಟೆ ಸಾಕು ಅಂದರೆ ನಂಬೋದು ಹೇಗೆ ಅಂತೀರಾ? ಇನ್ನೊಂದು ವರ್ಷದಲ್ಲಿ ಸಿದ್ಧವಾಗಲಿರುವ ಬೆಂಗಳೂರು – ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru Chennai Expressway) ಒಮ್ಮೆ ತೆರೆದುಕೊಂಡರೆ ಈ ಕನಸು ನನಸಾಗಲಿದೆ.

ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ (Central Minister Nitin Gadkari) ಅವರು ಕೊಟ್ಟಿರುವ ಹೊಸ ಅಪ್‌ ಡೇಟ್‌ ಪ್ರಕಾರ, ಈ ವರ್ಷದೊಳಗೆ ಎಕ್ಸ್‌ಪ್ರೆಸ್‌ವೇ ಯೋಜನೆಯನ್ನು ಮುಗಿಸಲು ಹೆದ್ದಾರಿ ಸಚಿವಾಲಯವು ಪ್ರಯತ್ನಿಸುತ್ತಿದೆ.

ಚೆನ್ನೈ – ಬೆಂಗಳೂರು ಎಕ್ಸ್‌ಪ್ರೆಸ್‌ವೇ ಕಾಮಗಾರಿ ಈ ವರ್ಷಾಂತ್ಯದೊಳಗೆ ಮುಕ್ತವಾಗಲಿದ್ದು, ಆ ಬಳಿಕ ವಾಹನ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆಯಿದೆ. ಶೀಘ್ರದಲ್ಲೇ ಎಕ್ಸ್‌ಪ್ರೆಸ್‌ವೇ ನಿರ್ಮಾಣವನ್ನು ಪೂರ್ಣಗೊಳಿಸಲು ತಮಿಳುನಾಡು ಸರ್ಕಾರದೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಕೆಲಸ ಮಾಡುತ್ತಿದೆ. ಈ ವರ್ಷದ ಡಿಸೆಂಬರ್‌ ವೇಳೆಗೆ ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆಗೊಳ್ಳುವ ನಿರೀಕ್ಷೆ ಇದೆ ಎನ್ನುವುದು ಸಚಿವ ನಿತಿನ್ ಗಡ್ಕರಿ ಮಾತು.

ಕೇವಲ ಎರಡು ಗಂಟೆಯಲ್ಲಿ ರೀಚ್‌ ಆಗೋದು ಸಾಧ್ಯವಾ?

ಎಲ್ಲರಿಗೂ ಗೊತ್ತಿರುವಂತೆ ಕರ್ನಾಟಕ ಮತ್ತು ತಮಿಳುನಾಡು ರಾಜಧಾನಿಗಳನ್ನು ಸಂಪರ್ಕಿಸುವ ಮಾರ್ಗದ ದೂರ 300 ಕಿ.ಮೀ. ಆದರೆ, ಎಕ್ಸ್‌ಪ್ರೆಸ್‌ ವೇ ಈ ದೂರವನ್ನು 262 ಕಿಮೀ.ಗಳಿಗೆ ಇಳಿಸಿದೆ. ಹೊಸ ರಸ್ತೆಯಲ್ಲಿ ಓಡಾಡುವ ವಾಹನಗಳ ವೇಗ ಸುಮಾರು 130 ಕಿ.ಮೀ.ಗೂ ಏರಿಸಬಹುದು (ಇದು ಮೊದಲು 100 ಕಿ.ಮೀ. ನಿಂದ ಹಂತಹಂತವಾಗಿ ಏರಿಕೆಯಾಗಲಿದೆ). ಹೀಗೆ ಗಂಟೆಗೆ 130 ಕಿ.ಮೀ. ವೇಗದಲ್ಲಿ ಒಂದು ಕಾರು ಸಾಗಲು ಸಾಧ್ಯವಾದರೆ ಬೆಂಗಳೂರಿನಿಂದ ಚೆನ್ನೈಯನ್ನು ಕೇವಲ 2 ಗಂಟೆಗಳಲ್ಲಿ ತಲುಪಹುದು. ಈಗ ಚೆನ್ನೈ – ಬೆಂಗಳೂರು ನಡುವೆ ಪ್ರಯಾಣದ ಅವಧಿಯು 5 ರಿಂದ 6 ಗಂಟೆಯಿದೆ.

ಇದನ್ನೂ ಓದಿ : Bangalore- Mysore Expressway: ಎಕ್ಸ್‌ಪ್ರೆಸ್‌ ವೇಯಲ್ಲಿ ಅಪಘಾತ ತಡೆಯಲು ಸ್ಪೀಡ್‌ ರೇಡಾರ್‌ ಗನ್

ಖರ್ಚು ವೆಚ್ಚ ಎಷ್ಟು? ಏನೇನು ಸ್ಪೆಷಾಲಿಟಿ ಈರಸ್ತೆಯದ್ದು?

  1. ಎಕ್ಸ್‌ಪ್ರೆಸ್‌ವೇ ನಿರ್ಮಾಣ ಮಾಡಲು ರೂ.16,730 ಕೋಟಿ ಖರ್ಚು ಮಾಡಲಾಗುತ್ತಿದೆ.
  2. ಹೆದ್ದಾರಿಯು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಮೂಲಕ ಹಾದು ಹೋಗುತ್ತದೆ.
  3. ಇದು 4 ಪಥದ ರಸ್ತೆಯಾಗಿದ್ದು, ವಾಹನಗಳ ದಟ್ಟಣೆಗೆ ಅನುಗುಣವಾಗಿ 8 ಪಥಗಳಿಗೆ ವಿಸ್ತರಿಸಬಹುದು.
  4. ಬೆಂಗಳೂರು – ಚೆನ್ನೈ ಎಕ್ಸ್‌ಪ್ರೆಸ್‌ವೇ, 17 ಫ್ಲೈಓವರ್‌ (ಮೇಲ್ಸೇತುವೆ), 41 ವಾಹನ ಕೆಳಸೇತುವೆ, 52 ಪಾದಚಾರಿ ಕೆಳಸೇತುವೆ ಮತ್ತು 4 ರೈಲ್ವೆ ಕ್ರಾಸಿಂಗ್‌ನ್ನು ಹೊಂದಿರಲಿದೆ.
  5. ಇದು ದೇಶದ ಮೊದಲ ‘ಹಸಿರು ಹೆದ್ದಾರಿ’ ಆಗಲಿದೆ. ರಸ್ತೆ ಕಾಮಗಾರಿಗೆ 33 ಕಿಲೋಮೀಟರ್ ಅರಣ್ಯ ಜಾಗವನ್ನು ಬಳಸಲಾಗುತ್ತಿದೆ. ಕಡಿದ ಮರಗಳಿಗೆ ಬದಲಾಗಿ, ಹೆದ್ದಾರಿ ಅಕ್ಕ-ಪಕ್ಕದಲ್ಲಿ ಹೆಚ್ಚಿನ ಮರಗಳನ್ನು ಬೆಳೆಸಲಾಗುತ್ತಿದೆ.

ಹೆದ್ದಾರಿ ಎಲ್ಲಿಂದ ಎಲ್ಲಿವರೆಗೆ ನಿರ್ಮಾಣವಾಗಲಿದೆ ಈ ಹೆದ್ದಾರಿ?

  1. ಬೆಂಗಳೂರು – ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru Chennai Expressway), ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ ಶುರುವಾಗಿ, ಚೆನ್ನೈ ಹೊರವಲಯದ ಶ್ರೀಪೆರಂಬದೂರಿನಲ್ಲಿ ಮುಕ್ತಾಯವಾಗಲಿದೆ.
  2. ಕರ್ನಾಟಕದ ಬೆಂಗಳೂರು ಗ್ರಾಮಾಂತರ, ಕೋಲಾರ, ಆಂಧ್ರ ಪ್ರದೇಶದ ಚಿತ್ತೂರು, ತಮಿಳುನಾಡಿನ ರಾಣಿಪೇಟೆ ಮತ್ತು ಶ್ರೀಪೆರಂಬದೂರುಗಳನ್ನು ಸಂಪರ್ಕಿಸುತ್ತದೆ.
  3. ಸದ್ಯವಿರುವ ಬೆಂಗಳೂರು – ಚೆನ್ನೈ ಹೆದ್ದಾರಿಗಳಿಗೆ ಹೋಲಿಸಿದರೆ, ಬೇಗನೆ ಹೊಸ ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಯಾಣಿಸಬಹುದು.

Exit mobile version