ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ (Congress Guarantee) ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಗಳಲ್ಲಿ ಐದನೆಯದಾದ ಯುವ ನಿಧಿಗೆ (Yuva Nidhi Scheme) ನೋಂದಣಿ ಆರಂಭಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 26ರಂದು ಯೋಜನೆ ನೋಂದಣಿಗೆ ಚಾಲನೆ ನೀಡಿದ್ದಾರೆ. 2024ರ ಜನವರಿ 12ರಂದು ಶಿವಮೊಗ್ಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಯುವ ನಿಧಿ ಯೋಜನೆ ಉದ್ಘಾಟನೆಗೊಳ್ಳಲಿದೆ. ಅದುವರೆಗೆ ನೋಂದಣಿ ಮಾಡಿಕೊಂಡು ದೃಢೀಕರಿಸಲ್ಪಟ್ಟ ಪದವೀಧರ/ಡಿಪ್ಲೊಮಾ ಹೋಲ್ಡರ್ ನಿರುದ್ಯೋಗಿ ಯುವಕ ಯುವತಿಯರಿಗೆ ಅಂದೇ ಡಿಬಿಟಿ ಮೂಲಕ ಭತ್ಯೆಯನ್ನು ವಿತರಿಸಲಾಗುತ್ತದೆ.
ಹಾಗಿದ್ದರೆ ನೀವು ಅರ್ಜಿ ಸಲ್ಲಿಸಬೇಕಲ್ಲ! ಅರ್ಜಿ ಸಲ್ಲಿಸಬೇಕು ಅಂದರೆ ಏನು ಮಾಡಬೇಕು? ಅರ್ಜಿ ಸಲ್ಲಿಕೆಗೆ ಅರ್ಹತೆಗಳೇನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಏನಿದು ಯುವನಿಧಿ ಯೋಜನೆ? ಯಾರಿಗೆ ಸಿಗುತ್ತದೆ ಹಣ?
- ಯುವ ನಿಧಿ ಯೋಜನೆಯ ಫಲಾನುಭವಿಯಾಗುವುದಕ್ಕೆ ಇರಬೇಕಾದ ಅರ್ಹತೆ ಮತ್ತು ಸಿಗುವ ಭತ್ಯೆ ವಿವರ ಹೀಗಿದೆ.
- 2022- 23ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಸಿಗದೆ ಇರುವವರಿಗೆ ಈ ಯೋಜನೆಯ ಲಾಭ ಸಿಗಲಿದೆ.
- ವೃತ್ತಿಪರ ಕೋರ್ಸ್ ಒಳಗೊಂಡು ಎಲ್ಲ ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ನೀಡಲಾಗುತ್ತದೆ.
- ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂಪಾಯಿ ನಿರುದ್ಯೋಗ ಭತ್ಯೆ ಸಿಗಲಿದೆ.
- ಈ ಭತ್ಯೆಯು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳ ಅವಧಿಗೆ ಸಿಗಲಿದೆ.
- ಯಾವುದಾದರೂ ಉದ್ಯೋಗ ಸಿಕ್ಕಿದ ಕೂಡಲೇ ಈ ಸವಲತ್ತು ಸ್ಥಗಿತಗೊಳ್ಳಲಿದೆ.
ಯುವ ನಿಧಿ ಯೋಜನೆ ಷರತ್ತುಗಳು ಇವು
- ‘ಸೇವಾ ಸಿಂಧು’ ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಬೇಕು
- ನಿರುದ್ಯೋಗ ಸ್ಥಿತಿ ಬಗ್ಗೆ ಸ್ವಯಂ ಘೋಷಣೆ ಮಾಡಿದರೆ ಸಾಕಾಗುತ್ತದೆ. ಆದರೆ, ಅಸತ್ಯದ ಪ್ರಮಾಣ ಸಲ್ಲದು.
- ಪದವಿ/ ಡಿಪ್ಲೊಮಾ ಮುಗಿಸಿದ ಫ್ರೆಷರ್ಸ್‌ಗೆ 6 ತಿಂಗಳಾದರೂ ಉದ್ಯೋಗ ಸಿಗದೆ ಇದ್ದರೆ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ.
- ಪ್ರತಿ ಫಲಾನುಭವಿಗೆ 2 ವರ್ಷಗಳಿಗೆ ಮಾತ್ರ ಈ ಯೋಜನೆ ಸೀಮಿತ. 2 ವರ್ಷಗಳೊಳಗೆ ಉದ್ಯೋಗ ದೊರೆತರೆ ಯೋಜನೆ ಸೌಲಭ್ಯ ಸ್ಥಗಿತವಾಲಿದೆ.
- ಉದ್ಯೋಗ ದೊರೆತ ನಂತರ ಘೋಷಣೆ ಮಾಡಿಕೊಂಡು ಭತ್ಯೆ ಸ್ವೀಕರಿಸುವುದನ್ನು ನಿಲ್ಲಿಸಬೇಕು. ಇಲ್ಲದೇ ಇದ್ದರೆ ದಂಡ ವಿಧಿಸಲಾಗುತ್ತದೆ.
ಯಾರಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ?
- ಉನ್ನತ ವ್ಯಾಸಂಗಕ್ಕೆ ದಾಖಲಾಗುವವರು ಮತ್ತು ವಿದ್ಯಾಭ್ಯಾಸ ಮುಂದುವರಿಸುವವರು.
- ಯಾವುದೇ ಅಪ್ರೆಂಟಿಸ್ ವೇತನ ಪಡೆಯುತ್ತಿರುವವರು.
- ಸರ್ಕಾರಿ/ ಖಾಸಗಿ ಉದ್ಯೋಗ ಪಡೆದಿರುವವರು ಈ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ.
- ಸರ್ಕಾರದ ನಾನಾ ಯೋಜನೆಗಳಡಿ ಅಥವಾ ಬ್ಯಾಂಕ್ ಸಾಲ ಪಡೆದು ಸ್ವಯಂ ಉದ್ಯೋಗ ಶುರು ಮಾಡಿದವರಿಗೂ ಇಲ್ಲ.
ಯುವ ನಿಧಿಗೆ ಅರ್ಜಿ ಸಲ್ಲಿಕೆಗೆ ಏನೇನು ದಾಖಲೆ ಬೇಕು?
- ಕರ್ನಾಟಕ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ
- ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ತೆಗೆದಿಟ್ಟುಕೊಳ್ಳಿ.
- ನಿಮ್ಮ ಬ್ಯಾಂಕ್ ಖಾತೆ ಮಾಹಿತಿ ಸ್ಪಷ್ಟವಾಗಿರಬೇಕು, ಖಾತೆಯೇ ಇಲ್ಲದಿದ್ದರೆ ಈಗಲೇ ಮಾಡಿಸಿ, ಕೆವೈಸಿ ಕೂಡಾ ಮಾಡಿ ಇಡಿ.
- ಪದವಿ ಅಂಕಪಟ್ಟಿ ಹಾಗೂ ವಿಶ್ವವಿದ್ಯಾಲಯ ಪದವಿ ಪ್ರಮಾಣ ಪತ್ರ ಕಡ್ಡಾಯ (ಅದು 2023ರದ್ದೇ ಆಗಿರಬೇಕು, ಶಿಕ್ಷಣ ಮುಗಿಸಿ ಆರು ತಿಂಗಳು ಆಗಿರಬೇಕು)
- ಡಿಪ್ಲೊಮಾ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರ. (ಅದು 2023ರದ್ದೇ ಆಗಿರಬೇಕು, ಶಿಕ್ಷಣ ಮುಗಿಸಿ ಆರು ತಿಂಗಳು ಆಗಿರಬೇಕು)
ಈಗ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನೋಡೋಣ
ಇ-ಆಡಳಿತ ವಿಭಾಗದ ಅಡಿಯಲ್ಲಿ EDCS ಮೂಲಕ (Electronic Delivery of Citizen Services) ಯುವನಿಧಿಗಾಗಿ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದನ್ನು NICಯ ಬೆಂಬಲದೊಂದಿಗೆ EDCS ನಿರ್ವಹಿಸುವ ಸೇವಾಸಿಂಧು ವೇದಿಕೆಯ ಮೂಲಕ ಒದಗಿಸಲಾಗುತ್ತಿದೆ.
NAD (National Academic Depository) ಕೋಶದ ಮೂಲಕ 4.2 ಲಕ್ಷ ನೋಂದಾಯಿಸಿದ ವಿದ್ಯಾರ್ಥಿಗಳ ಪೈಕಿ 1.5 ಲಕ್ಷ ಅರ್ಹ ಫಲಾನುಭವಿ ವಿದ್ಯಾರ್ಥಿಗಳಿದ್ದು, ಇವರ ಪಟ್ಟಿಯನ್ನು ಒದಗಿಸಲಾಗಿದೆ. CSG (Centre for Smart Governance) ಅಭಿವೃದ್ಧಿಪಡಿಸಿದ UUCMS (The Unified University and College Management System) ಉನ್ನತ ಶಿಕ್ಷಣವನ್ನು ಮಾಡುವ ಅಭ್ಯರ್ಥಿಗಳನ್ನು ಹೊರಗಿಡಲು ಸಹಾಯ ಮಾಡುತ್ತಿದೆ.
ಯುವನಿಧಿ ಯೋಜನೆಯಡಿ ಸಹಾಯಧನ ಪಡೆಯಲು ವಿದ್ಯಾರ್ಥಿಗಳು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಗಳ ಮೂಲಕ ಜಾಲತಾಣ https://sevasindhugs.karnataka.gov.in ದಲ್ಲಿ ನೋಂದಾಯಿಸಬಹುದಾಗಿದೆ.
ಬೇರೆ ಎಲ್ಲೆಲ್ಲಿ ಅರ್ಜಿ ಸಲ್ಲಿಸಬಹುದು? ಉಚಿತ ಸಹಾಯ ಸಿಗುತ್ತಾ?
ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಗಳಿಗೆ ನಾಗರಿಕರನ್ನು ನೋಂದಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ EDCS ಅಡಿಯಲ್ಲಿ ಬೆಂಗಳೂರು ಒನ್, ಕರ್ನಾಟಕ ಒಂದು ಮತ್ತು ಗ್ರಾಮ ಒಂದು ಕೇಂದ್ರಗಳು ಯೋಜನೆಗೆ ಉಚಿತವಾಗಿ ನೋಂದಾಯಿಸಲು ಯುವಕರಿಗೆ ಸಹಾಯ ಮಾಡಲು ಸಿದ್ಧವಾಗಿವೆ.