Site icon Vistara News

TA Sharavana: ಅನಾಮಿಕರಾಗಿದ್ದ ಜಮೀರ್‌ಗೆ ರಾಜಕೀಯ ಬದುಕು ಕೊಟ್ಟಿದ್ದೇ ಜೆಡಿಎಸ್: ಟಿ.ಎ.ಶರವಣ

MLC TA Sharavana

ಬೆಂಗಳೂರು: ಮಾನ್ಯ ವಸತಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಖಾತೆ ಮಂತ್ರಿಗಳಾದ ಜಮೀರ್‌ ಅಹ್ಮದ್‌ ಖಾನ್‌ ಅವರು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ ಬಗ್ಗೆ ಆಡಿರುವ ಕ್ಷುಲ್ಲಕ ಮಾತುಗಳು ಅವರ ಘನತೆಗೆ ತಕ್ಕುದಲ್ಲ ಎಂದು ಜೆಡಿಎಸ್ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ (TA Sharavana) ಹೇಳಿದ್ದಾರೆ.

ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರ ಬಗ್ಗೆ ಮಂತ್ರಿ ಜಮೀರ್‌ ಅಹ್ಮದ್‌ ಮಾಡಿರುವ ಟೀಕೆಗೆ ಕಿಡಿಕಾರಿರುವ ಅವರು, “ತಮ್ಮ ರಾಜಕೀಯ ಬದುಕಿನ ಆರಂಭದ ಕಾಲದಲ್ಲಿ ಕುಮಾರಸ್ವಾಮಿ ಅವರ ಜತೆಗಿದ್ದು, ಅವರಿಂದ ರಾಜಕೀಯ ಲಾಭ ಪಡೆದು, ಏಳಿಕೆಯಾಗಿ ಈಗ ವ್ಯಕ್ತಿಗತವಾಗಿ ನಿಂದಿಸುವ ಮಟ್ಟಕ್ಕೆ ಜಮೀರ್ ಅಹಮದ್ ಹೋಗಿರುವುದು ಅವರ ಮಟ್ಟವನ್ನು ತೋರಿಸುತ್ತದೆ” ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜಕೀಯವಾಗಿ ಅನಾಮಿಕರಾಗಿದ್ದ ಜಮೀರ್ ಅವರನ್ನು ಗುರುತಿಸಿ, ಮಂತ್ರಿ ಸ್ಥಾನ ಕೊಟ್ಟು ಅವರಿಗೆ ಅಸ್ತಿತ್ವವನ್ನು ತಂದು ಕೊಟ್ಟವರು ಕುಮಾರಣ್ಣ. ಅವರಿಗೆ ರಾಜಕೀಯ ಬದುಕು ಕೊಟ್ಟಿದ್ದೇ ಜೆಡಿಎಸ್. ಅದನ್ನೇ ಮರೆತು, ಬದುಕು ಕೊಟ್ಟ ಪಕ್ಷ, ನಾಯಕರ ಬಗ್ಗೆ ವಿದ್ರೋಹಿ ಮಾತುಗಳನ್ನು ಆಡುತ್ತಿರುವ ಜಮೀರ್ ಅಹಮದ್ ಅವರ ನಡೆ ಖಂಡನಾರ್ಹ ಎಂದು ಆಕ್ಷೇಪಿಸಿದ್ದಾರೆ.

ಈ ಹಿಂದೆ ಜಮೀರ್ ರಾಜಕೀಯವಾಗಿ ಇನ್ನೂ ಕಣ್ಣು ಬಿಡುತ್ತಿದ್ದಾಗ, ಯಾವ ಕುಮಾರಣ್ಣ ಅವರನ್ನು ತಮ್ಮದೇ ಬಸ್‌ನಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿಕೊಂಡು ಹೋದಾಗ ಯಾವ ಚಡ್ಡಿ ಹಾಕಿದ್ದರೋ, ಈಗಲೂ ಅಂಥದ್ದೇ ಚಡ್ಡಿ ಹಾಕಿದ್ದಾರೆ. ಆಗ ಜಮೀರ್‌ ಅಹ್ಮದ್‌ ಅವರಿಗೆ ಪರಿವೆ ಇರಲಿಲ್ಲವೇ? ಕುಮಾರಣ್ಣ ಯಾವತ್ತೂ ಬದಲಾಗಿಲ್ಲ. ನಂಬಿದ ತತ್ವ ಸಿದ್ಧಾಂತದಲ್ಲಿ ರಾಜಿ ಮಾಡಿಕೊಂಡು ಅಧಿಕಾರಕ್ಕಾಗಿ ರಾಜಕಾರಣ ಮಾಡಿದವರಲ್ಲ ಎಂದು ಶರವಣ ಹೇಳಿದ್ದಾರೆ.

ಇದನ್ನೂ ಓದಿ | Caste Census Report : ಮೋದಿ ಅಸಮಾಧಾನದ ಮಧ್ಯೆ ರಾಜ್ಯದಲ್ಲಿ ಮಂಡನೆಯಾಗುತ್ತಾ ಜಾತಿಗಣತಿ ವರದಿ?

ರಾಜಕಾರಣ ನಿಂತ ನೀರಲ್ಲ. ಕಾಲಾಂತರದಲ್ಲಿ ಬದಲಾಗುತ್ತದೆ. ಆದರೆ ಹತ್ತಿದ ಏಣಿಯನ್ನೇ ಕಾಲಲ್ಲಿ ಒದೆಯುವ ಜಮೀರ್ ಅಹ್ಮದ್ ಮನಸ್ಥಿತಿ ಸರಿಯಲ್ಲ. ಇದು ರಾಜಕೀಯ ದ್ರೋಹದ ಮನೋಭಾವ ಎನ್ನದೆ ವಿಧಿಯಿಲ್ಲ ಎಂದವರು ಟೀಕಿಸಿದ್ದಾರೆ.

ಅಲ್ಪ ಸಂಖ್ಯಾತರ ಬಗ್ಗೆ ಕುಮಾರಸ್ವಾಮಿ ಅವರು ಯಾವತ್ತೂ ಅಗೌರವದ ಮಾತಾಡಿಲ್ಲ. ಚನ್ನಪಟ್ಟಣದಲ್ಲಿ ತಾವು ಗೆಲ್ಲಲು ಅಲ್ಪಸಂಖ್ಯಾತರೂ ಕಾರಣ ಎಂದು ಹೇಳಿದ್ದಾರೆ. ಅನಗತ್ಯವಾಗಿ ಅವರ ಹೇಳಿಕೆಯನ್ನು ತಿರುಚುವುದು ಬೇಡ ಎಂದಿದ್ದಾರೆ.

ಇದನ್ನೂ ಓದಿ | ST Reservation : ಎಸ್‌ಟಿಗೆ ಕುರುಬ ಸಮುದಾಯವನ್ನು ಸೇರ್ಪಡೆ ಮಾಡಬೇಕಿರುವುದು ಕೇಂದ್ರ: ಸಿಎಂ ಸಿದ್ದರಾಮಯ್ಯ

ಅಲ್ಪ ಸಂಖ್ಯಾತರು ತಮ್ಮ ಸ್ವತ್ತು ಎಂದು ತಿಳಿದು, ಅವರನ್ನು ಗುತ್ತಿಗೆ ಪಡೆದವರಂತೆ ವರ್ತಿಸುವುದು ಜಮೀರ್‌ ಅಹ್ಮದ್‌ ಅವರಿಗೆ ಘನತೆ ತರುವುದಿಲ್ಲ. ಸರಿಯಲ್ಲ ಎಂದು ಅವರಿಗೆ ನಾನು ತಿಳಿ ಹೇಳುತ್ತೇನೆ ಎಂದು ಶರವಣ ತಿರುಗೇಟು ನೀಡಿದ್ದಾರೆ.

Exit mobile version