ನೆಲಮಂಗಲ: ರಾಮನಗರದ ಮಾಗಡಿ ತಾಲೂಕಿನ ಕಳ್ಳಿಪಾಳ್ಯದಲ್ಲಿ ಟ್ರಾನ್ಸ್‌ಫಾರ್ಮರ್ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಲೈನ್‌ಮ್ಯಾನ್ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಶರಣ ಬಸಪ್ಪ (30) ಮೃತ ದುರ್ದೈವಿ. ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಚಲುಮಿ ಗ್ರಾಮ ನಿವಾಸಿಯಾಗಿರುವ ಶರಣ ಬಸಪ್ಪ, ಕಳೆದ 9 ವರ್ಷಗಳಿಂದ ಬೆಸ್ಕಾಂನಲ್ಲಿ ಲೈನ್‌ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಬುಧವಾರ ರಾತ್ರಿ ಕಳ್ಳಿಪಾಳ್ಯ ಗ್ರಾಮದಲ್ಲಿ ಕೆಟ್ಟು ಹೋದ ಟ್ರಾನ್ಸ್‌ಫಾರ್ಮರ್ ರಿಪೇರಿಗೆ ಹೋದಾಗ ವಿದ್ಯುತ್ ತಂತಿ ಸ್ಪರ್ಶಿಸಿದ್ದರಿಂದ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.
ನೌಕರರ ಮೇಲೆ ಮೇಲಧಿಕಾರಿಗಳ ಒತ್ತಡ ಆರೋಪ ಕೇಳಿ ಬಂದಿದ್ದು, ಇತರೆ ನೌಕರರು ನೆಲಮಂಗಲ ಶವಾಗಾರದ ಮುಂದೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಾರದ ಕಾರಣ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
7 ತಿಂಗಳ ಹಿಂದಷ್ಟೇ ವಿವಾಹವಾಗಿದ್ದವನ ಮನೆಯಲ್ಲಿ ಸೂತಕದ ಛಾಯೆ
ಮನೆಗೆ ಶರಣಬಸಪ್ಪನೇ ಆಧಾರಸ್ತಂಭವಾಗಿದ್ದರು. ಕಳೆದ 7 ತಿಂಗಳ ಹಿಂದಷ್ಟೇ ಮದುವೆ ಆಗಿದ್ದರು. ಎಲ್ಲರೂ ಯುಗಾದಿ ಹಬ್ಬದ ಆಚರಣೆ ಖುಷಿಯಲ್ಲಿದ್ದರೆ ಶರಣ ಬಸಪ್ಪ, ಮೇಲಧಿಕಾರಿಗಳ ಒತ್ತಡಕ್ಕೆ ಮಣಿದು ಕೆಲಸಕ್ಕೆ ಹೋದವರು ಮಸಣ ಸೇರಿದ್ದಾರೆ.
ಯುಗಾದಿ ಹಿನ್ನೆಲೆ ಹಾಗೂ ಸಿಬ್ಬಂದಿ ಕೊರತೆ ಎಂದು ಶರಣಬಸಪ್ಪನ ಮೇಲೆ ಅಧಿಕಾರಿಗಳು ಒತ್ತಡ ಹಾಕಿ ಒಬ್ಬನನ್ನೇ ಕೆಟ್ಟುಹೋದ ಟ್ರಾನ್ಸ್‌ಫಾರ್ಮರ್ ರಿಪೇರಿ ಕೆಲಸಕ್ಕೆ ಕಳುಹಿಸಿದ್ದಾರೆ. ಅಲ್ಲದೆ, ಯಾವುದೇ ಸುರಕ್ಷತಾ ಕ್ರಮ ಇಲ್ಲದೆ ಕೆಲಸಕ್ಕೆ ಕಳುಹಿಸಿದ್ದರಿಂದ ಈ ದುರ್ಘಟನೆ ನಡೆದಿದೆ ಎಂದು ಕುಟುಂಬಸ್ಥರು ಹಾಗೂ ಸಹ ನೌಕರರು ಆರೋಪಿಸಿದ್ದಾರೆ.
ಇದನ್ನೂ ಓದಿ: Murder Case: ದಾವಣಗೆರೆಯಲ್ಲಿ ಯುವಕನೊಬ್ಬನ ಕುತ್ತಿಗೆ ಕೊಯ್ದು, ಕಲ್ಲು ಎತ್ತಿ ಹಾಕಿ ಬರ್ಬರ ಹತ್ಯೆ
ಘಟನೆ ನಡೆದರೂ ಯಾವೊಬ್ಬ ಅಧಿಕಾರಿ ಸ್ಥಳಕ್ಕೆ ಬಾರದ ಕಾರಣ ಬೆಸ್ಕಾಂ ಇಲಾಖೆ ಸಿಬ್ಬಂದಿ ನೆಲಮಂಗಲ ಶವಾಗಾರ ಎದುರು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆಗೆ ನಡೆಸಿದರು. ಪ್ರತಿಭಟನೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾಗಡಿ ವಿಭಾಗದ ಬೆಸ್ಕಾಂ ಅಧಿಕಾರಿ ಸ್ಥಳಕ್ಕೆ ಧಾವಿಸಿದರು. ಈ ವೇಳೆ ಅಧಿಕಾರಿಯನ್ನು ಕುಟುಂಬಸ್ಥರು ತರಾಟೆಗೆ ತೆಗೆದುಕೊಂಡರು. ಬಳಿಕ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಹಾಗೂ ಕುಟುಂಬದಲ್ಲಿ ಒಬ್ಬರಿಗೆ ಕೆಲಸ ಕೊಡಿಸುವ ಪ್ರಯತ್ನ ಮಾಡುತ್ತೇವೆ. ಈ ಘಟನೆಗೆ ಕಾರಣವಾದ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಮಂಜುನಾಥ್ ಭರವಸೆ ನೀಡಿದ ಮೇಲೆ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ