ಬೆಂಗಳೂರು: ಇಲ್ಲಿನ ಸುದ್ಗುಂಟೆಪಾಳ್ಯ ಬಳಿ ಇರುವ ಸೆಂಟ್ ಕ್ರೈಸ್ಟ್ ಕಾಲೇಜು ಬಳಿ ಮಂಗಳವಾರ (ಆ.22) ಮಧ್ಯಾಹ್ನ 3 ಗಂಟೆ ಸುಮಾರಿಗೆ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಮೇಲೆ ವಿದ್ಯುತ್ ತಂತಿ (electric shock) ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದಳು. ಈ ಘಟನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಗಳು ಕೇಳಿ ಬಂದಿದ್ದವು. ಸದ್ಯ ಎಚ್ಚೆತ್ತಿರುವ ಬೆಸ್ಕಾಂ (BESCOM Order) ಅಧಿಕಾರಿಗಳು ಅನಧಿಕೃತ ಕೇಬಲ್‌ಗಳ ತೆರವಿಗೆ ಒಂದು ವಾರದ ಗಡುವು ನೀಡಿದೆ.
ಬೆಸ್ಕಾಂ ವಿದ್ಯುತ್ ಕಂಬಗಳ ಮೇಲೆ ಅನಧಿಕೃತವಾಗಿ ಓಎಫ್‌ಸಿ ಕೇಬಲ್ ಹಾಗೂ ಇನ್ನಿತರ ಕೇಬಲ್‌ಗಳನ್ನು ಅಳವಡಿಸಲಾಗಿದೆ. ಪರಿಣಾಮ ವಿದ್ಯುತ್ ಕಂಬ ಉರುಳಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪಾದಚಾರಿಗಳು ಗಾಯಗೊಂಡಿದ್ದಾರೆ. ಹೀಗಾಗಿ ಸುರಕ್ಷತೆ ದೃಷ್ಠಿಯಿಂದ ಅನಧಿಕೃತ ಕೇಬಲ್‌ಗಳನ್ನು ತೆರವುಗೊಳಿಸಲು ಬೆಸ್ಕಾಂ ನಿರ್ಧರಿಸಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಎಲ್ಲಾ ಓಎಫ್‌ಸಿ ಕೇಬಲ್, ಡಾಟ ಕೇಬಲ್ ಹಾಗೂ ಡಿಶ್ ಕೇಬಲ್‌ಗಳನ್ನು ಒಂದು ವಾರದೊಳಗೆ ತೆರವುಗೊಳಿಸಬೇಕು. ಸಂಬಂಧಿಸಿದ ಇಂಟರ್ ನೆಟ್ ಸೇವಾ ಕಂಪನಿಗಳು, ಟಿವಿ ಕೇಬಲ್ ಆಪರೇಟರ್‌ಗಳಿಗೆ ಬೆಸ್ಕಾಂ ಕಟ್ಟು ನಿಟ್ಟಿನ ಸೂಚನೆ ನೀಡಿದೆ.
ಬೆಸ್ಕಾಂ ವಿದ್ಯುತ್ ಕಂಬಗಳಲ್ಲಿ ಹಾಕಿರುವ ಓಎಫ್‌ಸಿ, ಇಂಟರ್ ನೆಟ್ ಡಾಟ ಕೇಬಲ್ ಹಾಗೂ ಡಿಶ್‌ಕೇಬಲ್‌ಗಳನ್ನು ಒಂದು ವಾರದೊಳಗೆ ತೆರವುಗೊಳಿಸಬೇಕು. ಇಲ್ಲದಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಿದೆ ಎಂದು ಬೆಸ್ಕಾಂ ಎಚ್ಚರಿಕೆ ನೀಡಿದೆ.
ವಿದ್ಯಾರ್ಥಿನಿ ತಲೆ ಮೇಲೆ ಬಿದಿದ್ದ ವಿದ್ಯುತ್ ತಂತಿ!
ಏಕಾಏಕಿ ವಿದ್ಯುತ್ ತಂತಿ ಕಟ್ ಆಗಿ ಬಿದ್ದ ಪರಿಣಾಮ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿನಿ ಪ್ರಿಯಾಗೆ ತಾಗಿ ಶಾಕ್ (Electric shock ) ಹೊಡೆದಿತ್ತು. ಪರಿಣಾಮ ಮುಖದ ಭಾಗವು ಸೇರಿ ಶೇ. 40ರಷ್ಟು ದೇಹ ಸುಟ್ಟುಹೋಗಿತ್ತು. ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿತ್ತು.
ಇಂಟರ್‌ನೆಟ್ ಕೇಬಲ್‌ವೊಂದು ರಸ್ತೆಯಲ್ಲಿ ಬಿದ್ದಿತ್ತು. ಈ ವೇಳೆ ಅದೇ ರಸ್ತೆಯಲ್ಲಿ ಬಂದ ಕ್ಯಾಂಟರ್ ವಾಹನದ ಚಕ್ರಕ್ಕೆ ಕೇಬಲ್ ಸಿಲುಕಿಕೊಂಡಿತ್ತು. ವೇಗವಾಗಿ ಕ್ಯಾಂಟರ್ ವಾಹನ ತೆರಳುವಾಗ ಈ ಇಂಟರ್‌ನೆಟ್ ಕೇಬಲ್ ವಿದ್ಯುತ್ ಕಂಬಕ್ಕೆ ಸುತ್ತಿಕೊಂಡಿದ್ದರಿಂದ ವಿದ್ಯುತ್ ಕಂಬ ನೆಲಕ್ಕೆ ಉರುಳಿತ್ತು. ಈ ವೇಳೆ ರಸ್ತೆಯಲ್ಲಿ ನಡೆದು ಬರುತ್ತಿದ್ದಾಗ ಪ್ರಿಯಾ ತಲೆ ಮೇಲೆ ವಿದ್ಯುತ್ ಕಂಬ ತಂತಿಯೊಂದು ಬಿದ್ದಿದೆ.
ಹೈಟೆನ್ಷನ್ ವೈರ್ ಬಿದ್ದ ಪರಿಣಾಮ ಒಮ್ಮೆಲೆ ಶಾಕ್ ಹೊಡೆದು, ಶೇ. 40 ರಷ್ಟು ಸುಟ್ಟ ಗಾಯಗಳಾಗಿವೆ. ಸದ್ಯ ಗಾಯಾಳು ವಿದ್ಯಾರ್ಥಿನಿಗೆ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಕ್ಯಾಂಟರ್ ಚಾಲಕ ಬಂಧನ
ವಿದ್ಯುತ್ ಕಂಬ ಬಿದ್ದು ಕಾಲೇಜು ವಿದ್ಯಾರ್ಥಿನಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಟರ್ ಟ್ಯಾಂಕರ್ ಚಾಲಕ ಸುನೀಲ್ ಎಂಬಾತನನ್ನು ಮೈಕೋಲೇಔಟ್ ಸಂಚಾರಿ ಪೊಲೀಸರು ಬಂಧಿಸಿದ್ದಾರೆ. ಚಕ್ರಕ್ಕೆ ಕೇಬಲ್ ಸಿಕ್ಕಿಹಾಕಿಕೊಂಡಿದ್ದರೂ ವಾಹನ ಮುಂದೆ ತೆರಳಿದಂತೆ ಕೇಬಲ್ ಜತೆ ಕಂಬ ಸಹ ಕೆಳಗೆ ಬಿತ್ತು. ಘಟನೆ ತನ್ನಿಂದಾದರೂ ತಿಳಿಯದಂತೆ ವಾಹನ ನಿಲ್ಲಿಸದೇ ಸ್ಥಳದಿಂದ ತೆರಳಿದ್ದ. ಬಳಿಕ ಘಟನಾ ಸ್ಥಳ ಪರಿಶೀಲಿಸಿದ್ದ ಸಂಚಾರಿ ಪೊಲೀಸರು, ಚಾಲಕ ಸುನಿಲ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ