ಬೆಂಗಳೂರು: ಈಗ ಡಿಜಿಟಲ್ ಯುಗ, ನಮ್ಮ ದೇಶವೂ ಡಿಜಿಟಲ್ ಇಂಡಿಯಾ ಆಗಿ ಬದಲಾಗಿದೆ. ಆದರೆ, ವಿದ್ಯುತ್ ಬಿಲ್ ಕಟ್ಟಲು ಡಿಜಿಟಲ್ ಪೇಮೆಂಟ್ ವ್ಯವಸ್ಥೆಯ ಮೊರೆ ಹೋದವರಿಗೆ ಶಾಕ್ ಕಾದಿತ್ತು. ನವೆಂಬರ್ ೧, ೨ರಂದು ಈ ಸಮಸ್ಯೆ ಎದುರಾಗಿತ್ತು. ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಬೆಸ್ಕಾಂ ಒಂದು ತಿಂಗಳ ಕಾಲ ಆನ್‌ಲೈನ್ ಪೇಮೆಂಟ್ ಮಾಡದಿರಲು ಸೂಚನೆ ಹೊರಡಿಸಿತ್ತು. ಆದರೆ, ದೋಷ ಕಾಣಿಸಿಕೊಂಡ ಒಂದೇ ದಿನಕ್ಕೆ ಸಮಸ್ಯೆ ಬಗೆಹರಿದಿದ್ದು, ಇ-ಪಾವತಿ ಮಾಡಬಹುದು (BESCOM Payment) ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಬೆಸ್ಕಾಂ ಇ-ಪಾವತಿ, ಗೂಗಲ್ ಪೇ ಸೇರಿದಂತೆ ಆನ್‌ಲೈನ್ ಪೋರ್ಟಲ್‌ಗಳಲ್ಲಿ ನವೆಂಬರ್ ೧ರಂದು ವಿದ್ಯುತ್ ಬಿಲ್ ಪಾವತಿ ಮಾಡಿದವರಿಗೆ ಸಮಸ್ಯೆಯಾಗಿತ್ತು. ನೈಜ ಬಿಲ್ ಒಂದು ರೀತಿಯಲ್ಲಿದ್ದರೆ ಆನ್‌ಲೈನ್‌ನಲ್ಲಿ ಹೆಚ್ಚುವರಿ ಶುಲ್ಕ ತೋರಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಒಂದು ತಿಂಗಳ ಅವಧಿಗೆ ಬೆಸ್ಕಾಂ ಕೇಂದ್ರಗಳಿಗೇ ಬಂದು ಬಿಲ್ ಕಟ್ಟಿ ಹೋಗಿ ಎಂದು ಗ್ರಾಹಕರ ಬಳಿ ಬೆಸ್ಕಾಂ ಕೋರಿತ್ತು. ನವೆಂಬರ್ ೨ರ ದಿನಾಂತ್ಯದ ವೇಳೆಗೆ ದೋಷವನ್ನು ಸರಿಪಡಿಸಲಾಗಿತ್ತು. ಈಗ ಸಾರ್ವಜನಿಕರು ಯಾವುದೇ ಗೊಂದಲ ಇಲ್ಲದೆ ಆನ್‌ಲೈನ್ ಮುಖಾಂತರವೂ ಪಾವತಿ ಮಾಡಬಹುದು ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ದಿನ ತೊಂದರೆ ಅನುಭವಿಸಿದ್ದ ಜನತೆ
ಬೆಸ್ಕಾಂ ಇ-ಪಾವತಿ, ಗೂಗಲ್ ಪೇ ಸೇರಿದಂತೆ ಆನ್‌ಲೈನ್ ಪೋರ್ಟಲ್‌ಗಳಲ್ಲಿ ಈಗಾಗಲೇ ನೋಂದಣಿಯಾದವರು ಪ್ರತಿ ತಿಂಗಳು ಅದರಲ್ಲಿ ಕಾಣಿಸಿಕೊಳ್ಳುವ ಬಿಲ್ ಮೊತ್ತವನ್ನು ಕಟ್ಟಿಬಿಡುತ್ತಿದ್ದರು. ಇದರಿಂದ ಬೆಸ್ಕಾಂ ಕೇಂದ್ರಗಳಿಗೆ ಹೋಗಿ ಕ್ಯೂ ನಿಲ್ಲುವ ಪ್ರಮೇಯವೂ ಇರುತ್ತಿರಲಿಲ್ಲ, ಸಮಯದ ಉಳಿತಾಯವೂ ಆಗುತ್ತಿತ್ತು. ಆದರೆ, ತಾಂತ್ರಿಕ ದೋಷದಿಂದ ಆನ್‌ಲೈನ್ ಪೇಮೆಂಟ್ ಸಮಸ್ಯೆಯನ್ನುಂಟು ಮಾಡಿತ್ತು.
ಆನ್‌ಲೈನ್‌ನಲ್ಲಿ ಬಿಲ್ ಕಟ್ಟಬೇಡಿ ಎಂದಿದ್ದ ಬೆಸ್ಕಾಂ
ಯಾವುದೇ ಕಾರಣಕ್ಕೂ ಸದ್ಯಕ್ಕೆ ಆನ್‌ಲೈನ್ ಮೂಲಕ ಬಿಲ್ ಪಾವತಿ ಮಾಡಬೇಡಿ. ಬೆಸ್ಕಾಂ ಕೇಂದ್ರಗಳಿಗೆ ಬಂದು ಬಿಲ್ ಪಾವತಿ ಮಾಡಿ. ತಾಂತ್ರಿಕ ದೋಷ ಕಂಡುಬಂದಿರುವ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಹತ್ತಿರದ ಬೆಸ್ಕಾಂ ಕೇಂದ್ರಗಳಿಗೇ ಬನ್ನಿ ಎಂದು ಗ್ರಾಹಕರಲ್ಲಿ ಬೆಸ್ಕಾಂ ವಿನಂತಿ ಮಾಡಿತ್ತು.
ಇದನ್ನೂ ಓದಿ | Power Cut | ಬೇಸಿಗೆಯಲ್ಲೂ ಪವರ್ ಕಟ್ ಇಲ್ಲ: ಸುನಿಲ್ ಕುಮಾರ್