Site icon Vistara News

Best Teacher Award: ‘ರಾಜ್ಯ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ

Best Teacher Award

ಬೆಂಗಳೂರು: 2024-25ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ (Best Teacher Award) ಶಿಕ್ಷಣ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಶಿಕ್ಷಕರು ಆಗಸ್ಟ್ 3ರಿಂದ‌ 16ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಶಿಕ್ಷಕರಿಗೆ ಸೆ.5ರಂದು ನಡೆಯುವ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ.

ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾದ ಬಿ.ಬಿ. ಕಾವೇರಿ ಅವರು ಸುತ್ತೋಲೆ ಹೊರಡಿಸಿದ್ದಾರೆ. ತರಗತಿ ಕೋಣೆಯಲ್ಲಿ ವಿಷಯ ಪಾಂಡಿತ್ಯದ ಜತೆಗೆ ಪೂರಕ ಪರಿಕರಗಳೊಂದಿಗೆ ಬೋಧನಾ ಚಟುವಟಿಕೆಗಳನ್ನು ಸಾದರಪಡಿಸಿ ಮಕ್ಕಳಲ್ಲಿ ಶಾಶ್ವತ ಮತ್ತು ಸಂತಸದಾಯಕ ಕಲಿಕೆಯನ್ನುಂಟು ಮಾಡುವ ಬಹುಮುಖ ವ್ಯಕ್ತಿತ್ವದ ಶಿಕ್ಷಕರನ್ನು, ಉಪನ್ಯಾಸಕರನ್ನು, ಮುಖ್ಯ ಶಿಕ್ಷಕರನ್ನು ಹಾಗೂ ಪ್ರಾಂಶುಪಾಲರನ್ನು ಗುರ್ತಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ವರ್ಷ ಸೆಪ್ಟೆಂಬರ್-05 ರಂದು ಕ್ರಮವಾಗಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರದಾನ ಮಾಡುವುದರ ಮೂಲಕ ಗೌರವಿಸುತ್ತಿವೆ.

ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಅಹರ್ನಿಶಿ ತೊಡಗಿಸಿಕೊಳ್ಳುವ ಹಲವು ಅತ್ಯುತ್ತಮ ಶಿಕ್ಷಕರು, ವಿಶೇಷ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಎಲೆ ಮರೆಯ ಕಾಯಿಯಂತೆ ಇದ್ದು, ಅಂತಹ ತೆರೆಮರೆಯ ಸಾಧಕರನ್ನು ಸ್ವಯಂಪ್ರೇರಿತವಾಗಿ ಗುರುತಿಸಿ ಸದರಿ ಪ್ರಶಸ್ತಿಗಳನ್ನು ಪ್ರದಾನ ಮಾಡಬೇಕೆನ್ನುವುದು ಸರ್ಕಾರದ ಮತ್ತು ಶಾಲಾ ಶಿಕ್ಷಣ ಇಲಾಖೆಯ ಆಶಯವಾಗಿರುತ್ತದೆ. ಇದರಿಂದಾಗಿ ರಾಜ್ಯದ ಶಿಕ್ಷಕ ವೃಂದ ಶೈಕ್ಷಣಿಕ ಚಟುವಟಿಕೆಗಳಲ್ಲಿ ಮತ್ತಷ್ಟು ಹುರುಪಿನಿಂದ ತೊಡಗಿಸಿಕೊಳ್ಳಲು ಪ್ರೇರೇಪಣೆಯನ್ನು ಮತ್ತು ಉತ್ತೇಜನವನ್ನು ಒದಗಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಸಕಾಲಿಕ ಕ್ರಮಗಳನ್ನು ವಹಿಸಬೇಕಾಗಿರುವುದು ಸಂಬಂಧಿಸಿದ ಇಲಾಖಾಧಿಕಾರಿಗಳ ಆದ್ಯ ಕರ್ತವ್ಯ ಹಾಗೂ ಪ್ರಮುಖ ಹೊಣೆಗಾರಿಕೆಯಾಗಿರುತ್ತದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಭಾರತ ಸರ್ಕಾರದ ಶಿಕ್ಷಣ ಮಂತ್ರಾಲಯದ ಮಾದರಿಯಲ್ಲೇ ರಾಜ್ಯದಲ್ಲಿಯೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಅರ್ಹ ಶಿಕ್ಷಕರನ್ನು, ವಿಶೇಷ ಶಿಕ್ಷಕರನ್ನು ಹಾಗೂ ಮುಖ್ಯ ಶಿಕ್ಷಕರನ್ನು ಆಯ್ಕೆ ಮಾಡಲು ಆನ್-ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಿ, ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್-ಲೈನ್ ಮೂಲಕವೇ ನಿರ್ವಹಿಸಲು ಮುಂದಾಗಿದೆ. ಅದರಂತೆ, 2024-25 ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಅರ್ಹ ಶಿಕ್ಷಕರು, ವಿಶೇಷ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ಶಾಲಾ ಶಿಕ್ಷಣ ಇಲಾಖೆಯ ಆನ್-ಲೈನ್ ಪೋರ್ಟಲ್ http://www.schooleducation.kar.nic.in ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ| Job Alert: ಎಲೆಕ್ಟ್ರಾನಿಕ್ಸ್‌ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಐಟಿಐ ಪಾಸಾದವರು ಅಪ್ಲೈ ಮಾಡಿ

Exit mobile version