| ಪ್ರಮೋದ. ನ.ಗೋ
ಸ್ವಾತಂತ್ರ್ಯ ಹೋರಾಟಗಾರರು ಎಂದ ತಕ್ಷಣ ಜನ ಸಾಮಾನ್ಯರ ಬಾಯಲ್ಲಿ ಗಾಂಧೀಜಿ, ನೇತಾಜಿ ಬಿಟ್ಟರೆ ಬರುವ ಮೂರನೇ ಹೆಸರೇ ಭಗತ್ ಸಿಂಗ್. ಇನ್ನೂ ಅನೇಕ ಕ್ರಾಂತಿಕಾರಿಗಳಿದ್ದರೂ ಭಗತ್ ಸಿಂಗ್ ಅವರಷ್ಟು ಜನಮಾನಸದಲ್ಲಿ ಅಚ್ಚಳಿಯದ ಮುದ್ರೆಯೊತ್ತಿದ ವ್ಯಕ್ತಿ ಮತ್ತೊಬ್ಬರಿಲ್ಲ. ಇದಕ್ಕೆ ಕಾರಣ ಭಗತ್ ಸಿಂಗ್ ಭೂಗತವಾಗಿ ಶಸ್ತ್ರಸಹಿತ ಕ್ರಾಂತಿ ಮಾರ್ಗದಲ್ಲಿ ನಡೆದ ಹಾಗೂ ತಮ್ಮ ಕೊನೆಯ ದಿನಗಳಲ್ಲಿ ಜೈಲಿನಲ್ಲಿದ್ದುಕೊಂಡೇ ಸಾಕಷ್ಟು ಜನಜಾಗೃತಿಯ ಕೆಲಸವನ್ನೂ ಮಾಡಿದರು. ಹಾಗಾಗಿ ಮನೆಮನೆಗಳಲ್ಲಿ ಅವರ ಭಾವಚಿತ್ರ ರಾರಾಜಿಸಿ, ಮನ-ಮನಗಳಲ್ಲಿ ಪ್ರೀತಿ-ಹೆಮ್ಮೆ ನೆಲೆಯೂರಿತು.
ಬಾಲ್ಯದಲ್ಲೇ ಭಗತ್ ಸಿಂಗ್‌ಗೆ ದೇಶಭಕ್ತಿಯ ವಾತಾವರಣ ದೊರೆತಿದ್ದರಿಂದ ಅವರ ವ್ಯಕ್ತಿತ್ವವೂ ‘ದೇಶಕೇಂದ್ರಿತ’ ವಾಗಿಯೇ ಅರಳಿತು. ಅವರ ತಂದೆ, ಚಿಕ್ಕಪ್ಪ ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರಾಗಿ ಸೆರೆಮನೆವಾಸ ಅನುಭವವಿಸಿದ್ದನ್ನು ಕಂಡಿದ್ದರು. ಬಳಿಕ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಬಲಿದಾನಿಗಳ ಶವಗಳನ್ನು ಕಂಡಿದ್ದ ಅವರು, ಆ ಪವಿತ್ರ ಮಣ್ಣನ್ನು ತಂದು ಮನೆಯ ದೇವರಕೋಣೆಯಲ್ಲಿಟ್ಟಿದ್ದರು. ಮನೆಯಲ್ಲಿ ಮದುವೆ ಪ್ರಸ್ತಾಪವಿಟ್ಟಾಗ ಒಂದು ಚೀಟಿಯಲ್ಲಿ” ದೇಶದ ಕೆಲಸಕ್ಕೆ ಮನೆ ಬಿಟ್ಟು ಹೋಗುತ್ತಿರುವೆ”ಎಂದು ಬರೆದು ಯಾರಿಗೂ ಹೇಳದೆ ಮನೆಬಿಟ್ಟು ಹೋಗಿದ್ದರು.
ಇದನ್ನೂ ಓದಿ | ದಶಮುಖ ಅಂಕಣ | ನೆಲದ ಮೇಲೆಯೇ ನಡೆವ ದೇವರುಗಳು
1928ರಲ್ಲಿ ಲಾಹೋರಿನಲ್ಲಿ ‘ಸೈಮನ್ ಕಮಿಷನ್’ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪೊಲೀಸ್ ಲಾಠಿ ಚಾರ್ಜ್ ವೇಳೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತರಾಯರ ತಲೆಗೆ ಗಂಭೀರ ಪೆಟ್ಟು ಬಿದ್ದು ನಿಧನರಾದರು. ಅವರ ಅಂತ್ಯಸಂಸ್ಕಾರದ ಸಮಯದಲ್ಲಿ ಈ ಅನ್ಯಾಯದ ಹತ್ಯೆಗೆ ಸೇಡು ತೀರುಸುವ ಪ್ರತಿಜ್ಞೆಯನ್ನು ಭಗತ್‌ಸಿಂಗ್ ಮಾಡಿದರು. ಚಂದ್ರಶೇಖರ್ ಆಜಾದ್, ರಾಜಗುರು, ಸುಖದೇವ್‌ರ ಜತೆ ಸೇರಿ ಬ್ರಿಟಿಷ್ ಅಧಿಕಾರಿ ಸ್ಯಾಂಡರ್ಸ್‌ನ ಹತ್ಯೆ ಮಾಡಿದರು. ಆ ಸಂದರ್ಭದಲ್ಲಿ ಗಡ್ಡ ತೆಗೆದು, ಸೂಟು ಮತ್ತು ಟೋಪಿ ಧರಿಸಿದ್ದ ಭಗತ್ ಸಿಂಗ್‌ನ ಭಾವಚಿತ್ರ ಇಂದಿಗೂ ಎಲ್ಲ ಕಡೆ ಬಳಕೆಯಾಗುತ್ತಿವೆ. ಸ್ಯಾಂಡರ್ಸ್ ಕೊಲೆ ಬಳಿಕ ಅತ್ಯಂತ ಚಾಣಾಕ್ಷತೆಯಿಂದ ಎಲ್ಲರೂ ಲಾಹೋರಿನಿಂದ ಪರಾರಿಯಾಗಿದ್ದರಿಂದ ಬ್ರಿಟಿಷರಿಗೆ ಅತ್ಯಂತ ಮುಖಭಂಗವಾಯಿತು.
ಅಸೆಂಬ್ಲಿಯಲ್ಲಿ ವಿರೋಧವಿದ್ದರೂ ವೈಸ್‌ರಾಯ್ ತನ್ನ ವಿಶೇಷ ಅಧಿಕಾರ ಬಳಸಿ 2 ಜನವಿರೋಧಿ ಕಾಯ್ದೆಗಳನ್ನು ಜಾರಿ ಮಾಡುವ ಯೋಜನೆಯಾಗಿತ್ತು. ಆ ಸಮಯದಲ್ಲಿ ಅದನ್ನು ಪ್ರತಿಭಟಿಸುವುದಕ್ಕೋಸ್ಕರ , ಶಾಸನ ಸಭೆಯಲ್ಲಿ ಬಾಂಬ್ ಹಾಕುವ ಯೋಜನೆ ಮಾಡಿದರು. ಆಜಾದ್ ಎಷ್ಟೇ ಹೇಳಿದರೂ ಭಗತ್ ಸಿಂಗ್ ಬಾಂಬ್ ಹಾಕಿದ ನಂತರ ತಪ್ಪಿಸಿಕೊಳ್ಳಲು ಒಪ್ಪಲಿಲ್ಲ. 1929ರ ಏಪ್ರಿಲ್ 8ರಂದು ಯೋಜನೆಯಂತೆ ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ತ ಪಬ್ಲಿಕ್ ಗ್ಯಾಲರಿಯಿಂದ ಎರಡು ಬಾಂಬ್ ಎಸೆದರು. ಅದು ಯಾರನ್ನೂ ಗುರಿಯಾಗಿಸಿದೆ ಕೇವಲ ಗೋಡೆ ಇರುವ ಬಳಿ ಸಿಡಿಯಿತು. ಜನಪ್ರತಿನಿಧಿಗಳೆಲ್ಲ ಸಿಕ್ಕ ಸಿಕ್ಕೆಲ್ಲಾ ಓಡಲಾರಂಭಿಸಿದರು. ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ತ ” ಕ್ರಾಂತಿ ಚಿರಾಯುವಾಗಲಿ , ಸಾಮ್ರಾಜ್ಯವಾದ ನಾಶವಾಗಲಿ” ಎಂದು ಘೋಷಣೆ ಹಾಕುತ್ತ ಕರಪತ್ರಗಳನ್ನು ಎಲ್ಲೆಡೆ ಎಸೆದು ಪೊಲೀಸರಿಗೆ ಶರಣಾದರು. ಬಳಿಕ ‘ಬಾಂಬ್ ಎಸೆತ ಏಕೆ ‘ ಎನ್ನುವ ವಿಸ್ತಾರವಾದ ಹೇಳಿಕೆಯನ್ನು ಭಗತ್ ಸಿಂಗ್ ನೀಡಿದಾಗ ಇದರ ಪ್ರತಿಧ್ವನಿ ಲಂಡನ್‌ನಲ್ಲಿ ಮೊಳಗಿತು. ನಂತರ ಅವರ ಬಂಧನವಾಯಿತು. ಆದರೆ ಭಗತ್ ಹೋರಾಟ ಮಾತ್ರ ಮುಂದುವರಿಯಿತು.
ಸತ್ಯಾಗ್ರಹಗಳ ಮೂಲಕ ಕಾಂಗ್ರೆಸ್ ನಾಯಕರು ಕೈದಿಗಳ ಪರವಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕಾಯಿತು. ಕಡೆಗೆ ವೈಸ್‌ರಾಯ್ ರಚಿಸಿದ ಒಂದು ಸಮಿತಿ ಭಗತ್ ಸಿಂಗ್ ಭೇಟಿಯಾಗಿ ವ್ಯವಸ್ಥೆಯ ಲೋಪದೋಷಗಳನ್ನು ಸರಿಪಡಿಸುವ ಆಶ್ವಾಸನೆ ನೀಡಿತು, ಸುಧಾರಣೆಯು ತಂದಿತು. ವಿಚಾರಣೆಯ ನಾಟಕ ಮುಂದುವರಿಯಿತು.
ಭಗತ್ ಸಿಂಗ್ ಕೋರ್ಟ್ ಅನು ಬಳಸಿಕೊಂಡು ತನ್ನ ವಿಚಾರಗಳನ್ನು ಪ್ರಚಾರ ಮಾಡಿದರು. ಭಗತ್ ಸಿಂಗ್ ಒತ್ತಡಕ್ಕೆ ಇಬ್ಬರು ನ್ಯಾಯಾಧೀಶರನ್ನು ಬದಲಾಯಿಸಬೇಕಾಯಿತು. ನಂತರವೂ ಭಗತ್ ಸಿಂಗ್ ವಿಚಾರಣೆಗೆ ಬರುವುದನ್ನು ನಿರಾಕರಿಸಿದಾಗ ಹಾಗೆಯೆ ವಿಚಾರಣೆ ಮುಂದುವರಿಯಿತು. ಪ್ರಪಂಚದ ಇತಿಹಾಸದಲ್ಲೇ ವಿಚಿತ್ರ , ಆಪಾದಿತನೂ ಇಲ್ಲದೆ ಅವರ ವಕೀಲರೂ ಇಲ್ಲದೆ ವಿಚಾರಣೆ ನಡೆದು ತೀರ್ಪು ಹೊರಬಿತ್ತು. 7 ಜನರಿಗೆ ಜೀವಾವಧಿ ಶಿಕ್ಷೆ, ಭಗತ್ ಸಿಂಗ್, ರಾಜಗುರು ಮತ್ತು ಸುಖದೇವರಿಗೆ ಗಲ್ಲು ಶಿಕ್ಷೆಯನ್ನು ನೀಡಿದ 400 ಪುಟದ ಈ ಐತಿಹಾಸಿಕ ತೀರ್ಪು ಬಿಸಿ ದೋಸೆಯಂತೆ ಸುಮಾರು 225 ರೂಪಾಯಿಗೆ ಮಾರಾಟವಾಯಿತು.
1931 ಮಾರ್ಚ್ 24 ರಂದು ಮೂರೂ ಜನರನ್ನು ಗಲ್ಲಿಗೇರಿಸಲು ನಿಶ್ಚಯವಾಗಿದ್ದರೂ ನಂತರ ಸಾರ್ವಜನಿಕರ ಪ್ರತಿಕ್ರಿಯೆ ಮತ್ತು ಅಂತಿಮಯಾತ್ರೆಯಿಂದ ಮತ್ತಷ್ಟು ಜನರು ಹೋರಾಟಕ್ಕೆ ಪ್ರೇರಣೆ ಪಡೆಯಬಹುದೆಂದು ಬ್ರಿಟಿಷರು ಹೆದರಿ ಒಂದು ದಿನ ಮುಂಚೆಯೇ ಗಲ್ಲಿಗೆ ಹಾಕಲು ಗುಟ್ಟಾಗಿ ಸ್ಥಳ ಬದಲಿಸಿದರು. ಮಾರ್ಚ್ 23ರ ಸಂಜೆ ಮೂರೂ ಜನ ” ಮೇರೇ ರಂಗ ದೇ ಬಸಂತಿ ಚೋಲಾ” ಎಂದು ಗಟ್ಟಿಯಾಗಿ ಹಾಡುತ್ತ ಬಲಿವೇದಿಕೆಗೆ ಬಂದರು. ಸಂಜೆ 7.32ಕ್ಕೆ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ ಭಾರತ ಮಾತೆಯ ಮುಕ್ತಿಗಾಗಿ ಬಲಿದಾನವಾದರು.
ಬ್ರಿಟಿಷರು ಎಷ್ಟು ಹೆದರಿದ್ದರೆಂದರೆ ಸಟ್ಲೆಜ್ ನದಿ ತೀರದಲ್ಲಿ ಗುಟ್ಟಾಗಿ ಈ ಮೂವರು ಕ್ರಾಂತಿಕಾರಿಗಳ ದೇಹಗಳಿಗೆ ಬೆಂಕಿಯಿಟ್ಟರು. 1947ರ ವರೆಗೂ ಪ್ರತಿ ವರ್ಷ ಜನ ತೀರ್ಥಯಾತ್ರೆಗೆ ಹೋಗುವಂತೆ ಆ ಜಾಗಕ್ಕೆ ಭೇಟಿ ನೀಡಿ ನಮನ ಸಲ್ಲಿಸುತ್ತಿದ್ದರು. ಅವರು ಮೃತಪಟ್ಟ ದಿನ ಇಡೀ ಜೈಲಿನ ದುಃಖತಪ್ತ ವಾತಾವರಣ , ಯಾವ ಕೈದಿಗಳೂ ಆಹಾರ ಸ್ವೀಕರಿಸಲಿಲ್ಲ. ಜೈಲಿನಲ್ಲಿ ಕೈದಿಗೆ ಗಲ್ಲಿಗೇರಿಸುವ ಖಾನ್ ಸಾಹೇಬ್ ಮೊಹಮದ್ ಅಕ್ಬರ್ ಒಂದೆರಡು ದಿನಗಳ ನಂತರ ಭಗತ್ ಸಿಂಗ್ ತಂದೆಯವರನ್ನು ಭೇಟಿ ಮಾಡಿ ” ನಮ್ಮ ಮನಸ್ಸು ಕಲಕಿಹೋಗಿದೆ , ನಾವು ತಿನ್ನುವ ಅನ್ನ ವಿಷದಂತೆ ಕಾಣುತ್ತಿದೆ , ಹೊಟ್ಟೆಪಾಡಿಗಾಗಿ ಇಂತಹ ಕೆಲಸ ಮಾಡಬೇಕಾಯಿತಲ್ಲ” ಎಂದು ಅತ್ತು ಗೋಳಾಡಿದ. ಹೀಗೆ , ಭಗತ್ ಸಿಂಗ್ ಬದುಕಿದ್ದಾಗಲೂ ಮತ್ತು ಮೃತ್ಯುವಿನ ನಂತರವೂ ಲಕ್ಷಾಂತರ ಹೃದಯಗಳನ್ನು ಮುಟ್ಟಿದರು. ಕೇವಲ 25 ವರ್ಷ ಮಾತ್ರ ಬದುಕಿದ್ದರೂ ನೂರಾರು ವರ್ಷ ಚಿರ ನೆನಪಿನಲ್ಲಿರುವ ಅಮರ ಜೀವಿಯಾಗಿದ್ದಾರೆ ‘ಭಗತ್ ಸಿಂಗ್’.
ಇದನ್ನೂ ಓದಿ | ರಾಜಮಾರ್ಗ ಅಂಕಣ | ನೇಮಿಚಂದ್ರ: ಅವರ ಪುಸ್ತಕಗಳು ಖಂಡಿತವಾಗಿಯೂ ನಮ್ಮ `ಬದುಕು ಬದಲಿಸಬಹುದು’