Site icon Vistara News

ಭಗವದ್ಗೀತೆ ಪಠಣ ಶಾಲಾ ಶಿಕ್ಷಣ ಸಂಸ್ಕೃತಮಯ ಮಾಡುವ ಷಡ್ಯಂತ್ರ: ಚಿಂತಕರ ಹೇಳಿಕೆ

bhagavad gita

ಬೆಂಗಳೂರು: ಪ್ರತಿಭಾ ಕಾರಂಜಿಯಲ್ಲಿ ಭಗವದ್ಗೀತೆಯ ಪಠಣ ಮಾಡಲು ನೀಡಿರುವ ಸೂಚನೆಯು ಶಾಲಾ ಶಿಕ್ಷಣವನ್ನು ಸಂಸ್ಕೃತಮಯ ಮಾಡಲು ಮಾಡುತ್ತಿರುವ ಷಡ್ಯಂತ್ರವಾಗಿದೆ ಎಂದು ಕನ್ನಡದ ಕೆಲವು ಚಿಂತಕರು, ಬರಹಗಾರರು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಜುಲೈ 25ರಂದು ಶಿಕ್ಷಣ ಇಲಾಖೆಯ ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯವು, ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಧಾರ್ಮಿಕ ಪಠಣ ಸ್ಪರ್ಧೆಗೆ ವಿಷಯ ನಿಗದಿಪಡಿಸಿ ಜ್ಞಾಪನ ಹೊರಡಿಸಿತ್ತು. ಇದನ್ನು ವಿರೋಧಿಸಿ ಬರಹಗಾರರ ಹೇಳಿಕೆ ಹೊರಬಿದ್ದಿದೆ. ಹೇಳಿಕೆಯ ಪೂರ್ಣ ಪಾಠ ಹೀಗಿದೆ:

ಸಂವಿಧಾನವು ಜಾತ್ಯತೀತ ಮೌಲ್ಯಗಳನ್ನು ಪ್ರತಿಪಾದಿಸುವುದರಿಂದ ಸಾರ್ವಜನಿಕ ಸಂಸ್ಥೆಗಳಲ್ಲಿ ಆದಷ್ಟು ಧರ್ಮ ಹಾಗು ಸಂಪ್ರದಾಯದ ವಿಷಯಗಳನ್ನು ತರದಿರುವುದು ಒಳ್ಳೆಯದು. ಇದರ ಬದಲು ಮಾನವ ಹಕ್ಕುಗಳ ಸಾರ್ವರ್ತ್ರಿಕ ಘೋಷಣೆ (1948), ಭಾರತದ ಸಂವಿಧಾನ (1949), ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ (1989)ಗಳಿಂದ ಆಯ್ದ ಪ್ರಸ್ತಾವನೆ/ಪರಿಚ್ಛೇಧಗಳನ್ನಾಗಲಿ ಅಥವಾ ಹೆಸರಾಂತ ಸಮಾಜ ಸುಧಾರಕರು, ಕವಿಗಳು, ದಾರ್ಶನಿಕರು ಮಾನವನ ಘನತೆ ಮತ್ತು ಸಮಾನತೆಯನ್ನು ಎತ್ತಿಹಿಡಿಯಲು ರಚಿಸಿದ ಪದ್ಯ, ಗದ್ಯ ಅಥವಾ ಕವನಗಳಿಂದ ಆಯ್ದ ಸಾಲುಗಳನ್ನು ಪಠಣಮಾಡಬಹುದು.

ಭಾರತದಂತಹ ದೇಶದಲ್ಲಿ , ಶಾಲೆಯನ್ನು ಒಂದು ಜಾತ್ಯತೀತ ಹಾಗು ಧರ್ಮಾತೀತ ಚೌಕಟ್ಟಿನ ಮಾನವೀಯತೆಯ ತಾಣವನ್ನಾಗಿಸುವುದು ತುಂಬಾ ಮಹತ್ವದ ವಿಷಯ. ಎಲ್ಲಕ್ಕಿಂತ ಮಿಗಿಲಾಗಿ ಶಾಲೆಯಲ್ಲಿ ಪ್ರತಿಭಾಕಾರಂಜಿ ಆಯೋಜಿಸುವುದು ಮಕ್ಕಳ ಜ್ಞಾನ, ಭಾಷಾ ಕೌಶಲ ಪರಿಶೀಲಿಸಿ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದಕ್ಕೆ ಹೊರತು ಧಾರ್ಮಿಕ ಪ್ರಚಾರಕ್ಕಲ್ಲ. ಹೀಗಿದ್ದಾಗ್ಯೂ, ಧಾರ್ಮಿಕ ಪಠಣ ಸ್ಪರ್ಧೆ ಮಾಡಲೇಬೇಕೆಂದರೆ ಸಿಖ್, ಬೌದ್ಧ, ಜೈನ, ಪಾರ್ಸಿ, ಕ್ರಿಶ್ಚಿಯನ್, ಹಿಂದೂ ಹಾಗು ಲಿಂಗಾಯಿತ ಧರ್ಮಗಳ ಗ್ರಂಥಗಳಿಂದ ಆಯ್ದ ಅಂಶಗಳ ಧಾರ್ಮಿಕ ಪಠಣವಿರಬೇಕು. ಇದು ಸರ್ವಧರ್ಮಗಳಿಗೆ ಸಮಾನ ಅವಕಾಶ ಕಲ್ಪಿಸುವುದಲ್ಲದೆ ಸರ್ವಧರ್ಮ ಸಮನ್ವಯಕ್ಕೆ ಭೂಮಿಕೆ ಕಲ್ಪಿಸುತ್ತದೆ.

ಇದನ್ನೂ ಓದಿ: ಚೀನಾದ ಶಾಲಾ ಮಕ್ಕಳ ಪಠ್ಯ ಪುಸ್ತಕಗಳಲ್ಲಿ ಅಶ್ಲೀಲ, ಆಕ್ಷೇಪಾರ್ಹ ಜನಾಂಗೀಯ ಚಿತ್ರ!

ಜೊತೆಗೆ ಕನ್ನಡ ಶಾಲೆಗಳಲ್ಲಿ ಧಾರ್ಮಿಕ ಪಠಣ ಕನ್ನಡದಲ್ಲಿರಬೇಕು. ಕನ್ನಡ ಶಾಲೆಗಳಲ್ಲಿ ಎಲ್ಲವೂ ಕನ್ನಡದಲ್ಲಿರಬೇಕು. ಮಕ್ಕಳು ಸರ್ವಧರ್ಮಗಳ ತಿರುಳನ್ನು ತನ್ನ ಭಾಷೆಯಲ್ಲಿ ತಿಳಿದು ಅರ್ಥೈಸಿಕೊಳ್ಳುವಂತಾಗಬೇಕು. ಶಾಲಾ ಪ್ರತಿಭಾ ಕಾರಂಜಿಯಲ್ಲಿ ಧಾರ್ಮಿಕ ಪಠಣವನ್ನು ಈ ಹಿಂದೆ ಮಗು ಯಾವುದೇ ಭಾಷೆಯಲ್ಲಿ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಈಗ ಭಗವದ್ಗೀತೆಯನ್ನು ಸಂಸ್ಕೃತ ಅಥವಾ ಇಸ್ಲಾಂನವರು ಅರೇಬಿಕ್ ಭಾಷೆಯಲ್ಲಿ ಮಾತ್ರ ಪಠಿಸಲು ನಿಯಮ ನೀಡಿರುವುದು ಕನ್ನಡ ಮಾತೃಭಾಷಾ ಶಾಲಾ ಮಕ್ಕಳಿಗೆ ಮಾಡುವ ಭಾಷೆಯ ಹಕ್ಕಿನ ಉಲ್ಲಂಘನೆಯಾಗಿದೆ. ಹಿಂದೂ ಧರ್ಮವನ್ನು ಸಂಸ್ಕೃತಕ್ಕೆ ಸೀಮಿತ ಮಾಡುತ್ತಿರುವುದು ಒಕ್ಕೂಟ ವ್ಯವಸ್ಥೆಯ ಕನ್ನಡ ರಾಜ್ಯಕ್ಕೆ ಮಾಡಿದ ಅಪಮಾನವಾಗಿದೆ.

ಶಾಲಾ ಹಂತದಲ್ಲಿಯೇ ಮಕ್ಕಳ ತಲೆಯಲ್ಲಿ ಹಿಂದೂ ಧರ್ಮ ಸಂಸ್ಕೃತಮಯವಾಗಿಸಲು ಸುತ್ತೋಲೆ ಹೊರಡಿಸುತ್ತಿರುವುದು ಪಟ್ಟಭದ್ರ ಹಿತಾಸಕ್ತಿಗಳ ಷಡ್ಯಂತ್ರವಾಗಿದೆ. ಕನ್ನಡ ಶಾಲೆಯಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ಧಾರ್ಮಿಕ ಪಠಣ ಮಾಡಲು ಶಿಕ್ಷಣ ಇಲಾಖೆಯನ್ನು ನಾವು ಒತ್ತಾಯಿಸುತ್ತೇವೆ.

ಜಂಟಿ ಹೇಳಿಕೆಗೆ ಅಭಿವೃದ್ಧಿ ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ. ವಿ.ಪಿ., ಶಿಕ್ಷಣ ತಜ್ಞ ಹಾಗೂ ಚಿಂತಕ ಪ್ರೊ.ಜಿ . ರಾಮಕೃಷ್ಣ, ಲೇಖಕಿ ಡಾ.ವಸುಂಧರಾ ಭೂಪತಿ, ಸಾಮಾಜಿಕ ಕಾರ್ಯಕರ್ತೆ ಮಲ್ಲಿಗೆ, ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಟಿ. ಆರ್. ಚಂದ್ರಶೇಖರ್‌, ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ, ಪಾಲಕರ/ ಪೋಷಕರ ಸಮನ್ವಯ ವೇದಿಕೆಯ ಬಿ.ಎನ್. ಯೋಗಾನಂದ ಸಹಿ ಹಾಕಿದ್ದಾರೆ.

ಇದನ್ನೂ ಓದಿ: ಪಠ್ಯದಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿಲ್ಲ; ಆರಗ ಜ್ಞಾನೇಂದ್ರ

Exit mobile version