ಮಂಗಳೂರು: ತೆಂಕುತಿಟ್ಟು ಯಕ್ಷರಂಗದ ಭೀಷ್ಮರೆಂದೇ ಖ್ಯಾತಿ ಪಡೆದಿದ್ದ ಬಲಿಪ ನಾರಾಯಣ ಭಾಗವತರು (Balipa Narayana Bhagavatha) ಗುರುವಾರ ಸಂಜೆ (ಫೆಬ್ರವರಿ16ರಂದು) ನಿಧನ ಹೊಂದಿದ್ದಾರೆ. ಅವರಿಗೆ 85 ವರ್ಷವಾಗಿತ್ತು. ವಯೋಸಜಹ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಮೂಡುಬಿದಿರೆಯ ಆಸ್ಪತ್ರೆಗೆ ದಾಖಲಾಗಿದ್ದರು.
ತೆಂಕು ತಿಟ್ಟಿನ ಯಕ್ಷಗಾನದಲ್ಲಿ ಬಲಿಪ ಪರಂಪರೆಯ ಭಾಗವತಿಕೆ ಮೂಲಕ ಪ್ರಖ್ಯಾತಿ ಪಡೆದಿದ್ದ ಅವರು ಆರು ದಶಕಗಳ ಕಾಲ ಯಕ್ಷ ಪ್ರೇಮಿಗಳ ಜನಮಾನಸದಲ್ಲಿ ತಳವೂರಿದ್ದರು. ಬಲಿಪ ನಾರಾಯಣ ಭಾಗವತರು ಸಾಂಪ್ರದಾಯಿಕ ಶೈಲಿಯ ಭಾಗವತಿಕೆಗೆ ಇನ್ನೊಂದು ಹೆಸರು ಎಂಬಂತಿದ್ದರು. ತಂದೆಯ ಮೂಲಕ ಭಾಗವತಿಕೆ ಕಲಿತಿದ್ದ ಅವರು 14ನೇ ವರ್ಷದಲ್ಲಿ ಜಾಗಟೆ ಹಿಡಿದು ಯಕ್ಷ ಸೇವೆ ಆರಂಭಿಸಿದ್ದರು. ಕಟೀಲು ಮೇಳದಲ್ಲಿ 42 ವರ್ಷ ಭಾಗವತರಾಗಿ ದುಡಿದಿದ್ದರು.
ಇದನ್ನೂ ಓದಿ : Yakshagana Program : ಬಾಲ ಕಲಾವಿದರಿಂದ ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರಸಂಗ; ಯಶಸ್ವಿ ಪ್ರದರ್ಶನ
ದಕ್ಷಿಣ ಕನ್ನಡ ಜಿಲ್ಲೆಯ ಮೂಡು ಬಿದಿರೆ ಗಂಟಾಲಕಟ್ಟೆ ಎಂಬಲ್ಲಿಯ ನೂಯಿ ಎಂಬಲ್ಲಿ ನಾರಾಯಣ ಭಾಗವತರು ವಾಸವಾಗಿದ್ದರು. ಅಂತಿಮ ವಿಧಿ ವಿಧಾನಗಳು ಗುರುವಾರ ರಾತ್ರಿ 1.30 ಗಂಟೆಯ ಸುಮಾರಿಗೆ ಅವರ ಸ್ವಗ್ರಹದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಕಾಸರಗೋಡಿನಲ್ಲಿ ಜನನ
ನಾರಾಯಣ ಭಾಗವತರು ಯಕ್ಷಗಾನದ ತವರಾಗಿರುವ ಕಾಸರಗೋಡು ಜಿಲ್ಲೆಯ ಪಡ್ರೆಯಲ್ಲಿ 1938ರ ಏಪ್ರಿಲ್ 13ರಂದು ಜನಿಸಿದ್ದರು. ಅವರ ತಂದೆ ಬಲಿಪ ಮಾಧವ ಭಟ್ ಮತ್ತು ತಾಯಿ ಸರಸ್ವತಿ. 7ನೇ ತರಗತಿಯವರೆಗೆ ಶಿಕ್ಷಣ ಪಡೆದಿದ್ದ ಅವರು ತಮ್ಮ ಅಜ್ಜ ಯಕ್ಷಗಾನ ಭಾಗವತಿಕೆಯ ದಂತಕತೆ ದಿ.ಲಿಪ ನಾರಾಯಣ ಭಾಗವತರಿಂದ ಭಾಗವತಿಕೆ ಕಲಿತು, 13 ನೇ ವರ್ಷದಲ್ಲಿ ಯಕ್ಷಗಾನ ಮೇಳಕ್ಕೆ ಸೇರಿಕೊಂಡಿದ್ದರು.
ನಾರಾಯಣ ಭಾಗವತರು ಯಕ್ಷಗಾನದ ಹಲವಾರು ಪ್ರಸಂಗಗಳನ್ನೂ ರಚಿಸಿದ್ದಾರೆ. ಬಲಿಪರು ಐದು ದಿನದ ದೇವೀ ಮಹಾತ್ಮೆ ಮಹಾಪ್ರಸಂಗವನ್ನು ರಚಿಸಿದ್ದಾರೆ. ವೇಣೂರಿನ ಕಜೆ ಸುಬ್ರಹ್ಮಣ್ಯ ಭಟ್ ಮತ್ತು ಅವರ ಸ್ನೇಹಿತರು ಇದನ್ನು ಪ್ರಕಟಿಸಿದ್ದಾರೆ. ಇದು ಯಕ್ಷಗಾನದ ಇತಿಹಾಸದಲ್ಲೇ ಅಪೂರ್ವ ಕೃತಿ. ತೆಂಕುತಿತಿಟ್ಟು ಯಕ್ಷಗಾನದ ಭಾಗವತರಲ್ಲಿ ಅಗ್ರಗಣ್ಯರಾಗಿದ್ದ ಅವರಿಗೆ ನೂರಕ್ಕೂ ಹೆಚ್ಚು ಪ್ರಸಂಗಗಳು ಕಂಠಪಾಟವಾಗಿತ್ತು.
ನಾರಾಯಣ ಭಾಗವತರ ಪತ್ನಿ ಜಯಲಕ್ಷ್ಮಿ. ನಾಲ್ವರು ಪುತ್ರರ ಪೈಕಿ, ಮಾಧವ ಬಲಿಪರು ಹಿಮ್ಮೇಳವಾದರು. ಶಿವಶಂಕರ ಬಲಿಪ ಉತ್ತಮ ಭಾಗವತರು. ಮತ್ತೊಬ್ಬ ಪುತ್ರ ದಿ.ಪ್ರಸಾದ ಬಲಿಪರು ಸಹ ಕಟೀಲು ಮೇಳದ ಪ್ರಧಾನ ಭಾಗವತರಾಗಿದ್ದರು. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ವರ್ಷವಷ್ಟೇ ನಿಧನರಾಗಿದ್ದರು. ಇನ್ನೊಬ್ಬ ಪುತ್ರ ಶಶಿಧರ್ ಬಲಿಪ ಕೃಷಿಕ.
ಹಲವ ಪ್ರಶಸ್ತಿಗಳ ಗರಿ
ಬಲಿಪ ನಾರಾಯಣ ಭಾಗವತರ ಯಕ್ಷಗಾನ ಸೇವೆಗಾಗಿ ಹಲವು ಪ್ರಶಸ್ತಿಗಳು ಅರಸಿ ಬಂದಿವೆ. 2010ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ. 20102ರಲ್ಲಿ ಸಾಮಗ ಪ್ರಶಸ್ತಿ, 2003ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜ್ಞಾನ ಪ್ರಶಸ್ತಿ ಅವರಿಗೆ ದೊರಕಿತ್ತು.
ಅದೇ ರೀತಿ 2002ರಲ್ಲಿ ಕರ್ನಾಟಕ ಜಾನಪದ ಪರಿಷತ್ತು ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿ, 2003ರಲ್ಲಿ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕರ್ನಾಟಕ ಶ್ರೀ ಪ್ರಶಸ್ತಿ, 2002ರಲ್ಲಿ ಪದವೀಧರ ಯಕ್ಷಗಾನ ಮಂಡಳಿ ಮುಂಬಯಿ ನೀಡುವ ಅಗರಿ ಪ್ರಶಸ್ತಿ, 2002ರಲ್ಲಿ ಶೇಣಿ ಪ್ರಶಸ್ತಿ, 2002ರಲ್ಲಿ ಕವಿ ಮುದ್ದಣ ಪುರಸ್ಕಾರ, 2003ರಲ್ಲಿ ಕೂಡ್ಲು ಸುಬ್ರಾಯ ಶ್ಯಾನುಭೋಗ ಪ್ರಶಸ್ತಿ, 2003ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವತಿಯಿಂದ ಬೆಂಗಳೂರಿನ ರಾಜ್ಯಮಟ್ಟದ ಸನ್ಮಾನ, ಪಾರ್ತಿಸುಬ್ಬ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಸೇರಿ ಹಲವು ಗೌರವಗಳು ಅವರಿಗೆ ಸಂದಾಯವಾಗಿದ್ದವು.