ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಪಾದಯಾತ್ರೆ (Bharat Jodo) ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಏರ್ಪಡಿಸಿದ್ದ ಬೃಹತ್ ಸಮಾವೇಶದಲ್ಲಿ ಕುರ್ಚಿಗಾಗಿ ಹುಡುಕಾಟ ನಡೆದಿದೆ. ವೇದಿಕೆ ಮೇಲೆ ಹಾಕಲಾಗಿರುವ ಪ್ರತಿಯೊಂದು ಕುರ್ಚಿಗಳಿಗೂ ಹೆಸರನ್ನು ಹಾಕಲಾಗಿದ್ದು, ಮಾಜಿ ಸಂಸದ, ಕೇಂದ್ರ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ತಮ್ಮ ಹೆಸರಿನ ಕುರ್ಚಿ ಎಲ್ಲಿದೆ ಎಂದು ಹುಡುಕಾಡಿ ಸೋತುಹೋದರು. ಕೊನೆಗೆ ಅವರಿಗೆ ಮಾಜಿ ಸಚಿವ ಎಚ್.ಕೆ. ಪಾಟೀಲ್ ಪಕ್ಕದಲ್ಲಿ ಸ್ಥಾನ ಕಲ್ಪಿಸಲಾಯಿತು.
ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವೇದಿಕೆಗೆ ಆಗಮಿಸಿದಾಗ ಮಾಜಿ ಸಚಿವರಾದ ಮೊಟಮ್ಮ, ರಮಾನಾಥ್ ರೈ ಸೇರಿದಂತೆ ಹಲವು ಮಾಜಿ ಶಾಸಕರಿಗೆ ವಿಐಪಿ ಆಸನದಲ್ಲಿ ವ್ಯವಸ್ಥೆ ಮಾಡಿರಲಿಲ್ಲ. ಇಲ್ಲಿಯ ವ್ಯವಸ್ಥೆ ನೋಡಿ ಡಿ ಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು. ಕೊನೆಗೆ ಅವರೆಲ್ಲರಿಗೂ ವಿವಿಐಪಿ ಲಾಂಜ್‌ಗೆ ಕರೆಸಿಕೊಂಡು ಆಸನ ವ್ಯವಸ್ಥೆ ಮಾಡಿಸಿದರು.
ಚೇರ್ ಹಾಕುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮತ್ತು ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಸೂಚನೆ ನೀಡಿದ ತಕ್ಷಣ ಕುರ್ಚಿಗಳ ವ್ಯವಸ್ಥೆಯನ್ನು ಮಾಡಲಾಯಿತು.
ಇದನ್ನೂ ಓದಿ | Bharat Jodo | ಶನಿವಾರ 1,000 ಕಿ.ಮೀ. ಗುರಿ ಮುಟ್ಟಲಿರುವ ಯಾತ್ರೆ: ಇಲ್ಲಿವರೆಗೆ ನಡೆದು ಬಂದ ದಾರಿ ಇಲ್ಲಿದೆ
ಮುಖ ನೋಡದ ಡಿಕೆಶಿ-ಖರ್ಗೆ
ಮಾಜಿ ಸಚಿವ, ಎಐಸಿಸಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಇದೇ ವೇಳೆ ವೇದಿಕೆಗೆ ಆಗಮಿಸಿದರು. ಆ ವೇಳೆ ಹಲವಾರು ಕಾಂಗ್ರೆಸ್ ನಾಯಕರು ಖರ್ಗೆ ಸುತ್ತುವರಿದು ಮಾತನಾಡಿಸಿದರು. ಆದರೆ, ಡಿಕೆಶಿ ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತಿದ್ದರು. ಈ ವೇಳೆ ಅವರ ಪಕ್ಕದಲ್ಲಿಯೇ ಖರ್ಗೆ ಹೋದರೂ ಮಾತನಾಡಿಸಲಿಲ್ಲ. ಡಿ.ಕೆ. ಶಿವಕುಮಾರ್ ಪಕ್ಕದಲ್ಲಿಯೇ ಖರ್ಗೆ ಅವರಿಗೆ ಆಸನ ವ್ಯವಸ್ಥೆ ಕಲ್ಪಿಸಿದ್ದರಿಂದ ಅಲ್ಲಿಯೇ ಬಂದು ಕುಳಿತುಕೊಂಡರು.
ಸಿದ್ದರಾಮಯ್ಯ ಆಗಮನ ವೇಳೆ ಶಿಳ್ಳೆ, ಚಪ್ಪಾಳೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆಗೆ ಆಗಮಿಸುತ್ತಿದ್ದಂತೆ ಸೇರಿದ್ದ ಕಾರ್ಯಕರ್ತರು ಜೋರಾಗಿ ಚಪ್ಪಾಳೆ ಹೊಡೆದಿದ್ದು, ಕೆಲವರು ಶಿಳ್ಳೆ ಹಾಕಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಬಿ.ಕೆ. ಹರಿಪ್ರಸಾದ್, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಎಸ್.ಆರ್. ಪಾಟೀಲ್, ಡಾ. ಜಿ. ಪರಮೇಶ್ವರ್, ಕೆ.ಜೆ. ಜಾರ್ಜ್, ವೀರಪ್ಪ ಮೊಯ್ಲಿ, ಎಚ್.ಸಿ. ಮಹದೇವಪ್ಪ, ಎಐಸಿಸಿ ವೀಕ್ಷಕರು, ದ್ರುವ ನಾರಾಯಣ, ಶಾಸಕರಾದ ಪಿ.ಟಿ. ಪರಮೇಶ್ವರ್ ನಾಯಕ್, ಕಂಪ್ಲಿ ಗಣೇಶ್, ಭೀಮಾ ನಾಯಕ್ ಮತ್ತಿತರರು ಹಾಜರಿದ್ದರು.
ಮುನಿಸು ಮರೆತು ಆಗಮಿಸಿದ ಎಸ್.ಆರ್. ಪಾಟೀಲ್
ಇತ್ತೀಚೆಗೆ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳದೆ ಮುನಿಸಿಕೊಂಡಿದ್ದ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಎಸ್.ಆರ್. ಪಾಟೀಲ್ ಸಮಾವೇಶಕ್ಕೆ ಆಗಮಿಸಿದ್ದಾರೆ. ಅಲ್ಲದೆ, ರಾಹುಲ್ ಗಾಂಧಿ ಪಾದಯಾತ್ರೆಯಲ್ಲೂ ಅವರು ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ. ಈ ಹಿಂದೆ ಪಕ್ಷದ ನಾಯಕರ ಮೇಲೆ ಮುನಿಸಿಕೊಂಡು ಪಕ್ಷ ಬಿಡಲು ಮುಂದಾಗಿದ್ದರು.
ಇದನ್ನೂ ಓದಿ | Bharat Jodo Yatra | ಭಾರತ್ ಜೋಡೋ ಯಾತ್ರೆ ರಾಷ್ಟ್ರೀಯ ಕಾಂಗ್ರೆಸ್, ದೇಶಕ್ಕೆ ಐತಿಹಾಸಿಕ ಘಟನೆ