ಬೆಂಗಳೂರು: ಲೇಖಕಿ ಗೊರೂರು ಪಂಕಜ, ಸಮಾಜ ಸೇವಕ ಶ್ರೀಧರ ಮೂರ್ತಿ, ವೆಂಕಟೇಶ್ ಪ್ರಸಾದ್ ಅವರಿಗೆ ಭಾರತ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ.
ಅಡಿಗ ಆರ್ಟ್ಸ್ ಅಕಾಡೆಮಿ ಮತ್ತು ಸ್ವಾನ್ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಸೋಮವಾರ ನಡೆದ ಸಾಂಸ್ಕೃತಿಕ ಮೇಳ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ನಿರ್ದೇಶಕ ಡಾ. ರಾಜು ಕಂಬಾರ, ಕಾರ್ಯಭಾರ ಒತ್ತಡದಲ್ಲಿ ಮುಗ್ಧತೆಯನ್ನು ಕಳೆದುಕೊಂಡು, ಒಳ್ಳೆಯದನ್ನು ಕೂಡ ಪ್ರಶ್ನಾರ್ಥಕವಾಗಿ ನೋಡುವ, ಎಲ್ಲವನ್ನೂ ಪ್ರಶ್ನಿಸುವ ಹಂತಕ್ಕೆ ಬಂದು ತಲುಪಿದ್ದೇವೆ. ಪ್ರಸ್ತುತ ಕಾಲಘಟ್ಟದಲ್ಲಿ ಮುಗ್ಧತೆಯ ಜಗತ್ತಿಗೆ ನಾವು ತೆರೆದುಕೊಳ್ಳುವ ಅನಿವಾರ್ಯತೆ ಇದೆ. ಅನೇಕ ಸಾಧಕರನ್ನು ಮುನ್ನೆಲೆಗೆ ತರುವ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಸಂಸ್ಥೆ ಅಭಿನಂದನಾರ್ಹ ಎಂದು ಹೇಳಿದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ರಂಗಕರ್ಮಿ, ಖ್ಯಾತ ಗಾಯಕ ಶಶಿಧರ ಕೋಟೆ, ಭಾಷೆ ಸಂಸ್ಕೃತಿಯ ಪ್ರತಿಬಿಂಬವಾಗಿದ್ದು, ಇದರ ಸಮೃದ್ಧತೆ ಹೆಚ್ಚಿಸುವ ನಿಟ್ಟಿನಲ್ಲಿ ಸಾಗಬೇಕಿದೆ. ಭಕ್ತಿ, ಪ್ರೀತಿ, ನೀತಿ ಇದ್ದಲ್ಲಿ ಎಲ್ಲವನ್ನೂ ಗೆಲ್ಲಬಹುದು. ಆದ್ದರಿಂದ ಬದುಕಿನಲ್ಲಿ ರೀತಿ-ನೀತಿ ಅನುಸರಿಸುವುದು ಪ್ರಮುಖವಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷರಾದ ಸಿದ್ದಪ್ಪ ನೇಗಲಾಲ, ನೀಲಕಂಠ ಅಡಿಗ, ಬಿಬಿಎಂಪಿ ಉಪ ಆಯುಕ್ತರಾದ ಡಿಕೆ ಬಾಬು, ಟ್ರಕ್ ಕ್ಲಬ್ ಆಫ್ ಬೆಂಗಳೂರು ಕೋಶಾಧ್ಯಕ್ಷ ಜಿ.ಎನ್. ಮೋಹನ್ ಕುಮಾರ್, ಹಾಸ್ಯ ಚತುರ ಸದಾಶಿವ, ಸಮಾಜ ಸೇವಕಿ ಡಾ.ಬಿ.ಆರ್. ಉಷಾ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ| Award | ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ; ಗಣೇಶ ಕೊಲೆಕಾಡಿ ಸೇರಿ ಸಾಧಕರಿಗೆ ಗೌರವ