ಬಳ್ಳಾರಿ: ರಾಹುಲ್ ಗಾಂಧಿ ತಂದೆ ರಾಜೀವ್ ಗಾಂಧಿ ಸಜ್ಜನರು, ದಿಲ್ಲಿಯಲ್ಲಿ ೧೦೦ ರೂ.ಗಳ ಬಿಡುಗಡೆಯಾದರೆ ಹಳ್ಳಿಗೆ ೧೫ ರೂ.ಗಳು ಮುಟ್ಟುತ್ತದೆ, ಮಧ್ಯದಲ್ಲಿ ಉಳಿದ ಹಣ ಸೋರಿ ಹೋಗುತ್ತಿದೆ ಎಂದು ನಾನು ಹೇಳುತ್ತಿಲ್ಲ, ರಾಜೀವ್ ಗಾಂಧಿ ಹೇಳಿದ್ದು ಎನ್ನುತ್ತಾ, ಕಾಂಗ್ರೆಸ್ ೮೫ ಪರ್ಸೆಂಟ್ ಸರಕಾರ, ಇಂತಹವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು.
ಸಿರುಗುಪ್ಪ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಜನಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿ, ಭೂಮಿ (ಭೂ ಕಬಳಿಕೆ), ಆಕಾಶ( ೨ಜಿ ಹಗರಣ) ಮತ್ತು ಪಾತಾಳ(ಕೋಲ್ ಹಗರಣ)ದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರ ಮಾಡಿದೆ. ಅನ್ನಭಾಗ್ಯ, ಇಂದಿರಾ ಕ್ಯಾಂಟೀನಿನಲ್ಲಿ ಭ್ರಷ್ಟಾಚಾರ ಮಾಡಿದೆ, ೧೨೦ ಸ್ಥಾನ ಗಳಿಸಿದ್ದ ಕಾಂಗ್ರೆಸನ್ನು ೭೦ ಸ್ಥಾನಕ್ಕೆ ಇಳಿಸಿ, ಮನೆಗೆ ಕಳಿಸಿದ್ದೀರಿ, ಬಸವಣ್ಣನಿಗೆ ಅಪಚಾರ ಮಾಡಿ, ಧರ್ಮ ಹೊಡೆಯುವ ಕೆಲಸ ಮಾಡಲು ಹೋಗಿ ಸೋತರು ಎಂದು ಹಂಗಿಸಿದರು.
ʻʻಅಂದು ಅಧಿಕಾರಕ್ಕಾಗಿ ದೇಶ ಒಡೆಯುವ ಕೆಲಸ ಮಾಡಿದ್ದರು. ಕಾಂಗ್ರೆಸ್‌ನವರು ಬ್ರಿಟಿಷರು ವಂಶಸ್ಥರು. ಮಹಾತ್ಮಾ ಗಾಂಧಿಯವರು ಹೇಳಿದಂತೆ ಕಾಂಗ್ರೆಸ್ ವಿಸರ್ಜನೆ ಮಾಡುವ ಕೆಲಸವನ್ನು ರಾಹುಲ್ ಗಾಂಧಿ ಮಾಡುತ್ತಿದ್ದಾರೆʼʼ ಎಂದರು.
ಯಡ್ಡಿ ರಾಜಾಹುಲಿ, ರಾಮುಲು ಚೀತಾ
ಯಡಿಯೂರಪ್ಪ ರಾಜಾ ಹುಲಿಯಾದರೆ, ರಾಮುಲು ಚೀತಾ ಇದ್ದಂತೆ ಎಂದು ಹೇಳಿದಾಗ ರಾಮುಲು ಅಭಿಮಾನಿಗಳು ದೊಡ್ಡದಾದ ಘೋಷಣೆ ಕೂಗಿದರು, ಕಾಂಗ್ರೆಸ್‌ಗೆ ಜನಪರ ಕೆಲಸ ಮಾಡುವುದಕ್ಕೆ ಬರುವುದಿಲ್ಲ, ಕೇವಲ ಅಧಿಕಾರ ರಾಜಕಾರಣ ಮಾಡುತ್ತಿದ್ದಾರೆ. ಅಧಿಕಾರ ಇದ್ದಾಗ ಕಬ್ಬು ಇದ್ದಂಗೆ, ಇರುತ್ತೇವೆ, ಅಧಿಕಾರ ಹೋದಾಗ ಅತ್ತಿ ಕಟ್ಟಿಗೆ ಇದ್ದಂಗೆ ಇರುತ್ತೇವೆ ಹೀಗೆಂದು ಹೇಳಿದ್ದು ನಾನಲ್ಲ, ಕಾಂಗ್ರಸ್ ಸಚಿವರೊಬ್ಬರು ಹೇಳಿದ್ದಾರೆ ಎಂದರು.
ಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್ ಹೇಳಿಕೆ ನೋಡಿದರೆ, ಪಕ್ಕದ ಮನೆಯವರು ಗಂಡು ಹಡೆದರೆ, ಊರಿಗೆಲ್ಲಾ ಪೇಡಾ ಅಂಚುವ ಕೆಲಸ ಮಾಡಿದಂತಿದೆ ಎಂದು ಕಾಂಗ್ರೆಸ್ ಬಗ್ಗೆ ಲೇವಡಿ ಮಾಡಿದರು.
ಕಾಂಗ್ರೆಸ್ ಭ್ರಷ್ಟಾಚಾರದ ಜನನಿ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಕಾಂಗ್ರೆಸ್ ಭ್ರಷ್ಟಚಾರದ ಜನನಿ, ನೀವು ಎಷ್ಟು ಭ್ರಷ್ಟಾಚಾರ ಮಾಡಿದ್ದಿರಿ ಎನ್ನುವುದಕ್ಕೆ ರಮೇಶ್ ಕುಮಾರ್ ಹೇಳಿಕೆಯೇ ಸಾಕ್ಷಿ. ಅಂಬೇಡ್ಕರ್ ಗೆ ಭಾರತ ರತ್ನ ಕೊಡದೇ ಅನ್ಯಾಯ ಮಾಡಿದರು ಎಂದರು.
ಕಾಂಗ್ರೆಸ್ನವರ ಕಥೆ ಹೇಳಲು ಎರಡು ದಿನಬೇಕು
ಮೊದಲು ದೆಹಲಿಯಿಂದ ಒಂದು ರೂಪಾಯಿ ಕೊಟ್ಟರೆ ನಾಲ್ಕಾಣೆ ಬರ್ತಾ ಇತ್ತು. ಈಗ ನೇರವಾಗಿ ಎಲ್ಲ ಹಣ ನಿಮ್ಮ ಖಾತೆಗೆ ಬರ್ತಾ ಇದೆ. ನರೇಂದ್ರ ಮೋದಿ ಒಬ್ಬ ದೈವಿ ಪುರುಷ. ಅವರು ದೇಶದ ಪ್ರಧಾನಿ ಆಗಿರೋದು ನಮ್ಮ ಸೌಭಾಗ್ಯ. ಕಾಂಗ್ರೆಸ್ ನವರ ಕತೆ ಹೇಳಿದರೆ ಎರಡು ದಿನಬೇಕು. ಜನವಿರೋಧಿ ಸರ್ಕಾರ ಅಧಿಕಾರಕ್ಕೆ ಬರದಂತೆ ತಡೆಯುತ್ತೇವೆ. ಐದಾರು ತಿಂಗಳು ಚುನಾವಣೆ ಮುಗಿವರೆಗೂ ರಾಜ್ಯದ್ಯಂತ ಓಡಾಡುವೆ. ನಾಗಮೋಹನ್ ಕಮಿಟಿಯನ್ನು ರಚನೆ ಮಾಡಿದರೆ, ನಾವು ಜಾರಿ ಮಾಡಿದ್ದೇವೆ ಎಂದರು.
ಸಚಿವರ ಬಗ್ಗೆ ಹರ್ಷೋದ್ಗಾರ
ಸಚಿವ ಬಿ.ಶ್ರೀರಾಮುಲು ಭಾಷಣ ಆರಂಭಿಸುತ್ತಿದ್ದಂತೆ ಜನರು ಹರ್ಷೋದ್ಗಾರ ಮಾಡಿದರು, ಒಂದು ನಿಮಿಷ ಕಾಲ ಭಾಷಣ ನಿಲ್ಲಿಸುವಂತೆ ಮಾಡಿತ್ತು ಜನರ ಘೋಷಣೆ. ನಂತರ ಭಾಷಣ ಮಾಡಿದರು. ನರೇಂದ್ರ ಮೋದಿ ಮತ್ತು ಅಡ್ವಾಣಿಯವರು ದೇಶದಲ್ಲಿ ಯಾತ್ರೆ ಮಾಡಿದ್ದಾರೆ, ಅದರಂತೆ ರಾಜ್ಯದಲ್ಲಿ ಎರಡು ಜೋಡೆತ್ತುಗಳು ಈಗ ಯಾತ್ರೆ ಮಾಡುತ್ತಿದ್ದಾರೆ ಎಂದರು.
ಸುಷ್ಮಾ ಸ್ವರಾಜ್ ಸ್ಮರಿಸಿದ ಶ್ರೀರಾಮುಲು
ಬಹಳ ದಿನಗಳ ನಂತರ ರಾಹುಲ್ ಗಾಂಧಿಗೆ ಬಳ್ಳಾರಿ ನೆನಪಾಗಿದೆ. ರಾಹುಲ್ ಗಾಂಧಿ ತಾಯಿ ಸೋನಿಯಾ ಗಾಂಧಿ ಅವರು ಅಲ್ಲಿಂದಲೇ ರಾಜೀನಾಮೆ ಪತ್ರ ಬಿಸಾಡಿದ್ದಾರೆ. ಆದರೆ ಸುಷ್ಮಾ ಸ್ವರಾಜ್ ಅವರು ಸೋತರೂ ಬಳ್ಳಾರಿಗೆ ಬರುತ್ತಿದ್ದರು ಎಂದು ಭಾಷಣದಲ್ಲಿ ಸುಷ್ಮಾ ಸ್ವರಾಜ್ ಅವರನ್ನು ನೆನೆದರು. ರಸ್ತೆಯಲ್ಲಿ ರಾಹುಲ್ ಡಿಪ್ಸ್ ಹೊಡೆದರೆ ರಾಜ್ಯದ ನಾಯಕರು ಡಿಪ್ಸ್ ಹೊಡೆಯುತ್ತಾರೆ, ರಾಜ್ಯದ ನಾಯಕರು ರಾಹುಲ್ ಗಾಂಧಿ ಓಡಿ ಎಂದರೆ ಓಡುತ್ತಾರೆ, ನಿಲ್ಲಿ ಎಂದರೆ ನಿಲ್ಲುತ್ತಾರೆ, ಜಿಗಿ ಎಂದರೆ ಜಿಗಿಯುತ್ತಾರೆ ಎಂದರು.
ಕಾರ್ಯಕ್ರಮಕ್ಕೆ ಬರುವ ಪೂರ್ವದಲ್ಲಿ ಸಿರುಗುಪ್ಪ ದೇವಲಾಪುರ ಸರ್ಕಲ್‌ನಲ್ಲಿ ೧೪ ಅಡಿ ಎತ್ತರದ ಪಂಚ ಲೋಹದ ಕುದುರೆ ಮೇಲೆ ಕುಳಿತ ಬಸವಣ್ಣನವರ ಪುತ್ಥಳಿಯನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕರಾದ ಎಂ.ಎಸ್. ಸೋಮಲಿಂಗಪ್ಪ, ಜಿ. ಸೋಮಶೇಖರ ರೆಡ್ಡಿ, ಬಸವರಾಜ್ ದಡೇಸೂಗೂರು, ಬಿಜೆಪಿ ಮುಖಂಡರಾದ ರವಿಕುಮಾರ್, ಜೆ.ಶಾಂತಾ, ಬಿಜೆಪಿ ಜಿಲ್ಲಾಧ್ಯಕ್ಷ ಮುರಾಹರಿಗೌಡ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ | Bharath jodo | ಗೊರವರ ಕುಣಿತಕ್ಕೆ ಮನಸೋತು ಹೆಜ್ಜೆ ಹಾಕಿದ ಸಿದ್ದರಾಮಯ್ಯ, ನೋಡಲು ನೂಕುನುಗ್ಗಲು