ಬಳ್ಳಾರಿ: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಭಾನುವಾರ ಬಳ್ಳಾರಿ ಗ್ರಾಮಾಂತರ ಭಾಗದಲ್ಲಿ ಸಂಚರಿಸುತ್ತಿದೆ. ಈ ನಡುವೆ, ಸೋಮವಾರದ ಯಾತ್ರೆ ಆರಂಭಗೊಂಡು ಸ್ವಲ್ಪ ಹೊತ್ತಿನಲ್ಲೇ ವಿದ್ಯುತ್ ಅವಘಡ ಸಂಭವಿಸಿ ನಾಲ್ವರು ಗಾಯಗೊಂಡಿದ್ದಾರೆ.
ಸಂಗನಕಲ್ಲಿನಿಂದ ಪಾದಯಾತ್ರೆ ಆರಂಭವಾಗಿ ಮೋಕಾ ಗ್ರಾಮದ ದೊಡ್ಡ ಮೋರಿ ಬಳಿ ಬರುತ್ತಿದ್ದಂತೆಯೇ ಯಾತ್ರಿಯೊಬ್ಬರು ಕೈಯಲ್ಲಿ ಹಿಡಿದಿದ್ದ ಕಬ್ಬಿಣದ ರಾಡ್ ಹೊಂದಿದ್ದ ಕಾಂಗ್ರೆಸ್ ಧ್ವಜ ವಿದ್ಯುತ್ ಲೈನ್‌ಗೆ ತಗುಲಿತು. ಈ ವೇಳೆ ಅದನ್ನು ಆಧರಿಸಲು ಮುಂದಾದ ಮೋಕಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಣ್ಣ, ದೊಡ್ಡಪ್ಪ, ಸಂತೋಷ್ ಸೇರಿದಂತೆ ನಾಲ್ವರು ಗಾಯಗೊಂಡರು.
ಗಾಯಗೊಂಡವರನ್ನು ಹೊಸ ಮೋಕಾ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಣ್ಣಪುಣ್ಣ ಸುಟ್ಟಗಾಯಗಳಿಂದ ಚಿಕಿತ್ಸೆ ಪಡೆಯುತ್ತಿರುವ ಕಾರ್ಯಕರ್ತರಿಗೆ ತಲಾ ಒಂದು ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.
ಸುರ್ಜೇವಾಲಾ, ನಾಗೇಂದ್ರ, ಸಲೀಂ ಅಹ್ಮದ್ ಉಸ್ತುವಾರಿ
ರಾಹುಲ್ ಗಾಂಧಿ ಅವರು ಸಾಗುತ್ತಿದ್ದಾಗ ಪಕ್ಕದಲ್ಲೇ ಈ ಘಟನೆ ನಡೆದಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಜವಾಬ್ದಾರಿಯನ್ನು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮತ್ತು ಶಾಸಕ ನಾಗೇಂದ್ರ ವಹಿಸಿಕೊಂಡಿದ್ದರು.
ಸಂಗನಕಲ್ಲಿನಿಂದ ಮುಂಜಾನೆ ಅರಂಭಗೊಂಡ ಯಾತ್ರೆ 13.3 ಕಿಮೀ ಕ್ರಮಿಸಿ ಮೋಕಾ ಜಂಕ್ಷನ್ ತಲುಪುವ ಹೊತ್ತಿಗೆ ಮೊದಲ ಹಂತದ ಯಾತ್ರೆ ಮುಕ್ತಾಯಗೊಂಡಿತು. ಮೋಕಾ ಬಳಿಯಲ್ಲಿ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ೬ ಗಂಟೆಗೆ ಸಿಂಧವಾಳಾ ಬೆಣ್ಣಿಕಲ್ಲು ಗ್ರಾಮದ ಬಳಿ ಸಾರ್ವಜನಿಕ ಸಭೆ ಬಳಿಕ ಯಾತ್ರೆ ಮುಕ್ತಾಯಗೊಳ್ಳಲಿದೆ. ಭಾನುವಾರ ೨೦ ಕಿ.ಮೀ. ಪಾದಯಾತ್ರೆ ನಡೆಯಲಿದೆ.
ರಾಹುಲ್ ಅವರು ರಾತ್ರಿ ಸಂಗನಕಲ್ಲಿನಲ್ಲಿಯೇ ವಾಸ್ತವ್ಯ ಹೂಡಲಿದ್ದು, ಸೋಮವಾರ ಪಾದಯಾತ್ರೆಗೆ ಬಿಡುವಿದೆ.
ಇದನ್ನೂ ಓದಿ | Bharat Jodo | ಬಳ್ಳಾರಿಯ ಸಂಗನಕಲ್‌ನಿಂದ ರಾಹುಲ್ ಗಾಂಧಿ ಪಾದಯಾತ್ರೆ ಆರಂಭ