Site icon Vistara News

ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಭಾರ್ಗವಿ ನಾಪತ್ತೆ; ಮಂಗಳೂರಿನಲ್ಲಿ ಓಡಾಡಿದ ಸಿಸಿಟಿವಿ ಫೂಟೇಜ್‌ ಲಭ್ಯ

bhargavi missing 2

ಮಂಗಳೂರು: ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂಬ ಕಾರಣಕ್ಕೆ ಬೇಸರಗೊಂಡಿದ್ದ ಬಾಲಕಿ ಭಾರ್ಗವಿ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಮನೆಯಿಂದ ಸೋಮವಾರ (ಅ.೧೭) ನಾಪತ್ತೆಯಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದ್ದು, ಆಕೆ ಮಂಗಳೂರಿನ ಹಲವು ಕಡೆ ಸಂಚರಿಸಿದ ಮಾಹಿತಿಗಳು ಲಭ್ಯವಾಗಿವೆ.

ಅಲ್ಲದೆ, ಆಕೆ ಬಸ್‌ ನಿಲ್ದಾಣ ಸೇರಿದಂತೆ ಹಲವು ಕಡೆ ಓಡಾಡಿದ್ದಾಳೆ. ಕೆಲವು ದೃಶ್ಯಾವಳಿಗಳು ಸಿಸಿಟಿವಿ ಫೂಟೇಜ್‌ನಲ್ಲಿ ರೆಕಾರ್ಡ್‌ ಆಗಿದ್ದು, ಎಲ್ಲೆಡೆ ವೈರಲ್‌ ಆಗಿದೆ. ಈ ಬಗ್ಗೆ ಮಂಗಳೂರು ಸೇರಿದಂತೆ ಯಾವುದೇ ಕಡೆ ಬಾಲಕಿ ಕಂಡರೂ ಕೂಡಲೇ ಮಾಹಿತಿ ನೀಡುವಂತೆ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

ಸೋಮವಾರ ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ಬಾಲಕಿ ಮಂಗಳೂರು ಬಸ್ ನಿಲ್ದಾಣದ ಓಡಾಡಿರುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಮುಂಜಾನೆ ಮೂರು ಗಂಟೆ ಸಮಯದಲ್ಲಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಬಗ್ಗೆ ಈಗ ಮಾಹಿತಿ ಗೊತ್ತಾಗಿದೆ. ಅಲ್ಲಿಂದ ಕದ್ರಿ ಪಾರ್ಕ್‌ಗೆ ಬಂದಿದ್ದು, ಬಾಲಭವನದ ಪಕ್ಕವೇ ಇದ್ದ ಶೌಚಾಲಯಕ್ಕೆ ಹೋಗಿ ವಾಪಸಾಗಿದ್ದಾಳೆ. ಹಾಗೇ ಆಕೆ ಮಂಗಳೂರಿನ ವಿವಿಧೆಡೆ ಸಂಚರಿಸಿದ್ದಳು. ಪುನಃ ಸಂಜೆ 5.55ಕ್ಕೆ ಮತ್ತೆ ಬಸ್ ನಿಲ್ದಾಣಕ್ಕೆ ಆಟೋದಲ್ಲಿ ಬಂದಿದ್ದಳು. ಆಗ ಆಕೆಯ ನಡವಳಿಕೆ ಬಗ್ಗೆ ಅನುಮಾನಗೊಂಡ ಆಟೋ ಡ್ರೈವರ್‌ ವಿಚಾರಿಸಿದಾಗ, ತಾನು ಚಿಕ್ಕಮ್ಮನ ಮನೆಗೆ ತೆರಳುತ್ತಿರುವುದಾಗಿ ಹೇಳಿ ಹೋಗಿದ್ದಾಳೆನ್ನಲಾಗಿದೆ. ಅಲ್ಲಿಂದ ಬಸ್ ಹತ್ತಿ ಬೇರೆ ಕಡೆ ಪ್ರಯಾಣ ಮಾಡಿದ್ದಾಳೆ. ಆದರೆ, ಆಕೆ ಯಾವ ಬಸ್‌ ಹತ್ತಿದ್ದಾಳೆ. ಯಾವ ಕಡೆ ಹೋಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ಈ ಹಿನ್ನೆಲೆಯಲ್ಲಿ ಸಿಸಿಟಿವಿ ಫೂಟೇಜ್‌ ಅನ್ನು ಮಂಗಳೂರು ಕಮಿಷನರ್ ಬಿಡುಗಡೆ ಮಾಡಿದ್ದು, ಬಾಲಕಿ ಎಲ್ಲೇ ಪತ್ತೆಯಾದರೂ ಮಾಹಿತಿ ನೀಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಅಲ್ಲದೆ, ಪೋಷಕರೂ ಸಹ ಮನವಿ ಮಾಡಿದ್ದು, ಆಕೆ ಮನೆ ಬಿಟ್ಟು ತೆರಳಿದ್ದಾಗ ಕಿತ್ತಳೆ ಬಣ್ಣದ ಡ್ರೆಸ್‌ ಜತೆಗೆ ಕಂದು ಬಣ್ಣದ ಜಾಕೆಟ್‌ ಹಾಕಿಕೊಂಡಿದ್ದಳು ಎಂಬ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಶಾಸಕ ವೇದವ್ಯಾಸ ಕಾಮತ್‌ ಸಹ ಟ್ವೀಟ್‌ ಮಾಡಿದ್ದು, ಬಾಲಕಿಯನ್ನು ಕಂಡರೆ ತಕ್ಷಣ ಗಮನಕ್ಕೆ ತನ್ನಿ ಎಂದು ಕೋರಿದ್ದಾರೆ.

ಇದನ್ನೂ ಓದಿ | ಚಲಿಸುತ್ತಿದ್ದ ಕಾರಿಗೆ ಅಡ್ಡ ಬಂದ ಕುದುರೆ ಸಾವು: ಅಪಘಾತದಲ್ಲಿ ಕೃಷಿ ಅಧಿಕಾರಿಗೆ ಗಾಯ

Exit mobile version