ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡುವಳ್ಳಿಯ ಓಣಿಬಾಗಿಲು ಗ್ರಾಮದ ಒಂದೇ ಕುಟುಂಬದ ನಾಲ್ವರ ಹತ್ಯಾಕಾಂಡ ಪ್ರಕರಣಕ್ಕೆ (Mass Murder) ಕಾರಣ ಏನು ಎಂಬುವುದು ಬಯಲಾಗಿದೆ. ಆಸ್ತಿಯ ವಿಚಾರಕ್ಕೆ ಕುಟುಂಬದ ಸಂಬಂಧಿಯೇ ಸಾಮೂಹಿಕ ಹತ್ಯೆ ಮಾಡಿದ್ದಾನೆ ಎಂಬುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ವಿನಯ್ ಭಟ್ ಆರೋಪಿಯಾಗಿದ್ದಾನೆ. ಆಸ್ತಿ ವಿಚಾರಕ್ಕೆ ಹಾಡುವಳ್ಳಿಯ ಓಣಿಬಾಗಿಲು ಗ್ರಾಮದ ಕುಟುಂಬದ ಶಂಭು ಭಟ್(70), ಪತ್ನಿ ಮಾದೇವಿ ಭಟ್(60), ಕಿರಿಯ ಮಗ ರಾಘು ಭಟ್(40) ಹಾಗೂ ಸೊಸೆ ಕುಸುಮಾ ಭಟ್(35) ಅವರನ್ನು ಸಂಬಂಧಿಯಾದ ವಿನಯ್ ಭಟ್ ಕತ್ತಿಯಿಂದ ಹಲ್ಲೆ ಮಾಡಿ ಕೃತ್ಯ ಎಸಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಳೆದ 7 ತಿಂಗಳ ಹಿಂದೆ ಶಂಭು ಭಟ್ ಅವರ ಹಿರಿಯ ಮಗ ಶ್ರೀಧರ ಭಟ್ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದರು. ಶ್ರೀಧರ ಭಟ್ ಮರಣದ ನಂತರ ಅವರ ಪತ್ನಿ ವಿದ್ಯಾ ಭಟ್ ಕುಟುಂಬದ ಆಸ್ತಿಯಲ್ಲಿ ಪಾಲು ಕೇಳಿ ಜಗಳ ಮಾಡಿಕೊಂಡಿದ್ದರು. ಇದಾದ ಬಳಿಕ ಮಾತುಕತೆ ನಂತರ ಕೊಲೆಯಾದ ಶಂಭು ಭಟ್ಟರು ಹಿರಿಯ ಸೊಸೆ ವಿದ್ಯಾಳಿಗೆ ಆಸ್ತಿಯಲ್ಲಿ ಪಾಲು ನೀಡಿದ್ದರು. ಈ ಆಸ್ತಿಯನ್ನು ವಿದ್ಯಾಳ ಸಹೋದರ, ಹಲ್ಯಾಣಿ ಗ್ರಾಮದ ನಿವಾಸಿ, ಆರೋಪಿ ವಿನಯ ಭಟ್ ನೋಡಿಕೊಳ್ಳುತ್ತಿದ್ದ.
ಇದನ್ನೂ ಓದಿ | Mass murder : ಭಟ್ಕಳದಲ್ಲಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ; ಕತ್ತಿಯಿಂದ ಕಡಿದು ಕೊಂದ ದುಷ್ಕರ್ಮಿ, ಏನು ಕಾರಣ?
ಆಸ್ತಿ ನೀಡಿದ ವಿಚಾರದಲ್ಲಿ ಈತನಿಗೆ ತೃಪ್ತಿ ಇರಲಿಲ್ಲ ಎನ್ನಲಾಗಿದ್ದು, ಇದೇ ಕಾರಣಕ್ಕೆ ಶಂಭು ಭಟ್ ಕುಟುಂಬದೊಂದಿಗೆ ಹೆಚ್ಚುವರಿ ಆಸ್ತಿಗಾಗಿ ಹಲವು ಬಾರಿ ಗಲಾಟೆ ನಡೆಸಿದ್ದಾನೆ. ಶುಕ್ರವಾರ ಸಹ ಆಸ್ತಿ ವಿಚಾರವಾಗಿ ಮಾತಿಗೆ ಮಾತು ಬೆಳೆದಿದ್ದು ಗಲಾಟೆ ತಾರಕಕ್ಕೇರಿ ನಾಲ್ವರ ಕೊಲೆಯಲ್ಲಿ ಅಂತ್ಯವಾಗಿದೆ ಎನ್ನುವ ವಿಚಾರ ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಬಯಲಾಗಿದೆ.
ಇನ್ನು ಈ ಕೃತ್ಯ ನಡೆದ ಸಂದರ್ಭದಲ್ಲಿ ಮನೆಯ 10 ವರ್ಷದ ಬಾಲಕ ಪಕ್ಕದ ಮನೆಯಲ್ಲಿದ್ದರೆ, ಇನ್ನೊಬ್ಬ 4 ವರ್ಷದ ಹೆಣ್ಣು ಮಗು ಮನೆಯಲ್ಲೇ ಮಲಗಿತ್ತು. ಹೀಗಾಗಿ ಈ ಇಬ್ಬರೂ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರಿಂದ ತಿಳಿದುಬಂದಿದೆ. ಸದ್ಯ ಪೊಲೀಸರು ಹಿರಿಯ ಸೊಸೆ ವಿದ್ಯಾ ಕುಟುಂಬಸ್ಥರನ್ನು ವಿಚಾರಣೆ ನಡೆಸುತ್ತಿದ್ದು, ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ. ಈ ಘಟನೆ ಸಂಬಂಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.