Site icon Vistara News

Bhavani Revanna: ಹಾಸನ ಟಿಕೆಟ್‌ ಘೋಷಿಸಿಕೊಂಡ ಭವಾನಿ ರೇವಣ್ಣ; ಸೈಲೆಂಟ್‌ ಆಗಿ ತಿರುಗೇಟು ಕೊಟ್ಟ ಕುಮಾರಸ್ವಾಮಿ

Bhavani Revanna

ಹಾಸನ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌರ ತವರು ಜಿಲ್ಲೆ, ಜೆಡಿಎಸ್ ಭದ್ರಕೋಟೆಯಲ್ಲಿ ಟಿಕೆಟ್ ತಳಮಳ ಶುರುವಾಗಿದೆ. ಸಾರ್ವಜನಿಕ ಸಭೆಯಲ್ಲಿ ಭವಾನಿ ರೇವಣ್ಣ (Bhavani Revanna) ಹಾಸನ ಟಿಕೆಟ್ ಘೋಷಿಸಿಕೊಂಡಿದ್ದಾರೆ. ಸ್ವಲ್ಪ ದಿನದಲ್ಲೇ ನನ್ನ ಹೆಸರು ಘೋಷಣೆಯಾಗುತ್ತದೆ ಎಂದ ಭವಾನಿ ರೆವಣ್ಣಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಸೈಲೆಂಟ್ ಆಗಿಯೇ ತಿರುಗೇಟು ನೀಡಿದ್ದಾರೆ. ಪಾಪ ಅವರಿಗೂ ಸ್ಪರ್ಧೆ ಮಾಡಬೇಕೆಂಬ ಆಸೆ ಇದೆ. ಆಸೆ ಇರುವುದು ತಪ್ಪಲ್ಲ ಎಂದು ಹೇಳುವ ಮೂಲಕ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.

ಹೌದು, ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಮುನ್ನವೇ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದು ಭವಾನಿ ರೇವಣ್ಣ ಸ್ವಯಂ ಘೋಷಿಸಿಕೊಂಡಿದ್ದಾರೆ. ಇದು ಕ್ಷೇತ್ರ ಹಾಗೂ ಜೆಡಿಎಸ್ ಪಾಳಯದಲ್ಲಿ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾಜಿ ಸಚಿವ ಎಚ್.ಡಿ.‌ರೇವಣ್ಣ ಪತ್ನಿ ಭವಾನಿ ರೇವಣ್ಣ ಭಾಗಿಯಾಗಿ, ಇನ್ನು 90 ದಿನಗಳಲ್ಲಿ ನಮ್ಮ ಚುನಾವಣೆ ಮುಗಿದು ಹೋಗಿರುತ್ತದೆ. ಜೆಡಿಎಸ್‌ನಿಂದ ನನ್ನನ್ನು ಅಭ್ಯರ್ಥಿ ಮಾಡಬೇಕೆಂದು ಎಲ್ಲರೂ ಕೂಡ ಮಾತನಾಡಿಕೊಂಡು, ನಿರ್ಣಯ ತೆಗೆದುಕೊಂಡಿದ್ದಾರೆ. ಇನ್ನು ಸ್ವಲ್ಪ ದಿನದಲ್ಲಿಯೇ ನಮ್ಮ ಹೆಸರು ಕೂಡ ಹೇಳುತ್ತಾರೆ ಎಂದು ಭವಾನಿ ರೇವಣ್ಣ ಹೇಳಿದ್ದಾರೆ.

ಇದನ್ನೂ ಓದಿ | Prajadhwani : ರಾಮನಗರದಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ರದ್ದು ಮಾಡಿದ್ದರ ಕುರಿತು ಡಿ.ಕೆ. ಶಿವಕುಮಾರ್‌ ಸ್ಪಷ್ಟನೆ

ಜೆಡಿಎಸ್‌ನಿಂದ ಅಭ್ಯರ್ಥಿ ಮಾಡಬೇಕೆಂದು ಎಲ್ಲರೂ ನಿರ್ಣಯ ಮಾಡಿದ್ದಾರೆ ಎಂದು ಭವಾನಿ ರೇವಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಚ್.ಡಿ.ಕುಮಾರಸ್ವಾಮಿ, ಆಸೆ ಎಲ್ಲರಿಗೂ ಇರುತ್ತದೆ, ರಾಜ್ಯ ಜನರಿಗೆ ಸಂದೇಶ ಹೋಗುವಂತಹ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಭವಾನಿ ರೇವಣ್ಣ ಟಿಕೆಟ್ ಸ್ವಯಂ ಘೋಷಣೆ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಪಾಪ ಅವರಿಗೂ ಸ್ಪರ್ಧೆ ಮಾಡಬೇಕೆಂಬ ಆಸೆ ಇದೆ. ಆಸೆ ಇರುವುದು ತಪ್ಪಲ್ಲ. ಅದರೆ, ಪಕ್ಷ ಸಂಘಟನೆ ಹಾಗೂ ರಾಜ್ಯದ ಜನರಿಗೆ ಸಂದೇಶ ಕೊಡುವ ದೃಷ್ಟಿಯಿಂದ ಸೂಕ್ತ ತೀರ್ಮಾನವನ್ನು ಪಕ್ಷ ತೆಗೆದುಕೊಳ್ಳುತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡುವುದರ ಬಗ್ಗೆ ಅನುಮಾನ ವ್ಯಕ್ತಪಡಿಸುವುದರ ಜತೆಗೆ ಸೈಲೆಂಟ್ ಆಗಿ ತಿರುಗೇಟು ನೀಡಿದ್ದಾರೆ.

ಎಚ್.ಪಿ.ಸ್ವರೂಪ್

ಈ ಬಗ್ಗೆ ನಾಲ್ಕು ಬಾರಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಗೆದ್ದು ಶಾಸಕರಾಗಿದ್ದ ದಿವಂಗತ ಎಚ್.ಎಸ್.‌ಪ್ರಕಾಶ್ ಪುತ್ರ, ಜೆಡಿಎಸ್ ಟಿಕೆಟ್‌ ಪ್ರಬಲ ಆಕಾಂಕ್ಷಿ ಎಚ್.ಪಿ.ಸ್ವರೂಪ್ ಪ್ರತಿಕ್ರಿಯಿಸಿ, ಭವಾನಿ‌ ಮೇಡಂ ಯಾವ ಆಧಾರದಲ್ಲಿ ಹೇಳಿದ್ದಾರೋ ಗೊತ್ತಿಲ್ಲ, ಜೆಡಿಎಸ್ ವರಿಷ್ಠರು ಯಾವ ತೀರ್ಮಾನ ತೆಗೆದುಕೊಂಡರೂ ಆ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ನಾನು ಆಕಾಂಕ್ಷಿ, ನನಗೇ ಟಿಕೆಟ್ ಕೊಡುತ್ತಾರೆ ಎನ್ನುವ ಭರವಸೆ ಇದೆ ಎಂದು ಹೇಳಿದ್ದಾರೆ.

ನಮ್ಮ ತಂದೆ ಪಕ್ಷಕ್ಕೆ ಅವರದ್ದೇ ಆದ ಕೊಡುಗೆಯನ್ನು ನೀಡಿದ್ದಾರೆ. ದೇವೇಗೌಡರು ನಮ್ಮ ತಂದೆಯರನ್ನು ಜೆಡಿಎಸ್‌ಗೆ ಕರೆದುಕೊಂಡು ಬಂದು ಆರು ಭಾರಿ ಟಕೆಟ್ ಕೊಟ್ಟಿದ್ದಾರೆ. ನಾವೂ ಆ ಕುಟುಂಬಕ್ಕೆ ಋಣಿಯಾಗಿರುತ್ತೇವೆ. ನಮ್ಮ ತಂದೆ ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿದಿದ್ದಾರೆ. ಹಾಗಾಗಿ ನನನೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಸ್ವರೂಪ್ ತಿಳಿಸಿದ್ದಾರೆ.

ಇದನ್ನೂ ಓದಿ | Karnataka Election : ಸರ್ಕಾರದ ಆಯಸ್ಸು ಇನ್ನು 40 ದಿನ; ವಿಧಾನಸೌಧವನ್ನು ಗಂಜಲ ಹಾಕಿ ತೊಳೆಯುತ್ತೇವೆ: ಡಿ.ಕೆ. ಶಿವಕುಮಾರ್

ರಾಜ್ಯದ ಜನರಿಗೆ ಕುಟುಂಬ ರಾಜಕಾರಣ ಎಂಬ ಕೆಟ್ಟ ಸಂದೇಶ ಹೋಗುತ್ತದೆ. ಹಾಗಾಗಿಯೇ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕು ಎಂಬ ದೃಷ್ಟಿಯಿಂದ ಸ್ವರೂಪ್‌ಗೆ ಟಿಕೆಟ್ ನೀಡುವ ಮನಸ್ಸನ್ನು ಮಾಜಿ‌ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಾಡಿದ್ದಾರೆ ಎನ್ನಲಾಗಿದೆ. ಆದರೂ ಹಠಕ್ಕೆ ಬಿದ್ದವರಂತೆ ಭವಾನಿ ರೇವಣ್ಣ, ಪತಿ ರೇವಣ್ಣ ಮೂಲಕ ಒತ್ತಡ ಹಾಕಿಸುತ್ತಿದ್ದಾರೆ ಎನ್ನಲಾಗಿದೆ.

Exit mobile version