ಬೆಂಗಳೂರು: ಮಗ ಪ್ರಜ್ವಲ್ ರೇವಣ್ಣ (Prajwal Revanna) ಸೆಕ್ಸ್ ಸ್ಕ್ಯಾಂಡಲ್‌ಗೆ ಸಂಬಂಧಿಸಿ ಮಹಿಳೆಯೊಬ್ಬಳ ಅಪಹರಣ ಮಾಡಿ ಒತ್ತಡ ಹಾಕಿದ ಪ್ರಕರಣದಲ್ಲಿ ಭವಾನಿ ರೇವಣ್ಣ ಪೊಲೀಸರ ಕಣ್ಣಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಭವಾನಿಯನ್ನು (Bhavani Revanna) ವಶಕ್ಕೆ ಪಡೆಯಲು ಪೊಲೀಸರ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ಅವರ ವಿರುದ್ಧ ಅರೆಸ್ಟ್ ವಾರಂಟ್ ಕೂಡ ಜಾರಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿ ನಿಯಮದ 41a ಅಡಿ ಭವಾನಿ ರೇವಣ್ಣಗೆ ಎಸ್ ಐ ಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿತ್ತು. ಪ್ರಜ್ವಲ್‌ಗೂ 41a ಅಡಿ ನೊಟೀಸ್ ನೀಡಿದ್ದ ಎಸ್ಐಟಿ ಆ ಬಳಿಕ ಬಂಧಿಸಿತ್ತು. ಪ್ರಜ್ವಲ್ ರೇವಣ್ಣ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿತ್ತು. ಈಗ ಭವಾನಿ ರೇವಣ್ಣಗೂ ಅರೆಸ್ಟ್ ವಾರೆಂಟ್ ಜಾರಿ ಮಾಡುವ ಸಾಧ್ಯತೆ ಇದೆ. ತಾವೇ ಎಸ್ ಐ ಟಿ ಕಚೇರಿಗೆ ಬರುವುದಾಗಿ ಹೇಳಿದ್ದ ಭವಾನಿ ರೇವಣ್ಣ ಆ ಬಳಿಕ ಬರದೇ ತಲೆತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಭವಾನಿ ರೇವಣ್ಣ ವಿರುದ್ಧ ಜನಾಕ್ರೋಶವೂ ಹೆಚ್ಚುತ್ತಿದೆ. ಭವಾನಿ ರೇವಣ್ಣಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
ಮೂರು ಜಿಲ್ಲೆ, ನಾಲ್ಕು ತಂಡ, ಸತತ ಹುಡುಕಾಟ
ಪೊಲೀಸರ ನಾಲ್ಕು ವಿಶೇಷ ತಂಡಗಳಿಂದ ಭವಾನಿ ರೇವಣ್ಣಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಬೆಂಗಳೂರು, ಮೈಸೂರು, ಹಾಸನ ಈ ಮೂರು ಜಿಲ್ಲೆಗಳಲ್ಲಿ ಭವಾನಿ ರೇವಣ್ಣಗಾಗಿ ಮುಖ್ಯವಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ಮೂರು ಜಿಲ್ಲೆಗಳಲ್ಲಿ ಮೂರು ಪೊಲೀಸ್ ತಂಡಗಳು ಬೀಡುಬಿಟ್ಟಿವೆ. ನಾಲ್ಕನೇ ಟೆಕ್ನಿಕಲ್ ತಂಡದಿಂದಲೂ ಭವಾನಿ ರೇವಣ್ಣ ಬಗ್ಗೆ ಟ್ರ್ಯಾಕಿಂಗ್ ನಡೆಯುತ್ತಿದೆ. ಈ ತಾಂತ್ರಿಕ ತಂಡ ಭವಾನಿ ರೇವಣ್ಣ ಅವರ ಮೊಬೈಲ್ ಟ್ರ್ಯಾಕ್ ಮಾಡುತ್ತಿದೆ. ಟವರ್ ಡಂಪ್ ಲೊಕೇಷನ್, ಸಿಡಿಆರ್ ಪರಿಶೀಲನೆ ನಡೆಸುತ್ತಿದೆ.
ಇದನ್ನೂ ಓದಿ: Exit Poll 2024 : ಕರ್ನಾಟಕದಲ್ಲಿ ಬಿಜೆಪಿಗೆ ನಷ್ಟ, ಕಾಂಗ್ರೆಸ್ಗೆ ಲಾಭ ; ಜೆಡಿಎಸ್ಗೆ +1
ಎಲ್ಲವೂ ಗೊತ್ತಿದ್ದೂ ಕಣ್ಣಾ ಮುಚ್ಚಾಲೆ ಆಡ್ತಿದ್ದಾರಾ ಭವಾನಿ ರೇವಣ್ಣ?
ತನಿಖೆಗೆ ಸಹಕರಿಸ್ತೀವಿ, ನೊಟೀಸ್ ಕೊಟ್ರೆ ವಿಚಾರಣೆಗೆ ಹಾಜರಾಗ್ತೀವಿ ಎಂದಿದ್ದ ಮಾಜಿ ಸಚಿವ ಎಚ್ ಡಿ ರೇವಣ್ಣ ಪತ್ನಿ ಭವಾನಿ ಈಗ ಕೋರ್ಟ್ ನಲ್ಲಿ ಜಾಮೀನು ಅರ್ಜಿ ತಿರಸ್ಕಾರ ಆಗುತ್ತಿದ್ದಂತೆ ಎಸ್ಕೇಪ್ ಆಗಿದ್ದಾರೆ. ಅವರ ಮನೆಗೆ ಹೋಗಿ ಭವಾನಿ ರೇವಣ್ಣರನ್ನ ವಿಚಾರಣೆ ನಡೆಸಲು ಎಸ್ ಐ ಟಿ ಮುಂದಾಗಿತ್ತು. ಆದರೆ ಮನೆಯಿಂದ ಹೊರಬಂದು ಅಜ್ಞಾತ ಸ್ಥಳದಲ್ಲಿ ಅಡಗಿಕೊಂಡಿದ್ದಾರೆ. ಎಸ್ ಐ ಟಿ ನೊಟೀಸ್ ಗೆ ಉತ್ತರವನ್ನೂ ಕೊಟ್ಟಿಲ್ಲ ಸಂಬಂಧಿಕರೊಬ್ಬರ ಮನೆಯಲ್ಲಿ ತಲೆ ಮರೆಸಿಕೊಂಡಿರುವ ಸಾಧ್ಯತೆ ಇದೆ.
ಯಾವ ಕ್ಷಣದಲ್ಲಾದ್ರೂ ಭವಾನಿ ರೇವಣ್ಣ ವಶ
ಭವಾನಿ ರೇವಣ್ಣ ಎಲ್ಲಿದ್ದಾರೆ ಎಂಬ ಮಾಹಿತಿ ಕಲೆ ಹಾಕುತ್ತಿರುವ ಎಸ್ ಐ ಟಿ ಯಾವುದೇ ಕ್ಷಣದಲ್ಲಿ ಅವರನ್ನು ಬಂಧಿಸುವ ಸಾಧ್ಯತೆ ಇದೆ. ಅವರನ್ನು ಬಂಧಿಸಲು ಇನ್ಸ್ಪೆಕ್ಟರ್ ಹೇಮಂತ್ ಕುಮಾರ್ ತಂಡ ಸಜ್ಜಾಗಿದೆ.
ಹೈ ಕೋರ್ಟ್ ಮೊರೆ ಹೋಗಲು ಭವಾನಿ ರೇವಣ್ಣ ಚಿಂತನೆ?
ಎಸ್ಐಟಿಯಿಂದ ತಪ್ಪಿಸಿಕೊಳ್ಳೋಕೆ ಭವಾನಿ ರೇವಣ್ಣಗೆ ಇರುವ ಒಂದೇ ಚಾನ್ಸ್ ಅಂದರೆ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವುದು. ಆದರೆ ಇಂದು ಭಾನುವಾರ ಆದ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ರಜೆ ಇರುತ್ತದೆ. ಇಂಥ ಸಂಗತಿಗಳಿಗೆಲ್ಲ ಹೈಕೋರ್ಟ್ ತುರ್ತು ವಿಚಾರಣೆ ನಡೆಸುವುದಿಲ್ಲ. ಹಾಗಾಗಿ ಇಂದೂ ಕೂಡ ಭವಾನಿ ರೇವಣ್ಣ ತಲೆಮರೆಸಿಕೊಂಡಿರಲು ಪ್ರಯತ್ನಿಸಲಿದ್ದಾರೆ. ಹೈ ಕೋರ್ಟ್‌ಗೆ ಸೋಮವಾರ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ವಿಚಾರಣೆ ವೇಳೆ ಮೊಂಡಾಟ
ಪ್ರಜ್ವಲ್ ರೇವಣ್ಣ ಎಸ್‌ಐಟಿ ವಿಚಾರಣೆ ವೇಳೆ ಭಾರೀ ಮೊಂಡಾಟ ತೋರಿದ್ದಾರೆ ಎನ್ನಲಾಗಿದೆ. ಎಷ್ಟು ವಿಚಾರಣೆ ಮಾಡಿದ್ರೂ ಪ್ರಜ್ವಲ್ ಸರಿಯಾಗಿ ಬಾಯಿ ಬಿಡ್ತಿಲ್ಲ. ವಿಚಾರಣೆ ವೇಳೆ ಎದ್ದೇಳೋದು.. ಆಕಡೆ ಈಕಡೆ ಓಡಾಡೋದು.. ಏನೂ ಗೊತ್ತಿಲ್ಲ ಅಂತಾನೆ ಉತ್ತರ ನೀಡುತ್ತಾ ಎಸ್ಐಟಿ ಅಧಿಕಾರಿಗಳಿಗೆ ತಲೆ ಕೆಡಿಸಿದ್ದಾರೆ. ಏನು ಕೇಳಿದ್ರೂ ನಂಗೆ ಗೊತ್ತಿಲ್ಲ.. ನಾನೇನು ಮಾಡಿಲ್ಲ ಅಂತಿರುವ ಪ್ರಜ್ವಲ್‌ರನ್ನು ಮೊಬೈಲ್ ಬಗ್ಗೆ ಮತ್ತೆ ಬಾಯಿ ಬಿಡಿಸಲು ಎಸ್ಐಟಿ ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ. ಈ ವೇಳೆ ಯಾವ ಮೊಬೈಲ್..? ಇರುವ ಮೊಬೈಲ್ ಏರ್ಪೋರ್ಟ್ ನಲ್ಲೇ ಕೊಟ್ಟೆ.. ಯಾವ ಮೊಬೈಲ್ ಬಗ್ಗೆ ಮಾತನಾಡ್ತಿದೀರಾ..? ಹಳೆ ಮೊಬೈಲ್ ಕಳೆದೋಗಿದೆ ಎಂದು ಉಡಾಫೆ ಉತ್ತರ ಕೊಟ್ಟಿದ್ದಾರೆ ಎನ್ನಲಾಗಿದೆ. ಪ್ರಜ್ವಲ್‌ರ ಈಗಿನ ಮೊಬೈಲ್‌ನಲ್ಲಿ ಯಾವುದೇ ರೀತಿ ವಿಡಿಯೋಗಳು, ಮೆಸೇಜ್ ಗಳು ಪತ್ತೆಯಾಗಿಲ್ಲ. ಸದ್ಯ ಡಿಜಿಟಲ್ ಎವಿಡೆನ್ಸ್ ಕಲೆ ಹಾಕಲು ಎಸ್ಐಟಿ, ಎಲ್ಲಾ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದೆ.
ಈಗಾಗಲೇ ಪ್ರಜ್ವಲ್ ಅವರ ವಿಚಾರಣೆ ಮಾಡಿ 161 ಹೇಳಿಕೆಯನ್ನು ಎಸ್‌ಐಟಿ ದಾಖಲಿಸಿದೆ. ಅದರಲ್ಲಿ ಮೊಬೈಲ್ ಕುರಿತು ದಾಖಲಿಸಿದೆ. ನೀವು ಹೇಳುತ್ತಿರುವ ಮೊಬೈಲ್ ನನ್ನ ಬಳಿ ಇಲ್ಲ. ಕಳೆದ ವರ್ಷವೇ ಫೋನ್ ಕಳೆದು ಹೋಗಿದ್ದು, ಆ ಬಗ್ಗೆ ಹೊಳೆನರಸೀಪುರ ಠಾಣೆಯಲ್ಲಿ ದೂರು ಕೂಡ ನೀಡಿದ್ದೇನೆ ಎಂದು ಪ್ರಜ್ವಲ್ ಹೇಳಿದ್ದಾರೆ. ಈ ಹೇಳಿಕೆ ಸತ್ಯಾಸತ್ಯತೆಯನ್ನು ಎಸ್‌ಐಟಿ ಪರಿಶೀಲಿಸಲಿದೆ.
ನೀವು ತೋರಿಸಿರುವ ವಿಡಿಯೋಗಳಲ್ಲಿ ಇರುವುದು ನಾನಲ್ಲ. ಅವರೆಲ್ಲ ನನಗೆ ಪರಿಚಯ ಅಷ್ಟೇ. ನಾನು ಯಾರನ್ನೂ ಅತ್ಯಾಚಾರ ಮಾಡಿಲ್ಲ. ಅತ್ಯಾಚಾರ ಆರೋಪಗಳಿಗೂ ನನಗೂ ಯಾವ ಸಂಬಂಧವೂ ಇಲ್ಲ. ವಿಡಿಯೋಗಳ ಬಗ್ಗೆ ನಂಗಷ್ಟು ಗೊತ್ತಿಲ್ಲ ಎಂದು ಪ್ರಜ್ವಲ್ ಹೇಳಿದ್ದಾರೆ. ವೈರಲ್ ಆಗಿರುವ ವಿಡಿಯೋಗಳನ್ನು ತೋರಿಸಿ ಪ್ರಶ್ನಿಸಿದಾಗ ಈ ಉತ್ತರ ದೊರೆತಿದೆ. ತನ್ನ ಮೇಲಿರುವ ಎಲ್ಲ ಆರೋಪಗಳನ್ನು ಪ್ರಜ್ವಲ್ ತಳ್ಳಿ ಹಾಕಿದ್ದಾರೆ.