ಕೊಡಗು: ಭವಾನಿ ರೇವಣ್ಣ ಅವರಿಗೆ (Bhavani Revanna) ಹಾಸನ ಟಿಕೆಟ್ ನೀಡುವ ವಿಚಾರ ದೊಡ್ಡವರಿಗೆ ಬಿಟ್ಟಿದ್ದು. ಅದನ್ನು ರೇವಣ್ಣ ಅಥವಾ ಕುಮಾರಸ್ವಾಮಿ ಅವರಾಗಲಿ ನಿರ್ಧರಿಸುವುದಕ್ಕೆ ಆಗಲ್ಲ. ಯಾವುದೇ ಕ್ಷೇತ್ರದ ಅಭ್ಯರ್ಥಿಯಾದರೂ ದೇವೇಗೌಡರು ನಿರ್ಧರಿಸಬೇಕು ಎಂದು ಭವಾನಿ ರೇವಣ್ಣ ಅವರ ಪುತ್ರ, ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ಈ ಮೂಲಕ ಕುಟುಂಬದ ಆಂತರಿಕ ತಿಕ್ಕಾಟ ಹೊರಗೆ ಬಂದಂತೆ ಆಗಿದೆ.
ಭವಾನಿ ರೇವಣ್ಣ ಹಾಸನ ಟಿಕೆಟ್ ಅನ್ನು ಸ್ವಯಂ ಘೋಷಣೆ ಮಾಡಿಕೊಂಡಿರುವ ಬಗ್ಗೆ ಸೋಮವಾರಪೇಟೆಯಲ್ಲಿ ಪ್ರತಿಕ್ರಿಯಿಸಿದ ಪ್ರಜ್ವಲ್ ರೇವಣ್ಣ, ಹಾಸನ ಕ್ಷೇತ್ರ ಎಚ್.ಡಿ.ದೇವೇಗೌಡರಿಗಾಗಿ ಇರುವ ಕ್ಷೇತ್ರ. ನಾನು ಕೂಡ ಹಾಸನದ ಸಂಸದ ಆಗಬೇಕೆಂದು ಬಯಸಿರಲಿಲ್ಲ. ನಾನು ವಿಧಾನಸಭಾ ಕ್ಷೇತ್ರವನ್ನು ಕೇಳಿದ್ದೆ. ಆದರೆ, ಅವರೇ ಎಂಪಿ ಆಗು ಎಂದು ಹೇಳಿದ್ದರು. ಹೀಗಾಗಿ ನಾನು ಅಲ್ಲಿ ಸ್ಪರ್ಧಿಸಿದ್ದೆ. ಆದ್ದರಿಂದ ದೇವೇಗೌಡರು ಏನು ನಿರ್ಧರಿಸುತ್ತಾರೋ ಅದೇ ಅಂತಿಮ ಎಂದು ಹೇಳಿದರು.
ಯಡಿಯೂರಪ್ಪ ಬಗ್ಗೆ ಮಾಧುಸ್ವಾಮಿ ಹೇಳಿರಬಹುದು
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಬಗ್ಗೆ ಅಪ್ಪ, ಮಕ್ಕಳು, ಮೊಮ್ಮಕ್ಕಳು ಹಣ ದೋಚುತ್ತಿದ್ದಾರೆ ಎಂಬ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆಗೆ ಸೋಮವಾರಪೇಟೆಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ತಿರುಗೇಟು ನೀಡಿದ್ದಾರೆ. ಮಾಧುಸ್ವಾಮಿ ಅವರು ಯಡಿಯೂರಪ್ಪನವರ ಕುಟುಂಬ ಎನ್ನಲು ಹೋಗಿ ಬಾಯಿತಪ್ಪಿನಿಂದ ದೇವೇಗೌಡರ ಕುಟುಂಬ ಎಂದು ಹೇಳಿರಬಹುದು. ಅವರಿಗೂ ವಯಸ್ಸಾಯಿತಲ್ಲವೇ? ಅದಕ್ಕೆ ಹಾಗೆ ಹೇಳಿರಬಹುದು ಎಂದು ಕಿಡಿಕಾರಿದ್ದಾರೆ.
ಜೆಡಿಎಸ್ ಪ್ರಬಲವಾಗಿರುವ ಕಡೆ ಮೋದಿ ಪ್ರಚಾರ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ಬಿಜೆಪಿಯ ಬಿ ಟೀಂ ಕಾಂಗ್ರೆಸ್ ಎನ್ನುವುದು ಖಚಿತವಾಯಿತಲ್ಲವೇ, ಜೆಡಿಎಸ್ ಸ್ಟ್ರಾಂಗ್ ಇರುವ ಜಾಗದಲ್ಲಿ ಅದನ್ನು ನೆನಪಿಸಿದ್ದಕ್ಕೆ ಮಾಧ್ಯಮದವರಿಗೆ ಧನ್ಯವಾದ ಎಂದರು.
ಇದನ್ನೂ ಓದಿ | Bhavani Revanna: ಹಾಸನ ಟಿಕೆಟ್ ಘೋಷಿಸಿಕೊಂಡ ಭವಾನಿ ರೇವಣ್ಣ; ಸೈಲೆಂಟ್ ಆಗಿ ತಿರುಗೇಟು ಕೊಟ್ಟ ಕುಮಾರಸ್ವಾಮಿ
ಸರ್ಕಾರ ಇದ್ದಾಗ ಜೆಡಿಎಸ್ ಯಾವ ಯಾತ್ರೆಗಳನ್ನು ಮಾಡಲಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಸರ್ಕಾರ ಇದ್ದಾಗ ಯಾಕೆ ಯಾವ ಯಾತ್ರೆ ಮಾಡಲಿಲ್ಲ? ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುತ್ತೇವೆ
ಎನ್ನುತ್ತೇವೆ ಎಂದ ಕೂಡಲೇ ಕಾಂಗ್ರೆಸ್‌ನವರಿಗೆ ಮಹಿಳೆಯರ ನೆನಪಾಯಿತಾ? ಮಹಿಳೆಗೆ 2 ಸಾವಿರ ರೂಪಾಯಿ ಕೊಡುತ್ತೇವೆ ಎನ್ನುತ್ತೀದ್ದೀರಲ್ಲ, ಹೇಗೆ ನೀಡುತ್ತೀರಿ? ಅದಕ್ಕೆ ಯಾರೂ ಉತ್ತರ ನೀಡುತ್ತಿಲ್ಲ ಎಂದರು.
ನಾಳೆ ನಾನೂ 5 ಕೋಟಿ ಜನಕ್ಕೆ ಮನೆ ಕಟ್ಟಿ ಕೊಡುತ್ತೇನೆ ಅಂತ ಹೇಳಬಹುದು. ಆದರೆ, ಎಲ್ಲಿಂದ ಹಣ ಸಂಗ್ರಹ ಮಾಡುತ್ತೇನೆ ಅಂತ ಹೇಳಬೇಕು ಅಲ್ಲವೇ? ಅದುಬಿಟ್ಟು ಸುಳ್ಳು ಭರವಸೆಗಳನ್ನು ನೀಡಬಾರದು ಎಂದು ಕಾಂಗ್ರೆಸ್‌ನ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದರು.