ಬೀದರ್: ಔರಾದ್ ಬಿಜೆಪಿ ಶಾಸಕ ಪ್ರಭು ಚವ್ಹಾಣ್ ಹಾಗೂ ಬೀದರ್ ಹಾಲಿ ಸಂಸದ ಭಗವಂತ ಖೂಬಾ ನಡುವಿನ ಮುನಿಸು ಇನ್ನೂ ಶಮನವಾದಂತೆ ಕಾಣುತ್ತಿಲ್ಲ. ಇಬ್ಬರ ಮಧ್ಯೆ ಇದ್ದ ಭಿನ್ನಾಭಿಪ್ರಾಯ ಮತ್ತೆ ಮುನ್ನೆಲೆಗೆ ಬಂದಿದೆ. ಜಿಲ್ಲೆಯಲ್ಲಿ ಖೂಬಾ ವಿರೋಧಿ ಅಲೆ ಇದ್ದು, ಈ ಬಾರಿ ಲೋಕಸಭಾ ಟಿಕೆಟ್ (Bidar News) ಬೇರೋಬ್ಬರಿಗೆ ನೀಡಬೇಕು ಎಂದು ಕೇಂದ್ರದ ನಾಯಕರಿಗೆ ಮನವಿ ಮಾಡಿದ್ದ ಶಾಸಕ ಪ್ರಭು ಚವ್ಹಾಣ್, ಇದೀಗ ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿಯೇ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಕಾಲಿಗೆ ಬಿದ್ದು, ಅಳುವ ಮೂಲಕ ಹಾಲಿ ಸಂಸದರಿಗೆ ಟಿಕೆಟ್ ನೀಡದಂತೆ ಮನವಿ ಮಾಡಿರುವುದು ಕಂಡುಬಂದಿದೆ.
ಜಿಲ್ಲೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗಮನದಿಂದ ಮಾಜಿ ಸಚಿವ ಪ್ರಭು ಚವ್ಹಾಣ್ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ನಡುವಿನ ವೈ ಮನಸ್ಸು ದೂರವಾಗಬಹುದು ಎನ್ನಲಾಗಿತ್ತು. ಆದರೆ, ಪ್ರಭು ಚವ್ಹಾಣ್ ಅವರು ಯಾವುದೇ ಕಾರಣಕ್ಕೂ ಹಾಲಿ ಸಂಸದರಿಗೆ ಬೀದರ್ ಟಿಕೆಟ್ ನೀಡಬಾರದು ಎಂದು ಭಗವಂತ ಖೂಬಾ ಎದುರಲ್ಲೇ ರಾಜ್ಯಾಧ್ಯಕ್ಷರ ಕಾಲಿಗೆ ಬಿದ್ದು ಮನವಿ ಮಾಡಿದ್ದಾರೆ.
ಪ್ರಭು ಚೌಹಾಣ್ ಮಾಡಿದ್ದು ಅಕ್ಷಮ್ಯ ಅಪರಾಧ ಎಂದ ಸಂಸದ
ವಿಜಯೇಂದ್ರ ಕಾಲಿಗೆ ಬಿದ್ದು ಹೊಸಬರಿಗೆ ಟಿಕೆಟ್ ನೀಡುವಂತೆ ಪ್ರಭು ಚವ್ಹಾಣ್ ಬೇಡಿಕೆ ಇಟ್ಟ ವಿಚಾರಕ್ಕೆ ಸಂಸದ, ಕೇಂದ್ರ ಸಚಿವ ಭಗವಂತ ಖೂಬಾ ಪ್ರತಿಕ್ರಿಯಿಸಿ, ಪ್ರಭು ಚವ್ಹಾಣ್ ಮಾಡಿರುವ ಘಟನೆ ಅಕ್ಷಮ್ಯ ಅಪರಾಧ. ಈಗಾಗಲೇ ನನ್ನ ವಿರುದ್ಧ 10 ವರ್ಷಗಳಿಂದ ನಿರಂತರ ಆರೋಪ ಮಾಡುತ್ತಲೇ ಬಂದಿದ್ದಾರೆ. ನನ್ನ ವಿರುದ್ಧ ಟಿಕೆಟ್‌ಗಾಗಿ ಹಲವರನ್ನು ಎತ್ತಿ ಕಟ್ಟಿದ್ದಾರೆ. ಕಾಂಗ್ರೆಸ್ ಲೀಡರ್‌ಗಳ ಜೊತೆ ಬೆಂಗಳೂರಿನ ಹೊಟೆಲ್‌ಗಳಲ್ಲಿ ಸಭೆ ನಡೆಸಿದ್ದಾರೆ. ಅದೆಲ್ಲವನ್ನೂ ಮುಂದಿನ ದಿನಗಳಲ್ಲಿ ವರಿಷ್ಠರಿಗೆ ತಿಳಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ | Hanuman Flag : ಕೆರಗೋಡು ಹನುಮ ವಿವಾದ; ಫೆ. 9ರಂದು ಮಂಡ್ಯ ಬಂದ್‌ಗೆ ಬಿಜೆಪಿ ಕರೆ
ನನ್ನ ವಿರುದ್ಧ ಆರೋಪಗಳಿದ್ದರೆ ವರಿಷ್ಠರ ಮುಂದೆ ಹೇಳಬಹುದಿತ್ತು. ಈ ತರಹ ದೊಡ್ಡ ವೇದಿಕೆ ಮೇಲೆ ಈ ರೀತಿ ಮಾಡಿದ್ದು ಸರಿಯಲ್ಲಾ. ಖಂಡಿತವಾಗಿಯೂ ಇದರಲ್ಲಿ ಕಾಂಗ್ರೆಸ್ ಪಕ್ಷದವರ ಕೈವಾಡವಿದೆ. ಕೊಲೆ ಆರೋಪ ಮಾಡಿದರು, ಆದರೆ ಇದುವರೆಗೆ ನಾನು ಒಮ್ಮೆಯೂ ಠಾಣೆ ಮೆಟ್ಟಿಲೇರಿಲ್ಲಾ. 6 ತಿಂಗಳಿಂದ ಸಿಕ್ಕ ಸಿಕ್ಕವರಿಗೆಲ್ಲಾ, ಟಿಕೆಟ್ ಆಸೆ ಹುಟ್ಟಿಸಿ ಖರ್ಚು ಮಾಡಿಸುತ್ತಿದ್ದಾರೆ. ಪ್ರಭು ಚವ್ಹಾಣ್ ಅವರೇ ಪಕ್ಷಕ್ಕೆ ದ್ರೋಹ ಮಾಡ್ತಿದ್ದಾರೆ. ಅವರಿಗೆ ಪಕ್ಷದಲ್ಲಿ ಅವರದೇ ಪಾರುಪತ್ಯ ಇರಬೇಕು ಎಂಬ ಆಸೆ ಇದೆ ಎಂದು ಕಿಡಿಕಾರಿದರು.
ನಾನು ಯಾವ ಕಾರ್ಯಕರ್ತರನ್ನೂ ಕಡೆಗಣಿಸಿಲ್ಲಾ, ಆದರೆ ಪ್ರಭು ಚವ್ಹಾಣ್ ಅವರೇ ಕಾರ್ಯಕರ್ತರನ್ನು ತುಳಿದಿದ್ದಾರೆ. ಲಕ್ಷಗಟ್ಟಲೇ ಕಾರ್ಯಕರ್ತರು ಬಿಜೆಪಿ ಪಕ್ಷ ಕಟ್ಟಿದ್ದಾರೆ. ಅವರ ಹಿಂಬಾಲಕರಿಗಷ್ಟೇ ಕಾರ್ಯಕರ್ತರು ಅಂತ ಹೇಳೊದನ್ನು ಚವ್ಹಾಣ್ ಬಿಡಬೇಕು ಎಂದು ಪ್ರಭು ಚವ್ಹಾಣ್ ವಿರುದ್ಧ ಕೇಂದ್ರ ಸಚಿವ ಭಗವಂತ ಖೂಬಾ ವಾಗ್ದಾಳಿ ನಡೆಸಿದ್ದಾರೆ.
ಬೀದರ್ ಲೋಕಸಭಾ ಕ್ಷೇತ್ರ ಟಿಕೆಟ್‌ಗಾಗಿ ಫೈಟ್
ಹಾಲಿ ಕೇಂದ್ರ ಸಚಿವ ಭಗವಂತ್ ಖೂಬಾ ವಿರುದ್ಧವೇ ಬೀದರ್‌ನಲ್ಲಿ ಟಿಕೆಟ್‌ಗಾಗಿ ಲಾಬಿ ನಡೆಯುತ್ತಿದೆ. ಮರಾಠ ಸಮುದಾಯದಿಂದ ಎಂ.ಜಿ.ಮುಳೆ ಟಿಕೆಟ್ ಬೇಡಿಕೆ ಇಟ್ಟಿದ್ದರೆ, ಮತ್ತೊಂದು ಕಡೆ ಚನ್ನಬಸವ ಬಳಾತೆ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನು ಕ್ಲಾಸ್ 1 ಗುತ್ತೇದಾರ ಗುರುನಾಥ್ ಕೊಳ್ಳುರ್ ಸಹ ರೇಸ್‌ನಲ್ಲಿದ್ದಾರೆ. ಕಳೆದ ಬಾರಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಭಗವಂತ್ ಖೂಬಾಗೆ ಟಿಕೆಟ್ ನೀಡದಂತೆ ಬಿಜೆಪಿ ನಾಯಕರು ಒತ್ತಾಯಿಸಿದ್ದರು.
ಲೋಕಸಭೆ ಚುನಾವಣೆಗೆ ಈ ಬಾರಿ ಹೊಸಬರಿಗೆ ಅವಕಾಶ ನೀಡಬೇಕು ಎಂದು ಮಾಜಿ ಸಚಿವ ಪ್ರಭು ಚವ್ಹಾಣ್, ಬಸವ ಕಲ್ಯಾಣ ಶಾಸಕ ಶರಣು ಸಲಗಾರ್ ಸೇರಿ ಹಲವರು ಒತ್ತಾಯ ಮಾಡಿದ್ದರು.
ಸಂಸದರ ವಿರುದ್ಧ ಹತ್ಯೆಗೆ ಸಂಚು ಆರೋಪ ಮಾಡಿದ್ದ ಶಾಸಕ
ಈ ಹಿಂದೆ ಔರಾದ್‌ನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾಜಿ ಸಚಿವ ಪ್ರಭು ಚವ್ಹಾಣ್ ಅವರು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ವಿರುದ್ಧ ಹತ್ಯೆಗೆ ಸಂಚು ಆರೋಪ ಮಾಡಿದ್ದರು. ಭಗವಂತ ಖೂಬಾಗೆ ನನ್ನ ಮೇಲೆ ಕೋಪವಿದ್ದರೆ ಗುಂಡಿಕ್ಕಿ ಹತ್ಯೆ ಮಾಡಲಿ. ಆದರೆ ನಮ್ಮ ಪಕ್ಷ, ಕಾರ್ಯಕರ್ತರಿಗೆ ದ್ರೋಹ ಮಾಡದಿರಲಿ. ಖೂಬಾ ನನ್ನನ್ನು ಸೋಲಿಸಲು ಸಾಕಷ್ಟು ಪ್ರಯತ್ನ ಮಾಡಿದರು. ಅದು ವಿಫಲವಾಗಿ ಗೂಂಡಾಗಳನ್ನು ಬಿಟ್ಟು ನನ್ನ ಹತ್ಯೆಗೆ ಸಂಚು ಮಾಡುತ್ತಿದ್ದಾರೆ. ನನ್ನನ್ನು ಕೊಂದು 6 ತಿಂಗಳಲ್ಲಿ ಉಪ ಚುನಾವಣೆಗೆ ಕುತಂತ್ರ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.
ಇದನ್ನೂ ಓದಿ | Hanuman Flag : ಮಂಡ್ಯದಲ್ಲಿ ಹಿಂಸಾತಾಂಡವ; ಜನಾಕ್ರೋಶಕ್ಕೆ ಗುರಿಯಾದ ಕಾಂಗ್ರೆಸ್ ಶಾಸಕ ರವಿ ಗಣಿಗ
ಕೇಂದ್ರ ಸಚಿವ ಭಗವಂತ ಖೂಬಾ ಲಕ್ಕಿ ಮ್ಯಾನ್, ಮೋದಿ ಮುಖ ನೋಡಿ ಜನ ಆಯ್ಕೆ ಮಾಡಿದ್ದಾರೆ. ಬೀದರ್ ಜಿಲ್ಲೆಯಲ್ಲಿ (Bidar News) ಭಗವಂತ ಖೂಬಾ ವಿರೋಧಿ ಅಲೆ ಆರಂಭವಾಗಿದೆ. ಈ ಬಾರಿ ಖೂಬಾ ಹಠಾವೋ, ಬೀದರ್ ಬಚಾವೋ ನಮ್ಮ ಘೋಷಣೆಯಾಗಿದೆ ಎಂದು ಔರಾದ್ ಬಿಜೆಪಿ ಶಾಸಕ ಪ್ರಭು ಚವ್ಹಾಣ್ ಕಿಡಿಕಾರಿದ್ದರು. ಇದೀಗ ಮತ್ತೊಮ್ಮೆ ಭಗವಂತ ಖೂಬಾಗೆ ಟಿಕೆಟ್ ನೀಡದಂತೆ ಒತ್ತಾಯಿಸಿದ್ದಾರೆ.