ಬಸವ ಕಲ್ಯಾಣ: ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು (ಬಸವಣ್ಣ ಸಾಂಸ್ಕೃತಿಕ ನಾಯಕ- Basavanna Cultural Leader) ಘೋಷಿಸಿದ ಚಾರಿತ್ರಿಕ ಸಂಗತಿಗಾಗಿ 160 ಮಂದಿ ಶರಣ ಸ್ವಾಮೀಜಿಗಳು, ಗುರುಗಳು ಹಾಗೂ ವೀರಶೈವ- ಲಿಂಗಾಯತ ಮಠಾಧೀಶರ (Lingayat Swameejis) ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ಗುರುವಾರ ಸನ್ಮಾನಿಸಲಾಯಿತು.
ವಿಶ್ವ ಬಸವ ಧರ್ಮ ಟ್ರಸ್ಟ್, ಅನುಭವ ಮಂಟಪ – ಬಸವಕಲ್ಯಾಣ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಹಾಗೂ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಬಸವಕಲ್ಯಾಣದಲ್ಲಿ (Basavakalyana in Bidar) ನಡೆದ ಬೃಹತ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳನ್ನು ಗೌರವಿಸಲಾಯಿತು.
ಹುಬ್ಬಳ್ಳಿಯ ಮೂರುಸಾವಿರ ಮಠದ ಶ್ರೀ ಜಗದ್ಗುರು ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮೀಜಿ, ಜಗದ್ಗುರು ಬಸವಜಯಮೃತ್ಯುಂಜಯ ಮಹಾಸ್ವಾಮಿಗಳು, ಜಗದ್ಗುರು ಡಾ.ಮಾತೆ ಗಂಗಾದೇವಿ, ಜಗದ್ಗುರು ಸಿದ್ದರಾಮೇಶ್ವರ ಮಹಾಸ್ವಾಮಿಗಳು, ಷ.ಬ್ರ.ರಾಜೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸೇರಿ 160 ಮಂದಿ ಶರಣ ಗುರುಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದರು. ಕಾರ್ಯಕ್ರಮವನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರು ಹಾಗೂ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ ಉದ್ಘಾಟಿಸಿದರು.
ಬಸವಕಲ್ಯಾಣ ಅನುಭವ ಮಂಟಪದ ವಿಶ್ವ ಬಸವ ಧರ್ಮ ಟ್ರಸ್ಟ್ನ ಅಧ್ಯಕ್ಷರಾದ ನಾಡೋಜ ಡಾ. ಬಸವಲಿಂಗ ಪಟ್ಟದೇವರು ಮತ್ತು 150ಕ್ಕೂ ಹೆಚ್ಚು ಶರಣಗುರುಗಳು, ಸ್ವಾಮೀಜಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹರಸಿದರು.
ಇದನ್ನೂ ಓದಿ : Basavanna cultural leader : ಅಣ್ಣ ಬಸವಣ್ಣ ಇನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ
ಲಿಂಗಾಯತ ಸ್ವತಂತ್ರ ಧರ್ಮ ಎಂದು ಘೋಷಿಸಿದ ಧೀಮಂತ: ಪಟ್ಟದೇವರು ಶ್ಲಾಘನೆ
ಅನುಭವ ಮಂಟಪದಲ್ಲಿ 12ನೇ ಶತಮಾನದಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಎಂದು ಬಸವಣ್ಣನವರು ಘೋಷಿಸಿದರು. ಬಸವಣ್ಣನವರು ಮಾಡಿದ ಘೋಷಣೆಗೆ ಆಧುನಿಕ ಕರ್ನಾಟಕದಲ್ಲಿ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎಂದು ಮುದ್ರೆ ಒತ್ತಿದ ಏಕೈಕ ನಾಯಕ ಧೀಮಂತ ನಾಯಕ, ಬಸವಣ್ಣನವರ ಅಪ್ಪಟ ಅನುಯಾಯಿ ಸಿದ್ದರಾಮಯ್ಯ ಅವರು ಎಂದು ಅಭಿನಂದನಾ ಮಾತುಗಳಲ್ಲಿ ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಡಾ.ಬಸವಲಿಂಗ ಪಟ್ಟದೇವರು ಸಿದ್ದರಾಮಯ್ಯ ಅವರನ್ನು ಅಭಿನಂದಿಸಿದರು.
ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯಗೊಳಿಸಿದ್ದು ಏಕೈಕ ನಾಯಕ ಸಿದ್ದರಾಮಯ್ಯ, ಮಹಿಳಾ ವಿವಿಗೆ ಅಕ್ಕ ಮಹಾದೇವಿ ಹೆಸರಿಟ್ಟಿದ್ದು ಏಕೈಕ ನಾಯಕ ಸಿದ್ದರಾಮಯ್ಯ, ಬಸವ ತತ್ವದ ಆಧಾರದಲ್ಲಿ ಅನ್ನ ಭಾಗ್ಯ ಸೇರಿ ಹಲವು ಭಾಗ್ಯಗಳನ್ನು ಕೊಟ್ಟಿದ್ದೇನೆ ಎಂದು ಸಾರಿದವರು ಏಕೈಕ ನಾಯಕ ಸಿದ್ದರಾಮಯ್ಯ ಎಂದು ಪಟ್ಟದೇವರು ಅವರು ಹೇಳಿದರು.
ಬಸವಣ್ಣನವರು ತಮ್ಮ ರಾಜಕೀಯಕ್ಕೆ ಮಾದರಿ ಎಂದು ಘೋಷಿಸಿಕೊಂಡ, ಅದನ್ನೇ ಪಾಲಿಸುತ್ತಿರುವ ಏಕೈಕ ನಾಯಕರು ನಮ್ಮೆಲ್ಲರ ಅಭಿಮಾನದ ಸಿದ್ದರಾಮಯ್ಯ ಅವರು ಡಾ. ಪಟ್ಟದೇವರು ಹೇಳಿದರು.
ಗಣ್ಯ ಮುಖಂಡರ ಉಪಸ್ಥಿತಿ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ
ಸಚಿವರು ಮತ್ತು ಅಖಿಲ ಭಾರತ ವೀರಶೈವ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿಗಳಾದ
ಶ್ರೀ ಈಶ್ವರ್ ಖಂಡ್ರೆ ಅವರು ವಹಿಸಿದ್ದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಬಿ.ಆರ್.ಪಾಟೀಲ್,
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಡಾ. ಗೊ.ರು. ಚನ್ನಬಸಪ್ಪ,
ಬಸವ ಸಮಿತಿಯ ಅಧ್ಯಕ್ಷರಾದ ಡಾ. ಅರವಿಂದ ಜತ್ತಿ , ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್,
ಪೌರಾಡಳಿತ, ಹಜ್ ಸಚಿವರಾದ ರಹೀಂ ಖಾನ್, ಮಾಜಿ ಸಚಿವರಾದ ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್, ವಿಜಯ್ ಸಿಂಗ್, ಶಾಸಕ ಚನ್ನಾರೆಡ್ಡಿ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.
ವಿಶ್ವಬಸವ ಧರ್ಮ ಟ್ರಸ್ಟ್ನ ಹಾಗೂ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಮತ್ತು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಮುಖ್ಯಮಂತ್ರಿಗಳನ್ನು ಸನ್ಮಾನಿಸಲಾಯಿತು.