Site icon Vistara News

Ganesh Chaturthi: ಗಣೇಶನಿಗೆ ಆರತಿ ಬೆಳಗಿ ಸೌರ್ಹಾದತೆ ಮೆರೆದ ಮುಸ್ಲಿಂರು; ಭಾವೈಕತ್ಯೆಯ ಸಮಾಗಮಕ್ಕೆ ಸಾಕ್ಷಿಯಾದ ಬಸವಕಲ್ಯಾಣ

Muslims light aarti to Lord Ganesha Basavakalyana witnessed the confluence of unity

ಬಸವಕಲ್ಯಾಣ: ಗಣೇಶ ಉತ್ಸವ, ಈದ್ ಮಿಲಾದ್ ಸೇರಿದಂತೆ ಧಾರ್ಮಿಕ ಹಬ್ಬಗಳು ಬಂದರೆ ಸಾಕು ಜಾತಿ-ಧರ್ಮಗಳ ಹೆಸರಿನಲ್ಲಿ ಗಲಭೆಗಳು ನಡೆದು ಸಮಾಜದಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾಗಿ ಕೋಮು ಗಲಭೆಗಳು ನಡೆಯುವುದೇ ಹೆಚ್ಚು. ಅಂತಹದರಲ್ಲಿ ಹಿಂದು- ಮುಸ್ಲಿಂ ಪರಸ್ಪರ ಕೂಡಿಕೊಂಡು ಹಬ್ಬ ಆಚರಿಸಿ ಸಮಾಜಕ್ಕೆ ಮಾದರಿ ಸಂದೇಶ ಸಾರಿದ ಪ್ರಸಂಗಗಳೂ (Ganesh Chaturthi) ಆಗಾಗ ನಡೆಯುತ್ತಿರುತ್ತವೆ. ಈಗ ಇಂಥದ್ದೇ ಪ್ರಸಂಗಕ್ಕೆ ಶರಣರ ಕರ್ಮಭೂಮಿ ಬಸವ ಕಲ್ಯಾಣ ಸಾಕ್ಷಿಯಾಯಿತು.

ಗಣೇಶ ಹಾಗೂ ಈದ್ ಮಿಲಾದ ಸಂದರ್ಭದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿ ಬಿಗಿ ಬಂದೋಬಸ್ತ್‌ ಕೆಲಸ ಮಾಡುವ ಪೊಲೀಸ್ ಇಲಾಖೆ ಅಧಿಕಾರಿಗಳ ಚಾಣಾಕ್ಷತನದ ನಡೆಯಿಂದಾಗಿ ಹೈ ಟೆನ್ಶನ್‌ನಲ್ಲಿ ನಡೆಯಬೇಕಿದ್ದ ಈ ಎರಡು ಹಬ್ಬಗಳು ಪರಸ್ಪರ ಸಹಕಾರದೊಂದಿಗೆ ಸಂಭ್ರಮದ ಆಚರಣೆಗೆ ಸಾಕ್ಷಿಯಾಗಿದ್ದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಈ ಬಾರಿ ಗಣೇಶ ಉತ್ಸವ ಹಾಗೂ ಈದ್ ಮಿಲಾದ್ ಹಬ್ಬಗಳು ಕೇವಲ ಒಂದು ದಿನದ ಅಂತರದಲ್ಲಿ ಒಂದೇ ಬಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಚಾಣಾಕ್ಷತನದ ಉಪಾಯ ಅನುಸರಿಸಿದ ಹುಮ್ನಾಬಾದ್ ಡಿವೈಎಸ್ಪಿ ಜೆ.ಎಸ್ ನ್ಯಾಮಗೌಡರ್ ಹಾಗೂ ಸಿಪಿಐ ಅಲಿಸಾಬ್ ನೇತೃತ್ವದ ಪೊಲೀಸರ ತಂಡ, ಒಂದು ವಾರಗಳ ಹಿಂದಿನಿಂದಲೇ ಮೇಲಿಂದ ಮೇಲೆ ಹಿಂದೂ ಹಾಗೂ ಮುಸ್ಲಿಂ ಸಮಾಜದ ಗಣ್ಯರ ಸಭೆಗಳನ್ನು ನಡೆಸಿದರು. ಪರಸ್ಪರ ಸಹಕಾರ ಹಾಗೂ ಸಹಭಾಗಿತ್ವದೊಂದಿಗೆ ಹಬ್ಬಗಳನ್ನು ಆಚರಿಸುವಂತೆ ಪ್ರೇರೇಪಿಸಿದ್ದೇ ಈ ಎರಡು ಹಬ್ಬಗಳು ಶಾಂತಿ ಹಾಗೂ ಸೌಹಾರ್ತೆಯಿಂದ ಆಚರಣೆಗೆ ಸಾಧ್ಯವಾಯಿತು.

ಸೆಪ್ಟಂಬರ್ 16ರಂದು ನಡೆದ ಈದ್ ಮಿಲಾದ್ ಹಬ್ಬದಂದು ಮೆರವಣಿಗೆಯಲ್ಲಿ ಆಗಮಿಸಿದ ಮುಸ್ಲಿಂ ಧಾರ್ಮಿಕ ಮುಖಂಡರಿಗೆ ನಗರದ ಭವಾನಿ ಮಂದಿರದ ಬಳಿ ಹಿಂದೂಪರ ಸಂಘಟನೆಗಳ ಮುಖಂಡರು ಶಾಲು ಹೊಂದಿಸಿ ಸನ್ಮಾನಿಸಿದ್ದರು. ಈ ಹಿನ್ನೆಲೆಯಲ್ಲಿ ಜಾಗೃತಗೊಂಡ ಬಸವಕಲ್ಯಾಣದ ಸಮಸ್ತ ಮುಸ್ಲಿಂ ಮುಖಂಡರು ಸೆಪ್ಟೆಂಬರ್ 17ರಂದು ರಾತ್ರಿ ಆಯೋಜಿಸಿದ ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ನಗರದ ಕೋಟೆ ಬಳಿ ವಸುದೈವ ಕುಟುಂಬಕ ಟೈಟಲ್‌ನ ಅಡಿಯಲ್ಲಿ ಬೃಹತ್ ಪೆಂಡಾಲ ಹಾಕಿ ಗಣೇಶ್ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿದ 12 ಗಣೇಶ ಮಂಡಲಗಳ ಮುಖಂಡರುಗಳಿಗೆ ವಿಶೇಷವಾಗಿ ಸಿದ್ಧಪಡಿಸಿದ ಸಿಹಿ ತಿನಿಸು ತಿನಿಸಿ ಸನ್ಮಾನಿಸುವ ಮೂಲಕ ಭಾವೈಕ್ಯತೆಯ ಸಂದೇಶ ರವಾನಿಸಿದರು. ಇಷ್ಟಕ್ಕೆ ಸುಮ್ಮನಾಗದ ಮುಸ್ಲಿಂ ಮುಖಂಡರು ತಾವೇ ಸ್ವತಃ ಮುಂದೆ ಬಂದು, ಗಣೇಶನಿಗೆ ಕರ್ಪೂರ, ಆರತಿ ಬೆಳಗಿ ಪೂಜೆ ಸಲ್ಲಿಸಿ ಗಣೇಶ ಮೆರವಣಿಗೆಗೆ ಚಾಲನೆ ನೀಡಿ ಗಮನ ಸೆಳೆದಿರುವುದು ಭಾವೈಕತ್ಯೆಯ ನಾಡಲ್ಲಿ ಬಹುಪರಾಕ್ ಪಡೆದುಕೊಂಡಿದೆ.

ಈ ಸಂದರ್ಭದಲ್ಲಿ ಡಿವೈಎಸ್ಪಿ ಜೆ.ಎಸ್ ನ್ಯಾಮಗೌಡರ ಮಾತನಾಡಿ, ಮುಸ್ಲಿಂ ಬಾಂಧವರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಗಣೇಶ ಮಂಡಲದವರಿಗೆ ಸನ್ಮಾನಿಸುವ ಜತೆಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿರುವುದು ಸಂತಸದ ಸಂಗತಿಯಾಗಿದೆ. ಇಂದಿನ ಈ ಕಾರ್ಯಕ್ರಮ ಇತಿಹಾಸದ ಪುಟಗಳಲ್ಲಿ ದಾಖಲೆಯಾಗುವ ಜೊತೆಗೆ ಜಗತ್ತಿಗೆ ಮಾದರಿಯಾಗಿದೆ ಎಂದು ಬಣ್ಣಿಸಿದರು. ತಹಶೀಲ್ದಾರ್ ದತ್ತಾತ್ರೇಯ ಗಾದಾ ಮಾತನಾಡಿ, ಶರಣರ ನೆಲದಲ್ಲಿ ಹಿಂದೂ ಹಾಗೂ ಮುಸ್ಲಿಮ ಬಾಂಧವರು ಕೂಡಿಕೊಂಡು ಒಗ್ಗಟ್ಟಿನಿಂದ ಹಬ್ಬ ಆಚರಣೆ ಮಾಡಿರುವುದು ಶ್ಲಾಘನಾರ್ಹವಾಗಿದೆ ಎಂದು ತಿಳಿಸಿದರು. ಸಿಪಿಐ ಅಲಿಸಾಬ್ ಮಾತನಾಡಿ, ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಎರಡು ಸಮುದಾಯದವರು ಕೂಡಿಕೊಂಡು ಆಚರಣೆ ಮಾಡುವ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ ಎಂದರು.

ಪೊಲೀಸ್‌ ಇಲಾಖೆಯ ಸಮಯೋಚಿತ ಕ್ರಮದಿಂದಾಗಿ ಚಿಕ್ಕ ಪುಟ್ಟ ಗೊಂದಲಗಳು ನಡೆಯದೆ ಬೆಳಗಿನ ಜಾವದವರೆಗೆ ಗಣೇಶ ವಿಸರ್ಜನೆ ಮೆರವಣಿಗೆ ಸಂಭ್ರಮದಿಂದ ಜರಗಿತು. ಈ ಸಂದರ್ಭದಲ್ಲಿ ಈದ್ಗಾ ಕಮಿಟಿ ಅಧ್ಯಕ್ಷ ಅಮೀರ್ ಸೇಟ್, ಮುಸ್ಲಿಂ ಬೈತಲ್ ಮಾಲ್ ಸಂಸ್ಥೆಯ ಅಧ್ಯಕ್ಷ ಮಕ್ದುಮ್ ಮೋಹಿಯೋದ್ದಿನ್, ಕೆಪಿಸಿಸಿ ಸದಸ್ಯ ಎಂ.ಡಿ ರೈಸುದ್ದೀನ್, ನಗರಸಭೆ ಸದಸ್ಯ ಎಜಾಜ್ ಲಾತುರೆ, ಗಫರ್ ಫೇಸ್ಮಾಂ, ಸಗಿರೋದ್ದೀನ್, ಪ್ರಮುಖರಾದ ಮೀರ್ ಅಜರಲಿ ನವರಂಗ, ಖಲೀಲ್ ಅಹ್ಮದ್, ಮಿನಾಜ್ ನವಾಬ್, ಸೈಯದ್ ಯಾಸರಬ ಅಲಿ ಖಾದ್ರಿ, ರಬ್ಬಾನಿ ಬಾಗ್, ಅನ್ವರ್ ಬೋಸ್ಗೆ, ಎಂ.ಡಿ ಕುತ್ಬುದ್ದೀನ್, ಖಲೀಲ್ ಗೊಬ್ರೆ, ಡಾ: ಖದಿರೋದ್ದೀನ್, ನವಾಜ್ ಕಾಜ್ಮಿ, ಅಹಮದ್, ಸಾಧಕ ಮಿಯಾ ಸೇರಿದಂತೆ ಮುಸ್ಲಿಂ ಸಮಾಜದ ಪ್ರಮುಖರು, ಗಣ್ಯರು ಹಾಗೂ ನೂರಾರು ಸಂಖ್ಯೆಯಲ್ಲಿ ಸೇರಿದ ಯುವಕರು ಉಪಸ್ಥಿತರಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version