Site icon Vistara News

Tukali Santhosh: ತುಕಾಲಿ ಸಂತೋಷ್ ಹೊಸ ಕಾರಿಗೆ ಅಪಘಾತ; ಆಟೋ ಚಾಲಕನಿಗೆ ಗಾಯ

tukali santosh

ತುಮಕೂರು: ಬಿಗ್ ಬಾಸ್ ಸ್ಪರ್ಧಿ ತುಕಾಲಿ ಸಂತೋಷ್ ಅವರ ಕಾರು ಅಪಘಾತಕ್ಕೀಡಾಗಿದೆ. ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ತುಕಾಲಿ ಸಂತೋಷ್ ಕಾರಿಗೆ ಆಟೋವೊಂದು ಡಿಕ್ಕಿಯಾಗಿದ್ದು, ಆಟೋ ಚಾಲಕನಿಗೆ ಗಾಯಗಳಾಗಿವೆ. ಹೊಸ ಕಾರು ಮನೆಗೆ ಬಂದು 2 ವಾರ ಕಳೆಯುವುದರೊಳಗೆ ಅಪಘಾತ ಸಂಭವಿಸಿದೆ.

ತುಮಕೂರಿನಿಂದ ಕುಣಿಗಲ್ ಮಾರ್ಗವಾಗಿ ಹೊಳೆನರಸೀಪುರ ಕಡೆ ಹೋಗುತ್ತಿದ್ದ ತುಕಾಲಿ ಸಂತೋಷ್ ಕಾರಿಗೆ ಕುಣಿಗಲ್‌ನಿಂದ ಕುರುಡಿಹಳ್ಳಿಗೆ ಬರುತ್ತಿದ್ದ ಆಟೋ ಡಿಕ್ಕಿಯಾಗಿದೆ. ಅಪಘಾತದಲ್ಲಿ ಆಟೋ ಭಾಗಶಃ ಜಖಂಗೊಂಡಿದ್ದು, ಆಟೋ ಚಾಲಕ ಜಗದೀಶ್ ಎಂಬುವವರಿಗೆ ಗಾಯಗಳಾಗಿವೆ. ಗಾಯಾಳುವನ್ನು ಕುಣಿಗಲ್ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಟೋ ಚಾಲಕ ಜಗದೀಶ್​ ಮದ್ಯ ಸೇವಿಸಿದ್ದ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಅಪಘಾತದ ಬಗ್ಗೆ ತುಕಾಲಿ ಸಂತೋಷ್​ ಅವರು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ. ಕಾರು ಅಪಘಾತದ ಸುದ್ದಿಯಿಂದ ಅವರ ಅಭಿಮಾನಿಗಳಿಗೆ ಬೇಸರ ಆಗಿದೆ.

ಇದನ್ನೂ ಓದಿ | Ram Charan: ಅಜ್ಜನ ಜತೆ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿದ ರಾಮ್ ಚರಣ್ ಪತ್ನಿ!

ಇತ್ತೀಚೆಗೆ ಕಾರು ಖರೀದಿಸಿದ್ದ ತುಕಾಲಿ ಸಂತೋಷ್

ಹಾಸ್ಯ ನಟನಾಗಿ ಗುರುತಿಸಿಕೊಂಡಿರುವ ತುಕಾಲಿ ಸಂತೋಷ್ ಅವರು ‘ಬಿಗ್​ ಬಾಸ್ ಕನ್ನಡ ಸೀಸನ್​ 10’ ಮೂಲಕ ಜನಪ್ರಿಯರಾಗಿದ್ದರು. ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ಅವರು, ಕೆಲವು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಬಿಗ್​ ಬಾಸ್​ನಿಂದ ಸಿಕ್ಕ ಸಂಭಾವನೆಯಲ್ಲಿ ಕಳೆದ ಎರಡು ವಾರಗಳ ಹಿಂದೆ ಕಿಯಾ ಕಾರು ಖರೀದಿ ಮಾಡಿದ್ದರು. ಪತ್ನಿ ಮಾನಸ ಜತೆ ಶೋ ರೂಮ್​ಗೆ ತೆರಳಿ ಕಾರು ಖರೀದಿಸಿ ತುಕಾಲಿ ಸಂತೋಷ್ ಅವರು ಖುಷಿಪಟ್ಟಿದ್ದರು.

Exit mobile version